ಉಪೇಂದ್ರ ಕುಮಾರ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ. ಸಾವಿರಕ್ಕೂ ಅಧಿಕ ಕನ್ನಡ ಗೀತೆಗಳನ್ನು ರೂಪಿಸಿರುವ ಇವರ ಕುರಿತು ವರ್ಣಿಸಲು ಪದಗಳು ಕೂಡ ಸಾಲುವುದಿಲ್ಲ.
೧೯೪೧ ರಂದು ಒರಿಸ್ಸಾದ ಅನಂಗ್ ಪುರದಲ್ಲಿ ಲಕ್ಷ್ಮಣ್ ಸ್ವಾಮಿ ಮತ್ತು ನಾನ್ ಚಾರಿಯಮ್ಮ ದಂಪತಿಯ ಮಗನಾಗಿ ಜನಿಸಿದರು. ಇವರ ಮಾತೃಭಾಷೆ ತೆಲುಗು. ಪುರೋಹಿತ ಮತ್ತು ಜ್ಯೋತಿಷ್ಯ ವೃತ್ತಿಯಲ್ಲಿ ಇವರ ಕುಟುಂಬವು ಉತ್ತಮ ಹೆಸರನ್ನು ಗಳಿಸಿತ್ತು. ಏಳನೇ ತರಗತಿಯವರೆಗೆ ಮಾತ್ರ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದ ಇವರು ತಮ್ಮ ಸೋದರ ಮಾವ ಅಪ್ಪಾರಾವ್ ರವರ ಸಹಕಾರದಿಂದ ಸಂಗೀತವನ್ನು ಅಭ್ಯಾಸ ಮಾಡಿ ನಂತರ ಪಿಟೀಲು, ಹಿಂದುಸ್ತಾನಿ ಮತ್ತು ಪಾಶ್ಚಾತ್ಯ ಸಂಗೀತವನ್ನು ಕಲಿತರು. ಸಂಗೀತ ಮಾರ್ಗದ ಮೂಲಕ ಸಾಗಿದ ಇವರು ಉತ್ಕಲ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಶಿಕ್ಷಣವನ್ನು ಪಡೆದುಕೊಂಡು ಪ್ರಥಮ ಸ್ಥಾನದೊಂದಿಗೆ ಬಿ.ಎ. ಪದವಿಯನ್ನು ಪಡೆದರು.
೧೯೬೬ ರಲ್ಲಿ ಅವಕಾಶಗಳ ನಿರೀಕ್ಷೆಯೊಂದಿಗೆ ಮದ್ರಾಸ್ ಗೆ ಬಂದ ಇವರಿಗೆ ಆರಂಭದಲ್ಲಿ ಅಷ್ಟಾಗಿ ಅವಕಾಶಗಳು ಲಭಿಸಲಿಲ್ಲ. ಆದರೆ ಸತತ ಪ್ರಯತ್ನ ಫಲ ವಾದ್ಯ ಗೋಷ್ಠಿಯಲ್ಲಿ ಅವಕಾಶ ಸಿಕ್ಕಿತು. ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಹೇಳುತ್ತ ಬರುವ ಆದಾಯದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹೀಗೆಯೇ ಶಿಷ್ಯೆಯಾಗಿ ಬಂದ ಗೀತಾ ನಂತರ ಇವರ ಪತ್ನಿಯಾದರು. ಅಲ್ಲದೇ ಇವರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
೧೯೬೬ ರಲ್ಲಿ ತೆರೆ ಕಂಡ ವಾಯ್.ಆರ್.ಸ್ವಾಮಿ ನಿರ್ದೇಶನದ, ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಡಾ.ರಾಜಕುಮಾರ್ ಮತ್ತು ಹಾಸ್ಯ ಚಕ್ರವರ್ತಿ ನರಸಿಂಹರಾಜು ನಟಿಸಿದ ಕಠಾರಿವೀರ ಎಂಬ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡುವ ಮೂಲಕ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ನಂತರ ಹಿಂತಿರುಗಿ ನೋಡಲಿಲ್ಲ. ದೊರೆತ ಮೊದಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಇವರು ತಮ್ಮ ಮೊದಲ ಚಿತ್ರದಲ್ಲಿ ಐತಿಹಾಸಿಕ ಗೆಲುವನ್ನು ಕಂಡಿದ್ದರು.
ಈ ಚಿತ್ರದಲ್ಲಿನ ಗೀತೆಗಳು ನಿರೀಕ್ಷೆಗೂ ಮೀರಿ ಜನಪ್ರಿಯತೆಯನ್ನು ಪಡೆದವಲ್ಲದೆ ಚಿತ್ರರಂಗದಲ್ಲಿ ಇವರ ಸ್ಥಾನವು ಭದ್ರವಾಯಿತು. ನಂತರ ತೆರೆ ಕಂಡ ಹಸಿರು ತೋರಣ ಚಿತ್ರದಲ್ಲಿನ ಒಂದು ದಿನ ಎಲ್ಲಿಂದಲೋ ಹಾಡಿನಲ್ಲಿ ಇವರು ಗಮಕ ಬಳಿಸಿದ ಕ್ರಮವು ನೂತನವಾಗಿತ್ತು. ಅದೇ ರೀತಿ ಪರೋಪಕಾರಿ ಚಿತ್ರದಲ್ಲಿನ ಗುಟ್ಟೊಂದು ಹೇಳುವೆ, ನಟ ಸಾರ್ವಭೌಮ ಡಾ.ರಾಜಕುಮಾರ್ ನಟಿಸಿದ ಸಿಪಾಯಿ ರಾಮು ಚಿತ್ರದಲ್ಲಿ ವಿಶಿಷ್ಟ ಗೀತೆಗಳನ್ನು ಸಂಯೋಜಿಸಿದ್ದರು. ವಾಹರೇ ಮೇರೆ ಮುರುಗ ಚಿತ್ರದಲ್ಲಿ ಸಂಗೀತದ ಹೊಸ ಅಲೆಯನ್ನು ಸೃಷ್ಟಿಸಿದ್ದರಲ್ಲದೆ ತ್ರಿವೇಣಿ ಚಿತ್ರದಲ್ಲಿ ನೀನಾ ಭಗವಂತ, ಮತ್ತು ಕವಿಯ ಮಧುರ ಕಲ್ಪನೆ ಕಡಿಮೆ ವಾದ್ಯಗಳಲ್ಲಿ ಶ್ರೀಮಂತಿಕೆಯನ್ನು ತುಂಬಿಕೊಂಡ ಗೀತೆಗಳನ್ನು ಸಂಯೋಜಿಸಿದ್ದರು.
ಇವರ ಸಂಗೀತ ಸಂಯೋಜನೆಯ ಉತ್ತಮ ಫಲಗಳನ್ನು ನಟ ಸಾರ್ವಭೌಮ ಡಾ.ರಾಜಕುಮಾರ್ ನಟಿಸಿದ ಪ್ರೇಮದ ಕಾಣಿಕೆ ಚಿತ್ರವು ಪಡೆದಿದ್ದು ಈ ಚಿತ್ರದಲ್ಲಿ ಬರುವ ಕಾಪಿರಾಗದ ಇದು ಯಾರು ಬರೆದ ಕಥೆಯೋ ಒಂದು ವಿಶಿಷ್ಟ ಗೀತೆ. ಇದೇ ರೀತಿ ಶಂಕರ್ ಗುರು ಚಿತ್ರದಲ್ಲಿ ಕೂಡ ಕೆಲವು ವಿಶಿಷ್ಟ ರಚನೆಗಳಿವೆ. ಧರ್ಮಸೆರೆ ಚಿತ್ರದಲ್ಲಿ ಮೂಕ ಹಕ್ಕಿಯು ಹಾಡುತಿದೆ ಎಂಬ ಹಾಡನ್ನು ವಿಭಿನ್ನವಾಗಿ ಬಳಿಸಿದ್ದರು. ಅದರಲ್ಲೂ ಧ್ರುವತಾರೆ ಚಿತ್ರದ ಆರತಿಯೇ ಧರೆಗಿಳಿದಂತೆ ಒಂದು ಪ್ರಯೋಗ ಶೀಲ ಗೀತೆಯಾಗಿದ್ದು ಇದರಲ್ಲಿ ಮೂರು ಸಮುಚ್ಚಯಗಳಿವೆ. ಕಲ್ಯಾಣಿ, ಮತ್ತು ಷಣ್ಮುಗ ಪ್ರಿಯ ಒಂದೇ ಸ್ವರ ಪ್ರಕಾರದಲ್ಲಿ ಸಾಗುವ ದಾಟಿಯೇ ಸೊಗಸು.
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸಿದ ರಥಸಪ್ತಮಿ ಚಿತ್ರದಲ್ಲಿ ಬರುವ ಶಿಲೆಗಳ ಸಂಗೀತವ ಗೀತೆಯು ಶಾಸ್ತ್ರೀಯತೆಯ ವಿಸ್ತಾರದ ಸೊಬಗಿಗೆ ಸಾಕ್ಷಿ. ಅಲ್ಲದೇ ಜೋಕೆ ನಾನು ಬಳ್ಳಿಯ ಮಿಂಚು ಎಂಬ ಕ್ಯಾಬರೆ ಗೀತೆಗಳ ಟ್ರೆಂಡ್ ನ್ನು ಸೃಷ್ಟಿಸಿದ್ದ ಇವರು ಹಲವು ದಶಕಗಳ ನಂತರ ರಾಘವೇಂದ್ರ ರಾಜ್ ಕುಮಾರ್ ನಟಿಸಿದ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ಒಳಗೆ ಸೇರಿದರೆ ಗುಂಡು ಎಂಬ ಹಾಡಿನ ಮೂಲಕ ಮತ್ತೊಂದು ಟ್ರೆಂಡ್ ನ್ನು ಸೃಷ್ಟಿಸಿದ್ದರು.
ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಇವರ ಸಂಗೀತ ಸೇವೆ ಹೆಚ್ಚು ಕನ್ನಡ ಚಿತ್ರರಂಗಕ್ಕೆ ಸಂದಿದೆ. ತೆಲುಗು, ತಮಿಳು ೩, ಒರಿಯಾ ೧೩, ಮಲೆಯಾಳಂ ೬,
ಬಂಗಾಳಿ ಮತ್ತು ತುಳು ೧ ಮತ್ತು ಕನ್ನಡದಲ್ಲಿ ೧೮೦ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.
ನಂಜುಂಡಿ ಕಲ್ಯಾಣ, ಹೃದಯ ಹಾಡಿತು ಮತ್ತು ಜೀವನ ಚೈತ್ರ ಚಿತ್ರಕ್ಕೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿಯನ್ನು ಪಡೆದ ಇವರಿಗೆ ಪ್ರಮುಖ ಗೌರವ ಸಿಗಲಿಲ್ಲ. ಆದರೆ ಇವರು ಸಂಗೀತ ನೀಡಿದ್ದ ೧೮ ಚಿತ್ರಗಳು ಸತತವಾಗಿ ೨೫ ವಾರಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡಿವೆ ಎಂಬ ಸಂಗತಿಯನ್ನು ಗಮನಿಸಿದರೆ ಚಿತ್ರಪ್ರೇಮಿಗಳು ಇವರ ಸಂಗೀತವನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದು ಅರ್ಥವಾಗುತ್ತದೆ.
ಸಂಗೀತದ ಕುರಿತು ಸಂಶೋಧನೆಯನ್ನು ಮಾಡುವ ಉದ್ದೇಶವನ್ನು ಹೊಂದಿದ್ದರಲ್ಲದೆ ಸಂಗೀತವು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯನ್ನು ಹೇಗೆ ನಿವಾರಿಸುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದ್ದರು. ಇದರ ಕುರಿತು ಇವರ ಪ್ರಯೋಗಗಳು ಪ್ರಾಥಮಿಕ ಹಂತದಲ್ಲಿರುವ ಸಮಯದಲ್ಲಿ ಜನವರಿ ೨೩, ೨೦೦೨ ರಂದು ತಮ್ಮ ೬೧ ನೇ ವಯಸ್ಸಿನಲ್ಲಿ ನಿಧನರಾದರು.