( ಮುಂದುವರೆದ ಭಾಗ )
೧೯೭೨ ರಲ್ಲಿ ಟಿ.ಕೆ.ರಾಮರಾಯರ ಕಾದಂಬರಿಯಾಧಾರಿತ ಮತ್ತು ಗ್ರಾಮೀಣ ಹಿನ್ನೆಲೆಯ ಡಾ.ರಾಜಕುಮಾರ್ ನಟನೆಯ ಬಂಗಾರದ ಮನುಷ್ಯ ಚಿತ್ರವನ್ನು ನಿರ್ದೇಶಿಸಿದ ನಂತರ ನಿರೀಕ್ಷೆಗೂ ಮೀರಿ ಇವರ ಜನಪ್ರಿಯತೆ ಬೆಳೆಯಿತು. ಈ ಚಿತ್ರವು ಮೊದಲ ದಿನದಿಂದಲೇ ಯಶಸ್ವಿ ಪ್ರದರ್ಶನವನ್ನು ಕಂಡಿತ್ತಲ್ಲದೆ ತೆರೆ ಕಂಡ ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿತ್ತು. ಮತ್ತು ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡ ದಾಖಲೆಗೆ ಪಾತ್ರವಾಗಿದೆ.
೧೯೭೩ ರಲ್ಲಿ ತೆರೆ ಕಂಡ ಡಾ.ರಾಜಕುಮಾರ್ ನಟನೆಯ ಗ್ರಾಮೀಣ ಹಿನ್ನೆಲೆಯುಳ್ಳ ಕಥೆಯನ್ನು ಹೊಂದಿದ್ದ ಚಿತ್ರ ದೂರದ ಬೆಟ್ಟ,೧೯೭೪ ರಲ್ಲಿ ತೆರೆ ಕಂಡ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮತ್ತು ಲೋಕೇಶ್ ನಟನೆಯ ಗೋರೂರು ರಾಮಸ್ವಾಮಿ ಅಯ್ಯಂಗಾರ್ ರವರ ಕಾದಂಬರಿಯಾಧಾರಿತ ಭೂತಯ್ಯನ ಮಗ ಅಯ್ಯು ಚಿತ್ರ ತೆರೆ ಕಂಡ ನಂತರ ಮಾಡಿದ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ. ಮತ್ತು ಈ ಚಿತ್ರವನ್ನು ಪರಭಾಷೆಯ ಚಿತ್ರಗಳಲ್ಲಿ ರಿಮೇಕ್ ಮಾಡಲಾಗಿತ್ತು.
ಈ ರೀತಿಯಾಗಿ ಇವರ ನಿರ್ದೇಶನದ ಬಹುತೇಕ ಚಿತ್ರಗಳು ಸಾಮಾಜಿಕ ಹಿನ್ನೆಲೆ ಹೊಂದಿದ್ದರಿಂದ ಇವರನ್ನು ಸಾಮಾಜಿಕ ಚಿತ್ರಗಳ ನಿರ್ದೇಶಕ ಎಂದೇ ಗುರುತಿಸಲಾಗುತ್ತಿತ್ತು. ಇವರು ಕೇವಲ ಸಾಮಾಜಿಕ ಹಿನ್ನೆಲೆಯುಳ್ಳ ಚಿತ್ರಗಳಿಗೆ ಸೀಮಿತವಾಗಿರಲಿಲ್ಲ. ೧೯೭೯ ರಲ್ಲಿ ತೆರೆ ಕಂಡ ಅನಂತನಾಗ್ ದ್ವೀಪಾತ್ರದಲ್ಲಿ ನಟಿಸಿದ ನಾರದ ವಿಜಯ ಮತ್ತು ೧೯೮೦ ರಲ್ಲಿ ತೆರೆ ಕಂಡ ನಟ ಲೋಕೇಶ್ ನಟಿಸಿದ ಭೂಲೋಕದಲ್ಲಿ ಯಮರಾಜ (ಮೂಲ ತೆಲುಗು ಚಿತ್ರರಂಗದ ಹಿರಿಯ ನಟ ಎನ್.ಟಿ.ಆರ್ ನಟಿಸಿದ ತೆಲುಗು ಚಿತ್ರ ಯಮಗೋಲ ) ದಂತಹ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದರು. ೧೯೮೫ ರಲ್ಲಿ ಅಜಯ್ ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ತಮ್ಮ ಮಗ ಮುರುಳಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿದ್ದರು.
ಲೋಕೇಶ್,ಚರಣ್ ರಾಜ್, ಮತ್ತು ಶ್ರೀನಿವಾಸ ಮೂರ್ತಿ ಸೇರಿ ಹಲವು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ಅಮೋಘ ಚಿತ್ರಗಳ ನಿರ್ದೇಶಕನಾಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಇವರನ್ನು ನೋಡಿ ವಿಧಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆಗಲೇ ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ಇವರ ಮಗ ಮುರುಳಿ ಸೆಪ್ಟೆಂಬರ್ ೮,೨೦೧೦ ರಂದು ಅಕಾಲಿಕ ಮರಣಕ್ಕೆ ತುತ್ತಾದರು.
ಈ ಒಂದು ಘಟನೆ ಇವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಲು ಕಾರಣವಾಯಿತು. ೩೦ ವರ್ಷಗಳ ಚಿತ್ರರಂಗದ ಜೀವನದಲ್ಲಿ ಇಪ್ಪತ್ತಕ್ಕೂ ಅಧಿಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ಇವರು ತಮ್ಮ ಕೊನೆಯ ಐದು ವರ್ಷಗಳ ಕಾಲ ತೀವ್ರ ದುಃಖದಲ್ಲಿದ್ದರು. ಚಿತ್ರ ರಂಗಕ್ಕೆ ಹಲವು ಮಹಾನ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಈ ಮಹಾನ್ ಚೇತನ ಮಾರ್ಚ್ ೧೨,೨೦೧೫ ರಂದು ತಮ್ಮ ೭೯ ನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಇವರ ಮೊಮ್ಮಗ ಅಥರ್ವ (ನಟ ಮುರಳಿ ಮಗ) ಇಂದಿಗೂ ಕೂಡ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.