ಒಂದು ಮುತ್ತಿನ ಕಥೆ

1987ರ ಈ ವಿಶಿಷ್ಟ ಚಿತ್ರದಲ್ಲಿ ಎರಡು ವಿಶೇಷಗಳು. ಅಣ್ಣಾವ್ರು ನಾಯಕ. ಶಂಕ್ರಣ್ಣ ನಿರ್ದೇಶಕ!
ಸಂತ ಮೇರಿ ದ್ವೀಪದಲ್ಲಿ ಒಂದಿಷ್ಟು ಚಿತ್ರೀಕರಣ, ಮಾಲ್ಡೀವ್ಸ್‌ನಲ್ಲಿ ನೀರೊಳಗೆ ಶೂಟಿಂಗ್, ಕ್ಲೈಮ್ಯಾಕ್ಸ್ ನಡೆದ ಜಾಗ ಯಾಣ.
ಶಂಕರ್ ನಾಗ್ ಧ್ವನಿಯಲ್ಲಿ ಒಂದಿಷ್ಟು ಪರಿಚಯ ಕೇಳಿ ಬರುತ್ತದೆ. ಇದು ಒಂದು ಮುತ್ತಿನ ಕಥೆ. ಇದು ಐತುವಿನ(ರಾಜ್ಕುಬಮಾರ್) ಕಥೆ.

ಅರ್ಚನಾ ಹೆಸರು ಕಾಕಿ. ಐತುವಿನ ಪತ್ನಿ ಆಕಿ.
ಮುತ್ತುಗಳನ್ನು ಸಮುದ್ರದ ತಳದಿಂದ ಹೆಕ್ಕಿ ತಂದು ಮಾರುವ ಈ ಮುಗ್ಧ ಜನಕ್ಕೆ ನಾಲ್ಕಕ್ಕಿಂತ ಮುಂದೆ ಎಣಿಸಲು ಬರದು. ಅವರಿಗೆ ಮೋಸ ಮಾಡುವ ವ್ಯಾಪಾರಿಗಳು ಮುಖ್ಯಮಂತ್ರಿ ಚಂದ್ರು, ಶ್ರೀಶೈಲನ್ ಮುಂತಾದವರು.
ಸುಧೀಂದ್ರ, ತೂಗುದೀಪ ಶ್ರೀನಿವಾಸ್, ಕಮನೀಧರನ್, ಸದಾಶಿವ ಬ್ರಹ್ಮಾವರ, ಸುಂದರ ರಾಜ್, ಶೋಭ, ಶನಿ ಮಹದೇವಪ್ಪ, ಶಿವರಾಂ (ಈ ಮುಗ್ಧರ ದೇವರು ಭೂತಪ್ಪನ ಪೂಜಾರಿ) ಮತ್ತು ರಮೇಶ್ ಭಟ್ (ಮೂಕ ಮತ್ತು ದಡ್ಡ. ಆದರೆ ಚಿನ್ನದ ಮನದವನು). ದೇವಸ್ಥಾನದ ಪೂಜಾರಿ ಬಾಲಕೃಷ್ಣ ಮತ್ತು ಊರ ಡಾಕ್ಟರು ದೊಡ್ಡಣ್ಣ ನನಗೆ ಗುರುತು ಸಿಕ್ಕವರು.
ವ್ಯಾಪಾರಿಗಳಿಂದ ಮೋಸ ಹೋಗುತ್ತಿರುವೆವೆಂದೂ ಅರಿಯದೇ ಸಂತೋಷವಾಗಿ ಕಾಲ ಕಳೆಯತ್ತಾ, ವಧು ದಕ್ಷಿಣೆಯಾಗಿ ಮುತ್ತುಗಳನ್ನು ಹೆಣ್ಣು ಹೆತ್ತವರಿಗೆ ನೀಡುತ್ತಾ ಇರುತ್ತಾರೆ.
ಈ ಸಮಯದಲ್ಲಿ ಐತುವಿಗೆ ನಿಂಬೆಹಣ್ಣಿನ ಗಾತ್ರದ ಮುತ್ತು ಸಿಗುತ್ತದೆ.
ಎಂತಹ ಜಾಣ ಚಿತ್ರಕಥೆ ಶಂಕರ್ ನಾಗ್ ಅವರದು!
ಒಂದು ಗಂಟೆ ಕಾಲದ ನಂತರ ಚಿತ್ರದ ದಿಕ್ಕು ಬದಲಾಗುತ್ತದೆ.
ಆ ಮುತ್ತು ಎಲ್ಲರಲ್ಲಿನ ದುರಾಸೆಯ ರಕ್ಕಸನನ್ನು ಬಡಿದೆಬ್ಬಿಸುತ್ತದೆ. ಸ್ವಂತದವರ ನಡುವೆ ದ್ವೇಷ ಹುಟ್ಟಿಸುತ್ತದೆ. ವೈದ್ಯ ಹಿಪ್ಪೋಕ್ರೆಟಿಸ್ ವಚನ ಮರೆಯುತ್ತಾನೆ. ಕೊಲೆ ಮಾಡಲೂ ಹೇಸದ ಜನ…
ಮುತ್ತು ರಕ್ತಮಯವಾಗುತ್ತದೆ…
ಮುತ್ತುರಾಜ ನಿಜಕ್ಕೂ ಒಂದು ಮುತ್ತು. ಅವರ ಆಂಗಿಕ ಭಾವ, ಭಾವಾಭಿನಯ ನೋಡಲು ಚಂದ. ಅಷ್ಟಪಾದಿಯೊಂದಿಗೆ ನೀರೊಳಗೆ ಹೋರಾಟ ನಡೆಸಿರುವ ದೃಶ್ಯ ಝುಂ ಎನ್ನುವಂತಿದೆ. ನೀಳಕೇಶದ ಸುಂದರಿ ಅರ್ಚನಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಪಾತ್ರಕ್ಕೆ ತಕ್ಕಂತೆ ಅಭಿನಯ.
ಎಲ್ ವೈದ್ಯನಾಥನ್ ನೇಪಥ್ಯ ಸಂಗೀತ ಮಧುರ.
ಅಣ್ಣಾವ್ರು ಮತ್ತು ರತ್ನಮಾಲಾ ಪ್ರಕಾಶ್ ಯುಗಳ ಸ್ವರಗಳಲ್ಲಿ ಮುತ್ತೊಂದ ತಂದೆ ಮತ್ತು ಮಲ್ಲಿಗೆ ಹೂವಿನಂತೆ.
ಸಿ. ಅಶ್ವತ್ಥ್… ಮುತ್ತೊಂದು ಬಂದಾಯ್ತು..
ರಾಜ್ ಮತ್ತು ಶಂಕ್ರಣ್ಣ.. ಮೇಲಿಂದ ಹುಣ್ಣಿಮೆ ಚಂದ್ರ…
ರಾಜ್ ಮತ್ತು ಸುನಿಲ್ ರಾವ್… ಸೌಮ್ಯ ರಾವ್(ಗಾಯಕಿ ಬಿ ಕೆ ಸುಮಿತ್ರಾ ಮಕ್ಕಳು. ಈ ಹಾಡಿನ ಸಮಯದಲ್ಲಿ ಪುಟ್ಟವರು. ನಂತರ ಸುನೀಲ್ ಕೆಲವು ಚಿತ್ರಗಳಲ್ಲಿ ನಾಯಕನಟ.. ಸೌಮ್ಯ..ಗಾಯಕಿ)..ಒಂದು… ಎರಡು ಎಂಬ ಹಾಡು.
ಅಣ್ಣಾವ್ರು ಒಂದು ಹಾಡಿನ ಒಂದು ತುಣುಕಿನಲ್ಲಿ ಕೋಟು ಪ್ಯಾಂಟು ಹ್ಯಾಟು ಧರಿಸಿ ಆನೆಯ ಮೇಲೆ ಬರುತ್ತಾರೆ. ಉಳಿದಂತೆ ಮೊಣಕಾಲ ವರೆಗೆ ಬಣ್ಣದ ತುಂಡು, ಕೆಲವೊಮ್ಮೆ ಅರೆಬರೆ ಕೋಟು, ಕುತ್ತಿಗೆಯಲ್ಲಿ ಒಂದು ದೊಡ್ಡ ಶಂಖ…
ಮೊದಲ ಸಲ ಬಂದಾಗ ಗಳಿಸಿದ ಹಣ ಎಷ್ಟೋ ಏನೋ.. ಈಗ ಇದು ಒಂದು ಅಪರೂಪದ ಚಲನಚಿತ್ರ ಎನ್ನಿಸಿಕೊಂಡಿದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply