ಪ್ರಸನ್ನ ಶೆಟ್ಟಿ, ಸಿನಿಮಾ ನಿರ್ದೇಶಕರು.
ಊರು ಬಿಟ್ಟು ಬಂದಾಗ ವಯಸ್ಸಿನ್ನು ಹದಿನೈದು, ಓದುವ ವಯಸ್ಸಲ್ಲಿ ಓಡಿ ಬಂದಿದ್ದೆ.actually ಕಾರಣವೇ ಅಲ್ಲ ಅಂತ ಸಿಲ್ಲಿ ಮ್ಯಾಟರ್ರು ಅದು.ಮನೆಲಿ ರಾಗಿ ಕಣದ ಕೆಲಸ ನಡೀತಿತ್ತು.ಅವತ್ತೇ ಊರಲ್ಲಿ ಕ್ರಿಕೇಟ್ ಟೂರ್ಲಿಮೆಂಟ್ ಇತ್ತು.ನಾನು ಕ್ರಿಕೆಟ್ ಆಡಿದವನೂ ಅಲ್ಲ,ಇವತ್ತಿನವರೆಗು ಮ್ಯಾಚ್ ನೋಡಿದವನು ಅಲ್ಲ.ಕ್ರಿಕೆಟ್ ಬಗ್ಗೆ Minimum Knowledge ಕೂಡ ಇಲ್ಲ ಅಂದ್ರೆ ನಂಬಲೇಬೇಕು ನೀವು.ಅದು ಹತ್ತಿರದವರಿಗಷ್ಟೇ ಗೊತ್ತು ಆ ವಿಷಯ ಬದಿಗಿರಲಿ.ಇಂತ ನಾನು ಕ್ರಿಕೆಟ್ ಮ್ಯಾಚ್ ನೋಡೋಕೆ ಅಂತ ಹೋಗಿ ರಾಗಿ ಕಣದ ಕೆಲಸಕ್ಕೆ ತಪ್ಪಿಸಿಕೊಂಡೆ ಅನ್ನೊ ಅಪವಾದಕ್ಕೆ ಗುರಿಯಾದೆ.ರಾತ್ರಿ ಮನೇಲಿ ಸಹಸ್ರ ನಾಮಾರ್ಚನೆ ನಡೆಯಿತು.ಅದ್ಯಾಕೆ ಹಾಗನಿಸಿತೊ ಗೊತ್ತಿಲ್ಲ ಮಧ್ಯರಾತ್ರಿಯಲ್ಲಿ ಮನೆ ಬಿಟ್ಟು ಹೊರ ಬಂದು ಸುಮ್ಮನೆ ಊರಾಚೆ ನಡೆಯಲು ಶುರು ಮಾಡಿದೆ.ಜೇಬಲ್ಲಿ ಕಾಸಿಲ್ಲ,ಎಲ್ಲಿಗೆ ಹೋಗ್ತಾಯಿದಿನಿ ಗೊತ್ತಿಲ್ಲ,ಮುಂದೇನು ಮಾಡೋಕೆ ಹೊರಟೆ ಎಂಬ ಸ್ಪಷ್ಟತೆ ಇರಲಿಲ್ಲ.ತಲೆಯಲ್ಲಿ ಇದ್ದದ್ದು ಒಂದೆ ಇಲ್ಲಿರಬಾರದು,ಎಲ್ಲಿಗಾದರು ಹೋಗಿಬಿಡಬೇಕು ಅಷ್ಟೆ.
ಹಾಗೆ ಹೊರಟವನು ಇವತ್ತಿಗಾದರು ನಿಂತಿಲ್ಲ.ಇಂದಿಗೂ ಅದೇ ಗೊಂದಲ,ಅದೇ ತುಮುಲ ಎಲ್ಲಿಯಾದರೂ ಹೋಗಿಬಿಡಬೇಕು ಇಲ್ಲಿರಬಾರದು.ಏನು,ಏಕೆ,ಹೇಗೆ,ಎಲ್ಲಿ ಸದಾ ಕಾಡುವ ಪ್ರಶ್ನೆ.
ಹಾಗೆ ಹೊತ್ತಲ್ಲದ ಹೊತ್ತಿಗೆ ಮನೆ ಬಿಟ್ಟು ಬಂದವನು ತಲುಪಿದ್ದು ಬೆಂಗಳೂರೆಂಬ ಮಹಾನಗರವನ್ನು.ಬೆಳಗೆದ್ದು ಟೈಮಾಯ್ತು ಸ್ಕೂಲ್ಗೆ ಹೋಗಲು,ಹೋಮ್ ಬರೆದಿದ್ದೀನಾ..?ಯುನಿಫಾರ್ಮು,ಊಟದ ಬುತ್ತಿ,ಪೆನ್ನಲ್ಲಿ ಇಂಕು ಇದಿಯಾ ಇದಾವುದು ಯೋಚಿಸದೆ.ಏನು ತಿಂದರು ಕೇಳೋರು ಇರದೆ.ಎಲ್ಲಿ ಹೋಗ್ತಿಯಾ ,ಬರ್ತೀಯಾ ಅಂತ ಬೈಯೋರು ಇರದೆ ಸಿಕ್ಕ ಸ್ವಚ್ಛಂದ ಸ್ವತಂತ್ರ ಲೋಕ ನನ್ನದು ಅಂತ ಹಿಗ್ಗಿದ್ದೆ.ಅದು ಆಡೋ ವಯಸ್ಸಲ್ಲ ಕೆಡೋ ವಯಸ್ಸು ಹದಿ ಅನ್ನುವ ಅಕ್ಷರಗಳಿಂದ ಶುರುವಾಗೋ ವಯಸ್ಸಿದೆಯಲ್ಲ ಅದು ಸರಿಯಾದ ಮಾರ್ಗದರ್ಶನ ಮತ್ತು ಕಣ್ಗಾವಲು ಇಲ್ಲದೆ ಹೋದರೆ ಹಾಳುಬಿದ್ದು ಹೋಗುವ ಅಪಾಯಕಾರಿ ಘಟ್ಟ.ಅದಕ್ಕೆ ಆ ವಯಸ್ಸಿನ ಮಕ್ಕಳು ಬೇಗ ಚಟಗಳಿಗೆ ಬಲಿಯಾಗೋದು ಮತ್ತು ಬೇಗ ಅರ್ಥವೇ ಗೊತ್ತಿಲ್ಲದ ಲವ್ ಎಂಬ ಆಕರ್ಷಣಾ ನಶೆಯೇರಿಸಿಕೊಂಡು ಕದ್ದು ಅಡ್ಡಾಡೋದು.ಆ ಹದಿಹರೆಯದ ಮಕ್ಕಳಿಗೆ ದೊಡ್ಡವರು ಹೇಳಿದ್ದೆಲ್ಲ ಅತೀ ಅನಿಸೋಕೆ ಶುರುವಾಗಿರುತ್ತೆ.ಮನೆಯವರೊಟ್ಟಿಗೆ ಇದ್ದು ಸಿಗರೇಟು, ಬಿಯರ್ ಅಂತ ದುರಭ್ಯಾಸ ಶುರು ಮಾಡ್ಕೊಳ್ಳೊದು ಸಾಮಾನ್ಯವಾಗಿರುವಾಗ ನನಗೆ ಹೇಳುವರು ಇಲ್ಲಾ ಕೇಳುವವರು ಇರಲಿಲ್ಲ ಎಂದ ಮೇಲೆ ಊಹಿಸಿಕೊಳ್ಳಿ.ವಯಸ್ಸಿನ ಹುಚ್ಚಾಟಕ್ಕೆಅಂಟಿಕೊಂಡ ಚಟಗಳು ಒಂದೆರಡಲ್ಲ.ಸಿಗರೇಟು, ಹೆಂಡ,ಗುಟ್ಕಾ,ವಯಸ್ಸಿನ ಹಸಿಬಿಸಿ ಆಸೆ ತಣಿಸಲು ಸೆಕ್ಸ್ ಬುಕ್,ಕುತೂಹಲಕ್ಕೆ ಸೂಳೆ ಮನೆ ಹೊಕ್ಕಿದ್ದುಊಹೂಂ ಯಾವೂದಕ್ಕು ಎಗ್ಗಿಲ್ಲ.ಜೊತೆಗೆ ಇಂಬು ಕೊಡುವ ಪುಂಡ ಗೆಳೆಯರ ದಂಡು,ಮಾಡುವ ಕೆಲಸಕ್ಕಿಷ್ಟು ಸಂಬಳ ಎಂದು ಬರ್ತಿದ್ದ ಪುಡಿಗಾಸು ಯಾವುದಕ್ಕೂ ಕಡಿಮೆ ಇರಲಿಲ್ಲ.ಕಡಿಮೆ ಇದ್ದದ್ದು ಅಂದರೆ ಒಂದೇ ಬುದ್ದಿ.ಮಲ್ಲೇಶ್ವರದ ಫುಟ್ಬಾತ್ ಬದಿಯ ವ್ಯಾಪಾರದಿಂದ ಶೋರೂಮಿನ ಬಟ್ಟೆ ವ್ಯಾಪಾರ ಮತ್ತು ಜ್ಯೂಸ್ ಅಂಗಡಿಯ ಕೆಲಸದಿಂದ ಹಿಡಿದು ಪಬ್ಲಿಕ್ ಟಾಯ್ಲೆಟ್ ಕ್ಲೀನ್ ವರೆಗೂ ಮಾಡದಿರುವ ಕೆಲಸವಿಲ್ಲ,ನೋಡದಿರುವ ವ್ಯಾಪಾರವಿಲ್ಲ.ಇದೆಲ್ಲಾ ಸಂಭ್ರಮ ಮುಗಿಯುವ ಹೊತ್ತಿಗೆ ನಾನು ಊರು ಬಿಟ್ಟು ಬಂದು ತಲುಪಿದ್ದು ಸ್ವತಂತ್ರವಾಗಿ ಆಡುವ ಮೈದಾನಕ್ಕಲ್ಲ,ಶ್ರಮವ ಮಾರಿ ವಿಶ್ರಾಮವ ಕೊಳ್ಳುವ ಸಂತೆ ಎಂದು ಅರಿವಾಗಲು ಏಳು ವರ್ಷ ಬೇಕಾಯಿತು.
ಹುಟ್ಟಿ ಎಂಟು ದಿನವಾಗಲಿಕ್ಕಿಲ್ಲ ಕಾಲಿಗೆ ಬಲ ಬಂದಾಕ್ಷಣ ಕರು ಏನು ಮಾಡುತ್ತೆ ಗೊತ್ತಾ..?ಹುಟ್ಟಿದಾಕ್ಷಣ ನಿಲ್ಲುವ ಶಕ್ತಿಯೇನೋ ಆ ಕರುವಿನಲ್ಲಿರುತ್ತೆ.ತಾಯಿಯ ಹಾಲು ಕುಡಿಯುತ್ತಾ ಎಂಟು ದಿನ ತುಂಬುವುದರೊಳಗೆ ಅದು ಜಿಗಿದಾಡಲು ಶುರುವಿಡುತ್ತೆ.ಹಾಲು ಕುಡಿದು ನೆಗೆದಾಡುವ ಕರುನ ಆಡಲು ಓಡಲು ಬಿಡ್ತಾರೆ.ಆಗ ನೋಡಬೇಕು ಅದರ ಖುಷಿನ ಓಡಿ ಹೋಗತ್ತೆ,ನೆಗೆದಾಡತ್ತೆ ಕುಣಿದು ಕುಪ್ಪಳಿಸುತ್ತೆ ಮತ್ತೆ ತಾಯಿಯ ಬಳಿ ಓಡಿ ಹೋಗಿ ನಿಲ್ಲತ್ತೆ.ಇದು ಯಾಕೆ ಹೇಳಿದೆ ಅಂದ್ರೆ ಆ ಬಲ ಬಂದ ಕರುವಿನ ಹಾಗೆನೋ ಊರು ಬಿಟ್ಟು ಓಡಿ ಬಂದದ್ದು ಕುಣಿದು,ಕುಪ್ಪಳಿಸಿದ್ದೆಲ್ಲಾ ಆಗಿತ್ತು ಆದರೆ ವಾಪಸ್ಸು ಹೋಗಿ ನಿಲ್ಲುವ ಕರುವಿನ ವಯಸ್ಸಲ್ಲಾ ನೋಡಿ ನಂದು ಹಾಗಾಗಿ ಸಂತೆಯ ಬದಿಯಲ್ಲಿ ಸುಮ್ಮನೆ ನಿಂತು ನೋಡಬೇಕಾಗಿ ಬಂತು.ಛೇ ಸುಮ್ಮನೆ ಕಳೆದು ಹೋಯ್ತಾ ವಯಸ್ಸು ಅಂತ ಬೇಜಾರಾಯ್ತು.ಜೀವನಾನ ಗಂಭೀರವಾಗಿ ತಗೊಳೋಣ ಅನ್ಸಿ ಯಾವುದಾದರು ಕೆಲ್ಸಕ್ಕೆ ಸೇರೋಣ ಅಂತ ಮಲ್ಲೇಶ್ವರ ಬಿಟ್ಟೆನಾದರೂ ಕೆಲಸ ಏನು ಸಿಗತ್ತೆ..? ಎಂಟನೇ ಕ್ಲಾಸಿನ ಓದು ಅಲ್ಲೇ ನಿಂತಿತ್ತು,ಅರ್ಹತೆ ಅಂತ ಪುಂಡಾಟದ ಸರ್ಟಿಫಿಕೇಟ್ ತೋರ್ಸೋಕಾಗತ್ತಾ..?ಒಂದು ಫ್ಯಾಕ್ಟರಿ ಯಲ್ಲಿ ಲೋಡು,ಅನ್ಲೋಡು ಮಾಡಲು ಕೆಲಸಕ್ಕೆ ಸೇರಿಬಿಟ್ಟೆ(ಸೇರಿದ್ದು ಆಯ್ತು ಬಿಟ್ಟಿದ್ದು ಆಯ್ತು) ಆ ಸಂಬಳವಾಗಲಿ,ಓ ಟಿ ಯ ದುಡ್ಡಾಗಲಿ ತಿಂಗಳ ಸಂಬಳವೆಂಬ ಮಾತಿಗಾಯ್ತು ಜೊತೆಗೆ ಪುಂಡಾಟದ ಕಡಿವಾಣಕ್ಕೆ ಕೆಲಸದ ನೆಪವಾಯ್ತು.ಆದರೆ ಸಮಾಧಾನ ಆಗ್ತಿಲ್ಲ ಮನಸ್ಸಿಗೆ.ಇಲ್ಲಾ ಇದಲ್ಲಾ ಮಾಡಬೇಕಿರೋದು ನಾನು ಬೇರೇನೋ ಬೇಕು,ಇನ್ನೇನೋ ಮಾಡಬೇಕಿತ್ತು ಅಂತ ಕಾಡ್ತಲೇ ಇತ್ತು.ಆಗ ತೋಚಿದ್ದು ಮತ್ತು ನಿರ್ಧರಿಸಿದ್ದು ಬರಿಬೇಕು ಅಂತ.ಸಾಹಿತ್ಯದ minimum knowledge ಇತ್ತು ಮತ್ತು ಅದೊಂದೆ ಅರ್ಹತೆ ಇದ್ದದ್ದು ಬೇರೆ ಏನಾದ್ರು ಮಾಡ್ಬೇಕು ಅಂತ ಯೋಚಿಸ್ತಿದ್ದ ಮನಸಿಗೆ ಸಮಾಧಾನ ಮಾಡಲು.ಶುರುವಾಯ್ತು ಅಸಲಿ ಹೋರಾಟ
ಮತ್ತೆ ಗೊಂದಲ ಮತ್ತು ಪ್ರಶ್ನೆಯಾರತ್ರ ಹೋಗಬೇಕು,ಯಾರನ್ನು ಕೇಳಲಿ ಮತ್ತು ಏನು ಬೇಕು ಅಂತ ಕೇಳೋದು ಅಸಲಿ ತಾನೇನು ಮಾಡಬೇಕು ಅನ್ನುವ ಸ್ಪಷ್ಟ ನಿರ್ಧಾರ ಮತ್ತು ಕಾರಣ ಗೊತ್ತಿರಲಿಲ್ಲ. ಬರೆಯುವ ಚಟ ಮೊದಲಿಂದಲೂ ಇತ್ತು. ಶಾಲಾ ದಿನಗಳಲ್ಲಿ ನಾಟಕ ಬರೆದು ನಿರ್ದೇಶನ ಮಾಡಿದ್ದು,ಧಾರಾವಾಹಿ ಬರೆದಿದ್ದು ಹತ್ತು ಹನ್ನೊಂದನೇ ವಯಸ್ಸಿಗೆ. ಆ ಕಾಲಕ್ಕೆ ಮಾಸಿಕಗಳಲ್ಲಿ ಬರುತಿದ್ದ ಧಾರವಾಹಿಗಳಿಂದ ಪ್ರೇರಿತನಾಗಿ ನೋಟ್ ಬುಕ್ ನಲ್ಲಿ ವಾರಕ್ಕೊಂದು ಸಂಚಿಕೆ ಬರೆಯುತಿದ್ದೆ. ಮೇಷ್ಟ್ರು ತಪ್ಪದೇ ಓದುತಿದ್ದರು ಸುತ್ತ ಮುತ್ತಲಿನ ಊರಿನ ಮೇಷ್ಟ್ರು ಗಳಿಗೂ ಆ ಬಗ್ಗೆ ತಿಳಿದು ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದೆ. ಅದೆಲ್ಲ ನೆನಪಾಗಿ ಮತ್ತೆ ಯಾಕೆ ಬರೆಯಬಾರದು ಎಂದು ಧೈರ್ಯ ಮಾಡಿ ಬರೆಯೋದಕ್ಕೆ ಪ್ರಾರಂಭಿಸಿಕೊಂಡೆ.
ಕತೆಗಳನ್ನು ಹಿಡಿದುಕೊಂಡು ಪ್ರತಿಭಾನುವಾರ ಅಲ್ಲಿ ಇಲ್ಲಿ ಅಲೆಯತೊಡಗಿದೆ. ಸಣ್ಣ ಸುಳಿವು ಸಿಗಲಿಲ್ಲ,ಕೆಲಸ ಆಗುವ ಲಕ್ಷಣಗಳು ಕಾಣಿಸಲಿಲ್ಲ. ಆ ಸಮಯದಲ್ಲಿ ಸಿಕ್ಕ ಒಂದಷ್ಟು ಮಂದಿ “ಇದೆಲ್ಲಾ ಆಗೋಲ್ಲ,ಯಾರ ಹತ್ತಿರ ಹೋದ್ರು ಹತ್ತಿರ ಸೇರಿಸಲ್ಲ,ಇಲ್ಲಿ ಯಾರು ಯಾರನ್ನು ಬೆಳೆಸೊಲ್ಲ ಇದೆಲ್ಲ ಬಿಟ್ಟು ಇರೋ ಕೆಲಸ ಮಾಡ್ಕೊಂಡು ಹೋಗು”ಅಂದ್ರು. ಕ್ರಮೇಣ ನಂಗೂ ಅದು ನಿಜ ಅನಿಸೋಕೆ ಶುರುವಾಯ್ತು.ಆದರೆ ಯಾರೋ ಯಾಕೆ ಗುರು ನಮ್ಮನ್ನು ಬೆಳೆಸ್ಬೇಕು.? ತಾಕತ್ತಿದೆ ಟ್ಯಾಲೆಂಟ್ ಇದೆ ನಾವೆ ಬೆಳೆಯೋಣ ಅಂತ ಮನಸ್ಸಿಗೆ ಸಮಾಧಾನ ಹೇಳ್ಕೊಂಡೆ.ಕೆಲಸ ಮಾಡ್ಕೊಂಡು ವಾರಕ್ಕೊಂದು ದಿನ ಪ್ರಯತ್ನ ಮಾಡೋದು ಸರಿ ಕಾಣಲಿಲ್ಲ.ರಾತ್ರಿ ಪಾಳಿಗೆ ಕಂಪನಿಯೊಂದರ ಗೇಟ್ ಕಾಯುವ ಕೆಲಸಕ್ಕೆ ಸೇರ್ಕೊಂಡೆ.ರಾತ್ರಿ ಕೆಲಸ ಮುಗಿಸಿ ಬೆಳಗೆದ್ದು ಕಥೆಗಳಿದ್ದ ಬ್ಯಾಗ್ ಹೆಗಲಿಗೇರಿಸಿಕೊಂಡು ಅಲೆಯಲು ಶುರು ಮಾಡಿದ್ದೆ.ನೋಡಿದೋರು ಬೈಯೋದಕ್ಕೆ ಶುರು ಮಾಡಿದ್ರು.ರಾತ್ರಿ ಕೆಲಸ ಮಾಡಿ ಹಗಲು ನಿದ್ರೆ ಮಾಡದೆ ಊರು ಸುತ್ತಿ ಬರೋದು,ಇಲ್ಲ ಬರೆಯುತ್ತಾ ಕೂರೋದು ನೋಡಿ ಹುಚ್ಚು ಹಿಡಿಯುತ್ತೆ ನಿಂಗೆ ಅಂದಿದ್ರು.ನಾ ಬಿಡಲಿಲ್ಲ ಅವಕಾಶ ನನ್ನಿಂದ ಎಷ್ಟು ದೂರ ಹೋಗ್ತಿತ್ತು ಅಷ್ಟೇ ಮನಸ್ಸು ಗಟ್ಟಿಯಾಗ್ತಿತ್ತು. ಎಲ್ಲಿ ಹೋಗೋದು ..? ಯಾರನ್ನು ಕೇಳೋದು.? ಹೇಗೆ ಸಾಧಿಸೋದು.? ಯಾವ ಪ್ರಶ್ನೆಗೂ ಉತ್ತರವಿರಲಿಲ್ಲ.
ಒಂದಿನ ಬಂತು.ನೀನು ನನ್ನ ಸಿನಿಮಾಗೆ ರೈಟರ್ ಕಣಯ್ಯಾ ಅಂದ್ರು ಡೈರೆಕ್ಟರ್. ಸಣ್ಣ ಅನುಭವವೂ ಇಲ್ಲದ ನನಗೆ ಅವರು ಅರ್ಧ ಗಂಟೆ ಸಮಯ ಮತ್ತು ಟೈಟಲ್ ಕೊಟ್ಟು ಬರಿ ಅಂದಾಗ ಬರೆದು ಕೊಟ್ಟ ಸಣ್ಣ ಕತೆಯೊಂದ ನೋಡಿ ಇದೇ ಕಥೆ,ನೀನೆ ರೈಟರ್ ಅಂದು ಆಫೀಸ್ ನಲ್ಲಿ ಇರೋದಕ್ಕೆ ಅವಕಾಶ ಕೊಟ್ರು. ಆರು ತಿಂಗಳು ಬರೆದೆ ಒಂದೊಳ್ಳೆ ಕಥೆ ಸಿದ್ಧವಾಯಿತು.ರೈಟರ್ ಎಂದೇ ಒಂದಷ್ಟು ಮಂದಿಗೆ ಪರಿಚಿತನಾಗತೊಡಗಿದ್ದೆ.ಸಿನಿಮಾ ಸೆಟ್ಟೇರತೊಡಗಿತು ನಿರ್ದೇಶಕರ ಎಲ್ಲೋ ಒಂದು ಕಡೆ ಅವರದ್ದೆ ಕಥೆ ಎಂದದ್ದು ಕಿವಿಗೆ ಬಿತ್ತು ಆ ವಿಚಾರ ಬೇಸರ ವಾಗಿತ್ತು. ಕೇಳಲು ಹೋಗಿರಲಿಲ್ಲ. ಸಿನಿಮಾ ಮುಹೂರ್ತದ ಹೊತ್ತಿಗೆ ಮಾಧ್ಯಮ ಗಳೆಲ್ಲಾ ರಚನೆ ನಿರ್ದೇಶಕರದ್ದೇ ಎಂದು ವರದಿ ಮಾಡಿದ್ದು ನೋಡಿ ನಿರ್ದೇಶಕರ ಮೇಲೆ ತಿರುಗಿಬಿದ್ದೆ..ಆಫೀಸಿನಿಂದ ಹೊರ ಬಂದುಬಿಟ್ಟೆ. ಇರೋದಕ್ಕೆ ರೂಮಿಲ್ಲ,ಚಿತ್ರರಂಗದಲ್ಲಿ ಗೆಳೆಯರಿಲ್ಲ.ನಾನೆ ಕರೆದು ಅವಕಾಶ ಕೊಡಿಸಿದ ಆ ಸಿನಿಮಾ ಹೀರೋ ಕೂಡ ಸಹಾಯ ಮಾಡಲು ಮುಂದೆ ಬರಲಿಲ್ಲ. ಸಿಕ್ಕಿರುವ ಅವಕಾಶ ತಪ್ಪಿಹೋಗಬಹುದೆಂಬ ಭಯ ಪಾಪ.ಇಷ್ಟೇನಾ ಜೀವನ ..? ಅನ್ನಿಸೋಕೆ ಶುರುವಾಯ್ತು.ವಾಪಸ್ಸು ಹಳೆಯ ಜೀವನಕ್ಕೆ ಹೊರಟು ಹೋರಟು ಹೋಗೋದಾ..?ಅದೇ ಮಲ್ಲೇಶ್ವರ ರಸ್ತೆ ಬದಿ ವ್ಯಾಪಾರ,ಜ್ಯೂಸ್ ಅಂಗಡಿ,ಫ್ಯಾಕ್ಟರಿ ಲಾರಿ ಲೋಡು ಊಹುಂ. ಮನಸ್ಸು ಒಪ್ಪುತ್ತಲೇ ಇಲ್ಲ.ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯೊದಕ್ಕಿಂತ ಸಾವು ಮೇಲು ಅನಿಸೋಕೆ ಶುರುವಾಯಿತು. ಪರಿಚಯವಿದ್ದ ನಾಲ್ಕಾರು ಜನರ ಭೇಟಿ ಮಾಡಿ ಹೀಗಾಯ್ತು ಅಂದೆ ಎಲ್ಲರೂ ನುಣುಪಾಗಿ ಜಾರಿಕೊಂಡರು.ಸರಿ ಸ್ನೇಹಿತರೊಬ್ಬರು ಹೀಗೆ ಇದ್ದರೆ ಹತಾಶೆಗೆ ಅನಾಹುತ ಮಾಡಿಕೊಂಡುಬಿಡಬಹುದೆಂದು ಒಂದು ಪ್ರೊಡಕ್ಷನ್ಸ್ ನಲ್ಲಿ ಕಂಟ್ರೋಲರ್ ಆಗಿ ಕೆಲಸ ಕೊಡಿಸಿದರು.ಒಂದೆರಡು ತಿಂಗಳು ಮಾಡಿದ್ದ ನೆನಪು. ಕೈಯಲ್ಲಿ ದುಡ್ಡು ಅಧಿಕಾರ ಇತ್ತು ಆದರೆ ಇಷ್ಟವಿಲ್ಲದ ಕೆಲಸ.ನನ್ನ ಉದ್ದೇಶ ಬೇರೆ, ಗುರಿ ಬೇರೆ ಇತ್ತಾದ್ದರಿಂದ ಮುಂದುವರೆಯಲು ಮನಸ್ಸಾಗದೆ ಬಿಟ್ಟೆ .
ಸೀರಿಯಲ್ ನಲ್ಲಿ ಲೈಟ್ ಬಾಯ್ ಆಗಿ ನಾಲ್ಕು ದಿನ ಕೆಲಸಕ್ಕೆ ಹೋಗಿದ್ದೆ.ಮನಸಾಕ್ಷಿ ಒಪ್ಪಲಿಲ್ಲ .ಕೆಲಸ ಮಾಡೋಕಲ್ಲ,ಬರಿ ಹೊಟ್ಟೆ ಪಾಡಿಗೆ ದುಡಿದು ತಿನ್ನೊದ್ರಲ್ಲೇನು ಸಾರ್ಥಕತೆ.ಎಲ್ಲ ದಾರಿಗಳು ಮುಚ್ಚಿಕೊಂಡ್ವು.ಏನ್ ಮಾಡೋದು..?ಊರಿಗೆ ಹೋಗೋಣ ಅನ್ನಿಸ್ತು. ತಕ್ಷಣ ಹೊರಟೇಬಿಟ್ಟೆ.ಮುಚ್ಚಿ ಹೋಗಿದ್ದ ಬಾವನ ಕ್ಯಾಂಟೀನ್ ಒಪನ್ ಮಾಡಿಕೊಂಡೆ ಟೀ ವ್ಯಾಪಾರ ಶುರು ಮಾಡಿದೆ.ಎಲ್ಲಾ ಕಡೆ ಸುತ್ತಿ ಕೊನೆಗೆ ಊರಿಗೆ ಬಂದು ಲೋಟ ತೊಳಿತಿದ್ದಾನೆ ಅಂದ್ರು ಜನ.ಜನರ ಮಾತಿಗೆಂದು ಸೊಪ್ಪು ಹಾಕಿದವನಲ್ಲ ಬಿಡಿ.ಸುಮಾರು ಎಂಟು ತಿಂಗಳಿದ್ದೆ ಮನಸ್ಸು ಮಾತ್ರ ಯೋಜನೆಗಳನ್ನು ರೂಪಿಸುತಿತ್ತು.ಬಿಟ್ಟು ಬಂದ ಸಿನಿಮಾ ಬಿಡುಗಡೆಯಾಗ್ತಿದೆ ಅಂತ ಸುದ್ದಿ ಬಂತು.ಹೇಗೆ ಸುಮ್ಮನಾಗೋದು..? ಕೇಸು ಹಾಕಿದೆ.ಕೇಸು ಗೆಲ್ಲೋದು ಸುಲಭವಾಗಿರಲಿಲ್ಲ. ಕೊನೆಗೆ ಚಿತ್ರಮಂಡಳಿಯವರು ತೀರ್ಮಾನ ಮಾಡಿ ಕತೆ ನನಗೆ ಸೇರಿದ್ದೆಂದು ಅದರ ಸಂಭಾವನೆ ಅಂತ ಒಂದಷ್ಟು ಹಣ ಕೊಡಿಸಿ ಅಗ್ರಿಮೆಂಟ್ ಮಾಡಿಸಿಕೊಟ್ಟರು.ಮುಂದಿನ ದಿನಗಳಲ್ಲಿ ಆ ಸಿನಿಮಾ ಬಿಡುಗಡೆಯಾಯ್ತು.ಒಂದು ವರ್ಷ ಸತತವಾಗಿ ಪ್ರದರ್ಶನವಾಯ್ತು.ನಾಲ್ಕು ಭಾಷೆಗೆ ಡಬ್ಬಿಂಗ್ ಆಯ್ತು.YouTube ನಲ್ಲಿ ಏಳು ಕೋಟಿ ವಿಕ್ಷಿಸಿದ್ದಾರೆ.ಸೋಲೊಪ್ಪಿಕೊಳ್ಳುವಮತ್ತೆ ಗಾಂಧಿನಗರ ಬಂದೆ.ಸ್ನೇಹಿತರೊಬ್ಬರು ತಮ್ಮ ಸಿನಿಮಾಗೆ ಸ್ಕ್ರಿಪ್ಟ್ ಬರೆಯಲು ಅವಕಾಶ ಕೊಟ್ಟರು.ಬಹುತೇಕ ಸ್ಕ್ರಿಪ್ಟ್ ಕೆಲಸ ಮುಗಿದು ಲೊಕೇಷನ್ ನೋಡಿ,ವಿಜಯ ರಾಘವೇಂದ್ರ ಅವರ ಕಾಲ್ ಶೀಟ್ ತೆಗೊಂಡಿದ್ದು ಆಗಿತ್ತು.ಅದೆನಾಯ್ತೊ ಒಂದಿನ ಡೈರೆಕ್ಟರ್ ಬಂದು ಈ ಸಿನಿಮಾ ಆಗಲ್ಲ,ನಿಧಾನ ಆಗಬಹುದು ನೀನು ಹೊರಡು ಹೇಳ್ತೀನಿ ಅಂದ್ರು.ಆಫಿಸ್ ಖಾಲಿ ಮಾಡ್ಬಿಟ್ರು.ಸ್ವಲ್ಪ ದಿನಗಳ ನಂತರ ಏನಾಯ್ತು ಅಂತ ಆ ಸಿನಿಮಾದ ನಿರ್ಮಾಪಕರನ್ನು ವಿಚಾರಿಸಲು ಹೋಗಿದ್ದೆ ಅವರು ನಿರ್ದೇಶಕನ ಮೇಲಿದ್ದ ಅವರ ಅಪನಂಬಿಕೆ ಕಾರಣ ಹೇಳಿದರು.ಮುಂದಿನ ದಿನಗಳಲ್ಲಿ ನಿರ್ಮಾಪಕರು ಕರೆದು ಕಥೆ ಮಾಡು ಅಂದ್ರು ಮತ್ತು ಆ ಕಥೆ ಕೂಡ ಒಪ್ಪಿ ನನ್ನಿಂದಲೇ ಸಿನಿಮಾ ಮಾಡಿಸಿದ್ರು.ಆದರೆ ಆ ನಿರ್ದೇಶಕ ಸ್ನೇಹಿತ ಮಾತ್ರ ನನ್ನಿಂದಲೇ ಸಿನಿಮಾ ನಿಂತಿತು ಅಂತ ತಪ್ಪು ತಿಳಿದು ದೂರಾದ ಮತ್ತು ಅಪವಾದ ಹೊರಿಸಿದ.But ಆತ ಕೂಡ ಮತ್ತೊಂದು ಸಿನಿಮಾ ಡೈರೆಕ್ಟ್ ಮಾಡಿದ್ದ ಆದರೆ ಮೂರು ವರ್ಷವಾಯಿತು ಸಿನಿಮಾ ಆಚೆ ಬರಲೇ ಇಲ್ಲ.ಯಾಕೆಂತ ವಿಚಾರಿಸಿದಾಗ ಅಲ್ಲೂ ಕೂಡ ನಿರ್ದೇಶಕನ ಕೆಪಾಸಿಟಿ ನೋಡಿದ ನಿರ್ಮಾಪಕರು ಮನೆಗೆ ಕಳಿಸಿ ಬೇರೆ ನಿರ್ದೇಶಕನನ್ನು ಕರೆಸಿ ಸಿನಿಮಾ ಮುಂದುವರೆಸಿಕೊಂಡ್ರು ಅಂತ ತಿಳಿತು.ಹೀಗಿದ್ದರೂ ಆತ ಮಾತ್ರ ನನ್ನನ್ನು ದೂರುವುದು ತಪ್ಪಿಲ್ಲ,ಆ ವಿಷಯ ಬದಿಗಿರಲಿ.ಹೀಗೆ ಬರಹಗಾರನಾಗಿದ್ದು ನಾನು ನಿರ್ದೇಶನಕ್ಕೆ ಬಡ್ತಿ ಪಡೆದುಕೊಂಡೆ.ಸಿನಿಮಾ ಕೂಡ ರಿಲೀಜ್ ಆಯ್ತು,ಆಮೇಲೆನಾಯ್ತು ನಿಮಗೆ ಗೊತ್ತು.ಆದರೆ ಇದೆಲ್ಲಾ ಈಗ್ಯಾಕೆ ಅಂದ್ರೆ ಅಸಲಿ ಪ್ರಾಬ್ಲಮ್ ಶುರುವಾಗಿರೋದೆ ಇಲ್ಲಿ.ಸಿನಿಮಾ ಸೋತು ಹೋಯ್ತು.
ಸಿನಿಮಾ ರಿಲೀಜಾದ ನಂತರ ಮೊದಲ ತಿಂಗಳಿಗೆ ರೂಮು ಬಾಡಿಗೆಗೆ ದುಡ್ಡಿಲ್ಲದಾಗಿ ಹೋಯ್ತು.ಸಿನಿಮಾ ಕೆಲಸಗಳು ನಡಿತಿದ್ದ ಹೊತ್ತಲ್ಲಿ ಸುತ್ತ ಇರ್ತಿದ್ದ ಜನ(? ) ಒಬ್ಬೊಬ್ರೆ ಸೈಡೊಗೋಗೊಕೆ ಶುರುವಾದ್ರು.ಇಬ್ಬರು ನಿರ್ಮಾಪಕರಲ್ಲಿ ಒಬ್ಬರು ಡೈರೆಕ್ಟರ್ ದುಡ್ಡು ತಿಂದ್ಬಿಟ್ಟ ಅದಿಕ್ಕೆ ಸಿನಿಮಾ ಸೋತಿದ್ದು ಅಂತ ಹೇಳ್ಕೊಂಡು ತಿರುಗ್ತಿದ್ದಾರೆ ಅಂತ ಕಿವಿಗೆ ಬಿತ್ತು.ದುಡ್ಡು ಕಳೆದುಕೊಂಡ ನೋವು ಅವರಿಗೆ ಏನಾದ್ರು ಮಾತಾಡ್ಕೊಳ್ಳಿ ಅಂತ ಸುಮ್ಮನಾದೆ.ಮತ್ತೊಬ್ಬ ನಿರ್ಮಾಪಕರು ಕರೆದು ಆಗಿದ್ದು ಆಯ್ತು ಮತ್ತೊಂದು ಕಥೆ ಮಾಡು ಸಿನಿಮಾ ಮಾಡೋಣ ಈ ಸಲ ಗೆಲ್ಬೇಕು ಅಂತ ಹೇಳಿ ಕಳಿಸಿದ್ರು.ಮತ್ತದೆ ಹುರುಪಿನಿಂದ ಬಂದು ಕುಳಿತು ನಮ್ ಹುಡುಗ ದೊರೆ ಕರೆದು ಜೊತೆಗಿಟ್ಕೊಂಡೆ,ಕೂರಿಸ್ಕೊಂಡು ಕಥೆ ಮಾಡಿದೆ.ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿ ಅನೌನ್ಸ್ ಮಾಡಿದೆ.ಆಗ ಬರತೊಡಗಿದರು ಬದಿಗೆ ಹೋದವರೆಲ್ಲಾ.ಆದರೆ ಗ್ರಹಚಾರವೋ ಏನೋ ಹೊಸ ಸಿನಿಮಾ ಸುದ್ದಿಯಾಗ್ತಿದ್ದಂತೆ ಯಾರು ಏನು ಊದಿದರೋ ಅಥವಾ ನಿರ್ಮಾಪಕರೇ ಅಂಜಿದರೋ ಇಲ್ಲ ಮತ್ತೆನಾಯಿತೋ ಗೊತ್ತಿಲ್ಲ ನಿರ್ಮಾಪಕರು ಹಿಂದೆ ಸರಿದರು.Again
ಏನ್ ಮಾಡೋದು ತಿಂಗಳಾಗಲೆ ಮೂರು ಮನೆ ಬಾಡಿಗೆ ಕೊಟ್ಟಿಲ್ಲ,ಅಡುಗೆಗೆ ರೇಷನ್ ಇಲ್ಲ ಅದೇ ಹೊತ್ತಿಗೆ ಸರಿಯಾಗಿ ತಂಗಿ ಮಗುಗೆ ಉಷಾರಿಲ್ಲದೆ ಎರಡು ತಿಂಗಳು ಆಸ್ಪತ್ರೆ ಕಾಯಬೇಕಾಗಿ ಬಂತು.ನಾಗರಭಾವಿಯ ಆಫಿಸ್ ಕಾಲಿ ಮಾಡಿಬಿಟ್ಟೆ.ಅಡ್ವಾನ್ಸ್ ದುಡ್ಡು ಬಾಡಿಗೆ ಕಳೆದು ಹತ್ತು ಸಾವಿರ ಬಂತು.ಆಫಿಸಿನ ಥಿಂಗ್ಸ್ ಇವತ್ತಿಗೂ ಅಲ್ಲೇ ಇದೆ.ಊರಿಗೆ ಹೊರಟೆ ಏನಾದ್ರೂ ಮಾಡೋಣ ಅನ್ಕೊಳೋಸ್ಟರಲ್ಲಿ ಅಪ್ಪನಿಗೆ ಹುಷಾರಿಲ್ಲದೆ ಹೋಯ್ತು.ಆ ಹೊತ್ತಿಗೆ ಫೋನ್ ಮಾಡಿದ ನಿರ್ಮಾಪಕರೊಂದಿಗೆ ಸಣ್ಣ ರೇಗಾಟ ಆಗಿಹೋಯ್ತು.
ಅಪ್ಪನ ಆಪರೇಷನ್ ಗೆ ದುಡ್ಡು ಹೊಂದಿಸ ಬೇಕಾದಾಗ ನಿಜಕ್ಕೂ ನಾನು ಸಾಧಿಸಿದ್ದೇನು ಅಂತ ಕೇಳಿಕೊಂಡಾಗ ಮಾತ್ರ ಕಣ್ಣ ಮುಂದೆ ಶೂನ್ಯ.ನೀವು ನಂಬಲಿಕ್ಕಿಲ್ಲ ನಾನು ಯಾರನ್ನ ಕೇಳಿದೆ ಬಿಟ್ಟೆ ಅಂತ ತಿಳಿಯೋದು ಬೇಡ ಅವತ್ತು ಕೆಲಸಕ್ಕೆ ಬಂದದ್ದು ಅಪ್ಪನ ಕಾಂಟ್ಯಾಕ್ಟ್ ಮಾತ್ರ.ಅದಿರಲಿ ಬಿಡಿ, ಬಿಕ್ಷಕನಿಗೆ ಒಂದು ರೂಪಾಯಿ ಕೊಡೋಕೆ ನಾವು ಡೈಲಾಗ್ ಹೊಡಿಯೋರು ಇನ್ನಾ ಸಾವಿರಾರು ರೂಪಾಯಿ ಕೊಡ್ತೀವಾ..?ಅಪ್ಪನಿಗೆ ಹುಷಾರಾದ ನಂತರ ಬೆಂಗಳೂರಿಗೆ ಬಂದ್ಬಿಟ್ಟೆ.ಗೆಳೆಯ ಹೆಚ್ ಪಿ ಒಂದಷ್ಡು ದಿನ ಆಶ್ರಯ ನೀಡಿದ್ದ.
ಇತ್ಲಾಗೆ ಸಿನಿಮಾ ಸೆಟ್ಟೇರಲಿಲ್ಲ,ಅತ್ಲಾಗೆ ರೈಟರ್ ಆಗಿ ಮಾಡ್ತಿದ್ದ ಕೆಲಸಗಳೆಲ್ಲ ತಪ್ಪಿ ಹೋದವು.ಜನ ಮಾತ್ರ ಡೈರೆಕ್ಟರ್ ಗೆ ಏನು ಕಮ್ಮಿ ಅಂತಾರೆ.ಕೆಲಸ ಬರದ ಹುಡುಗ ಕೆಲಸ ಕೇಳಿ ಹೋದರೆ ಕೆಲಸ ಕೊಡ್ತಾರೆನೋ ಆದರೆ ಕಂಪನಿಯ ಬಾಸ್ ಕೆಲಸ ಕೇಳಿದರೆ ಜನ ಅನುಮಾನ ಪಡ್ತಾರೆ.ಯಾಕೆ ಗೊತ್ತಾ..?ಇವನು ಐರನ್ ಲೆಗ್ ಇರಬೇಕು ಅದಿಕ್ಕೆ ಕಂಪನಿ ಲಾಸ್ ಆಯ್ತೇನೋ ಅಂತ.ಯಾಕಿದೆಲ್ಲಾ ಹೇಳ್ತಿದ್ದೀನಿ ಅಂದ್ರೆ ಮನಸ್ಸಲಿರೋದನ್ನ ಹೇಳಿಬಿಟ್ರೆ ಸ್ವಲ್ಪ ರಿಲಾಕ್ಸ್ ಆಗುತ್ತಂತೆ.ಇಲ್ಲಾಂದ್ರೆ ಖಿನ್ನತೆ ಕಾಡುತ್ತೆ.ಯಾವ ಮಟ್ಟಿಗೆ ಅಂದ್ರೆ ಜಗತ್ತು ಓಡ್ತಿದೆ,ನೀನು ಮಲ್ಗಿದ್ಯಾ..? ಜಗತ್ತೆಲ್ಲಾ ಒಂದಾಗಿದೆ,ನೀನು ಮಾತ್ರ ಒಂಟಿ.ಹೋಗು ಹೋಗು ಎಲ್ಲಾದ್ರೂ ದೂರ ಹೋಗು ಅಂತಿದೆ ಮನಸ್ಸು.ನೋವೆಲ್ಲಾ ಹೇಳ್ಕೊಬೇಕು ಅನ್ಸತ್ತೆಆದರೆ ಸೋತವನು ಫೋನ್ ಮಾಡಿದರೆ,ಎದುರಿಗೆ ಕಂಡ್ರೆ ಎಲ್ಲಿ ಕಾಸು ಕೇಳ್ಬಿಡ್ತಾನೊ ಅಂತ ಜನ ಸೈಡಿಗೋಗ್ತಾರೆ.ಅದಿಕ್ಕೆ ಇಲ್ಲಿ ಬರ್ಕೊಂಡೆ ಯಾಕೆಂದರೆ ಅಕಸ್ಮಾತ್ತಾಗಿ ಸತ್ತೋದ್ರೆ..?ಯಾಕೆಂದರೆ ನಂದೇ ಡೈಲಾಗ್ “ಗೆದ್ದೋನು ಸೋತ,ಸೋತೋನು ಸತ್ತ”ಕಾಡ್ತಿರತ್ತೆ. ಪೇಪರ್ ಪೆನ್ನು ಮಾತ್ರ ಇವಾಗ ನಾನು ಹೇಳಿದ್ನೆಲ್ಲಾ ತಾಳ್ಮೆಯಿಂದ ಕೇಳುತ್ತೆ ಅನಿಸ್ತು.
ಇರ್ಪು ಮಳೆಗಾಲದ ಕಥೆ.ಜೂನಿಗೆ ಶುರು ಮಾಡ್ತಿನಿ ಅನ್ನೊ ನಂಬಿಕೆ ಮಾತ್ರ ಜೊತೆಗಿರೋದು.ಈ ಮಧ್ಯೆ ಪುಟ್ಟಣ್ಣ ಕಣಗಾಲ್ ಜೀವನ ಚರಿತ್ರೆಯನ್ನು ಸಿನಿಮಾ ಮಾಡ್ತೀನಿ ಅಂದೆ ರೈಟ್ಸ್ ಜೊತೆಗಿದೆ ನಿರ್ಮಾಪಕರು ಹಿಂದೆ ಹೋದರು.ಅದು ಕೂಡ ಡಿಸೆಂಬರ್‌ನಲ್ಲಿ ಸೆಟ್ಟೇರಬೇಕಿದೆ.ನಂಬಿಕೆ ಇದೆ, ನಂಬಿದವರೇ ಜೊತೆಗಿಲ್ಲ.
ಇದು ಬರೆದು ಮೂರು ವರ್ಷ ಆಯ್ತು.ಈಗ ಮದುವೆ ,ಹೆಂಡತಿ, ಮಗು,ಸಂಸಾರ ಅಂತೆಲ್ಲಾ ಆಗಿದೆ.ಬೆಂಗಳೂರಿನ ರೂಮ್ ಬಿಟ್ಟು ತುಮಕೂರಿನಲ್ಲಿ ಮನೆ ಮಾಡಿಕೊಂಡು ಸಿಫ್ಟ್ ಆಗಿಯೇ ಎರಡು ವರ್ಷ ಆಯ್ತು.ಜಗತ್ತಿಗೆ ಲಾಕ್ ಡೌನ್ ಆಗಿದ್ದಾಗ ಹೊಸದೇನು ಹೇಳಲಿ?
ತಾಳ್ಮೆಯಿಂದ ಓದಿದ ನಿಮಗೆ ಧನ್ಯವಾದಗಳು.-ಪ್ರಸನ್ನ ಶೆಟ್ಟಿhttps://youtu.be/aOBKRvG5LQk
ನನ್ನ ನಿರ್ದೇಶನದ “ನಮ್ಮೂರ್ ಹೈಕ್ಳು” ಚಲನಚಿತ್ರ ಮೊಟ್ಟ ಮೊದಲ ಬಾರಿಗೆ ಯೂಟ್ಯೂಬ್ ನಲ್ಲಿ.ನೋಡಿ ,ಹಂಚಿ ,ಅಭಿಪ್ರಾಯ ತಿಳಿಸಿ.ಧನ್ಯವಾದಗಳು..