ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರಿನ ಬಳಿ ಚಿತ್ರೀಕರಿಸಿದ ಪ್ರಣಯ ರಾಜ ಶ್ರೀನಾಥ್ ನಟನೆಯ ಮಾನಸ ಸರೋವರ ಮತ್ತು ಕಲ್ಲಿನ ಕೋಟೆ ಎಂದು ಖ್ಯಾತಿ ಪಡೆದ ಚಿತ್ರದುರ್ಗದಲ್ಲಿ ಚಿತ್ರೀಕರಿಸಿದ ನಟ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ನಾಗರಹಾವು ಚಿತ್ರದ ದಿಗ್ಧರ್ಶಕ ಚಿತ್ರ ಬ್ರಹ್ಮ, ಚಿತ್ರ ಶಿಲ್ಪಿ ಎಂದು ಪ್ರಸಿದ್ಧಿ ಪಡೆದಿದ್ದ ಪುಟ್ಟಣ್ಣ ಕಣಗಾಲ್ ಕುರಿತು ತಿಳಿಯದವರು ಇದ್ದಾರೆಯೇ? ಸಾಮಾನ್ಯವಾಗಿ ಹಣವನ್ನು ಗಳಿಸುವ ಉದ್ದೇಶದಿಂದ ವಾಣಿಜ್ಯ ಚಿತ್ರಗಳನ್ನು ತಯಾರಿಸುತ್ತಿದ್ದ ಕಾಲದಲ್ಲಿ ಕಾದಂಬರಿಯಾಧಾರಿತ ಚಿತ್ರಗಳನ್ನು ತಯಾರಿಸಿ ಯಶಸ್ಸು ಪಡೆದ ಇವರನ್ನು ನಮ್ಮ ಕನ್ನಡಿಗರು ಇಂದಿಗೂ ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ, ಚಿತ್ರ ಶಿಲ್ಪಿ ಎಂದೇ ನೆನಪಿಸಿಕೊಳ್ಳುತ್ತಿದ್ದಾರೆ.
ಡಿಸೆಂಬರ್ ೧,೧೯೩೩ ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ ಜನಿಸಿದ ಇವರ ಪೂರ್ಣ ಹೆಸರು ಶುಬ್ರವೇಷ್ಟಿ ರಾಮಸ್ವಾಮಯ್ಯ ಸೀತಾರಾಮ ಶರ್ಮಾ. ಇದೇ ಮುಂದೆ ಎಸ್.ಆರ್.ಪುಟ್ಟಣ್ಣ ಕಣಗಾಲ್ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ಇವರು ಜನಿಸಿದ ಸಮಯದಲ್ಲಿ ಇವರ ಕುಟುಂಬದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿತ್ತು. ಇವರ ಮನೆಯಲ್ಲಿ ತಾಂಡವಾಡುತ್ತಿದ್ದ ಬಡತನ, ಬದುಕು ಸಾಗಿಸುವ ಅನಿವಾರ್ಯತೆ, ಜೀವನ ನಿರ್ವಹಣೆಗೆ ಕ್ಲೀನರ್, ಸೇಲ್ಸ್ ಮ್ಯಾನ್,ಶಿಕ್ಷಕ ಮಾಡದ ಕೆಲಸವಿಲ್ಲ.
ಆದರೂ ಕಲಾದೇವಿಯ ಪ್ರೇರಣೆಯಿಂದ ಚಿತ್ರ ಪ್ರಚಾರಕನಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಕೆಲವು ಕಾಲದ ನಂತರ ೧೯೫೪ ರಲ್ಲಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ ಬಿ.ಆರ್.ಪಂತುಲು ಬಳಿ ಡೈಲಾಗ್ ಕೋಚ್ ಆಗಿ ಕೆಲಸವನ್ನು ನಿರ್ವಹಿಸಿದ್ದರು. ಚಿತ್ರ ರಂಗದ ಸ್ಥಿತಿ ಗತಿಯನ್ನು ತಿಳಿದುಕೊಂಡ ಕೆಲವು ದಿನಗಳ ನಂತರ ಪದ್ಮಿನಿ ಪಿಕ್ಚರ್ಸ್ ಕಂಪನಿಯಲ್ಲಿ ಸಹಾಯಕ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದರು.
ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ನಿರ್ವಹಿಸಿ ಅನುಭವವನ್ನು ಪಡೆದ ನಂತರ ೧೯೬೪ ರಲ್ಲಿ ಪ್ರಥಮ ಬಾರಿಗೆ ಸ್ಕೂಲ್ ಮಾಸ್ಟರ್ (ಮೂಲ ಬಿ.ಆರ್.ಪಂತುಲು ನಿರ್ದೇಶನದ ಕನ್ನಡ ಚಿತ್ರ ಸ್ಕೂಲ್ ಮಾಸ್ಟರ್) ಎಂಬ ರಿಮೇಕ್ ಮಲೆಯಾಳಂ ಚಿತ್ರವನ್ನು ನಿರ್ದೇಶಿಸಿದ್ದರು. ೧೯೬೬ ರಲ್ಲಿ ತ್ರಿವೇಣಿಯವರ ಕನ್ನಡ ಕಾದಂಬರಿ ಬೆಕ್ಕಿನ ಕಣ್ಣು ಆಧಾರಿತ ಪೂಚಕ್ಕಣ್ಣಿ ಎಂಬ ಇನ್ನೊಂದು ಮಲೆಯಾಳಂ ಚಿತ್ರವನ್ನು ನಿರ್ದೇಶಿಸಿದ್ದರು.
೧೯೬೭ ರಲ್ಲಿ ನಟ ಕಲ್ಯಾಣ್ ಕುಮಾರ್ ನಟನೆಯ ಬೆಳ್ಳಿ ಮೋಡ ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದ್ದರು. ಈ ಚಿತ್ರದ ನಂತರ ಕಾದಂಬರಿಯಾಧಾರಿತ ಚಿತ್ರಗಳಿಗೆ ಪ್ರಾಮುಖ್ಯತೆಯನ್ನು ನೀಡಿದ್ದ ಇವರು ನಿರ್ದೇಶಿಸಿದ ಪ್ರತಿ ಚಿತ್ರವು ದಾಖಲೆಯನ್ನು ನಿರ್ಮಿಸಿದೆ. ಇವರ ನಿರ್ದೇಶನದ,ನಟ ಗಂಗಾಧರ್ ಮತ್ತು ನಟಿ ಕಲ್ಪನಾ ಅಭಿನಯದ ಚಿತ್ರ ಶರಪಂಜರ ಪಡೆದ ಯಶಸ್ಸಿನ ಕುರಿತಾಗಲಿ, ಪ್ರಶಸ್ತಿಗಳ ಕುರಿತಾಗಲಿ ಹೇಳುವ ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ ಕೂಡ ಆಗಿದೆ.
( ಮುಂದುವರೆಯುವುದು )