“ಊಜಾ 2014” (ಇಂಗ್ಲೀಷ್)

ಡೆಬಿ ಮತ್ತು ಲೇನ್ ಬಾಲ್ಯದ ಗೆಳತಿಯರು. ಇವರಿಬ್ಬರಲ್ಲಿ ಡೆಬಿಗೆ ಒಂದು ಅಪಾಯಕಾರಿ ಹವ್ಯಾಸ ಇರುತ್ತದೆ. ಏನೆಂದರೆ ಆಕೆ ‘ಊಜಾ ಬೋರ್ಡ್’ ಮುಖಾಂತರ ಆತ್ಮಗಳೊಡನೆ ಸಂಭಾಷಿಸುತ್ತಾ ಇರುತ್ತಾಳೆ. ದೊಡ್ಡವಳಾದರೂ ಅವಳಿಂದ ಆ ಹವ್ಯಾಸ ಮರೆ ಆಗಿರುವುದಿಲ್ಲ.

ಹೀಗಿರುವಾಗ ಒಮ್ಮೆ ಡೆಬಿ ಅನಿರೀಕ್ಷಿತವಾಗಿ ಆತ್ಮಹತ್ಯೆ ಮಾಡಿಕೊಳ್ತಾಳೆ.

ಆಕೆಯ ಆತ್ಮೀಯ ಸ್ನೇಹಿತೆಯಾದ ಲೇನ್ ಳಿಗೆ ಇದು ಆಘಾತಕಾರಿ ಸುದ್ದಿಯಾಗುತ್ತದೆ. ಏಕೆಂದರೆ ಲೇನ್ ತನ್ನ ಗೆಳತಿ ಡೆಬಿಯನ್ನು ಬಹಳ ಹಚ್ಚಿಕೊಂಡಿರುತ್ತಾಳೆ. ಸಾಯುವ ಮೊದಲು ತನ್ನ ಪ್ರಿಯ ಸ್ನೇಹಿತೆಗೆ ಒಂದು ‘ಗುಡ್ ಬಾಯ್’ ಸಹ ಹೇಳಲಾಗಲಿಲ್ವಲ್ಲ ಅಂತ ಲೇನ್ ನೊಂದುಕೊಳ್ತಾಳೆ. ಅಲ್ಲದೇ ಡೆಬಿಯ ಸಾವಿನ ಬಗ್ಗೆ ಆಕೆಗೆ ಕೆಲವು ಅನುಮಾನಗಳಿರುತ್ತವೆ.

ಈ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಲೇನ್ ತನ್ನ ಮತ್ತು ಡೆಬಿಯ ಸ್ನೇಹಿತರನ್ನು ಜೊತೆಗೆ ಸೇರಿಸಿಕೊಂಡು ‘ಊಜಾ ಬೋರ್ಡ್’ ಆಡುತ್ತಾಳೆ. ಅದರಿಂದ ಆತ್ಮವನ್ನು ಸಂಪರ್ಕಿಸಬಹುದಾದುದರಿಂದ ‘ಊಜಾ ಬೋರ್ಡ್’ ಮೂಲಕ ಡೆಬಿಯನ್ನೇ ಸಂಪರ್ಕಿಸಿ ಆಕೆ ಹೇಗೆ ಸತ್ತಳು ಅಂತ ಕೇಳಬೇಕು ಎಂದುಕೊಂಡಿರುತ್ತಾಳೆ.

ಸ್ನೇಹಿತರೆಲ್ಲರೂ ಡೆಬಿಯ ಮನೆಯಲ್ಲಿ ಸೇರುತ್ತಾರೆ.

‘ಊಜಾ ಬೋರ್ಡ್’ ಮೇಲೆ ಕೈ ಇಟ್ಟು, ಹತ್ತಿರವಿರುವ ಆತ್ಮವನ್ನು ಕರೆಯುತ್ತಾರೆ. ಕೆಲವೇ ನಿಮಿಷದಲ್ಲಿ ಆತ್ಮ ಊಜಾ ಬೋರ್ಡಿನಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತದೆ. ಇದನ್ನು ಯಾರೂ ನಂಬುವುದಿಲ್ಲ. ಇವೆಲ್ಲವನ್ನೂ ಲೇನ್ ಳೇ ತನಗೇ ಗೊತ್ತಿಲ್ಲದಂತೆ ಮಾಡುತ್ತಿರಬೇಕು ಎಂದುಕೊಳ್ಳುತ್ತಾರೆ. ಆದರೆ ಲೇನ್ ನೊಂದುಕೊಂಡಾಳು ಎಂದು ಯಾರೂ ಏನೂ ಹೇಳಹೋಗುವುದಿಲ್ಲ.

ಆತ್ಮವು ಎಲ್ಲರಿಗೂ ‘hi friend’ ಎನ್ನುತ್ತದೆ (ಅಂದರೆ ಅಕ್ಷರದ ಮೂಲಕ ಮಾತನಾಡುತ್ತದೆ). ಯಾರು ನೀನು ಎಂದು ಕೇಳಿದಾಗ “ಡಿ” ಅಕ್ಷರ ತೋರಿಸುತ್ತದೆ. ಯಾರು ನಂಬದಿದ್ದರೂ ಲೇನ್ ಳಿಗೆ ಅದು ಡೆಬಿ ಎಂದು ಗೊತ್ತಾಗುತ್ತದೆ. ಹಾಗಾಗಿ ಕಡೆಯ ಬಾರಿ ಸ್ನೇಹಿತೆಗೆ ‘ಗುಡ್ ಬಾಯ್’ ಹೇಳಿ ಆಟ ಮುಗಿಸುತ್ತಾಳೆ. ಎಲ್ಲರೂ ಮನೆಗೆ ಹಿಂತಿರುಗುತ್ತಾರೆ.

"ಊಜಾ 2014"
“ಊಜಾ 2014”

ಅಲ್ಲಿಂದ ಅಸಲೀ ಆಟ ಶುರುವಾಗುತ್ತದೆ.

ಅಲ್ಲಿ ಊಜಾ ಬೋರ್ಡಿನಲ್ಲಿ ಕೈ ಇಟ್ಟು ಆಟವಾಡಿದ ಎಲ್ಲರಿಗೂ ನಿಜವಾದ ಆತ್ಮ ಅಟಕಾಯಿಸಿಕೊಳ್ಳುತ್ತದೆ. ಆತ್ಮ ಇರುವುದೇ ಸುಳ್ಳು ಮತ್ತು ‘ಊಜಾ ಬೋರ್ಡ್’ ಒಂದು ಆಟವಷ್ಟೇ ಎಂದು ತಿಳಿದಿದ್ದವರಿಗೆ ಎಲ್ಲ ಕಡೆಯೂ “hi friend” ಎಂಬ ಬರಹವೇ ಕಾಣತೊಡಗುತ್ತದೆ.‌ ಎಲ್ಲರೂ ಕಂಗೆಟ್ಟು ಹೋಗುತ್ತಾರೆ. ಕೂಡಲೇ ಡೆಬಿಯ ಮನೆಗೆ ಹೋಗಿ ಮತ್ತೊಮ್ಮೆ ಊಜಾ ಬೋರ್ಡಿನಿಂದ ಡೆಬಿಯನ್ನು ಕರೆಯುತ್ತಾರೆ.

ಆತ್ಮ ಬರುತ್ತದೆ…..

ಆದರೆ ಅದು ಡೆಬಿ ಆಗಿರುವುದಿಲ್ಲ. ಬದಲಿಗೆ ಬೇರೆ ಯಾವುದೋ ಆತ್ಮ ಆಗಿರುತ್ತದೆ. ಈ ಆತ್ಮ ಅಪಾಯಕಾರಿಯಾಗಿದ್ದು ಈ ಊಜಾ ಬೋರ್ಡ್ ಆಡಿದ ಗೆಳೆಯರಲ್ಲಿ ಒಬ್ಬೊಬ್ಬರನ್ನೇ ಸಾಯಿಸಲು ತೊಡಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಅದು ಯಾವ ಆತ್ಮ ಅಂತಲೇ ಯಾರಿಗೂ ತಿಳಿದಿರುವುದಿಲ್ಲ. ನಿಧಾನಕ್ಕೆ ಒಬ್ಬೊಬ್ಬರೇ ಸಾಯುತ್ತಾ ಬರುತ್ತಾರೆ.

ಲೇನ್ ಏನು ಮಾಡಬಹುದು ಈಗ?

ಸುಮ್ಮನಿರಲಾರದೇ ಹುಳ ಬಿಟ್ಕೊಂಡರು ಅನ್ನೋ ಹಾಗೆ ತಮ್ಮ ಪಾಡಿಗೆ ತಾವಿದ್ದ ಸ್ನೇಹಿತರನ್ನೂ ಎಳೆದುಕೊಂಡು ಬಂದು ಅಪಾಯಕ್ಕೆ ಸಿಲುಕಿಸಿದಳು. ಈಗ ಅವರನ್ನು ಬಚಾವು ಮಾಡುವುದಲ್ಲದೇ, ತನ್ನನ್ನು ತಾನು ಬಚಾವು ಮಾಡಿಕೊಳ್ಳಬೇಕಿದೆ. ಏನು ಮಾಡಬಹುದು ಅವಳು?

ಎಂಭತ್ತು ನಿಮಿಷದ ಈ ಸಿನೆಮಾದಲ್ಲಿ ಮುಖ್ಯವಾದ ಎರಡು ಟ್ವಿಸ್ಟ್ ಇದೆ. ದೆವ್ವದ ಕಥೆಯಾದರೂ ಬಿಗಿಯಾದ ನಿರೂಪಣೆಯಿಂದ ಎಲ್ಲಿಯೂ ನೀರಸ ಎನಿಸದೇ ನೋಡಿಸಿಕೊಂಡು ಹೋಗುತ್ತದೆ. ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಕೆಲವು ಸನ್ನಿವೇಶಗಳು ವಿಪರೀತ ಭಯ ಹುಟ್ಟಿಸುವಂತಿವೆ.‌

ಆದರೆ ಒಂದು ಕಂಡೀಷನ್… ಸಿನೆಮಾದ ಲಾಜಿಕ್ ಪ್ರಶ್ನೆ ಮಾಡುವಂತಿಲ್ಲ. ಸುಮ್ಮನೆ ಎಂಜಾಯ್ ಮಾಡಬೇಕಷ್ಟೇ.

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply