ಈವರೆಗೂ ‘ಕಿಚ್ಚ’ ಸುದೀಪ್ ಮಾಡಿದ ಪಾತ್ರಗಳಿಗಿಂತಲೂ ‘ವಿಕ್ರಾಂತ್ ರೋಣ’ದ ಪಾತ್ರ ಭಿನ್ನವಾಗಿದೆ. ಇಲ್ಲಿ ಮಾಸ್ ಡೈಲಾಗ್ಸ್, ನಾಯಕಿ ಜೊತೆಗೆ ಡ್ಯುಯೆಟ್.. ಇಲ್ಲ.. ಇದ್ಯಾವುದೂ ಇಲ್ಲ! ಪೊಲೀಸ್ ಎಂದ ಮಾತ್ರಕ್ಕೆ ಅತಿಮಾನುಷ ಶಕ್ತಿಯಂತೆಯೂ ಈ ಪಾತ್ರ ಇಲ್ಲ. ಸುದೀಪ್ ನಿಭಾಯಿಸಿರುವ ಹೊಸ ರೀತಿಯ, ಹೊಸ ಮ್ಯಾನರಿಸಂನ ಪಾತ್ರ ಇದು. ವಿಕ್ರಾಂತ್ ರೋಣ ಪಾತ್ರದಲ್ಲಿ ಸುದೀಪ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇಂಟರ್ವಲ್ ಬ್ಲಾಕ್‌ನಲ್ಲಿ ನಿಬ್ಬೆರಗಾಗುವಂತೆ ಮಾಡುತ್ತಾರೆ.
‘ರಕ್ಕಮ್ಮ…’ ಹಾಡಿನಲ್ಲಿ ಮಸ್ತ್ ಆಗಿ ಕುಣಿದಿದ್ದಾರೆ. ಮುದ್ದು ಮಗಳ ತಂದೆಯಾಗಿ ಅಳಿಸುತ್ತಾರೆ ‘ಕಿಚ್ಚ’. ಒಟ್ಟಾರೆಯಾಗಿ, ಹೊಸ ಮಾದರಿಯ ಪಾತ್ರಗಳಿಗೆ ತಮ್ಮನ್ನು ತೆರೆದುಕೊಂಡಿರುವ ಸುದೀಪ್ ನಡೆ ಮೆಚ್ಚುಗೆ ಪಡೆಯುತ್ತದೆ.
ತೆರೆಮೇಲೆ ‘ಕಿಚ್ಚ’ ಸುದೀಪ್ ಹೀರೋ ಆದರೆ, ತೆರೆಯ ಹಿಂದೆ ಮೂವರು ಹೀರೋಗಳಿದ್ದಾರೆ. ಅದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ವಿಲಿಯಂ ಡೇವಿಡ್. ವಿಕ್ರಾಂತ್ ರೋಣವನ್ನು ಸಿಂಗರಿಸುವಲ್ಲಿ ಅಕ್ಷರಶಃ ಈ ಮೂವರ ಪಾತ್ರ ಬಲು ದೊಡ್ಡದು. ಇದರ ಜೊಯೆಗೆ ಅನೂಪ್ ಭಂಡಾರಿಯವರ ಪವರ್ ಫುಲ್ ನಿರ್ದೇಶನ, ವಿಕ್ರಾಂತ್ ರೋಣದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅದರ ಜೊತೆಗೆ ಹಿನ್ನೆಲೆ ಸಂಗೀತದ ಮೂಲಕ ಬೆರಗು ಮೂಡಿಸುತ್ತಾರೆ.
ಕಾಡಿನ ಸೆಟ್‌ನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣಗೊಂಡಿದೆ. ಅದನ್ನು ಅಷ್ಟೇ ಉತ್ತಮವಾಗಿ ಸೆರೆ ಹಿಡಿದಿದ್ದಾರೆ ವಿಲಿಯಂ ಡೇವಿಡ್. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸಿಂಗಲ್ ಶಾಟ್ ಫೈಟ್ ಸೀನ್‌ನ ಸಂಯೋಜನೆಯೇ ಅದ್ಭುತ. ಅದನ್ನು ಬಹಳ ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. , ಅದನ್ನು ಕಲಾ ನಿರ್ದೇಶಕ ಶಿವಕುಮಾರ್ ಸೊಗಸಾಗಿ ನಿಭಾಯಿಸಿದ್ದಾರೆ. ವಿಎಫ್ಎಕ್ಸ್, 3ಡಿ ತಂತ್ರಜ್ಞಾನ ಉತ್ತಮವಾಗಿ ಬಳಕೆ ಆಗಿದೆ.ನಿರ್ದೇಶಕ ಅನೂಪ್ ಭಂಡಾರಿ ‘ರಂಗಿತರಂಗ’ ಮಾದರಿಯ ಥ್ರಿಲ್ಲಿಂಗ್ ಕಥೆಯನ್ನು ಈ ಬಾರಿ ದೊಡ್ಡ ಕ್ಯಾನ್ವಾಸ್‌ನಲ್ಲಿ ಪ್ರಸ್ತುತಪಡಿಸಿದ್ದಾರೆ. ಕಮರೊಟ್ಟು ಮನೆ, ತುಳುನಾಡಿನ ಸಂಸ್ಕೃತಿ ಇಲ್ಲಿಯೂ ಮುಂದುವರಿದಿದೆ.
‘ರಂಗಿತರಂಗ’ ಸಿನಿಮಾದ ಕೆಲ ದೃಶ್ಯಗಳಿಗೂ ‘ವಿಕ್ರಾಂತ್ ರೋಣ’ದ ಕೆಲ ಸೀನ್‌ಗಳಿಗೂ ಹೋಲಿಕೆ ಇದೆ. ಅದು ಬೇಕಂತಲೇ ಮಾಡಿರುವುದಾ? ಅದನ್ನು ನಿರ್ದೇಶಕರೇ ಹೇಳಬೇಕು! ಯಾಕೆಂದರೆ, ಈ ದೃಶ್ಯಗಳಿಂದಾಗಿ ಪ್ರೇಕ್ಷಕನಿಗೆ ಪದೇ ಪದೇ ‘ರಂಗಿತರಂಗ’ ನೆನಪಾಗುತ್ತದೆ. ‘ವಿಕ್ರಾಂತ್ ರೋಣ’ ಓಟವನ್ನು ರೋಚಕವಾಗಿ ನಿರೂಪಣೆ ಮಾಡುತ್ತ ಸಾಗುವ ಅನೂಪ್, ಕಥೆಯಲ್ಲಿ ಸಾಕಷ್ಟು ತಿರುವುಗಳನ್ನು ನೀಡಿದ್ದಾರೆ. ನಿಜವಾದ ಕೊಲೆಗಾರ ಯಾರಿರಬಹುದು ಎಂಬ ಊಹೆಗೆ ಹಚ್ಚುವ ಮೂಲಕ ಪ್ರೇಕ್ಷಕನಿಗೂ ಥ್ರಿಲ್ ನೀಡುತ್ತಾರೆ ಅನೂಪ್. ಒಂದಷ್ಟು ದೃಶ್ಯಗಳಲ್ಲಿ ಲಾಜಿಕ್ ಇಲ್ಲ, ಅದಕ್ಕೆ ಸ್ಕ್ರೀನ್‌ನಲ್ಲಿ ಉತ್ತರವೂ ಸಿಗುವುದಿಲ್ಲ, ಒಟ್ಟಿನಲ್ಲಿ ವಿಕ್ರಾಂತ್ ರೋಣ ಸಿನಿಮಾವು ಅದ್ಭುತ ವಾಗಿ ಮೂಡಿ ಬಂದಿದೆ. ವಿಕ್ರಾಂತ್ ರೋಣ ಸಿನಿಮಾವು ಕನ್ನಡ ಸಿನಿರಸಿಕರಿಗೆ ಒಳ್ಳೆಯ ಸದಭಿರುಚಿಯ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ.