ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ನಟ ಶಂಕರ್ ನಾಗ್

ಮುಂದುವರಿದ ಭಾಗ…

ಇವರ ಧರ್ಮಪತ್ನಿ ಅರುಂಧತಿ ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿ. ಈ ದಂಪತಿ ಸಂಕೇತ್ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅಂಜು ಮಲ್ಲಿಗೆ, ಬ್ಯಾರಿಸ್ಟರ್, ಸಂಧ್ಯಾ ಛಾಯ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಟ ಬೊಂಬಾಟ, ನಾಗಮಂಡಲ ಸೇರಿ ಅನೇಕ ನಾಟಕಗಳ ನಿರ್ಮಾಣ, ನಿರ್ವಹಣೆಯಲ್ಲಿ ಸಕ್ರೀಯವಾಗಿದ್ದರು. ಆದರೆ ವಿಧಿಯಾಟ ಬಲ್ಲವರಾರು ಅಲ್ಲವೇ? ಸೆಪ್ಟೆಂಬರ್ 30, 1990 ರಂದು ದಾವಣಗೆರೆ ಸಮೀಪದ ಅನಗೋಡು ಎಂಬ ಹಳ್ಳಿಯಲ್ಲಿ ಜೋಕುಮಾರ ಸ್ವಾಮಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ  ಕಾರು ಅಪಘಾತದಲ್ಲಿ ಆದ ಇವರ ಮರಣ ಕನ್ನಡ ಚಿತ್ರರಂಗಕ್ಕೆ ಮತ್ತು ಚಿತ್ರ ಪ್ರೇಮಿಗಳಿಗೆ ಅನಿರೀಕ್ಷಿತ ಆಘಾತವನ್ನುಂಟು ಮಾಡಿತ್ತು.  ತಮ್ಮ ಕುಟುಂಬವನ್ನಲ್ಲದೆ ಇಡೀ ಕನ್ನಡ ಚಿತ್ರರಂಗವನ್ನು ಅತೀ ಕಡಿಮೆಯ ಅವಧಿಯಲ್ಲಿ ತನ್ನ ಕಡೆಗೆ ಸೆಳೆದುಕೊಂಡಿದ್ದ ಏಕೈಕ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಅನಾಥವಾಯಿತು. ಆದರೆ ಅರ್ಧಕ್ಕೆ ನಿಂತಿದ್ದ ಕನಸಿನ ರಂಗಮಂದಿರದ ಯೋಜನೆಯನ್ನು ಪೂರ್ಣಗೊಳಿಸಿ ಆ ಕಟ್ಟಡಕ್ಕೆ ರಂಗ ಶಂಕರ ಎಂದು ನಾಮಕರಣ ಮಾಡಿದರು. ಕನ್ನಡ ಚಿತ್ರರಂಗಕ್ಕೆ ಕಂಪ್ಯೂಟರ್ ಚಾಲಿತ ಶಬ್ದ ಗ್ರಹಣ ತಂತ್ರಜ್ಞಾನವನ್ನು ಕೊಡುಗೆಯಾಗಿ ನೀಡಿದ್ದು ಇವರ ಮತ್ತೊಂದು ಪ್ರಮುಖ ಸಾಧನೆಯಾಗಿದೆ. 

12 ವರ್ಷಗಳ ಚಿತ್ರರಂಗದ ಪಯಣದಲ್ಲಿ  ಸುಮಾರು 90 ಚಿತ್ರಗಳಲ್ಲಿ ನಟಿಸಿದ್ದ ಇವರು ನಟನೆ ಮತ್ತು ನಿರ್ದೇಶನದಲ್ಲಿ ಉತ್ತಮ ಪರಿಣಿತಿಯನ್ನು ಪಡೆದಿದ್ದರು. ಇವರು ನಟಿಸಿದ ಸಾಹಸ ಪ್ರಧಾನ ಎಸ್.ಪಿ.ಸಾಂಗ್ಲೀಯಾನ ಭಾಗ 1 ಮತ್ತು ಭಾಗ 2 ಚಿತ್ರ ಮುಖ್ಯವಾಗಿ ಪೋಲೀಸ್ ಆಫೀಸರ್ ಪಾತ್ರದಲ್ಲಿ ಬಂದ ಇವರ ನಟನೆ ಪೋಲೀಸ್ ಆಫೀಸರ್ ಪಾತ್ರಗಳಿಗೆ ತನ್ನದೇ ಆದ ಖದರ್ ನ್ನು ಸೃಷ್ಟಿಸಿತ್ತು. ಅದೇ ರೀತಿ ಇವರು ನಟಿಸಿದ ಸಿ.ಬಿ.ಐ.ಶಂಕರ್, ಮೂಗನ ಸೇಡು,ತಾಳಿಯ ಭಾಗ್ಯ, ಹೊಸ ಜೀವನ, ಕಾರ್ಮಿಕ ಕಳ್ಳನಲ್ಲ, ಪ್ರೀತಿ ಮಾಡು ತಮಾಷೆ ನೋಡು, ನೋಡಿ ಸ್ವಾಮಿ ನಾವಿರೋದು ಹೀಗೆ, ಬೆಂಕಿ ಬಿರುಗಾಳಿ, ವಜ್ರಮುಷ್ಠಿ ಸುಂದರ ಕಾಂಡ, ಇತ್ಯಾದಿ ಒಂದು ವರ್ಷಕ್ಕೆ ಕನಿಷ್ಠ ಎಂದರೂ ಏಳು ಚಿತ್ರಗಳು ತೆರೆ ಕಾಣುತ್ತಿದ್ದವೆಂದರೆ ಇವರ ವರ್ಕ್ ಸ್ಪೀಡ್ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದನ್ನು ನೀವೇ ತಿಳಿಯಿರಿ. ನಿಗೂಢ ರಹಸ್ಯ ಇವರ ನಟನೆಯ ಕೊನೆಯ ಚಿತ್ರವಾದರೂ ತೆರೆ ಕಾಣುವ ಮೊದಲೇ ಅಕಾಲಿಕ ಮರಣವನ್ನು ಹೊಂದಿದ್ದರು. ಅಂದ ಹಾಗೆ ಬರೆಯುತ್ತ ಒಂದು ಮುಖ್ಯವಾದ ವಿಷಯ ಹೇಳುವುದನ್ನು ಮರೆತಿದ್ದೆ. ಇವರು ನಮ್ಮ ಕನ್ನಡ ಚಿತ್ರರಂಗದ ಕಣ್ಮಣಿ ಡಾ.ರಾಜಕುಮಾರ್ ಜೊತೆ ಅಪೂರ್ವ ಸಂಗಮ ಚಿತ್ರದಲ್ಲಿ ನಟಿಸಿದ್ದರಲ್ಲದೆ ಇವರದೇ ನಟನೆಯ ಒಂದು ಮುತ್ತಿನ ಕಥೆ ಎಂಬ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಒಂದು ದುಃಖಕರ ಸಂಗತಿಯೇನೆಂದರೆ ಕನ್ನಡ ಚಿತ್ರರಂಗಕ್ಕೆ ಈ ನಮ್ಮ ಕರಾಟೆ ಕಿಂಗ್ ಗೆ ತಕ್ಕಂತ ಒಬ್ಬ ಕರಾಟೆ ಕಿಂಗ್ ಕೂಡ ಇದುವರೆಗೂ ಇವರ ಸ್ಥಾನವನ್ನು ತುಂಬಲು ಸಾಧ್ಯವಾಗಲಿಲ್ಲ.
,(ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ)
     

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply