( ಮುಂದುವರೆದ ಭಾಗ )
ಸೃಷ್ಟಿಸಿದ ಇತಿಹಾಸವನ್ನು ವರ್ಣಿಸಲು ಸಾಧ್ಯವೇ?
ಈ ಚಿತ್ರವನ್ನು ಕೂಡ ಹಾಲಿವುಡ್ ನ ಯಾವ ಇಂಗ್ಲೀಷ್ ಭಾಷೆಯ ಚಿತ್ರಕ್ಕೂ ಕಡಿಮೆಯಿಲ್ಲ ಎಂಬಂತೆ ಚಿತ್ರೀಕರಿಸಲಾಗಿತ್ತು. ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ ಎಂದರೆ ಇದೇ ಚಿತ್ರವನ್ನು ತೆಲುಗು ಚಿತ್ರರಂಗದ ಹಿರಿಯ ನಟ ಎನ್.ಟಿ.ಆರ್ ನಟನೆಯಲ್ಲಿ ತೆಲುಗು ಚಿತ್ರ ಅಡವಿ ರಾಮುಡು ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ನಿರ್ಮಾಪಕ ಮತ್ತು ನಿರ್ದೇಶಕರಾಗಿಯು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಇವರು ನಟನೆಯಲ್ಲಿ ಪ್ರವೀಣರು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇದಕ್ಕೆ ಇವರ ನಟನೆಯ ಚಿತ್ರಗಳೇ ಸಾಕ್ಷಿ.
ಸಾಹಸ ಸಿಂಹ ಡಾ.ವಿಷ್ಣು ವರ್ಧನ್ ನಟನೆಯ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ದಯೆ, ಕರುಣೆಯ ಅರ್ಥವೇ ತಿಳಿಯದ ಜಿಪುಣ ಭೂತಯ್ಯನ ಪಾತ್ರ, ನಟ ಲೋಕೇಶ್ ನಟಿಸಿದ ಭೂಲೋಕದಲ್ಲಿ ಯಮರಾಜ ಚಿತ್ರದಲ್ಲಿ ಯಮನ ಪಾತ್ರ, ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹಳ್ಳಿ ಕೃಷ್ಣ ಡೆಲ್ಲಿ ರಾಧಾ ಚಿತ್ರದಲ್ಲಿ ಹಳ್ಳಿಯ ಮುಗ್ಧ ತಂದೆ ಪಾತ್ರ, ಅನಂತ ನಾಗ್ ದ್ವೀಪಾತ್ರದಲ್ಲಿ ನಟಿಸಿದ ನಾರದ ವಿಜಯ ಚಿತ್ರದಲ್ಲಿ ಗುರುಪಾದ ಎಂಬ ಹಾಸ್ಯ ಏಜೆಂಟ್ ಪಾತ್ರ, ಡಾ.ರಾಜ್ ಕುಮಾರ್ ನಟನೆಯ ಎವರ್ ಗ್ರೀನ್ ಬ್ಲಾಕ್ ಬಾಸ್ಟರ್ ಬಂಗಾರದ ಮನುಷ್ಯ ಮತ್ತು ಡಾ.ವಿಷ್ಣುವರ್ಧನ್ ನಟನೆಯ ಕಿಟ್ಟು ಪುಟ್ಟು ಚಿತ್ರದಲ್ಲಿ ಕೂಡ ಖಳ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಈ ರೀತಿಯಾಗಿ ನಟಿಸಿದ ಪ್ರತಿಯೊಂದು ಚಿತ್ರದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು.

ತಮ್ಮ ೪೦ ವರ್ಷಗಳ ಚಿತ್ರರಂಗದ ಜೀವನದಲ್ಲಿ ರತ್ನ ಮಂಜರಿ,ಸತ್ಯ ಹರಿಶ್ಚಂದ್ರ, ಕಿಟ್ಟು ಪುಟ್ಟು, ಕಾಡಿನ ರಹಸ್ಯ, ಗಂಧದ ಗುಡಿ, ಕಾಡಿನ ರಾಜ, ರಾಜಾ ನನ್ನ ರಾಜಾ, ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಗಿಡ್ಡುದಾದಾ, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಕತ್ತೆಗಳು ಸಾರ್ ಕತ್ತೆಗಳು, ಹಳ್ಳಿ ಕೃಷ್ಣ ಡೆಲ್ಲಿ ರಾಧಾ, ಮೃಗಾಲಯ ಸೇರಿ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರಲ್ಲದೆ ನಟ ವಿಜಯ ರಾಘವೇಂದ್ರ, ಮತ್ತು ರೆಬೆಲ್ ಸ್ಟಾರ್ ಡಾ.ಅಂಬರೀಷ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕಲ್ಲರಳಿ ಹೂವಾಗಿ ಚಿತ್ರವು ಇವರ ವೃತ್ತಿ ಬದುಕಿನ ಕೊನೆಯ ಚಿತ್ರವಾಯಿತು. ತಮ್ಮ ಚಿತ್ರ ರಂಗದ ಜೀವನದ ಹೊರತಾಗಿ ಖಾಸಗಿ ಜೀವನದಲ್ಲಿ ತುಂಬಾ ಸರಳ ಜೀವಿಯಾಗಿದ್ದರು.
ನಂಬಿದ ಮನುಷ್ಯನರಿಂದಲೇ ವಂಚನೆಗೊಳಗಾಗಿದ್ದರೂ ಕನಸಿನಲ್ಲಿ ಕೂಡ ಯಾರಿಗೂ ಕೇಡನ್ನು ಬಯಸಿಲಿಲ್ಲ. ಎಲ್ಲವನ್ನೂ ಮೌನವಾಗಿ ಎದುರಿಸುತ್ತಿದ್ದ ಇವರು ತಮ್ಮ ಜೀವಿತಾವಧಿಯವರೆಗೂ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದರು. ಇಂತಹ ಒಂದು ಮಹಾನ್ ಪ್ರತಿಭೆಯನ್ನು ಪಿತ್ತ ಕೋಶದ ಕ್ಯಾನ್ಸರ್ ಬಹಳ ಕಾಲದಿಂದ ಬಾಧಿಸುತ್ತಿತ್ತು. ಇದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಒಂದು ದಿನ ತಮ್ಮ ಮನೆಯಲ್ಲಿ ಜಾರಿ ಬಿದ್ದ ಪರಿಣಾಮ ಸೊಂಟದ ಮೂಳೆಗೆ ಪೆಟ್ಟಾಗಿ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಸ್ವಲ್ಪ ಗುಣ ಹೊಂದಿ ಮನೆಗೆ ಹಿಂತುರಿಗಿದ್ದರು. ಆದರೆ ಪಿತ್ತ ಕೋಶದ ಕ್ಯಾನ್ಸರ್ ಗೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ ಮಂಜುನಾಥ ನಿಲಯದಲ್ಲಿ ಜುಲೈ ೧೭, ೨೦೦೮ ರಂದು ತಮ್ಮ ೭೩ ನೇ ವಯಸ್ಸಿನಲ್ಲಿ ನಿಧನರಾಗುವುದರೊಂದಿಗೆ ಕನ್ನಡ ಚಿತ್ರರಂಗವು ಅಜಾತಬಾಹು ಕಲಾವಿದನನ್ನು ಕಳೆದುಕೊಂಡಿತು.
ಇವರ ಅಂತಿಮ ಸಂಸ್ಕಾರವನ್ನು ವಿದ್ಯಾರಣ್ಯ ಪುರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.