( ಮುಂದುವರೆದ ಭಾಗ )
ಚಿಕ್ಕೋಡಿಯ ಸಿದ್ಧಲಿಂಗ ಸ್ವಾಮಿಗಳ ನಾಟಕ ಕಂಪನಿ ಮುಚ್ಚಲ್ಪಟ್ಟಾಗ ಅಬ್ಬಿಗೇರಿ ನಾಟಕ ಕಂಪನಿಯಲ್ಲಿ ಕಲಾವಿದನಾಗಿ ಕೆಲಸವನ್ನು ನಿರ್ವಹಿಸಿದ್ದರು. ಜೊತೆಗೆ ಸುಮಧುರ ಕಂಠದ ಸೇರುವಿಕೆಯಿಂದ ಇವರ ನಟನೆ, ಪಾತ್ರದಲ್ಲಿ ಪ್ರಬುದ್ಧತೆ ಕಂಡಿತ್ತು. ಅಲ್ಲಿ ಒಂದು ದಿನ ಕಿತ್ತೂರು ರಾಣಿ ಚೆನ್ನಮ್ಮ ನಾಟಕವನ್ನು ಪ್ರದರ್ಶಿಸುವ ಸಿದ್ಧತೆಯಲ್ಲಿದ್ದರು. ಆದರೆ ಬ್ರಿಟಿಷ್ ಸರ್ಕಾರ ಈ ನಾಟಕವನ್ನು ಪ್ರದರ್ಶಿಸಲು ಅನುಮತಿ ನೀಡದೇ ವಿರೋಧಿಸಿತು ಮತ್ತು ನಾಟಕ ಮಂಡಳಿಯ ಲೈಸೆನ್ಸ್ ರದ್ದು ಮಾಡಿದ್ದರಿಂದ ಕಂಪನಿಯು ಮುಚ್ಚಲ್ಪಟ್ಟಿತ್ತು.
ಸಿದ್ಧಲಿಂಗ ಸ್ವಾಮಿಗಳೇ ನಡೆಸುತ್ತಿದ್ದ ಮತ್ತೊಂದು ಮಾರಿಕಾಂಬಾ ನಾಟಕ ಮಂಡಳಿಯನ್ನು ಸೇರಿದ್ದರು. ಒಂದು ದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವೀರರಾಣಿ ರುದ್ರಮ್ಮ ಎಂಬ ನಾಟಕವನ್ನು ಪ್ರದರ್ಶಿಸಿದ್ದರು. ಈ ನಾಟಕದ ರುದ್ರಮ್ಮ ಎಂಬ ನಾಯಕಿಯ ಪಾತ್ರ ಭರ್ಜರಿ ಪ್ರಶಂಸೆಯನ್ನು ಪಡೆದಿತ್ತು. ಆದರೆ ದುರದೃಷ್ಟಕ್ಕೆ ಅನಿರೀಕ್ಷಿತ ಘಟನೆಯ ಫಲವೋ ತಿಳಿಯದು.ಈ ನಾಟಕದ ನಾಯಕಿ ಕೋಪಗೊಂಡು ನಾಟಕದಲ್ಲಿ ನಟಿಸಲು ಒಪ್ಪಲಿಲ್ಲ.
ಸ್ವಾಮಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಾಟಕವನ್ನು ಪ್ರದರ್ಶಿಸುವ ಒತ್ತಡ ಒಂದು ಕಡೆಯಾದರೆ ಇನ್ನೊಂದು ಕಡೆ ಮುಖ್ಯ ಪಾತ್ರ ನಿರ್ವಹಣೆಗೆ ನಾಯಕಿಯೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಸ್ವಾಮಿಗಳು ಬಾಳಪ್ಪನವರಿಗೆ ಈ ಪಾತ್ರವನ್ನು ನಿರ್ವಹಿಸಲು ಹೇಳಿದಾಗ ಬಾಳಪ್ಪನವರು ರಾಣಿ ರುದ್ರಮ್ಮನ ವೇಷದಲ್ಲಿ ಖಡ್ಗವನ್ನು ಹಿಡಿದು ರಂಗಮಂಚದ ಮೇಲೆ ಪ್ರವೇಶಿಸಿ ಮಾಡಿದ ಅದ್ಭುತ ಅಭಿನಯಕ್ಕೆ ಹರ್ಷಿತರಾಗದ ಸಭಿಕರೇ ಇರಲಿಲ್ಲ.
ಈ ನಾಟಕ ಮಂಡಳಿಯು ಅಲ್ಪ ದಿನಗಳ ಕಾಲ ಮುಚ್ಚಲ್ಪಟ್ಟರೂ ಇವರು ರಾಣಿ ರುದ್ರಮ್ಮನ ಪಾತ್ರದ ಮೂಲಕ ಜನಪ್ರಿಯ ಕಲಾವಿದರಾಗಿ ಗುರ್ತಿಸಿಕೊಂಡಿದ್ದರು.ಇವರು ರಂಗ ಮಂದಿರದಲ್ಲಿ ಇದ್ದ ಸಮಯದಲ್ಲಿ ಕೆಲವರು ಹವ್ಯಾಸಕ್ಕಾಗಿ ರಂಗಭೂಮಿಯ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದರು.ಇನ್ನು ಕೆಲವರು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇವರೆಡರ ಮಧ್ಯೆ ಇದ್ದ ವ್ಯತ್ಯಾಸವನ್ನು ಕಿತ್ತೊಗೆದು ವೃತ್ತಿ ರಂಗ ಭೂಮಿಯನ್ನು ಬಲಪಡಿಸಿದ ಕೀರ್ತಿ ಇವರದ್ದಾಗಿದೆ.
ಪದೇ ಪದೇ ಮುಚ್ಚಲ್ಪಡುತ್ತಿದ್ದ ರಂಗ ಮಂದಿರಗಳ ವಹಿವಾಟು ಇವರಿಗೆ ಸರಿ ಬರದ ಕಾರಣ ಹುಚ್ಚಪ್ಪ ಸೂಡಿಯವರ ಜೊತೆಗೂಡಿ ಹೊಸ ನಾಟಕ ಮಂಡಳಿಯನ್ನು ರಚಿಸಿ ತಮ್ಮ ಸಂಸ್ಥೆ ವತಿಯಿಂದ ಪುರಾಣ ಮತ್ತು ಐತಿಹಾಸಿಕ ಕಥೆಗಳ ಆಧಾರದ ಮೇಲೆ ನಾಟಕಗಳು ಪ್ರದರ್ಶನ ಗೊಂಡಿದ್ದವು.ಅಲ್ಲಿ ಅವರು ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಕಲಾ ಪ್ರಕಾರವನ್ನು ಸೃಷ್ಟಿಸಿ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳ ಪ್ರಯೋಗ ಮಾಡಿ ಜಯಶೀಲರಾಗಿದ್ದರು.
ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಸೊಗಸಾಗಿ ನಿರ್ವಹಿಸಿದ ಭರತನ ಪಾತ್ರವನ್ನು ಮೆಚ್ಚಿದ ಗರುಡ ಸದಾಶಿವರಾಯರ ಪ್ರೀತಿ, ಭರವಸೆಗಳಿಗೆ ಪಾತ್ರರಾಗಿದ್ದರು. ಪಠಾಣ್ ಪಾಶ, ಕುರುಕ್ಷೇತ್ರ,ಮಾವ ಬಂದಾನಪ್ಪೋ ಮಾವಾ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್ ಮತ್ತು ಸಿಂಧೂರ ಲಕ್ಷ್ಮಣ ಎಂಬ ವಿಡಂಬನಾತ್ಮಕ ನಾಟಕಗಳಲ್ಲಿ ಅಭಿನಯಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯ ವಿಯೋಗ, ತಮ್ಮ ರಂಗ ಭೂಮಿಯ ಉತ್ತರಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಅನುಭವಿ ರಂಗ ಕರ್ಮಿ,ನಟ ನಿರ್ದೇಶಕ ಮತ್ತು ಇವರ ಮಗ ಏಣಗಿ ನಟರಾಜರನ್ನು ಕಳೆದುಕೊಂಡರು.
ನಾಲ್ಕಾರು ಕಂಪನಿಗಳಲ್ಲಿ ಕೆಲಸ ಮಾಡಿದರೂ ಸ್ಥಿರತೆ ದೊರೆಯದೇ ಹತಾಶೆಗೊಂಡಿದ್ದರು. ಜಗಜ್ಯೋತಿ ಬಸವೇಶ್ವರ ನಾಟಕದ ಬಸವೇಶ್ವರನ ಪಾತ್ರದಲ್ಲಿ ಭಾವಪರವಶರಾಗಿ ಹಾಡಿ ರಸಿಕರ ಮನ ಮುಟ್ಟುವಂತೆ ಮಾತನಾಡಿ ಸಮಾಜದ ಅಂಧಾಕಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾಡುವ ಕಾಯಕವನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗ ಮಂಚದ ತೆರೆಯ ಮೇಲೆ ನಟಿಸಿ ತೋರಿಸಿಕೊಟ್ಟ ಈ ಅಭಿನಯ ಚತುರನಿಗೆ ಸಂದ ಗೌರವ, ಪ್ರಶಸ್ತಿ ಅನೇಕ.
ಇಂತಹ ಅಜಾತ ಶತ್ರು ಏಣಗಿ ಬಾಳಪ್ಪನವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯ ಸ್ವ ಗೃಹದಲ್ಲಿ ಅಗಸ್ಟ್ ೧೮,೨೦೧೭ ರಂದು ತಮ್ಮ ೯೭ ನೇ ವಯಸ್ಸಿನಲ್ಲಿ ನಿಧನರಾದರು.