ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ, ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್

 ( ಮುಂದುವರೆದ ಭಾಗ )

೧೯೭೨ ರಲ್ಲಿ ಇವರದೇ ನಿರ್ದೇಶನದಲ್ಲಿ ತೆರೆ ಕಂಡ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ನಾಗರಹಾವು. ಹುಟ್ಟಿಸಿದ್ದ ಕ್ರೇಜ್ ವರ್ಣಿಸಲು ಪದಗಳು ಕೂಡ ಸಾಲುವುದಿಲ್ಲ. ಗಳಿಕೆಯಲ್ಲೂ ದಾಖಲೆ ನಿರ್ಮಿಸಿದ ಈ ಚಿತ್ರ ರಜತ ಮಹೋತ್ಸವವನ್ನು ಆಚರಿಸಿತು. ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಎರಡು ಮುತ್ತು ರತ್ನಗಳಾದ ನಟ ರೆಬೆಲ್ ಸ್ಟಾರ್ ಡಾ.ಅಂಬರೀಶ್ ಚಕ್ರವರ್ತಿಯಾಗಿ ಮತ್ತು ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮುವತ್ತು ವರ್ಷಕ್ಕೂ ಅಧಿಕ ಕಾಲ ಚಿತ್ರರಂಗದಲ್ಲಿ  ಸಿಂಹದಂತೆ ವಿಜ್ರಂಭಿಸಿದರು.

ಈ ಚಿತ್ರದ ಅದ್ಭುತ ಯಶಸ್ಸನ್ನು ಕಂಡ ಬಾಲಿವುಡ್ ಚಿತ್ರರಂಗದ ಶೋ ಮ್ಯಾನ್ ನಟ, ನಿರ್ಮಾಪಕ, ನಿರ್ದೇಶಕ ರಾಜ್ ಕಪೂರ್ ತಮ್ಮ ನಿರ್ಮಾಣದಲ್ಲಿ ನಟ ರಿಷಿ ಕಪೂರ್ ನಟನೆಯ ಜಹ್ರೀಲಾ ಇನ್ಸಾನ್ ಹೆಸರಿನಲ್ಲಿ ರಿಮೇಕ್ ಮಾಡಿದ್ದರು.ಈ ಚಿತ್ರವು ಕೂಡ ಪುಟ್ಟಣ್ಣನವರ ನಿರ್ದೇಶನದಲ್ಲಿ ಮೂಡಿ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆಯಲಿಲ್ಲ. ಇದೇ ಚಿತ್ರವನ್ನು ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ರಿಮೇಕ್ ಮಾಡಿದರೂ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ.

ಇವರ ನಿರ್ದೇಶನದ ಗೆಜ್ಜೆ ಪೂಜೆ, ಮಲ್ಲನಪವಾಡ, ಕಪ್ಪು ಬಿಳುಪು, ಸಾಕ್ಷಾತ್ಕಾರ ( ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಪಿತಾಮಹ ಪ್ರಥ್ವಿ ರಾಜ್ ಕಪೂರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು), ಕರುಳಿನ ಕರೆ,ಶುಭ ಮಂಗಳ, ರಂಗನಾಯಕಿ,ಧರ್ಮಸೆರೆ, ಪಡುವಾರಳ್ಳಿ ಪಾಂಡವರು,ಅಮೃತ ಘಳಿಗೆ ( ನಟ ಶ್ರೀಧರ್ ಗೆ ಒಂದು ಇಮೇಜ್ ತಂದು ಕೊಟ್ಟ ಚಿತ್ರ), ಕಾಲೇಜು ರಂಗ  ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿದ್ದರು.ಅಲ್ಲದೆ ಹಮ್ ಪಾಂಚ್ ಎಂಬ ಹಿಂದಿ ಚಿತ್ರದಲ್ಲಿ ಮತ್ತು ಮೇಯರ್ ನಾಯರ್, ಸ್ವಪ್ನ ಭೂಮಿ ಎಂಬ ಮಲೆಯಾಳಂ ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದರು.

ಚಿತ್ರರಂಗದಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದರೂ ತಮ್ಮ ಖಾಸಗಿ ಜೀವನದಲ್ಲಿ ಸಂಸಾರದ ಭಿನ್ನಾಭಿಪ್ರಾಯದಿಂದ ತುಂಬ ನೋವನ್ನು ಪಟ್ಟಿದ್ದರು. ಇದೇ ದುಃಖದ ಸಮಯದಲ್ಲಿ ಚಿತ್ರವನ್ನು ನಿರ್ದೇಶಿಸುವ ಅವಕಾಶ ಒದಗಿ ಬಂದಿತು. ಆದರೂ ಬಂದ ಅವಕಾಶವನ್ನು ನಿರಾಕರಿಸದೇ ತಮ್ಮ ದುಃಖವನ್ನು ತೋರದೇ ೧೯೮೫ ರಲ್ಲಿ ನಿರ್ದೇಶಿಸಿದ  ನಟ ಪ್ರಣಯ ರಾಜ ಶ್ರೀನಾಥ್ ನಟನೆಯ ಮಾನಸ ಸರೋವರ  ಚಿತ್ರವು ಸೃಷ್ಟಿಸಿದ ಚರಿತ್ರೆ ಸಾಮಾನ್ಯವಾಗಿರಲಿಲ್ಲ. ಪಡೆದ ಯಶಸ್ಸು ವರ್ಣಿಸಲು ಅಸಾಧ್ಯವಾದರೆ ಪಡೆದ ಪ್ರಶಸ್ತಿಗಳು ಅನೇಕ.

ಈ ಚಿತ್ರದ ಮೂಲಕ ನಟಿ ಪದ್ಮಾ ವಾಸಂತಿ ಚಿತ್ರ ರಂಗದಲ್ಲಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೇ ಚಿತ್ರವು ತೆಲುಗಿನಲ್ಲಿ ಹಿರಿಯ ನಟ ಚಂದ್ರ ಮೋಹನ್ ನಟನೆಯಲ್ಲಿ ಚಿತ್ರವನ್ನು ರಿಮೇಕ್ ಮಾಡಲಾಗಿತ್ತು. ಆದರೆ ಚಿತ್ರದ ಹೆಸರು ನೆನಪಿಗೆ ಬರುತ್ತಿಲ್ಲ. ಇವರ ಚಿತ್ರಗಳ ಮೂಲಕ ರಾಮಕೃಷ್ಣ, ಜೈಜಗದೀಶ್, ಶ್ರೀನಾಥ್,ಶ್ರೀಧರ್ ಸೇರಿ ಅನೇಕ ನಟರು ಚಿತ್ರ ರಂಗದಲ್ಲಿ ಉತ್ತಮ ಭವಿಷ್ಯವನ್ನು ಕಂಡು ಕೊಂಡಿದ್ದಾರೆ. ಕಲ್ಪನಾ, ಆರತಿ ಇತ್ಯಾದಿ ಹಲವು ನಟಿಯರು ಚಿತ್ರ ರಂಗದಲ್ಲಿ ವಿಜ್ರಂಭಿಸಿದ್ದಾರೆ.

ಆದರೆ ೧೯೮೫ ರಲ್ಲಿ ಮಸಣದ ಹೂವು ಚಿತ್ರದ ಚಿತ್ರೀಕರಣ ಹಂತದಲ್ಲಿರುವ ಸಮಯದಲ್ಲಿ ಜೂನ್ ೫, ೧೯೮೫ ರಂದು ತಮ್ಮ ೬೨ ನೇ ವಯಸ್ಸಿನಲ್ಲಿ ಚೆನೈ ನಲ್ಲಿ ಮರಣವನ್ನು ಹೊಂದಿದರು. ಆದರೆ ಅಪೂರ್ಣ ಗೊಂಡಿದ್ದ ಈ ಚಿತ್ರವನ್ನು ಇವರ ಶಿಷ್ಯ ಕೆ.ಎಸ್.ಎಲ್ ಸ್ವಾಮಿ ಪೂರ್ಣ ಗೊಳಿಸಿ ತಮ್ಮ ಗುರುವಿಗೆ ಕಾಣಿಕೆಯನ್ನು ನೀಡಿದರು.

ಇದಕ್ಕೂ ಮೊದಲು ೧೯೬೮ ರಲ್ಲಿ ಸಾವಿರ ಮೆಟ್ಟಿಲು ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಆ ಚಿತ್ರ ಕಾರಣಾಂತರಗಳಿಂದ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ನಂತರ ನಿರ್ಮಾಪಕ ಡಿ.ಬಿ.ಬಸವೇ ಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು. ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಇವರ ಮರಣದ ನಂತರ ಪೂರ್ಣಗೊಂಡಿದ್ದು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ದಾಖಲೆಯಾಗಿ ಉಳಿದಿದೆ. ಜಯನಗರದಲ್ಲಿ ಇವರ ಹೆಸರಿನಲ್ಲಿ ಸ್ಥಾಪಿಸಿದ್ದ ಪುಟ್ಟಣ್ಣ ಥಿಯೇಟರ್ ನವೀಕರಣದ ಕಾರಣಕ್ಕೆ ೨೦೦೪ ರಿಂದ ಈ ಥಿಯೇಟರ್ ಗೆ ಬೀಗ ಹಾಕಲಾಗಿತ್ತು.

ಆದರೆ ಈ ಥಿಯೇಟರ್ ಜಾಗದಲ್ಲಿ ಒಂದು ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಇವರ ಪುತ್ರ ರಾಮು ಕಣಗಾಲ್ ಕಣಗಾಲ್ ನೃತ್ಯಾಲಯ ಹೆಸರಿನಲ್ಲಿ  ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply