ನಮ್ಮ ಕನ್ನಡ ರಂಗಭೂಮಿಯಲ್ಲಿ ಹಾರ್ಮೋನಿಯಂಗೆ ವಿಶೇಷ ಸ್ಥಾನವಿದ್ದು ಈ ಹಾರ್ಮೋನಿಯಂನ್ನು ಸುಲಭವಾಗಿ ಉಪಯೋಗಿಸುತ್ತಿದ್ದ ವ್ಯಕ್ತಿಯೆಂದರೆ ಅದು ಶೇಷಗಿರಿರಾವ್ ಎಂದರೆ ತಪ್ಪಾಗಲಾರದು. ಮುಖ್ಯವಾಗಿ ಹಾರ್ಮೋನಿಯಂನಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದರಿಂದ ಹಾರ್ಮೋನಿಯಂ ಶೇಷಗಿರಿರಾವ್ ಎಂದೇ ಪ್ರಸಿದ್ಧರಾಗಿದ್ದರು. ಅಲ್ಲದೇ ಪ್ರಥಮ ಬಾರಿಗೆ ರಂಗಭೂಮಿಗೆ ಹಾರ್ಮೋನಿಯಂ ತಂದ ಮತ್ತು ಕನ್ನಡ ಚಲನಚಿತ್ರಗಳಿಗೆ ಪ್ರಥಮ ಬಾರಿಗೆ ಹಿನ್ನೆಲೆ ಸಂಗೀತ ನೀಡಿದ ಕೀರ್ತಿಗೆ ಕೂಡ ಪಾತ್ರರಾಗಿದ್ದರು.
ಅಗಸ್ಟ್ ೫, ೧೮೯೨ ರಂದು ಹಂಪಾಪುರದಲ್ಲಿ ಪಾಪಚ್ಚಿ ಕೃಷ್ಣಾಚಾರ್ಯರು ಮತ್ತು ಕನಕಲಕ್ಷ್ಮಮ್ಮ ಎಂಬ ದಂಪತಿಯ ಮಗನಾಗಿ ಜನಿಸಿದರು. ಇವರು ಕೇವಲ ಎಂಟು ವರ್ಷದ ಬಾಲಕನಾಗಿದ್ದಾಗ ಹಿರಿಯ ರಂಗಕರ್ಮಿ ಎ.ವಿ.ವರದಾಚಾರ್ ಮಾಲಿಕತ್ವದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯನ್ನು ಸೇರಿ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸುವುದರ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದರು. ನಂತರ ಕೂಡ ಲೋಹಿತಾಶ್ವ, ಧ್ರುವ ಮತ್ತು ಪ್ರಹ್ಲಾದ ಸೇರಿ ಅನೇಕ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸಿದ್ದರು.
ಆ ಸಮಯದಲ್ಲಿ ನಾಟಕಗಳಲ್ಲಿ ಬಳಸಲಾಗುತ್ತಿತ್ತು. ಅಲ್ಲಿಯೇ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ದಿನವೂ ಹಾರ್ಮೋನಿಯಂ ವಾದನದ ಧ್ವನಿಯನ್ನು ಕೇಳುತ್ತಿದ್ದರು. ಅದರ ಸೆಳೆತದ ಮಾಯೆಯೋ ಏನೋ ತಿಳಿಯದು, ಇವರಿಗೆ ಹಾರ್ಮೋನಿಯಂ ವಾದನದಲ್ಲಿ ಆಸಕ್ತಿ ಉಂಟಾಯಿತು. ಮತ್ತು ಇವರ ಗುರುಗಳಾದ ವರದಾಚಾರ್ಯರ ಇಚ್ಛೆಯಂತೆ ಆಗಿನ ಕಾಲದಲ್ಲಿ ಮುಂಬಯಿಯಲ್ಲಿ ಹಾರ್ಮೋನಿಯಂ ವಾದಕ ಎಂದು ಪ್ರಸಿದ್ಧಿಯನ್ನು ಪಡೆದಿದ್ದ ಚಮನ್ ಲಾಲ್ ಬಳಿ ಹಾರ್ಮೋನಿಯಂನ್ನು ಅಭ್ಯಾಸವನ್ನು ಮಾಡಿದರು. ನಂತರ ಉಸ್ತಾದ್ ಕರೀಂ ಖಾನ್ ಬಳಿ ಹಿಂದುಸ್ತಾನಿ ಸಂಗೀತವನ್ನು ಮತ್ತು ಮೈಸೂರು ವಾಸುದೇವಾಚಾರ್ಯರ ಬಳಿ ಕರ್ನಾಟಕ ಸಂಗೀತ ಅಭ್ಯಾಸವನ್ನು ಮಾಡಿದ್ದರು.
ಆರಂಭಿಕ ಹಂತದಲ್ಲಿ ಹಾಡುಗಳಿಗೆ ರಾಗಗಳ ಅಳವಡಿಕೆಯನ್ನು ಮಾಡುವುದರ ಮೂಲಕ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ನಂತರ ತಮ್ಮ ಹಾಡುಗಳಿಗೆ ಕರ್ನಾಟಕದ ಸಂಗೀತದ ಜೊತೆಯಲ್ಲಿ ಹಿಂದುಸ್ತಾನಿ ರಾಗಗಳ ಅಳವಡಿಕೆಯನ್ನು ಮಾಡಿ ಯಶಸ್ವಿಯಾಗಿದ್ದರಲ್ಲದೆ ಪ್ರಹ್ಲಾದ, ಧ್ರುವ ಚರಿತ್ರೆ ಮತ್ತು ವಿಷ್ಣು ಲೀಲೆ ಸೇರಿ ಅನೇಕ ನಾಟಕಗಳಿಗೆ ಉತ್ತಮ ಹಾರ್ಮೋನಿಯಂ ವಾದ್ಯ ಸಂಗೀತವನ್ನು ನೀಡಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದರು. ಮತ್ತು ಶ್ರೀ ರಘುರಾಮ್ ವಿಠಲರು ಎಂಬ ಅಂಕಿತದಲ್ಲಿ ಹಲವಾರು ದೇವರ ನಾಮಗಳನ್ನು ರಚಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಎರಡನೇ ವಾಕ್ಚಿತ್ರ ಭಕ್ತಿ ಧ್ರುವ ಚಿತ್ರಕ್ಕೆ ಸಂಗೀತವನ್ನು ನೀಡಿ ಯಶಸ್ಸನ್ನು ಪಡೆದಿದ್ದರು. ನಂತರ ಚಿರಂಜೀವಿ, ಭಕ್ತ ಮಾರ್ಕಂಡೇಯ, ಜೀವನ ನಾಟಕ ಮತ್ತು ವಾಣಿ ಸೇರಿ ಅನೇಕ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದರು.
ಕೆಲವು ವರ್ಷಗಳ ನಂತರ ಇವರ ಹಾರ್ಮೋನಿಯಂ ಮೋಡಿ ರಾಜ್ಯಾದ್ಯಂತ ವ್ಯಾಪಿಸಿತಲ್ಲದೆ ಸದ್ದನ್ನು ಮಾಡಿತ್ತು. ಇದರ ಫಲವಾಗಿ ಕೋಲಂಬಿಯ ಗ್ರಾಮಾಪೋನ್ ಎಂಬ ಕಂಪನಿಯಿಂದ ಇವರ ಸೋಲೋ ಹಾರ್ಮೋನಿಯಂ ವಾದನದ ಹಲವಾರು ಧ್ವನಿ ಮುದ್ರಿಕೆಗಳು ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿ ಜನಪ್ರಿಯತೆಯನ್ನು ಪಡೆದಿದ್ದವು. ತಮ್ಮ ಜೀವಿತಾವಧಿಯಲ್ಲಿ ಇಂತಹ ಹಲವಾರು ವಿಶಿಷ್ಟ ಸಾಧನೆಗಳನ್ನು ಮಾಡಿದ್ದ ಇವರನ್ನು ೧೯೭೭ ರಲ್ಲಿ ಜರುಗಿದ ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವಾಂಸರ ೭ ನೇ ಸಮ್ಮೇಳನದಲ್ಲಿ ಸನ್ಮಾನವನ್ನು ಮಾಡಲಾಗಿತ್ತು. ಇಂತಹ ಹಲವು ಸಾಧನೆಗಳನ್ನು ಮಾಡಿದ್ದ ಈ ಮಹಾನ್ ಸಾಧಕರು ಅಕ್ಟೋಬರ್ ೭, ೧೯೯೦ ನೇ ಇಸ್ವಿಯಲ್ಲಿ ವಯೋಸಹಜ ಅನಾರೋಗ್ಯದಿಂದ ತಮ್ಮ ೯೯ ನೇ ವಯಸ್ಸಿನಲ್ಲಿ ನಿಧನರಾದರು. ಮತ್ತು ಈ ಮಹಾನ್ ಕಲಾ ಚೇತನಕ್ಕೆ ನಮ್ಮ ಚಿತ್ರೋದ್ಯಮ.ಕಾಂ.ವೆಬ್ಸೈಟ್ ವತಿಯಿಂದ ಅನಂತ ವಂದನೆಗಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ.