ನಟ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟರಲ್ಲಿ ಇವರು ಒಬ್ಬರಾಗಿದ್ದರು. ಇವರು ಕೇವಲ ಖಳನ ಪಾತ್ರವಲ್ಲದೆ ಪೋಷಕ ನಟ ಮತ್ತು ಹಾಸ್ಯ ನಟರಾಗಿಯೂ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಇವರು ಕನ್ನಡ ಚಿತ್ರರಂಗಕ್ಕೆ ದೀಪವಿದ್ದಂತೆ ಇದ್ದರು. ಇವರ ಮಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಿಗೂ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದು ಅಭಿಮಾನಿಗಳ ಪಾಲಿಗೆ ಡಿ.ಬಾಸ್ ಎಂದು ಗುರುತಿಸಲ್ಪಟ್ಟಿದ್ದಾರೆ.
ಮುನಿಸ್ವಾಮಿ ಮತ್ತು ಪಾರ್ವತಿ ದಂಪತಿಯ ನಾಲ್ಕನೇ ಮಗನಾಗಿ ಜನಿಸಿದ ಇವರ ಮೊದಲ ಹೆಸರು ಶ್ರೀನಿವಾಸ್. ಚಿಕ್ಕ ವಯಸ್ಸಿನಲ್ಲಿ ಇವರ ತಂದೆ ತಾಯಿ ಮರಣ ಹೊಂದಿದರು. ಆದರೆ ಇವರು ಬಾಲ್ಯದಿಂದಲೇ ಚಿತ್ರ ರಂಗದ ಕುರಿತು ಬಹಳ ಆಸಕ್ತಿಯನ್ನು ಹೊಂದಿದ್ದು ಶಾಲಾ ಕಾಲೇಜುಗಳಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದ ನಾಟಕಗಳಲ್ಲಿ ಅಭಿನಯಿಸಿದ್ದರು. ಆದರೆ ನನಗೆ ಇವರ ಖಾಸಗಿ ಜೀವನದ ಹೆಚ್ಚು ಮಾಹಿತಿ ಮತ್ತು ಶಿಕ್ಷಣದ ಕುರಿತು ಯಾವುದೇ ಮಾಹಿತಿ ಲಭ್ಯವಾಗಗದಿದ್ದರಿಂದ ಬರೆಯಲು ಸಾಧ್ಯವಾಗಲಿಲ್ಲ.
೧೯೬೬ ರಲ್ಲಿ ಕೆ.ಎಸ್.ಎಲ್. ಸ್ವಾಮಿ ನಿರ್ಮಾಣ ಮತ್ತು ಆರ್.ಜಿ. ಕೇಶವ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದ ತೂಗುದೀಪ ಚಿತ್ರದಲ್ಲಿ ಖಳನ ಪಾತ್ರವನ್ನು ನಿರ್ವಹಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು. ಇವರು ಚಿತ್ರ ರಂಗ ಪ್ರವೇಶಿಸಿದ ಸಮಯದಲ್ಲಿ ಬಾಲಕೃಷ್ಣ, ಉದಯಕುಮಾರ್, ಎಂ.ಪಿ.ಶಂಕರ ರಂತಹ ಘಟಾನುಘಟಿ ನಟರು ಖಳನ ಪಾತ್ರದಲ್ಲಿ ಪೈಪೋಟಿಯಲ್ಲಿ ನಟಿಸುತ್ತಿದ್ದರು. ಆದರೆ ಇವರಿಗೆ ಚಿತ್ರ ರಂಗದ ಯಾವ ಹಿನ್ನೆಲೆಯೂ ಇರಲಿಲ್ಲವಾದ್ದರಿಂದ ತಮ್ಮ ಪ್ರತಿಭೆಯ ಮೇಲಿನ ನಂಬಿಕೆಯಿಂದ ಪೈಪೋಟಿಯಲ್ಲಿ ತಮ್ಮ ಚಿತ್ರರಂಗದ ಜೀವನವನ್ನು ಆರಂಭಿಸಿದರು.ಇವರು ನಟಿಸಿದ ಮೊದಲ ಚಿತ್ರ ತೂಗು ದೀಪ ಬಿಡುಗಡೆ ನಂತರ ಭರ್ಜರಿ ಯಶಸ್ಸು ಕಂಡಿತ್ತಲ್ಲದೆ ಇವರ ನಟನೆಗೆ ಉತ್ತಮ ವಿಮರ್ಶೆಯು ಬಂದಿತ್ತು. ಅಲ್ಲದೇ ಈ ಚಿತ್ರದ ಮೂಲಕ ಶ್ರೀನಿವಾಸ ಎಂಬ ಹೆಸರು ತೂಗುದೀಪ ಶ್ರೀನಿವಾಸ್ ಆಗಿ ಚಿತ್ರ ರಂಗದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು.
ಅನಂತರ ಇವರು ಮೇಯರ್ ಮುತ್ತಣ್ಣ, ಗಿರಿಕನ್ಯೆ, ತಾಯಿಗೆ ತಕ್ಕ ಮಗ, ಭಾಗ್ಯವಂತರು, ಗಂಧದ ಗುಡಿ ಇತರೇ ಚಿತ್ರಗಳು ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ಇವರ ನಟನೆಯ ಮೇಯರ್ ಮುತ್ತಣ್ಣ, ಗಿರಿಕನ್ಯೆ,ಭಕ್ತಿ ಪ್ರಹ್ಲಾದ, ಭಾಗ್ಯವಂತರು, ಜೀವನ ಚೈತ್ರ ಇವರ ಬಹುತೇಕ ಚಿತ್ರಗಳು ಇಂದಿಗೂ ಜನಪ್ರಿಯ ಎವರ್ ಗ್ರೀನ್ ಚಿತ್ರಗಳಾಗಿವೆ. ಸುಖೀ ಕುಟುಂಬ ಇವರದಾಗಿದ್ದು ಇವರ ಪತ್ನಿ ಹೆಸರು ಮೀನಾ ತೂಗುದೀಪ ಶ್ರೀನಿವಾಸ್ ಮತ್ತು ಇವರ ಇಬ್ಬರು ಗಂಡು ಮಕ್ಕಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟರಾಗಿ, ಇನ್ನೊಬ್ಬರು ದಿನಕರ್ ತೂಗುದೀಪ ನಿರ್ಮಾಪಕರಾಗಿ ಚಿತ್ರ ರಂಗದಲ್ಲಿ ಇಂದಿಗೂ ಸಕ್ರೀಯವಾಗಿದ್ದಾರೆ. ಮತ್ತು ಇವರ ಮಗಳ ಹೆಸರು ದಿವ್ಯಾ ತೂಗುದೀಪ.
ಕನ್ನಡದ ಕಣ್ಮಣಿ, ವರನಟ ಡಾ.ರಾಜಕುಮಾರ್ ಅಭಿನಯದ ಹಲವಾರು ಚಿತ್ರಗಳಲ್ಲಿ ಖಳನಟ- ಸಹನಟ ಮತ್ತು ಪೋಷಕ ನಟರಾಗಿ ನಟಿಸಿದ್ದು ಇವರು ಶ್ರೇಷ್ಠ ನಟ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇಂತಹ ಅಜಾತ ಶತ್ರು ನಟರಾಗಿದ್ದ ಇವರು ತಮ್ಮ ೫೨ ನೇ ವಯಸ್ಸಿನಲ್ಲಿ ಅನಾರೋಗ್ಯ ನಿಮಿತ್ತ ಅಕ್ಟೋಬರ್ ೧೬, ೧೯೯೫ ರಂದು ಇಹಲೋಕ ತ್ಯಜಿಸಿದರು. ಇವರ ನಿಧನದಿಂದ ಕನ್ನಡ ಚಿತ್ರರಂಗದ ದೀಪವೊಂದು ನಂದಿ ಹೋಯಿತು.