ಎರಡು ಸಾವಿರದ ಇಪ್ಪತ್ತು!!!
ಹೆಸರು ನೆನೆದರೇನೇ ಮೈ ಜುಮ್ ಎನ್ನುತ್ತೆ. ಇಡೀ ವರ್ಷವೇ ಕಂಬನಿಧಾರೆಯಲ್ಲಿ ಕಳೆದಾಯ್ತು. ಭೂಮಿಯ ಮೇಲೆ ಅತಿ ವೃಷ್ಟಿ, ಅನಾವೃಷ್ಟಿ, ಭೂಕಂಪನ, ನೆರೆ – ಜಲಪ್ರಳಯಗಳಂತಹ ಪ್ರಕೃತಿ ವಿಕೋಪಗಳು ಸಾಮಾನ್ಯವಾಗಿ ಎಲ್ಲಾ ಕಾಲಕ್ಕೂ ಇರುವಂತಹವುಗಳೇ. ಇಂತಹ ಪ್ರಕೃತಿ ವಿಕೋಪಗಳು ಕೇವಲ ಯಾವುದೋ ಒಂದು ಭೂಭಾಗಕ್ಕೆ ಮಾತ್ರ ಸೀಮಿತ. ಪರಿಹಾರ ತಂಡಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಾವು ನೋವುಗಳ ಸಂಖ್ಯೆಯನ್ನು ತಗ್ಗಿಸುವುದು, ಜನರನ್ನು ಬೇರೆಡೆ ಸ್ಥಳಾಂತರಿಸುವುದು – ಇದೆಲ್ಲಾ ಸಾಮಾನ್ಯ ಸಂಗತಿ. ಹಿಂದೆಯೂ ಇತ್ತು. ಇಂದಿಗೂ ಇದೆ. ಮುಂದೆಯೂ ಇರುತ್ತೆ ಕೂಡ.
ಆದರೆ 2020 ರ ಕತೆಯೇ ಬೇರೆ. ಇದು ಕೇವಲ ಒಂದು ಪ್ರದೇಶಕ್ಕೋ, ಪ್ರಾಂತ್ಯಕ್ಕೋ ಸೀಮಿತವಾಗಲಿಲ್ಲ. ಇಡೀ ವಿಶ್ವಕ್ಕೆ ವಿಶ್ವವೇ ಸಾವು ನೋವುಗಳಿಂದ ನರಳಾಡಿದ ವರ್ಷವಿದು. ನೂರಾರು ದೇಶಗಳು ಸ್ವತಃ ಲಾಕ್ ಡೌನ್ ಘೋಷಿಸಿದವು. ಇಡೀ ಅರ್ಥವ್ಯವಸ್ಥೆ ಸ್ಥಗಿತಗೊಂಡಿತು. ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿದವು. ಪರೀಕ್ಷೆಗಳು ಇಲ್ಲವಾದವು. ರಸ್ತೆ ಸಂಚಾರ ತಂತಾನೇ ನಿಂತಿತು. ಆಸ್ಪತ್ರೆಗಳೆಲ್ಲ ರೋಗಿಗಳಿಂದ ಕಿಕ್ಕಿರಿದು ತುಂಬಿದವು. ಒಟ್ಟಾರೆ ಹೇಳುವುದಾದರೆ, ಇಡೀ ಮನುಷ್ಯ ಕುಲವೇ ಒಂದು ಹತ್ತು ವರ್ಷ ಹಿಂದೆ ಸರಿಯಿತು.
ಭಾರತವೂ ಇದಕ್ಕೆ ಹೊರತಲ್ಲ. ಚೀನಾದ ವುಹಾನ್ ಪ್ರಾಂತ್ಯದಲ್ಲೆಲ್ಲೋ ಹುಟ್ಟಿದ ಕರೋನ ಎಂಬ ರಾಕ್ಷಸ, 2020 ರ ವರ್ಷಾರಂಭದ ಹೊತ್ತಿಗೆ ಪುಣ್ಯ ಭೂಮಿ ಭಾರತಕ್ಕೆ ಕಾಲಿಟ್ಟ. ಕರ್ನಾಟಕದಲ್ಲೇ ತನ್ನ ಮೊದಲ ಬಲಿಯನ್ನೂ ಪಡೆದ. ಸರ್ಕಾರ ಜಾಗೃತವಾಯ್ತು.ಲಾಕ್ ಡೌನ್ ಘೋಷಣೆ ಮಾಡಲಾಯ್ತು. ಸದಾ ಕಿಕ್ಕಿರದ ಜನಜಂಗುಳಿಯಿಂದ ತುಂಬಿರುತ್ತಿದ್ದ ಮದುವೆ ಮನೆಗಳು, ಶಾಪಿಂಗ್ ಮಾಲುಗಳು, ಚಿತ್ರಮಂದಿರಗಳು, ಪಾರ್ಕು – ಝೂ ಗಳು, ಪ್ರವಾಸಿ ತಾಣಗಳು, ಶಾಲಾ ಕಾಲೇಜುಗಳು, ಮಾರ್ಕೆಟ್ಟು ಗಳು, ಹೋಟೆಲ್ ಗಳು, ಉದ್ದಿಮೆಗಳು, ಕಟ್ಟಡ ಕಾಮಗಾರಿಗಳು – ಎಲ್ಲವೂ ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿನ ಭೂತ ಬಂಗಲೆಗಳಾದವು. ರಸ್ತೆಗಳಲ್ಲಿ ಜನ ಸಂಚಾರವಿಲ್ಲ. ಶುಭ ಸಮಾರಂಭಗಳಿಲ್ಲ. ಎಲ್ಲಾ ಬಂದ್. ಬಂದ್. ಬಂದ್.
ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ – ಎಲ್ಲಾ ವುಡ್ ಗಳೂ ಮಕಾಡೆ ಮಲಗಿದವು. ವರ್ಷವೊಂದಕ್ಕೆ ಸುಮಾರು ಇನ್ನೂರು ಚಿತ್ರಗಳು ತಯಾರಾಗುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸಿನಿಮಾಗಳು – ಬರೀ ಎಪ್ಪತ್ತು ಚಿಲ್ಲರೆ. ಅಡ್ಡೋ ಕೇವಲ ಸಿನಿಮಾ ಮಂದಿರಗಳಲ್ಲದೇ, ಓ ಟಿ ಟಿ ಪ್ಲಾಟ್ಫಾರ್ಮ್ ಗಳ ಮೂಲಕ ಕೂಡ ಬಿಡುಗಡೆಯಾದ ಚಿತ್ರಗಳೂ ಸೇರಿ!!!
ಕೃಷ್ಣ ಅವರ ಲವ್ ಮಾಕ್ಟೈಲ್, ಜಗದೀಶ ಕೆ ಹಂಪಿ ಅವರ ಜಂಟಲ್ ಮ್ಯಾನ್, ಕೆ ಎಸ. ಅಶೋಕ್ ಅವರ ದಿಯಾ, ರಾಧಾಕೃಷ್ಣ ರೆಡ್ಡಿ ಯವರ ಮಾಯಾಬಜಾರ್, ಆಕಾಶ್ ಶ್ರೀವತ್ಸ ಅವರ ಶಿವಾಜಿ ಸುರತ್ಕಲ್, ಸೂರಿ ಅವರ ಪಾಪ್ ಕಾರ್ನ್ ಮಂಕಿ ಟೈಗರ್ ಗಳಂತಹ ಸಿನಿಮಾಗಳು ಯಶಸ್ಸು ಗಳಿಸಿದವು. ಲಾಕ್ ಡೌನ್ ಎಂಬ ಕರ್ಮಕಾಂಡ ಕಳೆದ ಬಳಿಕ ವರ್ಷಾಂತ್ಯಕ್ಕೆ ಬಿಡುಗಡೆಯಾದ ಮನ್ಸೋರೆ ಅವರ ಆಕ್ಟ್ 1978 ಕೂಡ ಸಿನಿಪ್ರಿಯರ ಮನಸೂರೆಗೊಂಡಿತು.
ಇನ್ನು ಚಿತ್ರಮಂದಿರಗಳಷ್ಟೇ ಓ ಟಿ ಟಿ ಪ್ಲಾಟ್ಫಾರ್ಮ್ ಗಳೂ ಜನಗಳಿಗೆ ಹತ್ತಿರವಾದವು. ಭೀಮಸೇನ ನಳಮಹಾರಾಜ, ಫ್ರೆಂಚ್ ಬಿರಿಯಾನಿಯಂತಹ ಚಿತ್ರಗಳು ತುಂಬಾ ಸಕ್ಸಸ್ ಪಡೆದವು.
ಕನ್ನಡದಲ್ಲಷ್ಟೇ ಅಲ್ಲ, ಬಹುತೇಕ ವಿಶ್ವದ ಯಾವುದೇ ಸಿನಿರಂಗದಲ್ಲೂ ಸ್ಟಾರ್ ಗಳ ಯಾವುದೇ ಸಿನಿಮಾಗಳೂ ಬಿಡುಗಡೆಯಾಗಲಿಲ್ಲ. ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ಕರೋನಾಸುರನ ಅಬ್ಬರ ಕಡಿಮೆಯಾಗಲೆಂದು ಕಾಯುತ್ತಿರುವ ಸಾವಿರಾರು ಸಿನಿಮಾಗಳು ಕಾಯುತ್ತಾ ಕುಳಿತಿವೆ.
ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ, ಸಲ್ಮಾನ್ ಖಾನ್ ನಟನೆಯ ರಾಧೇ, ಕಂಗನಾ ನಟನೆಯ ಜಯಲಲಿತಾ ಕುರಿತಾಗಿನ ಕತೆ – ತಲೈವಿ, ಅಕ್ಷಯ್ ಕುಮಾರ್ ಮತ್ತು ತಮಿಳಿನ ಸೂಪರ್ ಹೀರೋ ಧನುಷ್ ನಟನೆಯ ಅತರಂಗಿ ರೇ, ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್, 1983 ರ ವಿಶ್ವ ಕಪ್ ಕ್ರಿಕೆಟ್ ನ ಕುರಿತಾದ ಕಥಾವಸ್ತುವುಳ್ಳ 83, ಗಳಂತಹ ಸಿನಿಮಾಗಳು ಹಿಂದಿಯಲ್ಲಿ ತಯಾರಾಗಿವೆ, ತಯಾರಾಗುತ್ತಿವೆ.
ರವಿತೇಜ ನಟನೆಯ ಕ್ರಾಕ್, ಮಹೇಶ್ ನಟನೆಯ ಸರ್ಕಾರು, ಪುನೀತ್ ರಾಜಕುಮಾರ್ ಅವರ ಯುವರತ್ನ (ತೆಲುಗು ವರ್ಷನ್), ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಆಚಾರ್ಯ, ಅಲ್ಲೂ ಅರ್ಜುನ್ ನಟನೆಯ ಪುಷ್ಪ, ಎನ್ಟಿಆರ್ ರ ಆರ್ 3, ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್, ವೆಂಕಟೇಶ್ ನಟನೆಯ ನಾರಪ್ಪ, ನಾಗಾರ್ಜುನ ನಟನೆಯ ವೈಲ್ಡ್ ಡಾಗ್ ಗಳಂತಹ ಸಿನಿಮಾಗಳು ತೆಲುಗಿನಲ್ಲಿ ಸಿನಿಪ್ರಿಯರನ್ನು ರಂಜಿಸಲು ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳ ಬಾಗಿಲು ತೆಗೆಯುವುದನ್ನೇ ಕಾಯಿತ್ತಿವೆ.
ವಿಜಯ್-ವಿಜಯ್ ಸೇತುಪತಿ ಜಂಟಿಯಾಗಿ ನಟಿಸುತ್ತಿರುವ ಮಾಸ್ಟರ್, ವಿಕ್ರಂ ನಟನೆಯ ಕೋಬ್ರಾ, ಸೂರ್ಯ ನಟನೆಯ ವಾಡಿವಾಸಲ್, ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್, ಕಮಲ್ ಹಾಸನ್ ನ ಬಹುನಿರೀಕ್ಷಿತ ಇಂಡಿಯನ್ – 2, ಸೂಪರ್ ಸ್ಟಾರ್ ರಜನಿಯ ಅನ್ನಾತೆ, ಅಜಿತ್ ನಟನೆಯ ವಲಿಮೈ ಮುಂತಾದ ಚಿತ್ರಗಳು ತಮಿಳಿಂದ ಕಾಯುತ್ತಾ ಕೂತಿವೆ.
