( ಮುಂದುವರೆದ ಭಾಗ )
ಇವರು ಕಸ್ತೂರಿ ನಿವಾಸ ಚಿತ್ರದಲ್ಲಿ ರಚಿಸಿದ ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು, ಈ ಗೀತೆಯು ಗಳಿಸಿದ ಜನಪ್ರಿಯತೆಯನ್ನು ಆಗಲಿ ಅಥವಾ ಈ ಗೀತೆಯನ್ನಾಗಲಿ ಕನ್ನಡಿಗರಾದ ನಾವು ಮರೆಯಲು ಸಾಧ್ಯವಿಲ್ಲ. ಒಂದು ಸಲ ಈ ಗೀತೆಯನ್ನು ಗಮನವಿಟ್ಟು ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಚಿತ. ದೇವರ ಆಟವನ್ನು ಸಾಹಿತ್ಯ ರೂಪದಲ್ಲಿ ರಚಿಸಿದ್ದು ಗಮನಾರ್ಹ ಅಂಶವಾಗಿದೆ.
ಈ ರೀತಿಯಾಗಿ ಇವರ ಗೀತೆಗಳಲ್ಲಿ ಹಲವಾರು ಅರ್ಥಗಳಿವೆ. ಇವರು ಗೀತೆ ರಚನಕಾರರಾಗಿ ಮಾತ್ರವಲ್ಲದೆ ನಟರಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅಭಿನಯದ ಮತ್ತೊಂದು ಚಿತ್ರ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಅಣ್ಣಾವ್ರು ಹಾಡಿದ ಇಂಗ್ಲೀಷ್ ಭಾಷೆಯ ಸಾಹಿತ್ಯದ ಇಫ್ ಯು ಕಮ್ ಟುಡೇ,ಇಟ್ಸ್ ಟೂ ಅಲ್ಲಿ ಹಾಡು ಯಾರಿಗೆ ಗೊತ್ತಿಲ್ಲ? ಹೇಳಿ ನೋಡೋಣ. ಇಂತಹ ಒಂದು ವಿನೂತನ ಪ್ರಯತ್ನವನ್ನು ಇವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರ ಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ ಇಂಗ್ಲೀಷ್ ಭಾಷೆಯ ಸಾಹಿತ್ಯವನ್ನು ಬಳಸಿದ್ದು ಇಂದಿಗೂ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ.
ಕುಲಗೌರವ, ನಾಗರಹಾವು, ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆಯಂತಹ ಅನೇಕ ಚಿತ್ರಗಳಿಗೆ ಸಂಭಾಷಣೆ ಮತ್ತು ಸಂಗೀತವನ್ನು ನೀಡಿದ್ದರು. ಇವರ ಮನೋಹರವಾದ ಸಾಹಿತ್ಯ ಮತ್ತು ಸಂಗೀತಕ್ಕೆ ಶರಣಾಗಿದ್ದ ತಮಿಳು ಚಿತ್ರ ರಂಗದ ಅಂದಿನ ಮೇರು ನಟ ಶಿವಾಜಿ ಗಣೇಶನ್ ಇವರನ್ನು ಕನ್ನಡದ ಕಣ್ಣದಾಸನ್ ( ಕಣ್ಣದಾಸನ್ ತಮಿಳಿನ ಪ್ರಸಿದ್ಧ ಚಿತ್ರ ಸಾಹಿತಿ) ಎಂದು ಅಭಿಮಾನ ಮತ್ತು ಗೌರವದಿಂದ ಕರೆದಿದ್ದರು.
ನಮ್ಮ ಅಣ್ಣಾವ್ರು ಅಭಿನಯದ ೮೮ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದು ಒಂದು ಕಾಲದಲ್ಲಿ ಡಾ.ರಾಜಕುಮಾರ್ ಮತ್ತು ಉದಯಶಂಕರ್ ಜೋಡಿ ಕನ್ನಡ ಚಿತ್ರರಂಗ ಕಂಡ ಬಂಗಾರದ ಜೋಡಿ ಎಂದರೆ ತಪ್ಪಾಗಲಾರದು. ಈ ಜೋಡಿಯ ಚಿತ್ರ ಬರುತ್ತಿದೆ ಎಂದು ಗೊತ್ತಾದಾಗ ಅಭಿಮಾನಿಗಳು ಇವರ ಚಿತ್ರದ ಬರುವಿಕೆಗಾಗಿ ಉಸಿರು ಹಿಡಿದುಕೊಂಡು ಕಾಯುತ್ತಿದ್ದರೆಂದರೆ ಈ ಜೋಡಿಯ ಸಾಮರ್ಥ್ಯವನ್ನು ಯಾರಿಗಾದರೂ ವರ್ಣಿಸಲು ಸಾಧ್ಯವೇ?
ಇಂದಿನ ಯುವ ಪೀಳಿಗೆ ಇವರ ದಾಖಲೆಗಳನ್ನು ನೋಡಿದರೆ ಆಗುವ ಅಚ್ಛರಿ ಅಂತಿತದ್ದಲ್ಲ. ಡಾ.ರಾಜಕುಮಾರ್ ಅವರಿಗಾಗಿ ೪೦೦ ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಚಿತ್ರ ಸಾಹಿತಿಯಾಗಿ ೪೦೦೦ ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದು ಇವರ ಹೆಸರು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. ಇವರು ತಮ್ಮ ಇಪ್ಪತ್ತು ವರ್ಷಗಳ ಚಿತ್ರ ರಂಗದ ಜೀವನದಲ್ಲಿ ಸುಮಾರು ೫೮೪ ಚಿತ್ರಗಳಿಗೆ ಸಂಗೀತ ನೀಡಿದ್ದರು. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಫಲವಾಗಿ ಹಲವು ಪ್ರಶಸ್ತಿಗಳು ಲಭಿಸಿದ್ದು ಇವರು ಜುಲೈ ೩, ೧೯೯೩ ರಂದು ತಮ್ಮ ೫೯ ನೇ ವಯಸ್ಸಿನಲ್ಲಿ ನಿಧನರಾದರು.