“ಅಶ್ವತ್ಥಾಮ” (ತೆಲುಗು)

ನಾಯಕ ತನ್ನ ತಂಗಿಯ ನಿಶ್ಚಿತಾರ್ಥಕ್ಕೆಂದು ಭಾರತಕ್ಕೆ ಬರುತ್ತಾನೆ. ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದು ಮದುವೆ ದಿನಾಂಕ‌ ಫಿಕ್ಸ್ ಆಗುತ್ತದೆ. ನಾಯಕಿಯ ತಂಗಿ ಅಂತೂ ತುಂಬಾ ಖುಷಿಯಲ್ಲಿ ಇರುತ್ತಾಳೆ. ಆ ರಾತ್ರಿ ಎಲ್ಲರೂ ಖುಷಿ-ಖುಷಿಯಿಂದ ನಿದ್ರಿಸುತ್ತಾರೆ.

ಆದರೆ ಅದೇ ರಾತ್ರಿ ನಾಯಕನ ತಂಗಿ ಆತ್ಮಹತ್ಯೆಗೆ ಪ್ರತ್ನಿಸುತ್ತಾಳೆ….!!!!

ನಾಯಕನಿಗೆ ಅದು ಗೊತ್ತಾಗಿ ಅದನ್ನು ತಡೆಯುತ್ತಾನೆ. ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೆ ಕಾರಣ ಆಕೆ ಗರ್ಭಿಣಿಯಾಗಿರುವುದು ಅಂತ ಅವಳು ಹೇಳುತ್ತಾಳೆ. ನಾಯಕನಿಗೆ ಏನು ಹೇಳುವುದು ಅಂತ ಗೊತ್ತಾಗುವುದಿಲ್ಲ. ಇಲ್ಲಿ ನೋಡಿದರೆ ಮದುವೆ ಫಿಕ್ಸ್ ಆಗಿದೆ, ತಂಗಿ ನೋಡಿದರೆ ಮದುವೆಗೂ ಮೊದಲೇ ಪ್ರೆಗ್ನೆಂಟ್… ನಾಯಕನಿಗೆ ಮತ್ತಷ್ಟು ಷಾಕ್ ಆಗುವುದು ಆಕೆಗೆ ಈ ಗರ್ಭಕ್ಕೆ ಕಾರಣ ಯಾರು ಅಂತಲೇ ಗೊತ್ತಿಲ್ಲ ಎಂದಾಗ !!!

ಒಬ್ಬ ಹೆಣ್ಣು ತನಗೆ ಅರಿವಿಲ್ಲದೇ ಗರ್ಭಿಣಿಯಾಗಲು ಹೇಗೆ ಸಾಧ್ಯ ಅಂತ ನಾಯಕ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾನೆ. ಕಡೆಗೆ ಈ ವಿಷಯವನ್ನು ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗನ ಬಳಿ ಮುಚ್ಚುಮರೆಯಿಲ್ಲದೇ ಹೇಳಿ, ಆ ಹುಡುಗನ ಒಪ್ಪಿಗೆ ಮೇರೆಗೆ ತಂಗಿಗೆ ಅಬಾರ್ಷನ್ ಮಾಡಿಸಿ, ಅದೇ ಮುಹೂರ್ತದಲ್ಲಿ ಅದೇ ಹುಡುಗನೊಂದಿಗೆ ಮದುವೆ ಮಾಡಿ ಕಳಿಸುತ್ತಾನೆ. ತಂಗಿಯ ಗಂಡ ದೊಡ್ಡ ಮನಸ್ಸಿನಿಂದ ಇದೆಲ್ಲವನ್ನೂ ಕ್ಷಮಿಸುತ್ತಾನೆ.

ತಂಗಿ ಅತ್ತ ಹೋದ ಕೂಡಲೇ ಇದಕ್ಕೆ ಯಾರು ಕಾರಣ ಅಂತ ಹುಡುಕಲು ತೊಡಗುತ್ತಾನೆ ನಾಯಕ. ಕಾಲೇಜಿನಲ್ಲಿ, ಫೇಸ್ಬುಕ್ಕಲ್ಲಿ ಆಕೆಯನ್ನು ಕಾಡುತ್ತಿದ್ದವರನ್ನು ಹುಡುಕಿ ಹುಡುಕಿ ಹೊಡೆಯುತ್ತಾನೆ. ಆದರೆ ಅವರು ಯಾರೂ ಅದಕ್ಕೆ ಕಾರಣವಾಗಿರುವುದಿಲ್ಲ. ಆ ಗರ್ಭಕ್ಕೆ ಕಾರಣ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಅಷ್ಟರಲ್ಲಿ ಒಮ್ಮೆ ನಾಯಕನ ಕಾರಿನ ಮೇಲೆಯೇ ಬಿದ್ದು ಒಬ್ಬ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯ ಕೈಯಲ್ಲಿ ಚೀಟಿಯಿದ್ದು ಅದರಲ್ಲಿ ತಾನು ಹೇಗೆ ಗರ್ಭಿಣಿ ಆದೆ ಅಂತಲೇ ಗೊತ್ತಿಲ್ಲ ಅಂತ ಬರೆದಿರುತ್ತಾಳೆ. ಕಾರಿನ ಮೇಲೆ ಬಿದ್ದು ಸತ್ತಿರುವುದರಿಂದ ಕಾರನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

ನಾಯಕ ಆ ಕಾರನ್ನು ಬಿಡಿಸಿಕೊಂಡು ಬರಲು ಪೊಲೀಸ್ ಸ್ಟೇಷನ್ನಿಗೆ ಹೋದಾಗ ಮತ್ತೊಬ್ಬ ತಂದೆ-ತಾಯಿ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಅಂತ ಕಂಪ್ಲೇಂಟ್ ಕೊಡಲು ಬಂದಿರುತ್ತಾರೆ. ಆದರೆ ಅವರ ಕಂಪ್ಲೇಂಟ್ ಅನ್ನು ಪೊಲೀಸ್ ಸೀರಿಯಸ್ಸಾಗಿ ಪರಿಗಣಿಸದೇ ಉಡಾಫೆ ಮಾಡಿದಾಗ ನಾಯಕ ಕೋಪ ಮಾಡಿಕೊಳ್ಳುತ್ತಾನೆ. ಆಗ ಪೊಲೀಸ್ ಮತ್ತೊಂದು ಸತ್ಯ ಹೇಳುತ್ತಾನೆ.

ಏನೆಂದರೆ……

“ಹೀಗೆ ನಾಪತ್ತೆಯಾಗುತ್ತಿರುವವರಲ್ಲಿ ಈಕೆಯೇ ಮೊದಲಲ್ಲ. ಈ ಮುಂಚೆಯೂ ಬಹಳಷ್ಟು ಜನ ಹೆಣ್ಮಕ್ಕಳು ನಾಪತ್ತೆಯಾಗಿದ್ದಾರೆ. ಅವರನ್ನು ನಾವು ಬಿಸಿಲಲ್ಲಿ, ಮಳೆಯಲ್ಲಿ ಹುಡುಕುತ್ತಿದ್ದರೆ ಎರಡು ದಿನ ಕಳೆದ ನಂತರ ಅವರು ತಮ್ಮ ಮನೆಯಲ್ಲಿಯೇ ಸಿಗುತ್ತಾರೆ. ಹಾಗಾಗಿ ತಾವಾಗಿಯೇ ಮಾಯವಾಗಿ, ತಾವಾಗಿಯೇ ಸಿಗುವ ಈ ಹೆಣ್ಮಕ್ಳ ಕೇಸ್ ಅನ್ನು ನಾನು ಸೀರಿಯಸ್ಸಾಗಿ ತೆಗೊಳ್ಳಬೇಕಾ” ಅಂತಾನೆ ಪೊಲೀಸಪ್ಪ.

ಅದಕ್ಕೆ ತಕ್ಕಂತೆ ಈಗ ಕಂಪ್ಲೇಂಟ್ ಕೊಟ್ಟು ಹೋದ ದಂಪತಿಗಳ ಮಗಳು ಒಂದು ಆಸ್ಪತ್ರೆಯಲ್ಲಿ ಸಿಗುತ್ತಾಳೆ. ರಸ್ತೆಯಲ್ಲಿ ನೀರಿನಂಶ ಕಡಿಮೆಯಾಗಿ ಬವಳಿ ಬಂದು ಬಿದ್ದಿದ್ದ ಆಕೆಯನ್ನು ಒಂದು ಅಂಬ್ಯುಲೆನ್ಸ್ ತಂದು ಬಿಟ್ಟು ಹೋಗಿರುತ್ತದೆ.

ನಾಯಕ ಹುಡುಕಿದಾಗ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಹುಡುಗಿಯರು ಎಲ್ಲರೂ ನೀರಿನಂಶ ಕಡಿಮೆಯಾಗಿ ಆಸ್ಪತ್ರೆಗೆ ಸೇರಿದವರೇ ಆಗಿರುತ್ತಾರೆ. ಕಳೆದ ವರ್ಷ ತನ್ನ ತಂಗಿಯೂ ಅದೇ ರೀತಿ ಅಡ್ಮಿಟ್ ಆಗಿದ್ದಳು ಅಂತ ಗೊತ್ತಾಗುತ್ತದೆ.

ಇದನ್ನೆಲ್ಲ ಯಾರು ಮಾಡುತ್ತಿದ್ದಾರೆ…? ಯಾಕಾಗಿ ಮಾಡುತ್ತಿದ್ದಾರೆ…? ಎಂಬ ಒಂದು ಸುಳಿವೂ ಇಲ್ಲದೇ ನಾಯಕ ಈ ಜಾಲವನ್ನು ಬೇಧಿಸುತ್ತಾನಾ….? ಈ ರೀತಿ ಮಾಡುತ್ತಿರುವವರನ್ನು ಹುಡುಕಿ ಹೆಣ್ಮಕ್ಕಳಿಗೆ ನ್ಯಾಯ ದೊರಕಿಸಿಕೊಡುತ್ತಾನಾ…? ಎಂಬುದೇ ಕಥೆ‌.

ಸಿನೆಮಾ ಯೂಟ್ಯೂಬಿನಲ್ಲಿದೆ.‌

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply