ಕಲಾಮಾತೆಯ ಮಕ್ಕಳು …

Vishnu

ಕನ್ನಡದ ಅಂಬರೀಷ್ ಮತ್ತು ವಿಷ್ಣುವರ್ಧನ್ ರ ಪರಿಶುದ್ಧ ಗೆಳೆತನದಂತೆ ತಮಿಳು ಸಿನಿಮಾ ರಂಗದಲ್ಲಿ ರಜನಿಕಾಂತ್ ಮತ್ತು ಕಮಲ ಹಾಸನರದ್ದೂ ಕೂಡ ಅತಿ ಹಳೆಯ ಕುಚುಕ್ಕೂ ಗೆಳೆತನ. ಅವರಿಬ್ಬರೂ ಸೇರಿ ತೆರೆಯ ಮೇಲೆ ಅದೆಷ್ಟೂ ಸಿನಿಮಾಗಳನ್ನೂ ಮಾಡಿದ್ದಾರೆ. ಇವರಿಬ್ಬರಿಗೂ ಕೆ. ಬಾಲಚಂದರ್ ದೈವಸಮಾನ ಎಂಬುದೂ ಕೂಡ ವಿಶೇಷ.
ಕಮಲ ಹಾಸನ್ ರವರು ತಮಿಳು ಸಿನಿರಂಗದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ನಡೆದ ಒಂದು ಭವ್ಯ ಸಮಾರಂಭದಲ್ಲಿ ನಡೆದ ಘಟನೆ. ಎಂದಿನಂತೆ, ರಜನಿಕಾಂತ್ ಗೆ ಆ ವೇದಿಕೆ ಮೇಲೆ ವಿಶೇಷ ಸತ್ಕಾರವಿತ್ತು. ತನ್ನ ಕುಚುಕ್ಕೂ ಗೆಳೆಯನ ಬಗ್ಗೆ ಮಾತನಾಡುತ್ತಾ ರಜನಿ ಹೀಗೆ ಹೇಳಿದ್ದುಂಟು : ” ಇಡೀ ಭಾರತೀಯ ಸಿನಿಮಾರಂಗವೇ ಒಂದು ಮನೆಯಾಗಿ ಕಲಾವಿದರಾದ ನಾವೆಲ್ಲಾ ಆ ಕಲಾ ದೇವಿಯ ಮಕ್ಕಳು ಅಂತಾದರೆ, ಆ ಕಲಾಮಾತೆಯ ಕೈ ನಲ್ಲಿ ಸದಾ ಕಮಲ ಹಾಸನ್ ಇರ್ತಾರೆ. ಆ ಕಲಾ ಮಾತೆ, ಒಂದು ಕ್ಷಣ ಕೂಡ ಕಮಲ ಹಾಸನ್ ರನ್ನು ಕೆಳಗೆ ಇಳಿಸದೆ ಸದಾ ತನ್ನ ತೋಳಲ್ಲಿ ಎತ್ತಿಕೊಂಡು ಮುದ್ದಾಡುತ್ತಲೇ ಇರುತ್ತಾಳೆ. ಕಲಾ ಮಾತೆಗೂ ಕಮಲ ಹಾಸನ್ ಗೂ ಅಂತಹ ವಿಶೇಷ ಕರುಳಬಳ್ಳಿ ಸಂಬಂಧ ಮತ್ತು ಪ್ರೀತಿ ಕೂಡ.”
ರಜನಿ ಹೇಳಿದ ಆ ಮಾತಿಗೆ ಚಪ್ಪಾಳೆಗಳ ಸುರಿಮಳೆಯೂ ಸುರಿಯಿತು. ಅದಾದ ಸ್ವಲ್ಪ ದಿನಕ್ಕೆ ಬಹುಶಃ ಎಷ್ಟೋ ಜನಕ್ಕೆ ಈ ಮಾತು ಮರೆತೇ ಹೋಗಿತ್ತು. ಆದರೆ ರಜನಿಯ ಸ್ಟೈಲೇ ಬೇರೆ ಎಂಬುದು ನಮಗೆಲ್ಲಾ ಗೊತ್ತಲ್ಲಾ? ಬರೀ ಬಾಯಿ ಮಾತಿನ ಭಾಷಣಕ್ಕಷ್ಟೇ ತನ್ನ ಮಾತನ್ನು ಸೀಮಿತಗೊಳಿಸದೇ, ಆ ಮಾತಿಗೆ ಒಂದು ಸ್ಪಷ್ಟ ಆಕಾರ ಕೊಡುವ ಯೋಚನೆ ಮಾಡಿದರು. ಚೆನ್ನೈ ನ ಪ್ರಸಿದ್ಧ ಚಿತ್ರಕಾರರೊಬ್ಬರನ್ನು ತನ್ನ ಮನೆಗೆ ಕರೆಯಿಸಿ, ಅವರಿಗೆ ವಿಶೇಷವಾದ ಸಂಭಾವನೆ ಕೊಟ್ಟು, ತನ್ನ ಮನಸ್ಸಿನಲ್ಲಿ ಮೂಡಿರುವ ಆ ಭಾವನೆಗೆ ತಕ್ಕ ರೂಪ – ಆಕಾರ ಕೊಡುವಂತೆ ಕೇಳಿಕೊಂಡರು. ಇಷ್ಟಕ್ಕೂ ರಜನಿಯ ಯೋಚನೆ ಏನಾಗಿತ್ತು ಅಂದರೆ – ಕನ್ನಡ, ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದ ಅತಿ ವಿಶೇಷ ಅಪ್ರತಿಮ ದಿಗ್ಗಜ ನಟರನ್ನು ಕಲಾ ದೇವಿಯ ಮಡಿಲಲ್ಲಿ ಆಟವಾಡುತ್ತಿರುವ ಚಿಕ್ಕ ಮಕ್ಕಳಂತೆ ಚಿತ್ರಿಸುವುದು.

Vishnu


ರಜನಿ ಅಂದುಕೊಂಡಂತೆ ಆ ಚಿತ್ರಕಾರ ವಿಶೇಷ ಆಸ್ಥೆ ವಹಿಸಿ ಬಹಳ ನಾಜೂಕಾಗಿ ಆ ಪೇಂಟಿಂಗ್ ಅನ್ನು ರಜನಿಗೆ ತಲುಪಿಸಿದರು. ಬಳಿಕ ರಜನಿ ಅದನ್ನು ತಮ್ಮ ಸ್ನೇಹದ ಗುರುತಾಗಿ ವಿಶೇಷ ಸಂದರ್ಭವೊಂದರಲ್ಲಿ ಕಮಲ್ ಗೆ ಕಳಿಸಿಕೊಟ್ಟರು. ಪೇಂಟಿಂಗ್ ಅನ್ನು ನೋಡಿದಾಕ್ಷಣ ಕಮಲ್ ಒಂದು ಕ್ಷಣ ಅತ್ತೇಬಿಟ್ಟರಂತೆ. ಅಷ್ಟು ಸೊಗಸಾಗಿತ್ತು ರಜನಿಯ ಆ ಆಲೋಚನೆ. ತಮಿಳಿನ ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ಮತ್ತು ನಾಗೇಶ್ ಅವರ ಫೋಟೋಗಳ ಪಕ್ಕ ಈ ಫೋಟೋವನ್ನು ತೂಗಿ ಹಾಕಿದರಂತೆ ಕಮಲ ಹಾಸನ್.
ಅಂದ ಹಾಗೆ ಆ ಚಿತ್ರದಲ್ಲಿ ಇರುವ ಕಲಾ ದೇವಿಯ ಮಕ್ಕಳು ಯಾರು ಅಂದಿರಾ? – ಹಿಂದಿಯ ಅಮಿತಾಭ್ ಬಚ್ಚನ್, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂ ನ ಮೋಹನ್ ಲಾಲ್, ತಮಿಳು ಇಂಡಸ್ಟ್ರಿ ಯ ಕಮಲ್, ರಜನಿ ಮತ್ತು ಕನ್ನಡ ಇಂಡಸ್ಟ್ರಿ ಯಿಂದ ಆ ಫೋಟೋದಲ್ಲಿ ಸ್ಥಾನ ಪಡೆದ ನಟ – ಸಾಹಸಸಿಂಹ ವಿಷ್ಣುವರ್ಧನ್.
ವಿಷ್ಣು ದಾದಾರ ಬಗ್ಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾರಂಗದವರಿಗೆ ಇರುವ ವಿಶೇಷ ಪ್ರೀತಿ ಹಾಗು ಅಭಿಮಾನಕ್ಕೆ ಬಹುಶಃ ಇದಕ್ಕಿಂತ ಉದಾಹರಣೆ ಬೇಕಿಲ್ಲ. ರಜನಿ ಹೇಳಿದಂತೆ ವಿಷ್ಣು ದಾದಾ ಕಲಾದೇವಿಯ ವಿಶೇಷ ಪುತ್ರರತ್ನ. ಕಲಾವಿದರಿಗೆ ಸಾವಿಲ್ಲ ಅಂತ ಅದಕ್ಕೇ ಹೇಳುವುದು. ನಮ್ಮ ವಿಷ್ಣು ದಾದಾ ಇಂದಿಗೂ ಕಮಲ ಹಾಸನ್ ಮನೆಯ ಗೋಡೆಯ ಫೋಟೋದಲ್ಲಿ ಕಲಾಮಾತೆಯ ಮಗುವಾಗಿ ಅವಳ ತೋಳಲ್ಲಿ ಆಟವಾಡುತ್ತಲೇ ಇದ್ದಾರೆ. ಇಂದಿಗೂ ಬದುಕಿದ್ದಾರೆ. ಎಂದಿಗೂ ಬದುಕಿರುತ್ತಾರೆ ಕೂಡ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply