ಕನ್ನಡ ಚಿತ್ರರಂಗ ಕಂಡ ಅಪ್ರತಿಮ ರಂಗಭೂಮಿ ಕಲಾವಿದ, ಗಾಯಕ, ನಟ ಹೊನ್ನಪ್ಪ ಭಾಗವತರು

ಮುಂದುವರಿದ ಭಾಗ

ಅಂಬಿಕಾ ಪತಿ ಚಿತ್ರದ ಚಿತ್ರೀಕರಣದ ನಂತರ ಬೆಂಗಳೂರಿಗೆ ಹಿಂತಿರುಗಿದ ಇವರು ಬೆಂಗಳೂರಿನಲ್ಲಿ ಎಂಪೈರ್ ಸ್ಟುಡಿಯೋದ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತ ಕಛೇರಿಯನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಟ್ಟಿದ್ದ ಗುಬ್ಬಿ ವೀರಣ್ಣನವರು ಇವರ ಗಾಯನ, ಆಕರ್ಷಕ, ಗಾಂಭೀರ್ಯ ನಿಲುವಿಗೆ ಆಕರ್ಷಿತರಾಗಿ ಹೇಗಾದರೂ ಮಾಡಿ ಇವರಿಂದ ತಮ್ಮ ನಾಟಕಗಳಲ್ಲಿ ಪಾತ್ರಗಳನ್ನು ಮಾಡಿಸಬೇಕೆಂದು ಬಹಳ ಪ್ರಯತ್ನ ಪಟ್ಟರು. ಇವರು ತಮ್ಮ ಸಂಗೀತ ಗುರುಗಳಾದ ಅರುಣಾಚಲಪ್ಪನವರ ಆಜ್ಞೆ ಅನುಸಾರ ಗುಬ್ಬಿ ಕಂಪನಿಯನ್ನು ಸೇರಿ ಅನೇಕ ನಾಟಕಗಳಲ್ಲಿ ನಟಿಸಿ ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದರು. ಇದೇ ಸಮಯದಲ್ಲಿ ಇವರ ಜನಪ್ರಿಯತೆಯನ್ನು ಸಹಿಸದೇ ಹಲವಾರು ನಟರು ಕಂಪನಿಯನ್ನು ತೊರೆದು ಹೋಗಿದ್ದರು.

   ತಮಿಳು ನಾಡು ರಾಜ್ಯದ ತಿರುಪೂರು, ಸೇಲಂ ಸೇರಿ ಅನೇಕ ಸ್ಥಳಗಳಲ್ಲಿ ಇವರ ನಾಟಕಗಳು ಪ್ರದರ್ಶನಗೊಂಡು ಜನಪ್ರಿಯತೆಯನ್ನು ಪಡೆದವಲ್ಲದೇ ಬಂಗಾರದ ಪದಕಗಳು ದೊರೆತಿದ್ದವು. ಅಲ್ಲದೇ ಸಂಗೀತ ಕಛೇರಿಗಳಲ್ಲಿ ಕೂಡ ಸಂಗೀತಕ್ಕೆ ಪದಕಗಳು ದೊರೆತಿದ್ದವು. ಅಷ್ಟರಲ್ಲಿ ಪುನಃ ಮದ್ರಾಸಿನಿಂದ ಚಿತ್ರದಲ್ಲಿ ನಟಿಸಲು ಆಹ್ವಾನವು ಬಂದಿತು. ಆದರೆ ಕಂಪನಿಯ ಒಪ್ಪಂದಂದಂತೆ ಇನ್ನೂ ನಾಲ್ಕಾರು ತಿಂಗಳು ಇರಬೇಕಾಗಿದ್ದರೂ ಬಹಳ ಪ್ರಯಾಸದಿಂದ ಹೊರ ಬಂದು ಪುನಃ ಮದ್ರಾಸಿಗೆ ಪ್ರಯಾಣವನ್ನು ಬೆಳೆಸಿದರು. ಕೃಷ್ಣ ಕುಮಾರ್ ಎಂಬ ತಮಿಳು ಚಿತ್ರದ ಚಿತ್ರೀಕರಣ ಮುಗಿದ ನಂತರ ಗುಬ್ಬಿ ವೀರಣ್ಣ ಕಂಪನಿ ಮತ್ತು ಬಾಲಾಜಿ ಫಿಲಂಸ್ ಕಂಪನಿ ಜಂಟಿಯಾಗಿ ನಿರ್ಮಿಸುತ್ತಿದ್ದ ಸುಭದ್ರ ಎಂಬ ಚಿತ್ರದಲ್ಲಿ ಅರ್ಜುನನ ಪಾತ್ರವನ್ನು ನಿರ್ವಹಿಸಲು ಆಹ್ವಾನವನ್ನು ನೀಡಿದ್ದವು. ವೀರಣ್ಣನವರ ಮತ್ತು ಕನ್ನಡದ ಮೇಲಿನ ಅಭಿಮಾನದಿಂದ ಪಾತ್ರವನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದರಿಂದ ಪಿ.ಪುಲ್ಲಯ್ಯನವರ ನಿರ್ದೇಶನದಲ್ಲಿ ಪೂನಾದಲ್ಲಿ ಚಿತ್ರೀಕರಣವನ್ನು ಮಾಡಲಾಯಿತು. ಈ ಚಿತ್ರವು ತೆರೆ ಕಂಡ ನಂತರ ಕನ್ನಡ ನಾಡಿನಲ್ಲಿ ಅಪಾರ ಯಶಸ್ಸನ್ನು ಪಡೆಯಿತು.

       ವೀರಣ್ಣನವರ ನಾಟಕದ ಕ್ಯಾಂಪ್ ತಮಿಳು ನಾಡಿನಿಂದ ಕರ್ನಾಟಕದ ಕಡೆ ತನ್ನ ಪ್ರಯಾಣವನ್ನು ಬೆಳೆಸಿತು. ಕೆ.ಜಿ.ಎಫ್, ದಾವಣಗೇರೆ,ಅರಸಿಕೇರೆ ಮತ್ತು ತುಮಕೂರುಗಳಲ್ಲಿ ಇವರ ನಾಟಕಗಳು ಸೊಗಸಾದ ಅಭಿನಯ, ಮನಮುಟ್ಟುವಂತ ಹಾಡುಗಳಿಂದ ಪ್ರಸಿದ್ಧಿಯನ್ನು ಪಡೆದವಲ್ಲದೇ ವೀರಣ್ಣನವರ ನಾಟಕ ಕಂಪನಿ ಕೂಡ ಉತ್ತಮ ಹೆಸರನ್ನು ಪಡೆಯಿತು.

      ತಮಿಳು ನಾಡಿನ ಚಿತ್ರಗಳಲ್ಲಿ ನಾಯಕ ನಟರಾಗಿ ಪ್ರಸಿದ್ಧಿಯನ್ನು ಪಡೆದಿದ್ದ ತಮಿಳು ನಟ ತ್ಯಾಗರಾಜ್ ಭಾಗವತರ್ ನಿರ್ವಹಿಸಬೇಕಾಗಿದ್ದ ಚಿತ್ರಗಳೆಲ್ಲವೂ ಅನಿರೀಕ್ಷಿತವಾಗಿ ಇವರ ಪಾಲಾದವು. ರಾಜರಾಜೇಶ್ವರಿ, ಭರ್ಮಾರಾಣಿ, ಪ್ರಭಾವತಿ ಮತ್ತು ಅರುಂಧತಿ ಚಿತ್ರಗಳ ಯಶಸ್ಸು ಇವರನ್ನು ತಮಿಳು ಚಿತ್ರರಂಗದ ಏಕೈಕ ನಟರಾಗಿ ಗುರ್ತಿಸಲು ಕಾರಣವಾಯಿತು. ಅದರಲ್ಲೂ ವಾಲ್ಮೀಕಿ, ಶ್ರೀ ಮುರುಗನ್ ಮತ್ತು ಕುಂಡಲಕೇಶಿ ಚಿತ್ರಗಳ ಯಶಸ್ಸು ಇವರ ಜೀವನವು ಹೊಸ ತಿರುವನ್ನು ಪಡೆಯಲು ಕಾರಣವಾಯಿತಲ್ಲದೇ ತಮಿಳು ಚಿತ್ರರಂಗದ ಅನಭಿಷಕ್ತ ದೊರೆ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು.

  ತಮಿಳು ಚಿತ್ರರಂಗದಲ್ಲಿ ಅನಭಿಷಕ್ತ ದೊರೆಯಾಗಿ ವಿಜ್ರಂಭಿಸಿದರೂ ತಮ್ಮ ಮಾತೃ ಭಾಷೆ ಕನ್ನಡವನ್ನು ಮರೆಯಲಿಲ್ಲ. ಕನ್ನಡದಲ್ಲಿಯೂ ಕೂಡ ಒಂದು ಚಿತ್ರವನ್ನು ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ ಕನ್ನಡದ ಕಲಾವಿದರಾದ ಲಕ್ಷ್ಮಿ ಬಾಯಿ, ಪಂಡರಿಬಾಯಿ ಮತ್ತು ಬೇಲೂರು ರಾಘವೇಂದ್ರ ರಾವ್ ಸೇರಿ ಅನೇಕ ಕಲಾವಿದರ ಸಹಯೋಗದೊಂದಿಗೆ ಗೋರಾ ಕುಂಬಾರ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಈ ಚಿತ್ರವನ್ನು ನಿರ್ಮಿಸಲು ಬಹಳ ಕಷ್ಟಪಡಬೇಕಾಯಿತು. ತೆರೆ ಕಂಡ ನಂತರ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ಕಂಡಿತಲ್ಲದೇ ಗೆಲುವಿನ ನಗೆಯನ್ನು ಬೀರಿತು. ನಂತರ ಮದ್ರಾಸಿನಲ್ಲಿ ಕರಾರು ಮಾಡಿಕೊಂಡಿದ್ದ ಚಿತ್ರಗಳನ್ನು ಮುಗಿಸಿ ಪುನಃ ಬೆಂಗಳೂರಿಗೆ ಹಿಂತಿರುಗಿದ ಇವರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕ ಕಾಲದಲ್ಲಿ ನಿರ್ಮಾಣಗೊಂಡು ತೆರೆಕಂಡ ಗುಣ ಸಾಗರಿ ಚಿತ್ರದಲ್ಲಿ ಕೂಡ ನಾಯಕರಾಗಿ ನಟಿಸಿದ್ದರು. ನಂತರ ತಮ್ಮ ಆತ್ಮೀಯ ಸಾಹಿತಿ ಮಿತ್ರರಾದ ಕು.ರಾ.ಸಿ.ರವರೊಂದಿಗೆ ಚರ್ಚಿಸಿ ಮಹಾಕವಿ ಕಾಳಿದಾಸನ ಕಥೆಯನ್ನು ಆರಿಸಿಕೊಂಡು ಚಿತ್ರವನ್ನು ಮಾಡಲು ನಿರ್ಧರಿಸಿದರಲ್ಲದೇ ಹವ್ಯಾಸಿ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದ ಸರೋಜಾ ಎಂಬ ಯುವತಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದರು. ಈ ಚಿತ್ರವನ್ನು ಅದ್ದೂರಿಯಾಗಿ ತಯಾರಿಸಬೇಕೆಂಬ ಉದ್ದೇಶದಿಂದ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ ನಾಗರೆಡ್ಡಿ ಸಹಕಾರದಿಂದ ಬಂದ ಕಷ್ಟವನ್ನು ಎದುರಿಸಿ ಕು.ರಾ.ಸಿ. ರವರ ನಿರ್ದೇಶನದಲ್ಲಿ ಈ ಚಿತ್ರವನ್ನು ತಯಾರಿಸಿದ್ದರು. ತೆರೆ ಕಂಡ ನಂತರ ಈ ಚಿತ್ರಕ್ಕೆ ಕನ್ನಡಿಗರಿಂದ ಉತ್ತಮ ಸ್ಪಂದನೆ ದೊರೆಯಿತಲ್ಲದೇ ಅಭೂತಪೂರ್ವ ಯಶಸ್ಸನ್ನು ಪಡೆಯಿತು. ಈ ಚಿತ್ರದ ನಾಯಕಿ ಅಂದಿನ ಸರೋಜಾ ನಂತರದ ವರ್ಷಗಳಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗದಲ್ಲಿ ಪ್ರಖ್ಯಾತ ನಾಯಕಿಯಾಗಿ, ನಟಿಯಾಗಿ ಬಿ.ಸರೋಜಾ ದೇವಿ ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆದರು. ನಂತರವೂ ಕೂಡ ಹೊನ್ನಪ್ಪ ಭಾಗವತರು ಹಲವು ಚಿತ್ರಗಳಲ್ಲಿ ನಟಿಸಿದ್ದರಲ್ಲದೇ ನಿರ್ಮಾಣವನ್ನು ಮಾಡಿದ್ದರು.

Honnappa_Bhagavathar

1960 ರಲ್ಲಿ ಇವರು ನಾದ ಬ್ರಹ್ಮ ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ  ಅನೇಕ ಶಿಷ್ಯರಿಗೆ ಸಂಗೀತದ ಶಿಕ್ಷಣವನ್ನು ನೀಡಿದ್ದರು. 1976 ರಲ್ಲಿ ಕರ್ನಾಟಕ ಗಾನ ಕಲಾ ಪರಿಷತ್ತು ತಮ್ಮ 6 ನೇ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಚಿನ್ನದ ಪದಕದೊಂದಿಗೆ ಗಾನ ಕಲಾ ಭೂಷಣ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಅಲ್ಲದೇ ಕರ್ನಾಟಕ ರಾಜ್ಯ ಚಲನಚಿತ್ರ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸವನ್ನು ನಿರ್ವಹಿಸಿದ್ದರು. ಇವರು ನಟಿಸಿದ ಮಹಾಕವಿ ಕಾಳಿದಾಸ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರದ ನಟನೆಗಾಗಿ ಕೇಂದ್ರ ಸರ್ಕಾರವು ಕ್ರಮವಾಗಿ 1955 ಮತ್ತು 1959 ರಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದೆ.  1956 ರಲ್ಲಿ ನಿರ್ಮಾಣಗೊಂಡ ಕನ್ನಡ ಚಿತ್ರಗಳಲ್ಲಿ ಇವರು ನಟಿಸಿರುವ ಚಿತ್ರವನ್ನು ಪರಿಗಣಿಸಿ ಅತ್ಯುತ್ತಮ ನಟ ಎಂದು ಮದ್ರಾಸ್ ನ ಫ್ಯಾನ್ಸ್ ಅಸೋಸಿಯೇಷನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು  1978 ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರು ಇವರ ಸಂಗೀತವನ್ನು ಮೆಚ್ಚಿ ಗಾನ ಕಲಾ ಗಂಧರ್ವ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. 1986 ರಲ್ಲಿ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.   1991 ರಲ್ಲಿ ಕೇಂದ್ರ ಸಂಗೀತ ಅಕಾಡೆಮಿಯು ಇವರ ಸಂಗೀತ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದೆ. 

       25 ತಮಿಳು ಚಿತ್ರಗಳಲ್ಲಿ ಮತ್ತು 8 ಕನ್ನಡ ಚಿತ್ರಗಳಲ್ಲಿ ಗಾಯಕರಾಗಿ ಮತ್ತು ನಟರಾಗಿ ನಟಿಸಿದ್ದು ನಾಟಕರಂಗದಲ್ಲಿ ಮತ್ತು ಚಿತ್ರರಂಗದಲ್ಲಿ ಸಂತೋಷಕ್ಕಿಂತಲೂ ದುಃಖವನ್ನು ಹೆಚ್ಚು ಅನುಭವಿಸಿದ್ದು ಬಂದ ಕಷ್ಟಗಳನ್ನು ಎದುರಿಸಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಬೆಳೆಸಿ ಕಲಾ ಪ್ರಪಂಚದಲ್ಲಿ ಚಿರಂಜೀವಿಯಾಗಿ ಕಲಾಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.2/10/1992 ಕಲಾ ಪ್ರಪಂಚಕ್ಕೆ ಕರಾಳ ದಿನ. ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಇವರು 2/10/1992 ರಂದು ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗುವುದರೊಂದಿಗೆ ಕಲಾಪ್ರಪಂಚದ ಒಂದು ದಿವ್ಯವಾದ ಜ್ಯೋತಿಯು ಅಸ್ತಂಗತವಾಯಿತು.ಮನುಷ್ಯನಿಗೆ ಸಾವು ಇದೆ, ಆದರೆ ಅವನ ಸಾಧನೆಗಳಿಗೆ ಸಾವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇವರ ಸಾಧನೆಗಳು ಸಂಗೀತ ಕ್ಷೇತ್ರದಲ್ಲಿ ಮಧುರ ಗಾಯನ ಮತ್ತು ಚಲನಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.  

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply