ಕನ್ನಡ ಚಿತ್ರರಂಗದ ಶೋ ಮ್ಯಾನ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

( ಮುಂದುವರೆದಭಾಗ )

೧೯೮೪ ರಲ್ಲಿ ಬಿಡುಗಡೆಯಾದ ನಾನೇ ರಾಜ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನ ಪಾತ್ರವನ್ನು ನಿರ್ವಹಿಸಿದರು. ೧೯೮೨ ರಿಂದ ೧೯೮೬ ವರೆಗೂ ಹನ್ನೆರಡು ಚಿತ್ರಗಳಲ್ಲಿ ನಟಿಸಿದರು.  ಎರಡು ವರ್ಷಗಳ ಬಳಿಕ  ಕಥೆ, ಚಿತ್ರ ಕಥೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣದ ಲ್ಲಿ  ಮೂಡಿದ ೧೯೮೮ ರಲ್ಲಿ ಬಿಡುಗಡೆಯಾದ ಬಹುತಾರಾಗಣದ ಚಿತ್ರ ಪ್ರೇಮಲೋಕ ಬಿಡುಗಡೆಯಾದ ನಂತರ ಸೃಷ್ಟಿಸಿದ್ದ ಸಂಚಲನ ಸಾಮಾನ್ಯವಾಗಿರಲಿಲ್ಲ. ಈ ಚಿತ್ರವನ್ನು  ಅಂದಿನ ಕಾಲದಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದರಿಂದ ಈ ಚಿತ್ರವನ್ನು ತಾಂತ್ರಿಕವಾಗಿ ಶ್ರೀಮಂತ ಚಿತ್ರ ಎಂದು ಗುರುತಿಸಲಾಗಿತ್ತು. 

ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.  ಹಂಸಲೇಖ ಸಾಹಿತ್ಯ ಮತ್ತು ಸಂಗೀತ ಈ ಚಿತ್ರದ ಮುಖ್ಯ ಆಕರ್ಷಣೆ. ಈ ಚಿತ್ರದ ಆಡಿಯೋ ಕ್ಯಾಸೆಟ್ ಮಾರುಕಟ್ಟೆಗೆ ಬಂದ ನಂತರ ದಾಖಲೆಯ ಮಾರಾಟವನ್ನು ಕಂಡು ಇತಿಹಾಸ ನಿರ್ಮಿಸಿರುವುದನ್ನು ಮರೆಯಲು ಸಾಧ್ಯವೇ? ಅಲ್ಲದೇ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ನಿರ್ದೇಶನದಲ್ಲಿ ಭರ್ಜರಿ ಯಶಸ್ಸು ಕಂಡರು. ಆ ಸಮಯದಲ್ಲಿ ಪ್ರೇಮ ಲೋಕ ಚಿತ್ರ ಸೃಷ್ಟಿಸಿದ ದಾಖಲೆಯನ್ನು ಬೇರೆ ಯಾವ ಚಿತ್ರಗಳು ಮಾಡಿರಲಿಕ್ಕಿಲ್ಲ.

ಈ ಚಿತ್ರದ ಮೂಲಕ ಆರಂಭವಾದ ರವಿಚಂದ್ರನ್ ಮತ್ತು ಹಂಸಲೇಖಾ ಜೋಡಿ ೨೦ ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಮಾಡಿದ ಮೋಡಿಯನ್ನು ಅಭಿಮಾನಿಗಳಾಗಲಿ, ಸಂಗೀತ ಪ್ರಿಯರು ಮರೆಯಲು ಸಾಧ್ಯವಿಲ್ಲ. ೧೯೮೮ ರಲ್ಲಿ ಇವರ ನಿರ್ದೇಶನದ ಎರಡನೇ ಚಿತ್ರ ರಣಧೀರ. ಇದು ಹಿಂದಿ ಚಿತ್ರದ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ನಿರ್ದೇಶನದ ಹೀರೋ ಹಿಂದಿ ಚಿತ್ರದ ರಿಮೇಕ್. ಆದರೆ ರಿಮೇಕ್ ವಿಷಯದಲ್ಲಿ ಇವರ ನಿಲುವು ವಿಭಿನ್ನವಾಗಿದೆ. ಪರಭಾಷೆ ಚಿತ್ರಗಳನ್ನು ಯಾವ ರೀತಿ ರಿಮೇಕ್ ಮಾಡಬೇಕು ಎಂಬುದಕ್ಕೆ ಇವರ ನಿರ್ದೇಶನದ ಚಿತ್ರಗಳೇ ಉದಾಹರಣೆಯಾಗಿವೆ.

