ಕಠಾರಿ ವೀರ

1966ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಚಂದಮಾಮಾ ಕಥೆಯಂತಿದೆ.

ರಾಜನೊಬ್ಬ. ಅವನಿಗೆ ಒಬ್ಬ ರಾಣಿ (ಪಾಪಮ್ಮ). ಒಬ್ಬ ಯವ್ವನವತಿ ಮಗಳು ವಾಸಂತಿ(ಉದಯಚಂದ್ರಿಕಾ) ಮತ್ತು ಒಬ್ಬ ಪುಟ್ಟ ಐದು ವರ್ಷದ ಮಗ. ಅವನಿಗೊಬ್ಬ ಬಲುದುಷ್ಟ ಸೇನಾಧಿಪತಿ ಪ್ರಚಂಡ(ಕಲಾಕೇಸರಿ ಉದಯಕುಮಾರ್… ವಾಹ್… ದುಷ್ಟತನವೇ ಮೂರ್ತಿವೆತ್ತಂತಹ ಪಾತ್ರ. ಕಣ್ಣಿನ ಸುತ್ತಲೂ ಕಾಡಿಗೆ ಹಚ್ಚಿ ಗಹಗಹ ವಿಕಟಾಟ್ಟಹಾಸ ಮಾಡುವ ದುಷ್ಟ). ಅವನಿಗೆ ಒಬ್ಬಳ ಗೆಳತಿ ಕಲಾವತಿ (ವಾಣಿಶ್ರೀ. ಮುಂದೆ ತೆಲುಗಿನಲ್ಲಿ ಪ್ರಸಿದ್ಧಳಾದಾಕೆ. ಅಣ್ಣಾವ್ರಿಗೆ ‘ಕಾಸಿದ್ರೆ ಕೈಲಾಸ’ ಚಿತ್ರದಲ್ಲಿ ನಾಯಕಿ). ಅವಳು ರಾಜನಿಗೆ ವಿಷಪಾನ ಮಾಡಿಸಿ ಭರತನಾಟ್ಯವನ್ನು ಮಾಡುತ್ತಾಳೆ. ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುವ ಪತ್ರಕ್ಕೆ ಸಹಿ ಹಾಕುವ ಮುಂಚೆಯೇ ರಾಜ ಸಾಯುತ್ತಾನೆ. ಆ ಕೊಲೆಯ ಆಪಾದನೆಯನ್ನು ಒಳ್ಳೆಯ ಬುದ್ಧಿಯ ಮಂತ್ರಿಯ ಮೇಲೆ ಹಾಕುತ್ತಾನೆ ಪ್ರಚಂಡ. ಅವನಿಗೆ ಕೇಸರಿ (ಬಾಲಕೃಷ್ಣ) ಎಂಬ ಸಹಾಯಕ. ಕೇಸರಿಯ ವೈಯಕ್ತಿಕ ಸಹಾಯಕರಲ್ಲಿ ಒಬ್ಬ ನಾನೇನ್ ಮಾಡ್ಲಿ ಎಂದು ಇಡೀ ಸಿನಿಮಾದಲ್ಲಿ ಕೇಳುವ ಪಾತ್ರ (ರತ್ನಾಕರ).

ವಿಜಯ(ರಾಜ್‍ಕುಮಾರ್) ಕಠಾರಿ ವೀರ. ಸಖತ್ ಕತ್ತಿ ಫೈಟುಗಳನ್ನೂ, ಸೂಪರ್ ಕುದುರೆ ಸವಾರಿಯನ್ನೂ ಮಾಡಿದ್ದಾರೆ ರಾಜ್.

ರಂಗ (ನರಸಿಂಹರಾಜು) ರಾಜ್‍ಗೆ ಸಹಾಯಕ. ಅವನಿಗೊಬ್ಬ ಪ್ರೇಮಿಕೆ. ಆಕೆಯನ್ನು ಕೇಸರಿಯೂ ಪ್ರೇಮಿಸುತ್ತಾನೆ. ಅದೊಂದು ತ್ರಿಕೋನ ಕಥೆ. ನರಸಿಂಹರಾಜುವಿಗೆ ಒಂದು ಡ್ಯೂಯೆಟ್ ಕೂಡ ಇದೆ.

ರಾಜ್ ಲೀಲಾಜಾಲವಾಗಿ ನಟಿಸಿದ್ದಾರೆ. ಗಾಳಿಪಟದಲ್ಲಿ ಕೂತು, ಅದರ ದಾರ ಕತ್ತರಿಸಿ ರಾಜನ ಅರಮನೆಯ ಮೇಲೆ ಇಳಿಯುವ ವಿಶಿಷ್ಟ ಸನ್ನಿವೇಶವಿದೆ ಈ ಚಿತ್ರದಲ್ಲಿ. ಉದಯಚಂದ್ರಿಕ ಹುಡುಗನ ವೇಷದಲ್ಲಿ ಬಂದು, ನಂತರ ಹೆಣ್ಣಾಗಿ ಕಾಣಿಸಿಕೊಳ್ಳುತ್ತಾರೆ.

ಕಿವಿಮಾತೊಂದ ಹೇಳೆ ನಾನೋಡಿ ಬಂದೆ ಎನ್ನುವ ಹಾಡು ಹಿಂದೆ ಕೇಳಿದ್ದ ನೆನಪು. ಎರಡು ನೃತ್ಯಗಳು ವಾಣಿಶ್ರೀಗೆ. ಒಂದು ಭರತನಾಟ್ಯದ ಹಾಡು. ಮತ್ತೊಂದು ಎಲ್ ಆರ್ ಈಶ್ವರಿಯ ಝಣಾ ಝಣಾ ಝಣ್ ಝಣಾ ಎನ್ನುವ ಹಾಡು.

ಅತ್ಯಂತ ಜನಪ್ರಿಯ ಎನ್ನಿಸುವ ಎರಡು ಹಾಡುಗಳೂ ಇವೆ. ಪಿಬಿಎಸ್. ಎಸ್‍ಜಾನಕಿ ಜೋಡಿಯ ‘ಹಾಯಾದ ಈ ಸಂಗಮ ಹೊಸಬಾಳಿನಾ ಆಶಾಸುಮ ಬೆಸೆಯಿತು ನಮ್ಮ ಈ ಪೇಮ’ ಒಂದು ಹಾಡಾದರೆ, ಪಿ.ಸುಶೀಲ ಹಾಡಿರುವ ‘ಛಂಗು ಛಂಗೆಂದು ಹಾರುವಾ ರಂಗು ರಂಗಿನ ಈ ಜಿಂಕೆ’ ಮತ್ತೊಂದು ಹಾಡು.

ಸಂಸಾರದಲ್ಲಿ ಹುಳಿ ಹಿಂಡುವ ಜನರ ಪಾತ್ರಗಳನ್ನು ನೋಡಿದ ನಂತರ ಉದಯಕುಮಾರ್ ದುಷ್ಟತನದ ಪಾತ್ರ ಸೋ ರಿಫ್ರೆಶಿಂಗ್!

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply