ಅಣ್ಣಾವ್ರ ಮೊದಲ ಚಿತ್ರ ನೋಡಿದಾಗ ನನಗೆ ಒಂಬತ್ತು ವರ್ಷಗಳು. ನೋಡಿದ ಸಿನಿಮಾ ಕೂಡ ಯಾವುದು? ಮಂತ್ರಾಲಯ ಮಹಾತ್ಮೆ ಅಥವಾ ಶ್ರೀ ರಾಘವೇಂದ್ರ ವಿಜಯ.
ಈತ ನಟನಾ? ಅಥವಾ ಈತನೇ ರಾಘವೇಂದ್ರಸ್ವಾಮಿಯಾ? ಎನಿಸಿತ್ತು ನನ್ನ ಆ ಪುಟ್ಟ ವಯಸ್ಸಿನ ಮನಸ್ಸಿಗೆ.
ಎಷ್ಟು ಸನ್ನಿವೇಶಗಳು ನನಗೆ ನೆನಪಿದ್ದವೆಂದರೆ ಇತ್ತೀಚೆಗೆ ನಾನದನ್ನು ಎರಡನೇ ಸಲ ನೋಡಿದಾಗ ನನಗೇ ಅಚ್ಚರಿಯಾಯಿತು.
ಭಕ್ತನಾಗಿ ನೋಡಿದರೆ: ಭಕ್ತ ಕುಂಬಾರ, ಭಕ್ತ ಕನಕದಾಸ, ಸಂತ ತುಕಾರಾಂ – ಈ ಮೂರು ಉದಾಹರಣೆಗಳು ಸಾಕು. ಕಣ್ಣುಗಳಲ್ಲಿನ ಭಕ್ತಿ ಅಮೋಘ. ಮಣ್ಣು ತುಳಿಯುವ ಗೋರಾ ತನ್ನ ಮಗುವನ್ನು ತುಳಿದುಬಿಟ್ಟಾಗ ಅವನ ಆಕ್ರಂದನ, ಕೈಗಳನ್ನು ಕತ್ತರಿಸಿಕೊಂಡಾಗ ಆಗುವ ದುಃಖ, ನಂತರ ವಿಠಲನೇ ರಂಗನಾಗಿ ಬಂದು ಮಾಯವಾದಾಗ ಅವನಿಗಾಗುವ ಆಘಾತ, ದೇವನಿಂದ ಚಾಕರಿ ಮಾಡಿಸಿಕೊಂಡೆನೆಂಬ ದುಃಖ… ವಾಹ್!
ದೇವರೆಂದು ನೋಡಿದರೆ: ಶ್ರೀ ಶ್ರೀನಿವಾಸ ಕಲ್ಯಾಣ, ಶ್ರೀಕೃಷ್ಣ ರುಕ್ಮಿಣೀ ಸತ್ಯಭಾಮ, ರಾಮಾಂಜನೇಯ ಯುದ್ಧ … ಕಣ್ಣುಗಳಲ್ಲಿನ ಆ ಕರುಣೆ…ದೇವಿಯರ ಮೇಲಿನ ಪ್ರೇಮ… ಅದ್ಭುತ!
ರಾಕ್ಷಸನಾಗಿ: ಭಕ್ತ ಪ್ರಹ್ಲಾದ, ಮಹಿಷಾಸುರ ಮರ್ಧಿನಿ, ದಶಾವತಾರ… ಹಿರಣ್ಯಕಶಿಪು ತರಹ ಅಭಿನಯ ಮಾಡಬಲ್ಲ ಮತ್ತೊಬ್ಬ ನಟನಿಲ್ಲವೆನಿಸಿದರೆ ಅಚ್ಚರಿಯಿಲ್ಲ. ಮಗನ ಮೇಲೆ ಮಮತೆ, ಅವನು ಹರಿಭಕ್ತನೆಂದು ಅವನ ಮೇಲೆ ದ್ವೇಷ… ಆಹಾ!
ದುಷ್ಟನಾಗಿ: ಕರುಣೆಯೇ ಕುಟುಂಬದ ಕಣ್ಣು, ಹರಿಭಕ್ತ, ದಾರಿ ತಪ್ಪಿದ ಮಗ. ಮನೆಯವರಿಗೆಲ್ಲಾ ತೊಂದರೆ ನೀಡುವ ಪಾತ್ರದಲ್ಲೂ ಅಣ್ಣಾವ್ರು ಸೈ. ಸಾಕುಮಗಳು ಚಿತ್ರದ ಉಂಡಾಡಿ ಕೂಡ ಮನಸ್ಸಿಗೆ ಇಷ್ಟವಾಗುವ ಪಾತ್ರ.
![](https://chitrodyama.com/wp-content/uploads/2020/04/rajkumar2.jpg)
ಮುಗ್ಧ, ಪೆದ್ದ: ಬಂಗಾರದ ಪಂಜರ, ಕವಿರತ್ನ ಕಾಳಿದಾಸ: ಬಂಗಾರದ ಪಂಜರದ ಮುಗ್ಧನಿಗೆ ಕಾಂಟ್ರಾಸ್ಟ್ ಕವಿರತ್ನ ಕಾಳಿದಾಸದ ಪೆದ್ದ. ಆದರೆ ಕಾಳಿಯು ನಾಲಗೆಯ ಮೇಲೆ ಓಂ ಬರೆದ ಮೇಲೆ ಆ ಕಣ್ಣುಗಳಲ್ಲಿನ ಹುಚ್ಚುತನ ಬಿಟ್ಟುಹೋಗಿ ಜ್ಞಾನಿಯಂತೆ ದೃಷ್ಟಿ ತೋರುವ ನಟನೆ ಅಬ್ಬಬ್ಬಾ!
ಜಗಳಗಂಟ: ನಂದಗೋಕುಲ, ರೌಡಿ ರಂಗಣ್ಣ, ಮುರಿಯದ ಮನೆ, ಸಂಪತ್ತಿಗೆ ಸವಾಲ್: ಒಂದೊಂದರಲ್ಲಿ ಒಂದೊಂದು ಶೈಲಿ.
ಇಂಗ್ಲೀಷ್ ಪ್ರೊಫೆಸರಾಗಿ ಶೇಕ್ಸ್‌ಪಿಯರ್ ಪಾಠ ಮಾಡುವ ಎರಡು ಕನಸು, ಇಫ್ ಯು ಕಂ ಟುಡೇ ಎಂದು ಇಡೀ ಇಂಗ್ಲಿಷ್ ಹಾಡು ಹೇಳುವ ಬಾಂಡ್ ಆಪರೇಷನ್ ಡೈಮಂಡ್ ರ‍್ಯಾಕೆಟ್, ಹೆಂಡತಿಯನ್ನು ಕೊಲೆ ಮಾಡಿ ಒದ್ದಾಡುವ ಅದೇ ಕಣ್ಣು, ದ್ವಿಪಾತ್ರಗಳಲ್ಲಿ ದಾರಿ ತಪ್ಪಿದ ಮಗ, ಭಲೇಜೋಡಿ, ಸತಿಶಕ್ತಿ, ಬಾಳು ಬೆಳಗಿತು, ಎಮ್ಮೆ ತಮ್ಮಣ್ಣ. ತ್ರಿಪಾತ್ರಗಳಲ್ಲಿ ಶಂಕರ್ ಗುರು, ಕುಲಗೌರವ.
ಇನ್ನೂ ಬಹಳ ಇವೆ. ಬಂಗಾರದ ಮನುಷ್ಯ ಸಿನಿಮಾವಂತೂ ದಾಖಲೆ ಬರೆಯಿತು. ರಾಜನಾಗಿ ಮಯೂರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ.
ಪ್ರಣಯಿಯಾಗಿ ಅಮ್ಮ, ಬೀದಿ ಬಸವಣ್ಣ, ಚಂದ್ರಹಾಸ…ಸಿಟ್ಟಿನ ಸಂನ್ಯಾಸಿಯಾಗಿ ಚಂದ್ರಕುಮಾರ.
ಇನ್ನು ಗಾಯನಕ್ಕೆ ಬಂದರೆ ಗಾನ ಗಂಧರ್ವ. ಒಂದು ವಿಷಯ ಗಮನಿಸಿರುವಿರಾ? ಬಹುಶಃ ಅವರ ನಾದಮಯಾ ಹಾಡೊಂದನ್ನು ಬಿಟ್ಟರೆ ಇನ್ನೆಲ್ಲಾ ಹಾಡುಗಳನ್ನು ಜನಸಾಮಾನ್ಯರು ಹಾಯಾಗಿ ಸುಲಭವಾಗಿ ಗುನುಗಬಹುದು.
ಅಣ್ಣಾವ್ರ ಜನ್ಮದಿನವಿಂದು. ಇಂದಿನ ದಿನ ಅವರನ್ನು ವಿಶೇಷವಾಗಿ ನೆನೆಯುವುದು ಎಲ್ಲ ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯೇ. ನಾನೂ ಇದಕ್ಕೆ ಹೊರತಲ್ಲ.