ಪರಭಾಷೆ ಚಿತ್ರಗಳನ್ನು ಯಥಾ ರೀತಿ ಭಟ್ಟಿ ಇಳಿಸದೇ ತಮ್ಮದೇ ಶೈಲಿಯಲ್ಲಿ ಕನ್ನಡ ಚಿತ್ರವನ್ನು ತಯಾರಿಸುವಲ್ಲಿ ಇವರನ್ನು ಯಾರು ಮೀರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಹಿಂದಿ ಭಾಷೆಯ ಹೀರೋ ಚಿತ್ರ ಇವರ ನಿರ್ದೇಶನದಲ್ಲಿ ರಣಧೀರನಾಗಿ ತೆರೆ ಕಂಡ ನಂತರ ಈ ಚಿತ್ರ ರಜತಮಹೋತ್ಸವವನ್ನು ಆಚರಿಸಿತು.  ಹಂಸಲೇಖ ಅವರು ಸಾಹಿತ್ಯ ಮತ್ತು ಸಂಗೀತ ನೀಡಿದ್ದ ಈ ಚಿತ್ರದ ಸಂಗೀತ ಮಾಡಿದ ಮೋಡಿ ಅಂತಿತದ್ದಲ್ಲ.  ಈ ಚಿತ್ರದ ಆಡಿಯೋ ಕ್ಯಾಸೆಟ್ ಕೂಡ ಬಿಡುಗಡೆಯಾದ ನಂತರ ದಾಖಲೆಯ ಮಾರಾಟವನ್ನು ಕಂಡು ಇತಿಹಾಸ ನಿರ್ಮಿಸಿದೆ. ಈ ಚಿತ್ರವನ್ನು ನೋಡಿ ಮೂಲ ಹಿಂದಿ ಚಿತ್ರದ ನಿರ್ದೇಶಕ ಸುಭಾಷ್ ಘಾಯ್ ಇವರ ನಿರ್ದೇಶನದ ಸಾಮರ್ಥ್ಯವನ್ನು ಕಂಡು ಆಶ್ಚರ್ಯಪಟ್ಟು  ಗುಣಗಾನವನ್ನು ಮಾಡಿದ್ದರು.

 ಈ ರಿಮೇಕ್ ಚಿತ್ರಗಳ ಭರಾಟೆಯ ಮಧ್ಯೆ ರಿಮೇಕ್ ವಿಷಯದಲ್ಲಿ ನಿಮ್ಮ ಕ್ರೇಜಿಸ್ಟಾರ್ ರವಿಮೇಕ್ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಯುಗಪುರುಷ, ಯುದ್ಧ ಕಾಂಡ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು ಇವರ ಹಳ್ಳಿ ಸೊಗಡಿನ  ರಾಮಾಚಾರಿ ಚಿತ್ರವು ಆಗಿನ ಕಾಲದಲ್ಲಿ ಕೆನಡಾ ದೇಶದ ಒಂಟಾರಿಯೋ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನ ಗೊಂಡಿದ್ದು ಗಮನಾರ್ಹ ಅಂಶವಾಗಿದೆ.

ಚಿತ್ರ ರಂಗದಲ್ಲಿ  ನಟ, ನಿರ್ಮಾಪಕ, ನಿರ್ದೇಶನದಂತಹ ದೊಡ್ಡ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದ್ದರೂ ತಮ್ಮ ಖಾಸಗಿ ಜೀವನದಲ್ಲಿ ಸ್ನೇಹಜೀವಿ, ಸಹೃದಯಿ.  ಇವರು ಚಿತ್ರ ರಂಗದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದಿದ್ದರೂ ತಮ್ಮ ಅಭಿಮಾನಿಗಳ ಸುಖ ಮತ್ತು ದುಃಖದಲ್ಲಿ ಭಾಗಿಯಾಗುವ ಕರುಣಾಮಯಿ ಅಲ್ಲದೆ ಇವರ ಸಮಾಜ ಸೇವೆ ಇಂದಿಗೂ ನಡೆಯುತ್ತಿದೆ. ೧೯೯೭ ರಲ್ಲಿ ಇವರ ನಿರ್ಮಾಣ, ನಿರ್ದೇಶನದಲ್ಲಿ ತೆರೆ ಕಂಡ ಸಿಪಾಯಿ ಚಿತ್ರ.

ಈ ಚಿತ್ರಕ್ಕೆ ಮೂರು ವಿಶೇಷತೆಗಳಿವೆ. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ  ಸ್ನೇಹದ ಗುರುತಾಗಿ ಯಾವ ಶುಲ್ಕವನ್ನು ಪಡೆಯದೇ ಈ ಚಿತ್ರದಲ್ಲಿ ನಟಿಸಿದರು. ಈ ಚಿತ್ರವನ್ನು ಈಶ್ವರಿ ಸಂಸ್ಥೆ ನಿರ್ಮಿಸುವುದರ ಮೂಲಕ ಬೆಳ್ಳಿ ಹಬ್ಬವನ್ನು ಆಚರಿಸಿತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply