ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ನಟ ಶಂಕರ್ ನಾಗ್

ಎಸ್.ಪಿ.ಸಾಂಗ್ಲೀಯಾನ ಭಾಗ 1, ಎಸ್.ಪಿ.ಸಾಂಗ್ಲೀಯಾನ ಭಾಗ 2, ಗೆದ್ದ ಮಗ, ಸುಂದರ ಕಾಂಡ ಈ ಚಿತ್ರಗಳ ಹೆಸರನ್ನು ಕೇಳಿದ ಕೂಡಲೇ ಚಿತ್ರ ಪ್ರೇಮಿಗಳಿಗೆ ಮೊದಲು ನಟ ಶಂಕರ್ ನಾಗ್ ಹೆಸರೇ ನೆನಪಿಗೆ ಬರುತ್ತದೆ. ಹೆಚ್ಚಾಗಿ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದರೂ ಅದರಲ್ಲೂ ಪೋಲೀಸ್ ಆಫೀಸರ್ ಪಾತ್ರಗಳಿಗೆ ತನ್ನದೇ ಆದ ಖದರ್ ನ್ನು ಸೃಷ್ಟಿಸುವಲ್ಲಿ ಮೊದಲಿಗರು ಕೂಡ ಆಗಿದ್ದರು. ಕೇವಲ 12 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರೂ ಇವರ ಸಾಧನೆ ಅನನ್ಯ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇವರು ಕನ್ನಡ ಚಿತ್ರರಂಗದ ಸ್ಪೀಡ್ ಮಶೀನ್ ಎಂದು ಹೇಳಿದರೆ ತಪ್ಪಾಗಲಾರದು. 
       ನವೆಂಬರ್ 9, 1954 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಸದಾನಂದ ನಾಗರಕಟ್ಟೆ ಮತ್ತು ಆನಂದಿ ದಂಪತಿಗೆ ಕಿರಿಯ ಮಗನಾಗಿ ಜನಿಸಿದ ಇವರ ನಕ್ಷತ್ರ ನಾಮ ಅವಿನಾಶ್ ಎಂದು ಇತ್ತು. ಆದರೆ ಇವರ ತಂದೆ ಇವರನ್ನು ಚಿಕ್ಕಂದಿನಿಂದಲೂ ಭವಾನಿ ಶಂಕರ್ ಎಂದೇ ಕರೆಯುತ್ತಿದ್ದರು. ಇವರ ಹಿರಿಯ ಸಹೋದರ ಅನಂತನಾಗ್ ಭಾರತೀಯ ಚಿತ್ರರಂಗದ ಸಪ್ತ ಭಾಷಾ ನಟ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. 

ತಮ್ಮ ಶಿಕ್ಷಣವನ್ನು ಪಡೆದ ನಂತರ ವೃತ್ತಿ ನಿರ್ವಹಣೆಗೆ ಮುಂಬೈಗೆ ಆಗಮಿಸಿದ ಇವರು ತಮಗರಿವಿಲ್ಲದಂತೆ ರಂಗ ಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತ ಮರಾಠಿ ರಂಗಭೂಮಿಯಲ್ಲಿ ಕೂಡ ಸಕ್ರೀಯವಾಗಿದ್ದರ ಜೊತೆಗೆ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ತಮ್ಮ ಸ್ನೇಹಿತರೊಡನೆ ಸೇರಿ ತಯಾರಿಸಿದ್ದ 22 ಜೂನ್ 1897 ಮರಾಠಿ ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಇವರ ಪ್ರತಿಭೆಯ ಸಾಮರ್ಥ್ಯ  ಪರಿಚಯವಾಯಿತು. ಇಷ್ಟು ಸಾಲದೆಂಬಂತೆ ಜೊತೆಯಲ್ಲಿ ಸಂಗೀತದ ಅಭಿರುಚಿಯಿದ್ದ ಕಾರಣ ತಬಲ,ಕೊಳಲು ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸುವುದನ್ನು ಕಲಿತಿದ್ದರು. ಮತ್ತು  ನಾಟಕಗಳಲ್ಲಿ ನಟಿಸುವ ಮೂಲಕ ಮೂಲಕ ಮರಾಠಿ ರಂಗಭೂಮಿಯನ್ನು ಪ್ರವೇಶಿಸಿದ್ದ ಇವರು ನಾಟಕಗಳಲ್ಲಿ ಸಕ್ರೀಯವಾಗಿದ್ದರೂ ಅಲ್ಲಿ ಹಿರಿ ತೆರೆಯನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ 1979 ರಲ್ಲಿ ತೆರೆ ಕಂಡ ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದ ಒಂದಾನೊಂದು ಕಾಲದಲ್ಲಿ ಎಂಬ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು ನಟಿಸಿದ ಮೊದಲ ಚಿತ್ರದಲ್ಲಿ  ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು. ಅನಂತರ ಪ್ರಥಮಬಾರಿಗೆ ತ್ರೀ ಪಾತ್ರದಲ್ಲಿ ನಟಿಸಿದ್ದ ಗೆದ್ದ ಮಗ, ತಮ್ಮ ಸಹೋದರ ನಟ ಅನಂತನಾಗ್ ಜೊತೆ ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ ಮತ್ತು ಗೀತಾ ಚಿತ್ರಗಳನ್ನು ನಿರ್ಮಿಸಿ ನಟಿಸಿದ್ದರು. ಇವರ ಜನ್ಮ ಜನ್ಮದ ಅನುಬಂಧ ಮತ್ತು ಗೀತಾ ಚಿತ್ರ ಇಳಿಯರಾಜರ ಸಂಗೀತವನ್ನು ಹೊಂದಿದ್ದು ಅಪಾರ ಜನಪ್ರಿಯತೆಯನ್ನು ಪಡೆದಿದ್ದವು. ಅದರಲ್ಲೂ ಗೀತಾ ಚಿತ್ರದ ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ ಗೀತೆಯು ಇಂದಿಗೂ ಒಂದು ಟ್ರೆಂಡ್ ಸೆಟ್ ಆಗಿಯೇ ಉಳಿದಿದೆ.

ಮುಂದುವರಿಯುವುದು……

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply