( ಮುಂದುವರೆದಭಾಗ )
ಹೊರ ದೇಶಗಳಿಂದ ಬಂದ ಮೂಕಿ ಚಿತ್ರಗಳ ಜೊತೆಗೆ ಮುಂಬಯಿ, ಪೂನಾ, ಕೊಲ್ಲಾಪುರ ಮತ್ತು ಕೊಲ್ಕತ್ತಾ ಸೇರಿ ಅನೇಕ ಪ್ರದೇಶಗಳಲ್ಲಿ ಮೂಕಿ ಚಿತ್ರಗಳ ತಯಾರಿಕೆಯಲ್ಲಿ ಚೇತರಿಕೆ ಕಂಡು ಬಂದಿತ್ತು. ಅನಂತರ ಬೆಂಗಳೂರಿನಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಆರಂಭಗೊಂಡಿತಲ್ಲದೆ ಅತೀ ಕಡಿಮೆ ಅವಧಿಯಲ್ಲಿ ಬೆಳವಣಿಗೆಯನ್ನು ಕಂಡಿತ್ತು. ಚಲನಚಿತ್ರಗಳ ವಿತರಣೆಯಲ್ಲಿ ದಕ್ಷಿಣ ಭಾರತಕ್ಕೆ ಕೇಂದ್ರ ಸ್ಥಾನವಾಗಿ ಬೆಂಗಳೂರು, ಅಲ್ಲದೇ ಮದ್ರಾಸ್, ವಿಜಯವಾಡ, ತಿರುಚನಾಪಳ್ಳಿ ಪ್ರದೇಶ ಮತ್ತು ಸಿಂಹಳಕ್ಕೆ ಕೂಡ ಬೆಂಗಳೂರಿನಿಂದಲೇ ಚಿತ್ರಗಳನ್ನು ಪೂರೈಸಲಾಗುತ್ತಿತ್ತು.
ಆಗಿನ ಕಾಲದಲ್ಲಿ ಮುಂಬಯಿ, ಗುಜರಾತ್ ಮೂಲದ ಹರಿಭಾಯಿ ದೇಸಾಯಿ ಪ್ರಸಿದ್ದ ವಾಣಿಜ್ಯೋದ್ಯಮಿ ಅಲ್ಲದೇ ಮುಂಬಯಿಯ ಲಕ್ಷ್ಮಿ ಫಿಲಂ ಕಂಪನಿಯ ಪಾಲುದಾರರು ಕೂಡ ಆಗಿದ್ದರು. ಒಂದು ದಿನ ಹರಿಭಾಯಿ ದೇಸಾಯಿ ಮತ್ತು ಸ್ನೇಹಿತರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಇಲ್ಲಿಯ ಪರಿಸರಕ್ಕೆ ಆಕರ್ಷಿತಗೊಂಡು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿದ್ದ ದಿವಾನ್ ಮಿರ್ಜಾ ರವರಿಗೆ ಸೇರಿದ ಒಂದು ಬಂಗಲೆಯಲ್ಲಿ ಒಂದು ಸ್ಟುಡಿಯೋವನ್ನು ಆರಂಭಿಸಿದರು.
ವಿದೇಶದಲ್ಲಿ ತರಬೇತಿಯನ್ನು ಕೂಡ ಪಡೆದುಕೊಂಡು ಬಂದಿದ್ದ ಹರಿಭಾಯಿ ದೇಸಾಯಿಯವರು ತಮ್ಮ ಸೂರ್ಯ ಫಿಲಂ ಕಂಪನಿಯನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಿದ್ದರು ಮತ್ತು ತಂಡವು ಉತ್ತಮ ತಂತ್ರಜ್ಞರಿಂದ ಕೂಡಿತ್ತಲ್ಲದೆ ಚಿತ್ರಗಳ ಗುಣಮಟ್ಟವು ಉತ್ತಮವಾಗಿತ್ತು. ೧೯೨೯ ರಿಂದ ೧೯೩೧ ರವರೆಗೆ ಎರಡು ವರ್ಷಗಳ ಅವಧಿಯಲ್ಲಿ ೩೯ ಮೂಕಿ ಚಿತ್ರಗಳನ್ನು ನಿರ್ಮಿಸಿದ್ದರಿಂದ ಬೇಡಿಕೆ ಕೂಡ ಇತ್ತು. ಅದೇ ಸಮಯದಲ್ಲಿ ೧೯೩೦ ರ ದಶಕದಲ್ಲಿ ಸಂಚಾರಿ ಚಿತ್ರಮಂದಿರಗಳು ಆರಂಭಗೊಂಡವು. ಇತ್ತ ಕಡೆ ಸೂರ್ಯ ಫಿಲಂ ಕಂಪನಿ ಮುಂಬಯಿಯ ಕಲಾವಿದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶವನ್ನು ಕೊಟ್ಟಿತ್ತು. ಲಕ್ಷ್ಮಿ ಬಾಯಿ, ಕಮಲಾಬಾಯಿ, ಅನ್ನಪೂರ್ಣಮ್ಮ ಮತ್ತು ಸುಂದರ್ ರಾವ್ ನಾಡಕರ್ಣಿ ಸೇರಿ ಅನೇಕ ಕಲಾವಿದರು ಸೂರ್ಯ ಫಿಲಂ ಕಂಪನಿಯ ಮೂಲಕ ತಾರಾ ಪಟ್ಟವನ್ನು ಅಲಂಕರಿಸಿದ್ದರು.
ಬೆಂಗಳೂರಿನಲ್ಲಿ ಸಿನಿಮಾದ ಚಟುವಟಿಕೆಗಳು ಚುರುಕುಗೊಂಡ ಸಮಯದಲ್ಲಿ ಉತ್ಸಾಹಿತರಾದ ಗುಬ್ಬಿ ವೀರಣ್ಣನವರು ದೇವುಡು ನರಸಿಂಹ ಶಾಸ್ತ್ರಿ ಮತ್ತು ಓರಿಯೆಂಟಲ್ ಬ್ಯಾಂಕ್ ನ ಶ್ರೀನಿವಾಸ ಜೊತೆ ಸೇರಿ ಕರ್ನಾಟಕ ಫಿಲಂ ಕಾರ್ಪೋರೇಷನ್ ಎಂಬ ಕೂಡು ಬಂಡವಾಳ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ಬಳಿಯಿದ್ದ ರೂ ೨,೫೦೦ ಜೊತೆಯಲ್ಲಿ ತಮ್ಮ ಪ್ರಭಾವವನ್ನು ಬಳಸಿ ಇತರರಿಂದ ರೂ ೪೦,೦೦೦ ಹಣವನ್ನು ಸಂಗ್ರಹಿಸಿ ಮುಂಬಯಿ ಮೊದಲಾದ ಅನೇಕ ಸ್ಥಳಗಳಲ್ಲಿ ಸಂಚರಿಸಿ ಅಗತ್ಯವಿದ್ದ ಹಳೆಯ ಯಂತ್ರಗಳನ್ನು ಖರೀದಿಸಿ ಮಲ್ಲೇಶ್ವರಂನಲ್ಲಿ ಒಂದು ಸ್ಟುಡಿಯೋವನ್ನು ನಿರ್ಮಿಸಿದ್ದರು. ೧೯೩೦ ರಿಂದ ೩೨ ರ ಎರಡು ವರ್ಷಗಳ ಅವಧಿಯಲ್ಲಿ ದೇವುಡು ಅವರ ಕಳ್ಳರ ಕೂಟ ಕಥೆಯಾಧಾರಿತ ಹೀಸ್ ಲವ್ ಅಫೇರ್, ಸಾಂಗ್ ಆಫ್ ಲೈಫ್ ಮತ್ತು ಹರಿಮಾಯಾ ಎಂಬ ಮೂರು ಮೂಕಿ ಚಿತ್ರಗಳನ್ನು ನಿರ್ಮಿಸಿದ್ದರು. ಮುಖ್ಯವಾಗಿ ಇವರು ಕಂಪನಿಯ ಜೊತೆಯಲ್ಲಿ ಪ್ರವಾಸ ಮಾಡುತ್ತಿದ್ದರಿಂದ ಮತ್ತು ಸಮಯದ ಕೊರತೆಯಿಂದ ಸ್ಟುಡಿಯೋ ಆಡಳಿತದ ನಿರ್ವಹಣೆಯನ್ನು ತಮ್ಮ ಸ್ನೇಹಿತರಿಗೆ ವಹಿಸಿದ್ದರು.
ಆದರೆ ವಿಧಿಯಾಟ ಕಾಲವು ಒಂದೇ ರೀತಿಯಾಗಿರುವುದಿಲ್ಲ, ಬದಲಾಗುತ್ತಲೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಉತ್ತಮವಾಗಿ ನಡೆಯುತ್ತಿದ್ದ ಇವರ ಸ್ಟುಡಿಯೋ ದಕ್ಷ ಆಡಳಿತದ ಕೊರತೆಯಿಂದ ತೀವ್ರ ನಷ್ಟಕ್ಕೊಳಗಾಗಿ ಮುಚ್ಚಲ್ಪಟ್ಟಿತು. ಆದ ಈ ಆಘಾತದಿಂದ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ತಮ್ಮ ಮೆಡಲುಗಳನ್ನು, ಕುಟುಂಬದ ಸದಸ್ಯರ ಒಡವೆಗಳನ್ನು ಮಾರಿ ಸಾಲವನ್ನು ತೀರಿಸಿದ ನಂತರವೂ ಕೂಡ ಒಂದು ಲಕ್ಷ ರೂಪಾಯಿ ಸಾಲದ ಹೊರೆಯು ಇತ್ತೆಂದು ತಮ್ಮ ಆತ್ಮ ಕಥೆಯಲ್ಲಿಯೂ ಹೇಳಿಕೊಂಡಿದ್ದರು. ಚಿತ್ರ ತಯಾರಿಕೆ ವೀರಣ್ಣನವರ ಪಾಲಿಗೆ ಕೆಟ್ಟ ಕನಸಾಗಿದ್ದರು ಛಲ ಬಿಡದೆ ನಾಟಕದ ಜೊತೆಗೆ ಚಿತ್ರರಂಗದಲ್ಲಿ ಕೂಡ ಉತ್ತಮ ಕೆಲಸವನ್ನು ನಿರ್ವಹಿಸಿ ಆರ್ಥಿಕತೆಯಲ್ಲಿ ಸಧೃಡರಾದರಲ್ಲದೆ ಕೀರ್ತಿಯನ್ನು ಗಳಿಸಿದ್ದರು.
( ಮುಂದುವರೆಯುವುದು )