ಇನ್ನು ಕನ್ನಡಕ್ಕೆ ಬಂದರೆ – ಡಿ ಬಾಸ್ ರ ಬಹು ನಿರೀಕ್ಷಿತ ಚಿತ್ರ ರಾಬರ್ಟ್, ಯಶ್ ನಟನೆಯ ಕೆ,ಜಿ,ಎಫ್ – 2, ಧ್ರುವ ಸರ್ಜಾ ನಟನೆಯ ಪೊಗರು, ಪ್ರಜ್ವಲ್ ದೇವರಾಜ್ ನಟನೆಯ ವೀರಂ, ಪುನೀತ್ ನಟನೆಯ ಯುವರತ್ನ, ಜಗ್ಗೇಶ್ ನಟನೆಯ ರಂಗನಾಯಕ, ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್, ರಾಘಣ್ಣ ನಟನೆಯ ರಾಜತಂತ್ರ, ಉಪ್ಪಿಯ ಬುದ್ದಿವಂತ -2, ಶಿವಣ್ಣ ನಟನೆಯ ಭಜರಂಗಿ – 2, ರವಿಚಂದ್ರನ್ ರ – ರವಿಭೋಪಣ್ಣ ಮುಂತಾದ ಚಿತ್ರಗಳು ಸಿನಿರಸಿಕರ ಮನಸೂರೆಗೊಳ್ಳಲು ಇನ್ನೂ ಕಾಯುತ್ತಿವೆ. ಜೇಮ್ಸ್, ಬಚ್ಚನ್ – ೨, ಗೂಗ್ಲಿ – 2, ಒಂಭತ್ತನೇ ದಿಕ್ಕು, ಸಲಗ, ಗೋಧ್ರಾ, ಆರ್ ಎಚ್ 100- ಇನ್ನೂ ಲಿಸ್ಟ್ ತುಂಬಾ ದೊಡ್ಡದಿದೆ.
ಒಟ್ಟಿನಲ್ಲಿ, ಬೇವೇ ಹೆಚ್ಚಾಗಿದ್ದ ಎರಡು ಸಾವಿರದ ಇಪ್ಪತ್ತರ ಕಹಿ ಮರೆಯಾಗಲಿ. ಎರಡು “ಸಾವಿರದ” ಇಪ್ಪತ್ತೊಂದು ಬೆಲ್ಲದ ಸಿಹಿಯ ವರ್ಷವಾಗಲಿ. ಕಿಚ್ಚ, ಡಿ ಬಾಸ್, ಶಿವಣ್ಣ, ಪವರ್ ಸ್ಟಾರ್, ಕ್ರೇಜಿ ಸ್ಟಾರ್, ರಮೇಶ್, ದುನಿಯಾ ವಿಜಿ, ಗಣೇಶ್,ಧ್ರುವ ಸರ್ಜಾ, ಯಶ್, ಉಪ್ಪಿ ಬಾಸ್, ಜಗ್ಗೇಶ್,ರಕ್ಷಿತ್ ಶೆಟ್ಟಿ, ಪ್ರಜ್ವಲ್ ದೇವರಾಜ್, ರಚಿತಾ ರಾಮ್, ಸಂಯುಕ್ತ ಹೊರನಾಡು, ಆಶಿಕಾ ರಂಗನಾಥ್, ಆದಿತಿ ಪ್ರಭುದೇವ, ಶ್ರೀನಿಧಿ ಶೆಟ್ಟಿ, ಹರಿಪ್ರಿಯಾ, ಶಾನ್ವಿ ಶ್ರೀವತ್ಸವ, ಶ್ರೀಲೀಲಾ, ಮಾನ್ವಿಕ ಸೇರಿದಂತೆ ಚಿತ್ರರಂಗದ ಎಲ್ಲರಿಗೂ ದೊಡ್ಡ ಹಿಟ್ ಸಿಗಲಿ ಎಂದು ಆ ದೇವರಲ್ಲಿ ಚಿತ್ರೋದ್ಯಮ.ಕಾಂ ತಂಡದ ಮನದಾಳದ ಪ್ರಾರ್ಥನೆ.
ಚಿತ್ರೋದ್ಯಮ.ಕಾಂ ನ ಸಮಸ್ತ ಲೇಖಕರಿಗೂ, ಓದುಗರಿಗೂ – ಹೊಸ ವರ್ಷ ಹರುಷ ತರಲಿ.