ಕವಿರತ್ನ ಕಾಳಿದಾಸ

1983ರ ರೇಣುಕಾ ಶರ್ಮ ಅವರ ನಿರ್ದೇಶನದ ಈ ಚಿತ್ರ ರಜತೋತ್ಸವ ಕಂಡಿತು.

ವಿದ್ಯಾಧರೆಯ(ಸುಂದರಿ ಜಯಪ್ರದ) ಮೇಲೆ ಸೇಡು ತೀರಿಸಿಕೊಳ್ಳಲು ಅವಳ ಮಂತ್ರಿ (ಬಾಲಕೃಷ್ಣ) ಹೆಡ್ಡನೊಬ್ಬನಿಗೆ (ಕುರಿ ಕಾಯೋ ಪಿಳ್ಳೆಯಾಗಿ ಅಣ್ಣಾವ್ರು ತುಂಬಾ ಎಂಜಾಯ್ ಮಾಡಿ ನಟಿಸಿದ್ದಾರೆ ಎನಿಸುತ್ತದೆ) ಜಾಣನ ಮುಸುಕು ಹಾಕಿ ಮದುವೆ ಮಾಡಿಬಿಡುತ್ತಾನೆ. ಆ ಪಿಳ್ಳೆ ‘ಬೆಳ್ಳಿ ಮೂಡಿತೂ ಕೋಳಿ ಕೂಗಿತೂ’ ಅಂತ ಹಾಯಾಗಿ ಹಾಡುತ್ತಿದ್ದಾತ. (ಎಂ ರಂಗರಾವ್ ಹಾಡುಗಳು ಇಂದಿಗೂ ಜನಪ್ರಿಯ. ನೇಪಥ್ಯ ಸಂಗೀತವೂ ಅಮೋಘ) ಮದುವೆ ಆದಾಗ ನಿಜ ಗೊತ್ತಾದಾಗ ವಿದ್ಯಾಧರೆ ಅತ್ತಾಗ ‘ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ ಮುದ್ದಿನ ರಾಣೀ’ ಅಂತ ಹಾಡಿ ಕುಣೀತಾನೆ. ಆಗ ವಿದ್ಯಾಧರೆ ಕಣ್ಣೊರೆಸಿಕೊಂಡು ಪತಿಯನ್ನು ಕಾಳಿಯ ಬಳಿ ಕರೆದೊಯ್ದು ಪ್ರಜ್ಞೆ ತಪ್ಪುತ್ತಾಳೆ.

ಕಾಳಿ(ತಮಿಳು ನಟಿ ನಳಿನಿ. ವಿಷ್ಣುವರ್ಧನ್ ಜೊತೆಗೆ ಆಸೆಯ ಬಳೆ ಚಿತ್ರದಲ್ಲಿ ನಾಯಕಿಯಾಗಿದ್ದಾಕೆ) ಅವನ ನಾಲಗೆಯ ಮೇಲೆ ॐ ಬರೆದಾಗ (ಈಗ) ಕಾಳಿದಾಸನಾದ ಪಿಳ್ಳೆ ಸಂಸ್ಕೃತ ಭಾಷೆಯಲ್ಲಿ’ ಮಾಣಿಕ್ಯ ವೀಣಾ’ ಮುಂತಾದ ಶ್ಲೋಕಗಳನ್ನು ಕಾಳಿಗೆ ಹೊಗಳಿ ಹೇಳಿ ಹೊರಟುಹೋಗುತ್ತಾನೆ. ಎಂತಹ ಅದ್ಭುತ ನಟ ರಾಜ್ ಎಂದು ಅರಿಯಲು ಈ ಒಂದು ದೃಶ್ಯ ನೋಡಬೇಕು. ಕಣ್ಣುಗಳಲ್ಲಿನ ಪೆಚ್ಚುತನ ॐ ಅಕ್ಷರ ಕಾಳಿಯ ತ್ರಿಶೂಲದಿಂದ ನಾಲಗೆಯ ಮೇಲೆ ಬರೆಯಲ್ಪಟ್ಟೊಡನೆ ಥಟ್ಟನೆ ಮಾಯವಾಗುತ್ತವೆ. ಅಬ್ಬಾ…

ಕವಿರತ್ನ ಕಾಳಿದಾಸ
ಕವಿರತ್ನ ಕಾಳಿದಾಸ

ಭೋಜರಾಜನ(ಶ್ರೀನಿವಾಸ ಮೂರ್ತಿ) ಆಸ್ಥಾನದಲ್ಲಿ ಕವಿಗಳ (ಅನೇಕರಲ್ಲಿ ಮುಸುರಿ ಕೃಷ್ಣಮೂರ್ತಿ, ವಾದಿರಾಜ್ ಇಬ್ಬರು ಗುರುತು ಸಿಕ್ಕಿದರು) ಜೊತೆಗೆ ಒಂದಾಗಿ ನಂತರ ಭೋಜನ ಆಪ್ತಮಿತ್ರನಾಗುತ್ತಾನೆ. ಪತಿಯನ್ನು ಹುಡುಕಿಕೊಂಡು ಬಂದ ವಿದ್ಯಾಧರೆ ತನ್ನ ಪತ್ನಿ ಎಂದರಿಯದೇ ಮತ್ತೆ ಅವಳಲ್ಲಿ ಮೋಹಿತರಾದ ಕಾಳಿದಾಸ ಸದಾ ಕಣ್ಣಲಿ ಪ್ರಣಯದಾ ಕವಿತೆ'(ರಾಜ್, ವಾಣಿ) ಹಾಡುತ್ತಿದ್ದಂತೆ ಅವನ ಹೊಸ ನಾಟಕ’ ಅಭಿಜ್ಞಾನ ಶಾಕುಂತಲ’ ಹುಟ್ಟುತ್ತದೆ. ತಾನೇ ದುಷ್ಯಂತನಾಗಿ ವಿದ್ಯಾಧರೆಯೇ(ಈಗವಳು ಕಲಾಧರೆ) ಶಾಕುಂತಲೆಯಾದಂತೆ ಊಹಿಸುತ್ತಾನೆ. ಅಲ್ಲಿ  ‘ಕರುಣೆಯಾ ತೋರೆಯಾ ಓ ಪ್ರಿಯತಮಾ (ರಾಜ್ ಮತ್ತು ವಾಣಿ) ಹಾಡುತ್ತಾನೆ ಕಾಳಿದಾಸ.  ಭೋಜ ಮತ್ತು ಕಾಳಿದಾಸರ  ಸ್ನೇಹದ ಬಗ್ಗೆ ಒಂದು ದೀರ್ಘ ನಾಟಕೀಯ ದೃಶ್ಯ ಇದೆ. ಮತ್ತೆ ಚಿತ್ರ ಮುಗಿಯುವುದೂ ಇವರಿಬ್ಬರ ‘ಸಾವಿನ’ ಮಹಾ ನಾಟಕೀಯ ದೃಶ್ಯದೊಂದಿಗೆ.

ಶನಿ ಮಹದೇವಪ್ಪ’ ಕಮಲೇ ಕಮಲೋತ್ಪತ್ತಿಃ’ ಒಗಟು ತಂದಾಗ ನಮ್ಮ ದೇಶದ ಚುನಾವಣಾ ವಿದ್ಯಮಾನ ನೆನಪಾಗಿದ್ದರಲ್ಲಿ ಅಚ್ಚರಿಯೇನು?!

ಸತೀಶ್, ಪಾಪಮ್ಮ, ಶೋಭಾ, ಕೆ. ವಿಜಯ (‘ನಾ ನಿನ್ನ ಬಿಡಲಾರೆ’ಯ ಅನಂತ ನಾಗ್ ಮೇಲೆ ಬರುವ ದೆವ್ವ!) ಗುರುತಿಗೆ ಸಿಕ್ಕಿದರು.
ಅಣ್ಣಾವ್ರು ಹೆಡ್ಡತನ, ವಿದ್ವಾಂಸತನ, ಪ್ರಣಯ, ವಿರಹ, ಮಿತ್ರದ್ರೋಹದ ಅಪವಾದ ಎಲ್ಲಾ ಬಲು ಚೆನ್ನಾಗಿ ತೋರಿದ್ದಾರೆ ಅವರ ಕಣ್ಣು, ದೇಹ ಮತ್ತು ಆಂಗಿಕ ಭಾವಗಳಲ್ಲಿ.

ಮಧುರವಾದ ಗೀತೆಯೊಂದನ್ನು ಕೇಳಿದ ಅನುಭವ ಮತ್ತೊಮ್ಮೆ ಈ ಚಿತ್ರ ನೋಡಿದಾಗ ಉಂಟಾಯಿತು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply