ಒಂದು ಚಿತ್ರ ಬಿಡುಗಡೆಯಾಗಿ 25 / 50 ದಿನ ಪ್ರದಶ೯ನ ಕಾಣೋದು ಈಗಿನ ದಿನಗಳಲ್ಲಿ ಅದೇ ಹೆಚ್ಚು ಆದರೆ ಈ ಚಿತ್ರ ಬಿಡುಗಡೆಯಾದಾಗ ನಾನಂತೂ ಹುಟ್ಟಿರಲಿಲ್ಲ, ಚಿತ್ರದ ಹೆಸರು ಕೇಳಿದ್ರೆ ಸಂತೋಷವಾಗುತ್ತೆ, ಈ ದಿನ ಕನ್ನಡಿಗರ ಅಭಿಮಾನಿಗಳ ಆರಾಧ್ಯ ದೈವ ಕರುನಾಡ ಕಲಾತಪಸ್ವಿ ಡಾ ರಾಜ್ ಕುಮಾರ್ ರವರ ಅದ್ಭುತ ನಟನೆಯನ್ನು ಎಂದೂ ಮರೆಯಲಾಗದ ಚಿತ್ರ “ಕಸ್ತೂರಿ ನಿವಾಸ “ ಇಂದಿಗೆ 50 ವಷ೯ಗಳು.
ಈ ಚಿತ್ರಕ್ಕೆ ಅಣ್ಣಾವ್ರ ಆಯ್ಕೆ ಆದದ್ದು ನಂತರ ಭಜ೯ರಿ ಯಶಸ್ವಿಯಾದದ್ದು, ಚಿತ್ರ 1971 ರಲ್ಲಿ ತಯಾರಾಗಿದ್ದು ಜಿ. ಬಾಲಸುಬ್ರಹ್ಮಣ್ಯಂ ಅವರ ಕಥೆಯನ್ನು ಮೊದಲು ತಮಿಳು ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತು, ಆದರೆ ಕೊನೆಯಲ್ಲಿ ನಾಯಕ ತೀರಿಹೋಗುವ ಈ ಕಥೆಯನ್ನು ಚಿತ್ರ ಮಾಡಿದರೆ ಅದು ಓಡಲ್ಲ ಅಂತ ಹೇಳಿ ಅವರು ನಿರಾಕರಿಸಿದ್ದರಂತೆ, ನಂತರ ಇದೇ ಕಥೆಯನ್ನು ದೊರೆ – ಭಗವಾನ್ ಜೋಡಿ ಕನ್ನಡದಲ್ಲಿ ಅಣ್ಣಾವ್ರನ್ನು ಹಾಕಿಕೊಂಡು ಚಿತ್ರೀಕರಿಸಿದರು.
ಈ ಚಿತ್ರಕ್ಕೆ ಸುಮಾರು 3.75ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿತ್ತು ಎಂದು ಹೇಳಲಾಗಿದೆ, ಬಿಡುಗಡೆಯಾದ ನಂತರ 16 ಚಿತ್ರಮಂದಿರಗಳಲ್ಲಿ ಅಮೋಘ ನೂರು ದಿನ ಪೂರೈಸಿತು, ಕನಾ೯ಟಕ ಕೇಂದ್ರಗಳಲ್ಲಿ 175 ದಿನ ಪ್ರದಶ೯ನ ಕಂಡಿದೆ, ಇದನ್ನು ತಿಳಿದ ಶಿವಾಜಿ ಗಣೇಶನ್ ಬಂದು ರಾಜ್ ಅಭಿನಯವನ್ನು ನೋಡಿ ಕಣ್ಣೀರಿಟ್ಪರಂತೆ, ಮೊದಲು ತಾವು ಕಥೆಯನ್ನು ನಿರಾಕರಿಸಿದ್ದನ್ನು ನೆನೆದು ನೊಂದುಕೊಂಡು ತಾವೇ ನಾಯಕರಾಗಿ ಈ ಕಥೆಯನ್ನು ತಮಿಳಿನಲ್ಲಿ ತೆಗೆಯಲು ಬಯಸಿದರು, ಹಾಗೂ ಅವರ ನಟನೆಯ ತಮಿಳಿನ ಈ ಚಿತ್ರವೂ ಸಹ ಅಲ್ಲಿ ಅಮೋಘ ಯಶಸ್ಸನ್ನು ಪಡೆದಿದೆ. ತಮಿಳಿನಲ್ಲಿ “ಅವಂದಾನ್ ಮನಿದನ್ ” , ಹಿಂದಿಯಲ್ಲಿ “ಶಾಂದಾರ್ ” ಆಗಿ ಬಿಡುಗಡೆ.
ಸದಾ ಸತ್ಯದಿಂದಿದ್ದು ಎಲ್ಲರಿಗೂ ಒಳ್ಳೆಯದನ್ನು ಬಯಸಿ ಡವ್ ಮ್ಯಾಚ್ ಫ್ಯಾಕ್ಟರಿ ಮಾಲೀಕರಾಗಿ ಆರತಿ ಮತ್ತು ಮಗುವನ್ನು ಕಳೆದುಕೊಂಡ ಸನ್ನಿವೇಶ, ಇದೇ ರೀತಿ ಚಂದ್ರುವಿನ ಸ್ಥಿತಿ, ಚಂದ್ರು ವಿಗೆ ಹಣದ ತೊಂದರೆ, ಚಂದ್ರುವಿನ ನಿಷ್ಠಾವಂತ ನಡೆ ನುಡಿ ನೋಡಿ ರವಿ ವಮ೯ ರಿಗೆ ಮೆಚ್ಚುಗೆ, ಚಂದ್ರುವಿಗೆ ಸಹಾಯ ಮಾಡಲು ಅವರನ್ನು ಅಮೇರಿಕಾಗೆ ಕಳಿಸಿ ಅವರ ಮಗಳು ಬೇಬಿ ತಮ್ಮ ಜೊತೆ ಇರಿಸಿಕೊಳ್ಳೋದು, ನಂತರ ಚಂದ್ರು ಬಂದು ಮ್ಯಾಚ್ ಫ್ಯಾಕ್ಟರಿ ಚೇಂಜ್ ಮಾಡಲಿಚ್ಚಿಸುವ ಇಂಗಿತ ರವಿವಮ೯ಗೆ ಹೇಳಿದರೆ ಅವರು ಒಪ್ಪದೇ ಕೆಂಡಾಮಂಡಲ ನಂತರ ಚಂದ್ರು ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಮ್ಯಾಚ್ ಫ್ಯಾಕ್ಟರಿ “ಈಗಲ್ ” ಗುರುತು, ಪ್ರಾರಂಭೋತ್ಸವಕ್ಕೆ ರವಿವಮ೯ ರಿಂದ ಉದ್ಘಾಟನೆ, ರವಿವಮ೯ ತನ್ನ ಸೆಕ್ರೇಟರಿ ಜಯಂತಿ ರನ್ನು ಮದುವೆಯಾಗೋ ಇಚ್ಛೆ ಆದರೆ ಚಂದ್ರು ವಿನ ಮೇಲೆ ಮಪಸಾಗೋಕೆ ಬೇಡಿ ಮಗು ಕಾರಣ. ರವಿವಮ೯ ಅಂದುಕೊಂಡಿದ್ದು ಆಗಲಿಲ್ಲ. ಚಂದ್ರು ಅವರಿಬ್ಬರಿಗೂ ಶುಭ ಹಾರೈಸುತ್ತಾರೆ.
ಚಂದ್ರು ಮಗುವಿನ ಜೊತೆ ಕಾಲ ಕಳೆಯುವುದು ತುಂಬಾ ಇಷ್ಟ, ಎಷ್ಟೇ ಕಷ್ಟವಾದರೂ ಬೇಬಿನ ನೋಡಿದರೆ ಸಮಾಧಾನ, ಕ್ರಿಸ್ಮಸ್ ಹಬ್ಬದ ಸನ್ನಿವೇಶದಲ್ಲಿ ಅಣ್ಣಾವ್ರ ಉಡುಗೆ 👌 , ಬೇಬಿ ಒಂದು ಗೊಂಬೆ ತಂದು ದೊಡ್ಡಪ್ಪ ಈ ಗೊಂಬೆ ನೋಡು ಆಡ್ಸು ಬೀಳ್ಸು ಏನೂ ಆಗಲ್ಲ ಅಂತ ಹೇಳಿದಾಗ ಬರೋ ಐತಿಹಾಸಿಕ ಗೀತೆ..
“ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಏನೇ ಬರಲಿ ಎಂದಿಗೂ ಸೋತು ತಲೆಯ ಬಾಗದು “
ಬಡವರಿಗೆ ಸಹಾಯ ಮಾಡುವ ಗುಣ ರವಿವಮ೯ ರದ್ದು ಹೆಚ್ಚು ದಾನ ಮಾಡಿದ್ರಿಂದ ಆಥಿ೯ಕ ಸಮಸ್ಯೆ ಉಂಟಾಗಿದೆ, ಮನೆಯನ್ನ ಮಾರೋ ಸಂದಭ೯, ಚಂದ್ರು ಹೆಚ್ಚು ಹಣದಿಂದ ಹರಾಜಿನಲ್ಲಿ ಮನೆ ಪಡೆದು ನಂತರ ರವಿವಮ೯ರಿಗೆ ನೀಡಲು ಬಂದಾಗ ರವಿವಮ೯ ನಿರಾಕರಣೆ, ಹಲವಾರು ಘಟನೆಗಳು ರವಿರವರ ವ್ಯವಹಾರದಲ್ಲಿ ನಷ್ಟವುಂಟಾಗುವುದು, ಚಿತ್ರ ದುರಂತದಲ್ಲಿ ಕೊನೆಗೊಳ್ಳೋದು, ನೀಲ ಮಗಳಿಗೆ ಪಾರಿವಾಳ ಅಂದ್ರೆ ತುಂಬಾ ಇಷ್ಟ ನಿಜವಾದ ಪಾರಿವಾಳ ಕೇಳಲು ಬಂದಾಗ ಆ ಮನಕಲಕುವ ಅಣ್ಣಾವ್ರ ನಟನೆ, ನೀಲಗೆ ಊಟ ಬಡಿಸಲು ತಮ್ಮ ಹತ್ತಿರ ಇದ್ದ ಪಾರಿವಾಳ ಮಾರಿ ಬಂದ ಹಣದಿಂದ ಊಟ ನೀಡಿದ್ದು, ನೀಲ ಕೇಳಿದ ಕೋರಿಕೆ ಈಡೇರಿಸಲಾಗದೆ ಪ್ರಾಣ ಬಿಡುವ ಕೊನೇ ದೃಶ್ಯ.
ಒಂದು ಸನ್ನಿವೇಶದಲ್ಲಿ ಬೇಬಿ ತುಂಬಾ ಅನಾರೋಗ್ಯದಿಂದ ಬಳಲುತಿರೋದು ಆಗ ಚಂದ್ರು ಪ್ರಪಂಚ ಮರೆತು ಕುಡಿದು ತೇಲಾಡುವಾಗ ಅಣ್ಣಾವೃ ಮೊದಲೇ ಸ್ವಾಭಿಮಾನಿ ನೀಲ ಮನೆಗೆ ಬಂದು ಬಾಸ್ ಬೇಬಿ ಆರೋಗ್ಯ ಸರಿಯಿಲ್ಲ ನೀವು ಬಂದು ನೋಡಬೇಕು ಅಂದಾಗ ಹೋಗದೇ ತೊಳಲಾಡಿ ಕೊನೆಗೆ ಬೇಬಿ ರಾಣಿಯ ದೇಹ ಮಣ್ಣು ಮಾಡೋ ಜಾಗ ಭೇಟಿ ನೀಡಿ ಅದರ ಮೇಲೆ ಒಂದು ಹೂವಿನ ಗಿಡ ಇಟ್ಟು ಮುಂದೆ ಬರಲಾಗದೆ ನೊಂದು ಬಿಕ್ಕಿ ಬಿಕ್ಕಿ ಅಳುತ್ತಾ ನಡೆಯುವ ದೃಶ್ಯ.. ಈ ದೃಶ್ಯ ಚಿತ್ರೀಕರಣ ಮಾಡಿದ್ದು ಬೆಂಗಳೂರಿನ ಸುಂಕದಕಟ್ಟೆ ರಸ್ತೆಯಲ್ಲಿ.
“ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ ಬೊಂಬೆಯ ಕಥೆಯು ಮಣ್ಣಾಗಿಸಿದ “
ಅಣ್ಣಾವ್ರ ಕೊನೆಯ ದೃಶ್ಯ ಚಿತ್ರೀಕರಣ ಮಾಡಿರೋದು ಕಂಠೀರವ ಸ್ಟುಡಿಯೋದಲ್ಲಿ ನೀವು ನಂಬಲೇಬೇಕು ಕೊನೆಯ ದೃಶ್ಯ ಚಿತ್ರೀಕರಣ ಮಾಡಿದ ಸ್ಥಳದಲ್ಲೇ ಅಣ್ಣಾವ್ರ ಸಮಾಧಿ ಇರೋದು.
ಬರೀ ನಟನೇ ಮಾಡಿಕೊಂಡು ಇರದೇ ಈ ನಾಡಿನ ಸಂಸ್ಕೃತಿ ನಾಯಕನಾಗಿ ಮರೆಯುವುದೆ ನಿಜವಾದ ಜನನಾಯಕ
ಎಂದೆಂದಿಗೂ ಎವರ್ ಗ್ರೀನ್ ಚಿತ್ರ, ಇನ್ನೂ ನೂರು ವರ್ಷ ಬಿಟ್ಟು ಬಂದರು ಜನರ ಮನಸ್ಸಿನಲ್ಲಿ ಅಚ್ಚಲಿಯದೇ ಉಳಿದಿರುವ ಚಿತ್ರ, ನಮ್ಮ ನಿಮ್ಮೆಲ್ಲರ ಆರಾಧ್ಯ ದೈವ ಅಭಿನಯದ ಸೂಪರ್ ಹಿಟ್ ಚಿತ್ರ “ಕಸ್ತೂರಿ ನಿವಾಸ” ಬಿಡುಗಡೆಯಾಗಿ ಇಂದಿಗೆ 50 ವರ್ಷ (29/1/1971) 25 ವಾರ ಅಧಿಕ ಪ್ರದರ್ಶನ ಕಂಡಿತ್ತು, 71 ರ ನಂತರ ಸುಮಾರು ಸಲ ಮರುಬಿಡುಗಡೆಯಲ್ಲಿ ಭರ್ಜರಿ ಗೆಲುವು ತಂದ ಚಿತ್ರ, ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಸ್ಟೇಟ್ ಚಿತ್ರಮಂದಿರ, 2014 ನವೆಂಬರ್ 7 ರಂದು ಕಲರ್ಸ್ ನಲ್ಲಿ ಈ ಚಿತ್ರ ಮರು ಬಿಡುಗಡೆಗೊಂಡಿತ್ತು, ಆಗ ನಡೆದ ಅಭಿಮಾನಿಗಳ ಅದ್ದೂರಿ ಹಬ್ಬ ದಲ್ಲಿ ನಾನು ಸಹ ಭಾಗವಹಿಸಿದೆ.
ಥಿಯೇಟರ್ ನಲ್ಲಿ ಅಣ್ಣಾವ್ರ ಪ್ರತಿಯೊಂದು ದೃಶ್ಯ ಹಾಡಿಗೂ ಅಭಿಮಾನಿಗಳ ಶಿಲ್ಲೆ, ಚಪ್ಪಾಳೆ, ಕಾಸು ಎರಚಾಟ, ಅಣ್ಣಾವ್ರ ಫೋಟೋ ಹಿಡಿದು ಕೂಗಿದ ಜೈಕಾರ, ಕನ್ನಡ ಬಾವುಟ ಹಿಡಿದು ಅಣ್ಣಾವ್ರ ವಿವಿಧ ಬಿರುದುಗಳನ್ನು ಹೇಳಿ ಆರಾಧನೆ ಮಾಡಿದ ಆ ದಿನ.. ಆ ಕ್ಷಣ..
ತಾರಾಗಣದಲ್ಲಿ ಆರತಿ, ರಾಜಶಂಕರ್, ನರಸಿಂಹರಾಜು, ಬಾಲಕೃಷ್ಣ, ಕೆ ಎಸ್ ಅಶ್ವಥ್, ವಿಜಯಶ್ರೀ ಮತ್ತಿತರರು..
ದೊರೈ ಭಗವಾನ್ ನಿದೇ೯ಶನ, ಕೆ ಸಿ ಎನ್ ಗೌಡರ ನಿಮಾ೯ಣ, ಜಿ ಕೆ ವೆಂಕಟೇಶ್ ರವರ ಸಂಗೀತ, ದೊರೈರಾಜ್, ಚಿಟ್ಟಿಬಾಬು, ಎನ್ ಜಿ ರಾವ್ ಛಾಯಾಗ್ರಹಣ, ವೆಂಕಟರಾಮ್, ಕಲ್ಯಾಣ್ ರವರ ಸಂಕಲನ, ಅನುಪಮ ಮೂವಿಸ್ ಕೊಡುಗೆ.
ಇದೇ ಚಿತ್ರದ ಒಂದು ಎಳೆಯನ್ನು ತೆಗೆದು ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳ ಟಚ್ ನೀಡಿ ಪುನೀತ್ ರಾಜಕುಮಾರ್ ರವರನ್ನು ನಿದೇ೯ಶಕ ಸಂತೋಷ್ ಆನಂದ್ ರಾಮ್ ರವರು “ರಾಜಕುಮಾರ ” ಚಿತ್ರ ನಿದೇ೯ಶನ ಮಾಡಿದ ನಂತರ ಚಿತ್ರ ದಾಖಲೆ ಬರೆದಿದೆ, ಅಣ್ಣಾವ್ರ ಛಾಯೆ ಅಪ್ಪುವಿನಲ್ಲಿ ಕಾಣಬಹುದು.
ಈ ದಿನ ಅಭಿಮಾನಿಗಳಿಗೆ ಎಂದು ಮರೆಯಲಾಗದ ದಿನ, ಹಲವಾರು ಡಾ ರಾಜ್ ಕುಮಾರ್ ಸಂಘ ಸಂಸ್ಥೆಗಳು ಹಬ್ಬದ ರೀತಿಯಲ್ಲಿ ಸಂಭ್ರಮಾಚಾರಣೆ ಮಾಡುತ್ತಿದ್ದಾರೆ, ಅಣ್ಣಾವ್ರ ಪುಣ್ಯ ಭೂಮಿಯಲ್ಲಿ ವಿಶೇಷ ಕಾಯ೯ಕ್ರಮಗಳು ಹಾಗೂ ನಿದೇ೯ಶಕರಿಗೆ ಸನ್ಮಾನ ಹಾಗೂ ಅನ್ನದಾನ ಏಪ೯ಡಿಸಲಾಗಿದೆ.
ನಾನಂತೂ ಈ ಚಿತ್ರ ಟಿವಿಯಲ್ಲಿ ನೋಡಿದ್ದು ಲೆಕ್ಕವಿಲ್ಲ, ಬಣ್ಣದಲ್ಲಿ ಬಿಡುಗಡೆ ಮಾಡಿದಾಗ ಒಂದು ದೃಶ್ಯವನ್ನು ಮಿಸ್ ಮಾಡದೆ ನನ್ನ ಆರಾಧ್ಯ ದೈವ ನೋಡಿ ಕೊನೆಯ ದೃಶ್ಯ ಮತ್ತು ಟೈಟಲ್ ಸಾಂಗ್ ಬಿಡಿ ಈ ರೀತಿ ಹಾಡು ಬರೋದಕ್ಕೆ ಛಾನ್ಸ್ ಇಲ್ಲ.
ಕೊನೆಯ ದೃಶ್ಯ ಎಂಥವರಿಗೂ ಕಣ್ಣೀರು ಬರಿಸೋದು ಗ್ಯಾರಂಟಿ, ಅಣ್ಣಾವ್ರ ನಟನೆಗೆ ಸರಿಸಾಟಿ ಯಾರೂ ಇಲ್ಲ..
ಇನ್ನೂ ಈ ಹಾಡಿಗೆ ಧ್ವನಿ ನೀಡಿದವರನ್ನು ನೆನಪಿಸಿಕೊಳ್ಳಬೇಕು ಆಡಿಸಿ ನೋಡು ಬೀಳಿಸಿ ನೋಡು ಪಿ ಬಿ ಶ್ರೀನಿವಾಸ್ ಸರ್ ರವರು ಮತ್ತು ಕೊನೆ ಶೋಕ ಗೀತೆ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಗೀತೆಗೆ ಧ್ವನಿ ನೀಡಿದವರು ಸ್ವತಹ ಜಿ ಕೆ ವೆಂಕಟೇಶ್ ಸರ್ ರವರು.
ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ಮೈಲಿಗಲ್ಲು, ಐವತ್ತು ವಷ೯ವಲ್ಲ ಇನ್ನೂ ನೂರು ವಷ೯ವಾದರೂ ಚಿತ್ರದ ಕ್ರೇಜ್ ಕಡಿಮೆಯಾಗಲ್ಲ, ಅಣ್ಣಾವ್ರ ಆರಾಧನೆ ಎಂದಿಗೂ ನಿಲ್ಲಲ್ಲ, ಕೊನೆಯ ಮಾತು ಈ ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ, ಸಹ ಕಲಾವಿದರಿಗೆ, ತಂತ್ರಜ್ನರಿಗೆ, ಪ್ರತಿಯೊಬ್ಬರಿಗೆ ಹ್ಯಾಟ್ಸ್ ಆಫ್ 🙏