ಅಸುರನ್ – ತಮಿಳು ಸಿನೆಮಾ.
ಕಾದಂಬರಿ ಆಧಾರಿತ.
ಪರಿಸ್ಥಿತಿಯು ಒಬ್ಬ ಸಾತ್ವಿಕ ಮನುಷ್ಯನ ಒಳಗಿರುವ ರಾಕ್ಷಸನನ್ನು ಹೇಗೆ ಬಡಿದೆಬ್ಬಿಸುತ್ತದೆ ಮತ್ತು ತನ್ನ ಕುಟುಂಬದ ರಕ್ಷಣೆಯ ವಿಷಯ ಬಂದಾಗ ಆ ರಾಕ್ಷಸ ಯಾವ ಮಟ್ಟದ ಹೋರಾಟಕ್ಕೆ ಸಿದ್ಧನಾಗುತ್ತಾನೆ ಎಂಬುದರ ಚಿತ್ರಣವೇ ‘ಅಸುರನ್’ ಸಿನೆಮಾ.
ಊರಿನ ಶ್ರೀಮಂತ ವ್ಯಕ್ತಿಯೊಬ್ಬನ ಕೊಲೆ ನಡೆದು ಆತನ ಕುಟುಂಬದವರು ಸೇಡಿಗಾಗಿ ತನ್ನ ಕುಟುಂಬದವರನ್ನು ಸಾಯಿಸುತ್ತಾರೆಂಬ ಭೀತಿಯಿಂದ ತನ್ನ ಇಡೀ ಕುಟುಂಬದೊಂದಿಗೆ ತಲೆ ಮರೆಸಿಕೊಳ್ಳುವ ಸಲುವಾಗಿ ರಾತ್ರೋ ರಾತ್ರಿ ಮನೆಬಿಟ್ಟು ಹೊರಡುತ್ತಾನೆ ಮಧ್ಯ ವಯಸ್ಸಿನ ರೈತ ಸಿವಸಾಮಿ. ತನ್ನ ಹೆಂಡತಿ ಮತ್ತು ಮಗಳನ್ನು ಬೇರೆ ದಾರಿಯಲ್ಲಿ ಕಳಿಸಿ ಹದಿನಾರು ವರ್ಷದ ಮಗನೊಂದಿಗೆ ಕಾಡಿನ ದಾರಿ ಹಿಡಿಯುತ್ತಾನೆ.
ಅವರನ್ನು ಕೊಲ್ಲಲು ಅವರ ಬೆನ್ನು ಬಿದ್ದಿರುವ ಶ್ರೀಮಂತನ ಕಡೆಯ ಗೂಂಡಾಗಳು. ಅವರಿಂದ ತಪ್ಪಿಸಿಕೊಳ್ಳುತ್ತ ಸಾಗುತ್ತಿರುವಾಗ ಫ್ಲಾಶ್-ಬ್ಯಾಕ್ ನಲ್ಲಿ ಅವರ ಸಮಸ್ಯೆಯ ಕಾರಣಗಳು ತಿಳಿಯುತ್ತವೆ. ಆ ಸಾಮಾನ್ಯ ಕುಡುಕ ತಂದೆ ತನ್ನ ಮಗನ ರಕ್ಷಣೆಯನ್ನು ಮಾಡುವಲ್ಲಿ ಸಫಲನಾಗುತ್ತಾನೆಯೇ ಎಂಬುದನ್ನು ಸಿನೆಮಾ ನೋಡಿಯೇ ತಿಳಿದುಕೊಳ್ಳಬೇಕು.
60 – 80 ರ ದಶಕದ ಕಥೆಯನ್ನು ಹೊಂದಿರುವ ಸಿನೆಮಾ ಭೂಮಾಲೀಕರು-ರೈತರು ಮತ್ತು ಮೇಲ್ವರ್ಗ-ದಲಿತರ ಸಂಘರ್ಷದ ಹಿನ್ನೆಲೆಯಲ್ಲಿ ಸಾಗುತ್ತದೆ. ಅಂದಿನ ಕಾಲಮಾನವನ್ನು ಯಥಾ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕರ ಮತ್ತು ಹಿನ್ನೆಲೆ ಸಂಗೀತಗಾರರ ಶ್ರಮ ಎದ್ದು ಕಾಣುತ್ತದೆ. ಸಿನೆಮಾ ಸರ್ವೈವಲ್ ಮೂವಿಯಂತೆ ಕ್ಷಣ-ಕ್ಷಣಕ್ಕೂ ಎದೆಬಡಿತವನ್ನು ಹೆಚ್ಚಿಸುತ್ತಲೇ ನೋಡಿಸಿಕೊಂಡು ಹೋಗುತ್ತದೆ.
ಸಿವಸಾಮಿ ಮತ್ತು ಆತನ ಹೆಂಡತಿಯ ಪಾತ್ರದಲ್ಲಿ ಧನುಷ್ ಮತ್ತು ಮಂಜು ವಾರಿಯರ್ ಇವರು ನೀಡಿರುವ ಮನೋಜ್ಞ ಅಭಿನಯ ಸಿನೆಮಾ ಮುಗಿದ ನಂತರವೂ ಕಾಡುತ್ತದೆ. ಖಂಡಿತವಾಗಿಯೂ ಎಲ್ಲರೂ ನೋಡಬಹುದಾದ ಸಿನೆಮಾ.
ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