ಈ ಸಿನೆಮಾದ ಕಥೆ ಹದಿನಾರನೇ ಶತಮಾನದ್ದು.
ಪೋರ್ಚುಗೀಸರು ಆಗ ತಾನೇ ಜಲಮಾರ್ಗದಲ್ಲಿ ಭಾರತವನ್ನು ಕಂಡುಹಿಡಿದಿದ್ದರು. ಕೇವಲ ವ್ಯಾಪಾರದ ನೆಪದಲ್ಲಿ ಬಂದ ಪರಕೀಯರು ನಮ್ಮನ್ನು ಹೇಗೆ ಶೋಷಿಸಿದರು ಅನ್ನುವುದನ್ನು ತಿಳಿಯಲು ಈ ಸಿನೆಮಾ ನೋಡಬೇಕಿದೆ. ಆದರೆ ಆ ಶೋಷಣೆಗೆ ಪರೋಕ್ಷವಾಗಿ ನಾವೂ ಸಹ ಕಾರಣರಾಗಿದ್ದೇವೆ.
ಕಾಳುಮೆಣಸನ್ನು ಅರಸಿ ಬರುವ ಪರಕೀಯರು, ನಂತರ ಇಲ್ಲಿನ ಸಂಪತ್ತು ನೋಡಿ ಬೆರಗಾಗುತ್ತಾರೆ. ಅಲ್ಲದೇ ಈ ದೇಶದಲ್ಲಿನ ವಿಭಿನ್ನ ಜನಾಂಗಗಳು ಮತ್ತು ಅವರ ನಡುವೆ ಒಗ್ಗಟ್ಟಿಲ್ಲದೇ ಇರುವುದು ಅವರಿಗೆ ಧನಾತ್ಮಕವಾಗಿ ಕಾಣಿಸುತ್ತದೆ. ಒಬ್ಬರನ್ನು ಇನ್ನೊಬ್ಬರತ್ತ ಎತ್ತಿ ಕಟ್ಟಿ ತಮ್ಮ ಬೇಳೆಯನ್ನು ಸುಲಭವಾಗಿ ಬೇಯಿಸಿಕೊಳ್ಳಬಹುದು ಅಂತ ತಿಳಿದ ಪರಕೀಯರು ಇಲ್ಲಿಯೇ ನೆಲೆ ನಿಲ್ಲುತ್ತಾರೆ.
ಅಲ್ಲದೇ ನಮ್ಮನ್ನೇ ಆಳಲು ಶುರು ಮಾಡುತ್ತಾರೆ..
ನಾವು ಒಗ್ಗಟ್ಟಿನಿಂದ ಇದ್ದಿದ್ದರೆ ಹೊರ ದೇಶದವರು ನಮ್ಮನ್ನು ಆಳಲು ಸಾಧ್ಯವಿತ್ತೇ? ಆದರೆ ಬೇರೆ ದೇಶದ ಪರಕೀಯರ ಮಾತು ನಂಬಿದಷ್ಟು ನಾವು ನಮ್ಮವರ ಮಾತನ್ನೇ ನಂಬಲಿಲ್ಲ.
ಅಲ್ಲದೇ ಇಲ್ಲಿಯೂ ಕೆಲವು ಬಲಹೀನತೆಗಳಿದ್ದವು.
ಯಾವುದೇ ರಾಜ ತನ್ನದೇ ದೇಶದ ಮತ್ತೊಂದು ರಾಜನ ಮೇಲೆ ದಂಡೆತ್ತಿ ಹೋದಾಗ ಅಲ್ಲಿನ ಹೆಣ್ಣುಮಕ್ಕಳನ್ನೆಲ್ಲಾ ಅಪಹರಿಸಿ ತರಲಾಗುತ್ತಿತ್ತು. ಯಾವುದೇ ಒಂದು ರಾಜಮನೆತನ ಅಥವಾ ದೇಶ ಹಾಳಾಗಲು ಈ ಒಂದು ನೈತಿಕ ಭ್ರಷ್ಟತನ ಸಾಕು. ಏಕೆಂದರೆ ವಿಜಯಲಕ್ಷ್ಮಿ ಒಲಿಯುವುದು ಧೀರನಿಗೆ ಹೊರತೂ ಹಿಂಸಾಪೀಡಕನಿಗಲ್ಲ.
ಒಟ್ಟಿನಲ್ಲಿ ಹೆಣ್ಣುಮಕ್ಕಳಿಗಂತೂ ದೇಶೀಯರು-ಪರದೇಶೀಯರು ಎಂಬ ಬೇಧವಿಲ್ಲದೇ ಶೋಷಣೆಯ ಭಾಗ್ಯ!! ಎಲ್ಲೋ ಕೆಲವರನ್ನು ಹೊರತು ಪಡಿಸಿದರೆ ಆಕೆಯನ್ನು ಎಲ್ಲರೂ ಭೋಗದ ವಸ್ತುವನ್ನಾಗಿಯೇ ಗುರುತಿಸುವುದು. ಹಾಗಾಗಿ ಇಲ್ಲಿನ ರಾಜರು ತಾವೂ ನೈತಿಕವಾಗಿ ಭ್ರಷ್ಟರಾಗಿ, ದೇಶವನ್ನೂ ಹಾಳು ಮಾಡಿ, ಕೊನೆಗೆ ಪ್ರಜೆಗಳ ಸಮೇತ ಪರಕೀಯರಿಗೆ ಗುಲಾಮರಾಗಬೇಕಾಯ್ತು.
ಇದರ ಬದಲು ಆಂತರಿಕ ಜಗಳವನ್ನು ತಮ್ಮತಮ್ಮಲ್ಲಿಯೇ ಬಗೆಹರಿಸಿಕೊಂಡು, ಪರಕೀಯರನ್ನು ಒಳಗೆ ಬಿಟ್ಟುಕೊಳ್ಳದೇ ಇದ್ದಲ್ಲಿ ಇಂದಿಗೂ ನಮ್ಮ ದೇಶ ಸುಭಿಕ್ಷವಾಗಿರುತ್ತಿತ್ತು. ಏಕೆಂದರೆ ಅವರುಗಳು ನಮ್ಮ ದೇಶದಿಂದ ಕೇವಲ ಸಂಪತ್ತನ್ನು ಲೂಟಿ ಹೊಡೆಯಲಿಲ್ಲ. ಸಂಸ್ಕೃತಿ-ಸಂಸ್ಕಾರಗಳನ್ನೂ ಲೂಟಿ ಹೊಡೆದರು.
ಸಿನೆಮಾದ ಕಥೆ ಹೀಗಿದೆ.
ನಾಯಕ ಚಿಕ್ಕವನಿದ್ದಾಗ ಆತನ ತಂದೆಯನ್ನು ಪೋರ್ಚುಗೀಸರ ವಾಸ್ಕೋ-ಡಾ-ಗಾಮಾ ಕೊಂದಿರುತ್ತಾನೆ. ಈಗ ಆ ಮಗುವಿನ ಜೀವನದ ಗುರಿ ತನ್ನ ತಂದೆಯನ್ನು ಕೊಂದ ವಾಸ್ಕೋ-ಡಾ-ಗಾಮಾನನ್ನು ಸಾಯಿಸುವುದು. ಅದಕ್ಕಾಗಿ ತನ್ನಲ್ಲಿರುವ ಚಿನ್ನವನ್ನೆಲ್ಲ ಕರಗಿಸಿ “ಉರುಮಿ” ಎಂಬ ಆಯುಧ ತಯಾರಿಸಿಕೊಳ್ಳುತ್ತಾನೆ.
ಯುವಕನಾದೊಡನೆಯೇ ಸಾಹಸ ಪ್ರದರ್ಶಿಸಿ ರಾಜನ ಸೈನ್ಯ ಸೇರಿಕೊಳ್ಳುತ್ತಾನೆ. ಹಾಗೆಯೇ ತನ್ನ ಬುದ್ಧಿವಂತಿಕೆಯಿಂದ ಅಲ್ಲಿನ ಕೊತ್ವಾಲನೂ ಆಗುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಆ ರಾಜ್ಯಕ್ಕೆ ವೈಸ್ ರಾಯ್ ಆಗಿ ವಾಸ್ಕೋ-ಡಾ-ಗಾಮಾ ಬರುತ್ತಿದ್ದಾನೆ ಅಂತ ಗೊತ್ತಾಗುತ್ತದೆ. ನಾಯಕ ಅಲರ್ಟ್ ಆಗುತ್ತಾನೆ.
ಅವನು ನಂತರ ವಾಸ್ಕೋ-ಡಾ-ಗಾಮಾನನ್ನು ಏನು ಮಾಡುತ್ತಾನೆ ಅಂತ ತಿಳಿಯಲು ಸಿನೆಮಾ ನೋಡಬೇಕು.
ಈವರೆಗೂ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವಾಸ್ಕೋ-ಡಾ-ಗಾಮಾನನ್ನು ಹೀರೋನಂತೆ ಚಿತ್ರಿಸಲಾಗಿತ್ತು. ಆತನ ಇನ್ನೊಂದು ಹೀನ ಮುಖ ತಿಳಿಯಲು ಈ ಸಿನೆಮಾ ನೋಡಿ. ಆದರೆ ಸಿನೆಮಾ ನೋಡಿದ ನಂತರ ನಮ್ಮಲ್ಲೇ ಕೆಲವರ ಮನಸ್ಥಿತಿ ವಾಸ್ಕೋ-ಡಾ-ಗಾಮಾನಿಗಿಂತಲೂ ಹೀನ ಎನಿಸಿದರೆ ಅದು ಆತನ ತಪ್ಪಲ್ಲ.