ಆ ಕರಾಳ ರಾತ್ರಿ” (ಕನ್ನಡ)

ಅತಿಯಾಸೆ ಗತಿಕೇಡು ಎಂಬ ನಾಣ್ಣುಡಿ ಎಲ್ಲರಿಗೂ ಗೊತ್ತಿದೆ. ಆದರೆ ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುವುದು ಮನುಷ್ಯ ಜಾಯಮಾನವಲ್ಲ. ಕೆಲವರು ಅಪರಿಚಿತರನ್ನು ದೋಚಿ ದುಡ್ಡು ಮಾಡಿಕೊಂಡರೆ, ಇನ್ನೂ ಕೆಲವರು ತಮಗೆ ಸಹಾಯ ಮಾಡಿದವರನ್ನೇ ದೋಚಲು ಹಿಂದೆ ಮುಂದೆ ನೋಡುವುದಿಲ್ಲ. ಆ ಕರಾಳ ರಾತ್ರಿಯಲ್ಲಿ ನಿಜವಾಗಿಯೂ ಕರಾಳ ರಾತ್ರಿಯಾದದ್ದು ಯಾರಿಗೆ? 

ಬಡತನ ನಾವು ಬಯಸಿ ಬಂದಿರುವಂಥದ್ದಲ್ಲ‌. 

ಆದರೆ ಬಡತನದಲ್ಲಿ ಇರುವವರು ಸದಾ ಅದರಿಂದಾಚೆ ಬರಬೇಕೆಂದು ಪ್ರಯತ್ನಿಸುತ್ತಲೇ ಇರುತ್ತಾರೆ. ಅಂತಹಾ ಒಂದು ಬಡಕುಟುಂಬದಲ್ಲಿ ತಂದೆ-ತಾಯಿ ಜೊತೆಗೊಬ್ಬ ವಯಸ್ಸಿಗೆ ಬಂದ ಮಗಳು ಇರುತ್ತಾರೆ. ಆ ಮಗಳು ತಕ್ಕಮಟ್ಟಿಗೆ ಸುಂದರಿ ಮತ್ತು ಚತುರೆಯೇ. ಆದರೆ ಬಡತನದ ಕಾರಣದಿಂದ ಆಕೆಯ ಮದುವೆಯಾಗಿರುವುದಿಲ್ಲ. ಆಕೆಗೆ ವಿವಾಹಾಪೇಕ್ಷೆ ಉತ್ಕಟವಾಗಿ ಇರುತ್ತದೆ. ಆದರೆ ಅದು ಸಾಧ್ಯವಾಗದ ಕಾರಣ ನಿರಾಸೆ ಸಹಿಸಲಾಗದೇ ಹತಾಶಳಾಗಿರುತ್ತಾಳೆ. 

ಇಂತಹಾ ಸಮಯದಲ್ಲಿ ಬುಡುಬುಡಿಕೆಯವನು ಬಂದು ಇವರ ಮನೆ ಮುಂದೆ ನಿಂತು ರಾತ್ರಿ ಬೆಳಗಾಗುವಷ್ಟರಲ್ಲಿ ಈ ಮನೆಯವರ ನಸೀಬೇ ಬದಲಾಗುತ್ತದೆ ಎಂದು ಹೇಳುತ್ತಾನೆ. ಅದ್ಯಾವ ರೀತಿ ಬದಲಾವಣೆ ಅಂತ ಮುಂದೆ ನಮಗೇ ಗೊತ್ತಾಗುತ್ತಾ ಹೋಗುತ್ತದೆ. 

ಆ ದಿನವೇ ಒಬ್ಬ ಪ್ರಯಾಣಿಕ ಇವರ ಮನೆಗೆ ಆಶ್ರಯ ಕೋರಿ ಬರುತ್ತಾನೆ‌. ಟೀ ಮಾಡುವುದರಿಂದ ಹಿಡಿದು ಊಟಕ್ಕೂ ಆ ಅನಾಮಿಕನೇ ದುಡ್ಡು ಕೊಡುತ್ತಾನೆ. ಅಲ್ಲದೇ ತಾನು ಆ ಬಡಕುಟುಂಬದ ಸಾಲವನ್ನೂ ಸಹ ತೀರಿಸುತ್ತೇನೆ ಎಂದು ಹೇಳುತ್ತಾನೆ. ಬುಡುಬುಡಿಕೆಯವನ ಮಾತು ನಿಜವಾಯ್ತು ಅಂತ ನಾವು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಮನೆಮಂದಿಯ ಮನಸ್ಥಿತಿಯೇ ಬದಲಾಗಿ ಹೋಗಿರುತ್ತದೆ‌. ಅವನ ಸಹಾಯ ಪಡೆಯುವ ಬದಲಾಗಿ ಅವನನ್ನೇ ಮುಗಿಸಿಬಿಟ್ಟರೆ ಅವನ ಬಳಿ ಇರುವ ಹಣವೆಲ್ಲವೂ ತಮಗೇ ದೊರೆಯುತ್ತದೆ ಅಂತ ಲೆಕ್ಕಾಚಾರ ಹಾಕುತ್ತಾರೆ. 

ಬಡತನ ಶಾಪ ಎನ್ನುವುದು ಇದೇ ಕಾರಣಕ್ಕೆ. ಹಸಿದ ಹೊಟ್ಟೆಯ ಮುಂದೆ ಯಾವ ವೇದಾಂತವೂ ನಿಲ್ಲುವುದಿಲ್ಲ. ಆ ಬಡ ಕಣ್ಣುಗಳಿಗೆ ಅವನ ಸಹಾಯ ಕಾಣುವ ಬದಲು ಆತನ ದುಡ್ಡು ಆಕರ್ಷಿಸುತ್ತದೆ. ಅತಿಥಿ ದೇವೋಭವ ಎಂಬ ನಮ್ಮ ಸನಾತನ ಸಂಸ್ಕೃತಿ ಮರೆತು ಹೋಗುತ್ತದೆ. ನಿಷ್ಕರುಣೆಯಿಂದ ನಿರಪರಾಧಿಯಾದ ಆ ಆಗಂತುಕನನ್ನು ಕೊಲ್ಲಲು ಮೂವರೂ ನಿರ್ಧರಿಸುತ್ತಾರೆ.

ಒಂದೇ ಒಂದು ಕ್ಷಣದ ಹಣದ ಮೇಲಿನ ಆಕರ್ಷಣೆಯಿಂದ ಅವರ ಮನಸ್ಸು ಹಾಳಾಗಿ ತಮ್ಮಲ್ಲಿ ಆಶ್ರಯ ಕೋರಿ ಬಂದವರನ್ನೇ ಕೊಲ್ಲಲು ಹೊರಡುವುದು ಒಂದು ರೀತಿ ವಿಪರ್ಯಾಸ. ಅವರಿಗೆ ದಿಢೀರ್ ಅಂತ ತಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗಬೇಕು ಅಂತಾಸೆ. ಅದೂ ರಾತ್ರಿ ಬೆಳಗಾಗುವುದರೊಳಗೆ…. ಆದರೆ ಆಗಿದ್ದೇನು…? ಆ ಕರಾಳ ರಾತ್ರಿಯಲ್ಲಿ ಆ ಮನೆಯವರ ನಸೀಬು ಪೂರ್ತಿಯಾಗಿ ಬದಲಾಗುತ್ತದೆ….. ಆದರೆ ಅದು ಯಾವ ರೀತಿ ಬದಲಾವಣೆ ಎಂದು ತಿಳಿಯಲು ಸಿನೆಮಾ ನೋಡಬೇಕು.

ರಂಗಾಯಣ ರಘು, ಅನುಪಮಾ ಗೌಡ, ವೀಣಾ ಸುಂದರ್, ಜೆಕೆ ಯಾರೂ ಅಭಿನಯಿಸುವುದಿಲ್ಲ. ನೈಜವಾಗಿ ಸಹಜವಾಗಿ ಮಾತನಾಡುತ್ತಾರಷ್ಟೇ‌. ಅನುಪಮಾ ಬಗ್ಗೆ ಹೇಳುವುದೇ ಬೇಡ. ಪ್ರಬುದ್ಧ ನಟಿ ಆಕೆ. ಕಿರುತೆರೆಯವರೆಲ್ಲ ಸೇರಿ ಒಂದು ಅದ್ಭುತ ಸಿನೆಮಾ ಮಾಡಿದ್ದಾರೆ. 

2018 ರ ಕರ್ನಾಟಕ ರಾಜ್ಯ ಸಿನೆಮಾ ಪ್ರಶಸ್ತಿ ಪಡೆದಿರುವ ಸಿನೆಮಾ ಇದು.

**********

ಕೆ ಎ ಸೌಮ್ಯ

ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply