ನಮ್ಮೆಲ್ಲರೊಳಗೂ ಒಂದು ತಣ್ಣನೆಯ ಆಕ್ರೋಶವಿದೆ.
ಆ ಆಕ್ರೋಶ ಸಮಾಜದ ಬಗ್ಗೆ ಇರಬಹುದು.. ವ್ಯವಸ್ಥೆಯ ಬಗ್ಗೆ ಇರಬಹುದು.. ತನಗೆ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಅಥವಾ ಸಿಗದಿರುವ ಗೌರವದ ಬಗ್ಗೆ ಇರಬಹುದು.. ನಮ್ಮೊಳಗೆ ಗುಪ್ತಗಾಮಿನಿಯಂತೆ ಮಂದಗತಿಯಲ್ಲಿ ಅದು ಹರಿಯುತ್ತಲಿದೆ. ಆಗಾಗ ನಮ್ಮ ಅಸಹನೆ ಹೆಚ್ಚಾಗಿ ಆಕ್ರೋಶ ಸಿಡಿದೇಳಲು ಹೊರಟರೂ, ನಮ್ಮ ಬದುಕಿನ ಚಿಕ್ಕ-ಪುಟ್ಟ ಖುಷಿಗಳು ಆ ಆಸ್ಫೋಟವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತವೆ. ಮಧ್ಯಮ ವರ್ಗದವರ ಬದುಕೇ ಇಷ್ಟು. ಇದ್ದಂತೆ ಇರಲಾರರು… ಆಸೆ ಪಟ್ಟದ್ದನ್ನು ಪಡೆಯಲಾರರು..
ಇಷ್ಟೆಲ್ಲಾ ಕಷ್ಟದ ನಡುವೆಯೂ, ಇಷ್ಟವಿಲ್ಲದ ಜೀವನವನ್ನು ಯಾವುದೋ ಭರವಸೆಯ ಮೇರೆಗೆ ನಡೆಸಿಕೊಂಡು ಹೋಗುತ್ತಿರುವವರ ಜೀವನದಲ್ಲಿ, ಹಠಾತ್ತನೆ ಒಂದು ದುರ್ಘಟನೆ ನಡೆದುಬಿಟ್ಟರೆ ಅವರ ಗತಿಯೇನು?
ಗರ್ಭಿಣಿ ಗೀತಾ ತನ್ನ ಯಾವುದೋ ಒಂದು ಕೆಲಸಕ್ಕಾಗಿ ಸರ್ಕಾರಿ ಕಛೇರಿಗೆ ತಿಂಗಳಾನುಗಟ್ಟಲೆ ಎಡತಾಕುವಾಗ ಅವಳಲ್ಲಿಯೂ ಈ ರೀತಿಯ ಆಕ್ರೋಶ ಮಡುಗಟ್ಟುತ್ತಲೇ ಇರುತ್ತದೆ. ಯಾವುದೋ ಒಂದು ಹಂತದಲ್ಲಿ ಸ್ಫೋಟವೂ ಆಗುತ್ತದೆ. ಪರಿಣಾಮವೇ ಆಕೆ ಹ್ಯೂಮನ್ ಬಾಂಬ್ ಆಗಿ ಆ ಕಛೇರಿ ಪ್ರವೇಶಿಸಿ ಎಲ್ಲರಿಗೂ ಪಾಠ ಕಲಿಸುವ ನಿರ್ಧಾರ ಮಾಡುತ್ತಾಳೆ.
ಈ ಸಂದರ್ಭದಲ್ಲಿ ಗೀತಾ ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತಿದ್ದಿರಬಹುದು? ಉಹುಂ…. ನಿರ್ದೇಶಕರು ಹೇಳುವುದೇ ಬೇಡ. ನಮಗೆ ಮೊದಲೇ ಗೊತ್ತಿದೆ. ಯಾಕೆಂದರೆ ನಾವೂ ಇದೇ ವ್ಯವಸ್ಥೆಯ ಒಂದು ಭಾಗವಾಗಿದ್ದೇವೆ. ಸರ್ಕಾರಿ ಕಛೇರಿಗಳ ಭ್ರಷ್ಟಾಚಾರದ ಅರಿವು ಇರುವವರೇ ಆಗಿದ್ದೇವೆ. ಆದರೆ ಗೀತಾಳಷ್ಟು ದಿಟ್ಟ ಮನಸ್ಸು ನಮಗಿಲ್ಲವಷ್ಟೇ. ಆಕೆ ಒಂದು ಪೈಸೆ ಲಂಚ ಕೊಡದೇ ತನ್ನ ಕೆಲಸ ಆಗಬೇಕೆಂದು ಬಯಸುತ್ತಾಳೆ.
ಅಯ್ಯೋ ಅವಳಿಗೆ ಹುಚ್ಚಿರಬೇಕು ಅಂದ್ಕೊಳ್ತಿದ್ದೀರಾ?
ಯಾಕೆ…. ಅವಳು ಹಾಗೆ ಯೋಚಿಸುವುದರಲ್ಲಿ ತಪ್ಪೇನಿದೆ? ಸಂಬಳ ತೆಗೆದುಕೊಳ್ಳುವ ನೌಕರರು ಕೆಲಸವನ್ನು ಕರ್ತವ್ಯ ಎಂದು ಪರಿಗಣಿಸಬೇಕು. ಆದರೆ ನಮ್ಮ ವ್ಯವಸ್ಥೆಯಲ್ಲಿ ಲಂಚ ಎನ್ನುವುದು ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಗೀತಾಳ ಗನ್ ಪಾಯಿಂಟಿನಲ್ಲಿ ಹೇಳಿದ ಕೆಲಸ ಮಾಡಿದ ಕೆಲಸದವನು, ಬಾಂಬ್ ಕಟ್ಟಿಕೊಂಡು ಕೂತವಳ ಬಳಿ ‘ಈ ಕೆಲಸ ಮಾಡಿದ್ದಕ್ಕೆ ಏನೂ ಇಲ್ವಾ?’ ಅಂತಾನೆ. ಅವನಿಗೆ ಆ ಸಂದರ್ಭದಲ್ಲಿ ಅವಳಿಂದ ದುಡ್ಡು ಪಡೆಯುವ ಇರಾದೆ ಇಲ್ಲದಿರಬಹುದು. ಆದರೆ ದೇವರನ್ನು ಕಂಡಾಕ್ಷಣ ಕೈಮುಗಿಯುವ ಅಭ್ಯಾಸ ಇರೋ ಹಾಗೆ, ಕೆಲಸ ಮಾಡಿದ ಕೂಡಲೇ ದುಡ್ಡಿಗೆ ಕೈಚಾಚುವುದು ಅಭ್ಯಾಸ ಬಲ ಎಂಬಂತೆ ಮಾರ್ಮಿಕವಾಗಿ ತೋರಿಸಿದ್ದಾರೆ ನಿರ್ದೇಶಕರು.
ಗರ್ಭಿಣಿ ಗೀತಾ ಕಳೆದ ಏಳೆಂಟು ತಿಂಗಳುಗಳಿಂದ ತನ್ನ ಕೆಲಸಕ್ಕಾಗಿ ಅಲೆಯುತ್ತಲೇ ಇದ್ದಾಳೆ. ಆಕೆ ಗರ್ಭಿಣಿ ಎಂಬ ಕನಿಕರವಾಗಲೀ, ಆಕೆ ಮನುಷ್ಯಳು ಎಂಬ ಗೌರವವಾಗಲೀ ಒಬ್ಬರಿಗೂ ಇಲ್ಲ. ಕಾಸು ಕೊಡದವಳು ಕಸಕ್ಕೆ ಸಮಾನ ಎಂಬಂತೆ ಕಾಣುತ್ತಾರೆ. ಆಕೆಯ ವಿದ್ಯೆ, ಆಕೆ ಗಳಿಸಿದ ಜ್ಞಾನ, ಪ್ರಶಸ್ತಿಗಳು ಎಲ್ಲವೂ ದುಡ್ಡಿನ ಮುಂದೆ ಗೌಣವಾಗುತ್ತವೆ.
ಒಬ್ಬ ಹೆಣ್ಣುಮಗಳು ತನ್ನ ಮನಸ್ಸಿನಲ್ಲಿ ಇಡೀ ಕಟ್ಟಡಕ್ಕೆ ಬಾಂಬ್ ಇಡಬೇಕೆಂದು ಬಯಸಿ, ತಾನೇ ಹ್ಯೂಮನ್ ಬಾಂಬ್ ಆಗಿ ಬರುತ್ತಾಳೆಂದರೆ….. ಆಕೆ ವ್ಯವಸ್ಥೆಯ ಬಗ್ಗೆ ಎಷ್ಟು ರೋಸತ್ತು ಹೋಗಿರಬಹುದು ಯೋಚಿಸಿ. ಬಾಂಬ್ ಇಡುವುದು ತಪ್ಪೇ ಇರಬಹುದು. ಆದರೆ ಬಾಂಬ್ ಇಡುವಂತೆ ಮಾಡಿದವರು ಯಾರು? ಅಧಿಕಾರಿಗಳು ತಾನೇ?
ಆದರೆ ಆ ಅಧಿಕಾರಿಗಳು ಒಬ್ಬೊಬ್ಬರೂ ಯಾವುದ್ಯಾವುದೋ ನೆಪ ಹೇಳುತ್ತಾ, ತಾನು ಮಾತ್ರ ಸರಿ ಇದ್ದೀನಿ, ಉಳಿದವರದ್ದೇ ತಪ್ಪು ಅಂತ ತಪ್ಪನ್ನು ಒಬ್ಬರ ಮೇಲೊಬ್ಬರು ಎತ್ತಾಕುತ್ತಿರುವಾಗ ಗೀತಾಳ ಜೊತೆ ನಮಗೂ ಮಜ ಬರುತ್ತದೆ. ಆದರೆ ಅವರಲ್ಲಿ ಒಬ್ಬನೇ ಒಬ್ಬ ಸರಿ ಇದ್ದಿದ್ದರೂ ಗೀತಾ ಈ ರೀತಿ ಅಲೆಯಬೇಕಾಗಿ ಬರುತ್ತಿರಲಿಲ್ಲ. ಆದರೆ ಏನ್ಮಾಡೋಣ… ಅಷ್ಟು ದೊಡ್ಡ ಮನಸ್ಸು, ಹೃದಯ, ಕರುಣೆ, ಕನಿಕರ ಅಲ್ಲಿರುವ ಯಾರೆಂದರೆ ಯಾರಿಗೂ ಇರಲಿಲ್ಲ. ಅವರಿಗೆ ಬರೇ ದುಡ್ಡಿದ್ದರೆ ಸಾಕಿತ್ತು. ಆ ದುಡ್ಡಿನಿಂದ ಒಬ್ಬ ಅಧಿಕಾರಿ ತನ್ನ ಮಗನನ್ನು ಓದಿಸಬೇಕು, ಮತ್ತೊಬ್ಬಳು ತನ್ನ ಮಗಳ ಮದುವೆ ಮಾಡಬೇಕು, ಮತ್ತೊಬ್ಬಳು ತಾನು ಮಾಡಿರುವ ಸಾಲ ತೀರಿಸಬೇಕು… ಅವಶ್ಯಕತೆಗಾಗಿ ತಮ್ಮ ಪರಿಧಿಯನ್ನು ಮೀರಿ ಹಣದ ವ್ಯವಹಾರ ಮಾಡಿದವರು, ತಮ್ಮ ಆ ವ್ಯವಹಾರಕ್ಕೆ ಬಯಸುವುದು ಬಡಜನರ ಪ್ರಾಮಾಣಿಕ ದುಡಿಮೆಯನ್ನು. ಅದಕ್ಕಾಗಿ ಬಡಜನರು ತಮ್ಮ ಒಡವೆ-ವಸ್ತು ಮಾರಿ ಹಣ ತಂದುಕೊಡಬೇಕು.
ಹೀಗೆ ಎಂದಾದರೂ ಯೋಚಿಸಿದ್ದಿರಾ? ಇಲ್ಲ ತಾನೇ? ನಿರ್ದೇಶಕರಿಗೊಂದು ಥ್ಯಾಂಕ್ಸ್ ಹೇಳಿ… ಕಣ್ತೆರೆಸಿದ್ದಕ್ಕೆ 🙏
ಗೀತಾ ಏಕಾಏಕಿ ಆ ಇಡೀ ಕಛೇರಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಮಾಡುವ ಮೊದಲನೇ ಆರ್ಡರ್…….
“I need respect” !!!!
ಎಲ್ಲಿದೆ ಸ್ವಾಮಿ ಗೌರವ? ಒಬ್ಬ ಬಡ ಬೋರೇಗೌಡನಿಗೆ ಸಮಾಜದಲ್ಲಿ ಆಗಲೀ ಕಛೇರಿಯಲ್ಲಿ ಆಗಲೀ ಎಲ್ಲಿದೆ ಗೌರವ? ಗೀತಾ ಅವರೆಲ್ಲರ ಪ್ರತಿನಿಧಿಯಂತೆ ನಮಗೆ ಕಾಣಿಸುತ್ತಾಳೆ. ಅವಳು ಹೇಳುವ “I” ಅವಳಷ್ಟೇ ಅಲ್ಲ… ಅವಳಂಥ ಎಲ್ಲರೂ… ಅವಳು ಬಾಂಬಿಟ್ಟಳೆಂದು ಅವಳೊಬ್ಬಳಿಗೆ ಗೌರವ ಕೊಡುವುದಲ್ಲ… ಇನ್ಮುಂದೆ ಎಲ್ಲರಿಗೂ ಗೌರವ ಕೊಡಬೇಕೆಂದು ಅರ್ಥ.
ಎಲ್ಲರಿಗೂ ಗೊತ್ತಾಗಿದೆ ಕಛೇರಿ ಒಳಗೆ ಹ್ಯೂಮನ್ ಬಾಂಬರ್ ಇದ್ದಾಳೆ ಅಂತ. ಆದರೆ ಎಲ್ಲರಿಗೂ ತಮ್ಮತಮ್ಮದೇ ಚಿಂತೆ. ಪತ್ರಕರ್ತರಿಗೆ ಟಿಆರ್ಪಿ ಚಿಂತೆ,ಸಚಿವರಿಗೆ ಸೀಟ್ ಉಳಿಸಿಕೊಳ್ಳುವ ಚಿಂತೆ, ಪೊಲೀಸರಿಗೆ ಇದು ಸುಖವಾಗಿ ಅಂತ್ಯವಾದರೆ ಸಾಕೆಂಬ ಚಿಂತೆ.…
ಆದರೆ ಇಷ್ಟೆಲ್ಲಾ ಚಿಂತೆ ಹತ್ತಿಸಿದ ಗೀತಾಳ ಚಿಂತೆ ಯಾರಿಗೂ ಬೇಕಿಲ್ಲ. ಕಛೇರಿಯಲ್ಲಿ ಇಬ್ಬರು ಹೆಂಗಸರಿದ್ದರೂ ಗೀತಾಳ ಬಳಿಯೂ ಸುಳಿಯುವುದಿಲ್ಲ ಅವರುಗಳು. ಆಕೆಯ ನೋವಿಗೆ ಕಿವಿಯಾಗುವುದಿಲ್ಲ. ಕನಿಷ್ಠ ಪಕ್ಷ ‘ನಿನಗೇನು ಬೇಕಮ್ಮ?’ ಎಂದು ಕೇಳುವ ಸೌಜನ್ಯವೂ ಇಲ್ಲ. ಪೊಲೀಸರೂ ಅಷ್ಟೇ…. ಗೀತಾ ಯಾಕೆ ಹಾಗೆ ಮಾಡಿರಬಹುದು ಅಂತ ಯೋಚಿಸದೇ ತಮ್ಮಿಷ್ಟದಂತೆ ಸಿಸಿಬಿ ಕರೆಸುತ್ತಾರೆ, ಎನ್.ಎಸ್.ಜಿ ಕರೆಸುತ್ತಾರೆ. ಯಾರೂ ಸಾಯದೇ ಈ ಪ್ರಕರಣ ಬಗೆಹರಿಯಬೇಕು ಅಂತ ಬಯಸುತ್ತಾರೆ.
ಆದರೆ ಗೀತಾ ಕೊಟ್ಟಿರುವ ಡೆಡ್ಲೈನ್ ಅಂದು ಸಂಜೆಗೆ ಮುಗಿಯುತ್ತದೆ. ಅಷ್ಟರೊಳಗೆ ಆಕೆ ಕೇಳಿರುವ ಎಲ್ಲಾ ಬೇಡಿಕೆ ಪೂರ್ಣವಾಗಬೇಕು. ಹೌದು! ಒಂದೇ ದಿನದೊಳಗೆ…….
ನಾಟ್ ಪಾಸಿಬಲ್ ಅಂತೀರಾ? ನೀವು ಅನ್ನೋಲ್ಲ. ನನಗೆ ಗೊತ್ತು. ನಿಮ್ಮ ಅಂತರಾತ್ಮ ಅನ್ನುತ್ತದೆ. ಏಕೆಂದರೆ ಒಂದಲ್ಲ ಒಂದು ರೀತಿ ಕಛೇರಿಗಳಿಗೆ ಅರ್ಜಿ ಹಿಡಿದುಕೊಂಡು ಅಲೆದವರು ನಾವು. ಒಂದು ಅರ್ಜಿ ಮೂವ್ ಆಗಲು ಅಥವಾ ಹೊಸಾ ಕಾಯ್ದೆ ಬರಲು ಎಷ್ಟು ವರ್ಷ ಹಿಡಿಯಬಹುದು ಎಂಬ ಲೆಕ್ಕಾಚಾರ ನಮಗಿದೆ. ನಾವದಕ್ಕೆ ಹೊಂದಿಕೊಂಡೂ ಬಿಟ್ಟಿದ್ದೇವೆ.
ಆದರೆ ಗೀತಾಳಿಗಾಗಿ ಎಲ್ಲವೂ ಒಂದೇ ದಿನದಲ್ಲಿ ಕಾರ್ಯರೂಪಕ್ಕೆ ಬರುತ್ತದೆ. ದಿಗ್ಭ್ರಮೆಯಿಂದ ಬೆಪ್ಪಾಗುವ ಸರದಿ ನಮ್ಮದು. ಏಕೆಂದರೆ ಪ್ರತೀದಿನವೂ ಇಷ್ಟೇ ಚುರುಕಾಗಿ ಕೆಲಸ ಮಾಡಿದರೆ ನಮ್ ದೇಶ ಯಾವತ್ತೋ ಮುಂದೆ ಬರುತ್ತಿತ್ತಲ್ಲ ಅಂತನ್ನಿಸದೇ ಇರದು. ಕೇವಲ ತಮ್ಮ ಕುತ್ತಿಗೆಗೆ ಬಂದಾಗಲಷ್ಟೇ ಚುರುಕಾಗುವ ಅಧಿಕಾರಿಗಳು ವರ್ಷದ ಮುನ್ನೂರ ಅರವತ್ತೈದು ದಿನಗಳೂ ಹೀಗೆಯೇ ಇದ್ದುಬಿಟ್ಟರೆ 😍😍 ಎಷ್ಟು ಚೆನ್ನಾಗಿರುತ್ತದೆ.
ಗೀತಾ ಕೇಳುವ ಡಿಮ್ಯಾಂಡುಗಳೇನು…..?
ಅದನ್ನು ಸರ್ಕಾರ ಪೂರ್ತಿ ಮಾಡುತ್ತದೆಯಾ….? ಗೀತಾ ಗೆಲ್ಲುತ್ತಾಳಾ ಅಥವಾ ಸೋಲುತ್ತಾಳಾ………? ಆ ಕಛೇರಿಯವರು ಬಚಾವಾಗುತ್ತಾರಾ….?
ಉಹುಂ….
ಇದಕ್ಕಾಗಿ ಅಲ್ಲ ಸಿನೆಮಾ ನೋಡಬೇಕಾಗಿರುವುದು.
ಸಿನೆಮಾದಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಲು, ಸತ್ತು ಮಲಗಿರುವ ನಿಮ್ಮ ಆತ್ಮಶಕ್ತಿಯನ್ನು ಬಡಿದೆಬ್ಬಿಸಲು, ಗೀತಾಳ ಬದುಕಿನ ಕರಾಳ ಮುಖವನ್ನು ಕಂಡು ಅತ್ತು ಹಗುರಾಗಲು ಈ ಸಿನೆಮಾಗೆ ಹೋಗಿ.
ಅದಲ್ಲದೇ….
ಹುಡುಕಿದರೂ ಒಂದೂ ದ್ವಂದ್ವಾರ್ಥದ ಸಂಭಾಷಣೆಯಿಲ್ಲದ ಅಥವಾ ಸೀನ್ ಇರದ ಅನುಭವಕ್ಕಾಗಿ, ಕನ್ನಡದಲ್ಲಿ ಹೀಗೂ ಇಷ್ಟು ಗುಣಮಟ್ಟದ ಅದ್ಭುತ ಸಿನೆಮಾ ತೆಗೆಯಬಹುದು ಅಂತ ತಿಳಿಯಲು, ವ್ಯವಸ್ಥೆಯಲ್ಲಿ ಇರುವವರು ಮತ್ತು ಹೊರಗಿನವರು ಇದನ್ನು ನೋಡಿ ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಲು ಈ ಸಿನೆಮಾಗೆ ಹೋಗಿ.
ಕಡೆಗೆ ಕಣ್ಣೀರಿನ ಕಡೆಯ ಹನಿಯನ್ನೂ ಕೆಳಗೆ ಉದುರಿಸಿ ಗಾಢವಾದ ವಿಷಾದದೊಂದಿಗೆ ಆಚೆ ಬನ್ನಿ…..
Author: Sowmya Murthy
ಬಹಳಷ್ಟು ಸೊಗಸಾಗಿ ಚಿತ್ರದ ವಿವಾರಣೆ ಕೋಟ್ಟಿದಿರ ನಿಮ್ಮ ವಿಶ್ಲೇಷಣೆ ಚಿತ್ರ ನೋಡುವ ಕುತೂಹಲ ಹಿಮ್ಮಡಿಗೋಳಿಸಿದೆ
ಧನ್ಯವಾದಗಳು ಸರ್ 🙏