ಇಂದಿರಾ (ಲೀಲಾವತಿ) ಮತ್ತು ರಾಧಾ (ಹರಿಣಿ) ಬಹುಕಾಲದ ಗೆಳತಿಯರು. ಅವರಿಬ್ಬರ ನಡುವೆ ಇವಳು ಶ್ರೀಮಂತೆ ಅವಳು ಬಡವಿ ಭೇದ ಇರಲಿಲ್ಲ. ಒಂದೇ ಮನೆಯ ಸೊಸೆಯರಾದರೆ…? ಎಂದುಕೊಳ್ಳುತ್ತಾರೆ. ಅಶ್ವಿನಿ ದೇವತೆಗಳು ‘ಅಸ್ತು’ ಎಂದಿರಬೇಕು.
ಹಣವಿಲ್ಲದ ತಂಗಿಗೆ (ಜಯಶ್ರೀ) ಆಸ್ತಿ ಕೊಟ್ಟು ಸಾಯುತ್ತಾನೆ ಅಣ್ಣ (ರಾಮಚಂದ್ರ ಶಾಸ್ತ್ರಿ). ಒಂದೇ ಷರತ್ತು. ಅವನ ಮಗಳು ಇವಳಿಗೆ ಸೊಸೆ ಆಗಬೇಕು.
ಬಡವಿ ಜಯಶ್ರೀಗೆ ಶ್ರೀಮಂತಿಕೆಯ ಮದ ಏರುತ್ತದೆ. ಆದರೆ ಹಿರಿಯ ಮಗ ಡಾ. ಆನಂದ್ (ರಾಜ್‍ಕುಮಾರ್) ಆಗಲೀ ಕಿರಿಯ ಮಗ ರಾಜ (ಉದಯಕುಮಾರ್) ಆಗಲೀ ಮೆರೆಯುವುದಿಲ್ಲ. ಅವರು ತಮ್ಮ ಕೆಲಸದಾಳು ರಂಗನನ್ನೂ (ದಿನೇಶ್) ಪ್ರೀತಿಯಿಂದ ಕಾಣುತ್ತಿರುತ್ತಾರೆ. ಈ ಸುಂದರ ಸಂಸಾರಕ್ಕೆ ಹುಳಿ ಹಿಂಡಲು, ಆನಂದನನ್ನು ಮದುವೆ ಆಗಿ ಆಸ್ತಿ ಹಿಂಪಡೆಯಲು ಬರುತ್ತಾಳೆ ಇಂದಿರಾ.
ಇದಕ್ಕೆ ಮುಂಚೆ ಹಳ್ಳಿಗೆ ಹೋದ ರಾಜ ಇವರ ಗುಮಾಸ್ತ ವಾಸುದೇವನ (ರಾಘವೇಂದ್ರ ರಾವ್) ಮಗಳು ರಾಧಳನ್ನು ಇಷ್ಟ ಪಟ್ಟು ಮನೆಯಿಂದ ಅವರಮ್ಮನಿಂದಲೇ ಓಡಿಸಲ್ಪಟ್ಟಿರುತ್ತಾನೆ…
ಗುಂಗುರು ಕೂದಲಿನ ವಿಶಿಷ್ಟವಾದ ಹೇರ್ ಸ್ಟೈಲ್ ಅಣ್ಣಾವ್ರದ್ದು ಚಂದದ ನಟನೆ. ಪತ್ನಿಗೆ ಬುದ್ಧಿ ಹೇಳಿ, ತಾಯಿಗೆ ‘ವಿವೇಕ’ ಹೇಳಿ ಸೋತು, ಕುರುಡನಾಗಿ… ಅದ್ಭುತ ಪಾತ್ರ ನಿರ್ವಹಣೆ.
ಉದಯಕುಮಾರ್ ಲವಲವಿಕೆಯಿಂದ ನಟಿಸಿದ್ದಾರೆ. ಅವರದೇ ನಿರ್ಮಾಣ ಮತ್ತು ಹಾಡುಗಳ ಸಾಹಿತ್ಯ ಕೂಡ. ಹರಿಣಿ ಹಾಸ್ಯ ಪ್ರಧಾನ ಡಯಲಾಗ್ ಹೇಳುತ್ತ ಚಂದಾಗಿ ಇಮೋಟ್ ಮಾಡಿದ್ದಾರೆ. ಲೀಲಾವತಿ ಗರ್ವಿಷ್ಠ ಹೆಣ್ಣಾಗಿ ಕೊನೆಯ ಫ್ರೇಂನಲ್ಲಿ ಒಳ್ಳೆಯವಳಾಗಿ ಸಖತ್ ನಟನೆ. ಬಾಲಕೃಷ್ಣ ಉಮ್ಮರ್ ಪಾತ್ರದಲ್ಲಿ ರಾಜನಿಗೆ ಸಹಾಯ ಮಾಡುವ ಪಾತ್ರ. ಬಿ. ಜಯಾ ದಿನೇಶ್ ಜೋಡಿ.
ನಾನಾ ಎಮೋಷನ್‍ಗಳನ್ನು ಚೆನ್ನಾಗಿ ತೋರಿಸಿದ್ದಾರೆ ಈ 1965ರ ಚಿತ್ರದಲ್ಲಿ…