ಆನಂದ್ ಅತಿ ಶ್ರೀಮಂತ. ಅವನಿಗೆ ಸಿಕ್ಕ ಅತಿ ವೃದ್ಧ ದಂಪತಿಗಳು ಹೆಂಡತಿಗಿರಬೇಕಾದ ಆರು ಗುಣಗಳನ್ನು ಹೇಳುತ್ತಾರೆ. ಆನಂದ್ ಅವಳನ್ನು ಹುಡುಕಿ ಹೊರಡುತ್ತಾನೆ. ಒಬ್ಬ ಹಾವಾಡಿಗರ ಹುಡುಗಿ, ಒಬ್ಬ ಹುಚ್ಚಿಯಂತೆ ನಟಿಸುವವಳು, ಒಬ್ಬ ನಾಟಕದ ಹುಡುಗಿ ಸಿಗುತ್ತಾರೆ. ಮೂವರೂ ಅವನ ಮನೆಗೆ ಪ್ರಸಾದನಗಳನ್ನು ಮಾರಲು ಬಂದಿದ್ದ ವೀಣಾಳನ್ನು ಹೋಲುತ್ತಾರೆ. ಇವನು ವೀಣಾಳನ್ನು ಹುಡುಕಿ ಹೋದಾಗ ಅವಳ ಮನೆಗೆ ಬೆಂಕಿ ಬಿದ್ದು ಅವಳೂ, ಅವಳ ತಂದೆಯೂ ತೀರಿಕೊಂಡಿರುತ್ತಾರೆ.
ಇವನ ಗೆಳೆಯ ಡಿಕ್ಕಿ ತಪ್ಪು ವಿಳಾಸಕ್ಕೆ ಹೋಗಿ ತನಗಾಗಿ ಒಬ್ಬ ಹುಡುಗಿಯನ್ನು ದಕ್ಕಿಸಿಕೊಳ್ಳುತ್ತಾನೆ.
ಆನಂದ ತನಗೆ ಸಿಕ್ಕವಳೇ ಸರಿಯಾದ ಆರು ಗುಣವುಳ್ಳವಳು ಎಂದು ಅವಳನ್ನು ವರಿಸಲು ನಿಶ್ಚಯಿಸಿಕೊಳ್ಳುವ ವೇಳೆಗೆ ಅವಳೊಬ್ಬ ಕೃತ್ರಿಮ ಹೆಣ್ಣು ಎಂದು ತಿಳಿಯುತ್ತದೆ. ಅವಳ ಕೊಲೆ ಆಪಾದನೆ ಇವನ ಮೇಲೇ ಬರುತ್ತದೆ.
ಆನಂದ ಈ ಎಲ್ಲ ಗೋಜಲುಗಳಿಂದ ಬಿಡಿಸಿಕೊಳ್ಳುವುದೇ ಚಿತ್ರದ ಉಳಿದ ಭಾಗ. ಸರಿಸುಮಾರು 3 ಗಂಟೆ ಕಾಲದ ಈ ಚಿತ್ರದಲ್ಲಿ ಬಂದೆ ನೀ ಬಂದೆ, ಬೆಳದಿಂಗಳಾಗಿ ಬಂದೆ, ಕಾರಿನ ಸಾಮ್ಯೋರಾ, ಬಂಗಾರ ನೋಟ ಹಾಡುಗಳು ರಾಜ್, ಭಾರತಿಗೆ. ಮುಟ್ಟಬೇಡ ಮಾತಾಡಬೇಡ ನರಸಿಂಹರಾಜು, ಮೈನಾವತಿಗೆ. ಕೃಷ್ಣ ಪಾರಿಜಾತದ ಒಂದು ಸುಂದರ ನಾಟಕದ ಹಾಡಿದೆ.
ಬೆಡಗಿ ಭಾರತಿ ಅನೇಕ ರೂಪಗಳಲ್ಲಿ, ವೇಷಗಳಲ್ಲಿ ನಮಗೆ ದರ್ಶನ ಕೊಡುತ್ತಾರೆ. ಆದರೆ ಇದರಲ್ಲಿನ ಅತ್ಯಂತ ಸುಂದರ ನೋಟವೆಂದರೆ ರಾಜ್ಕುಮಾರ್. ಈ ಸಿನಿಮಾದಲ್ಲಿ ಬಹಳ ಅಂದವಾಗಿ ಕಾಣುತ್ತಾರೆ. ನಡುವೆ ಶ್ರೀಕೃಷ್ಣನ ವೇಷ ಹಾಕಲು ಮೀಸೆ ತೆಗೆದ ನಂತರ ಸಿನಿಮಾದ ಮುಂದಿನ ದೃಶ್ಯಗಳಲ್ಲಿ ಮೀಸೆ ಇಲ್ಲದೆ ಬೆಣ್ಣೆ ಕೃಷ್ಣನಂತೆ ಮುದ್ದಾಗಿ ಕಾಣುತ್ತಾರೆ.
ಹಳೆಯ ಅನೇಕ ಡ್ಯೂಯೆಟ್ಗಳಿಗೆ ರಾಜ್ ಭಾರತಿ ಒಂದು ಸನ್ನಿವೇಶದಲ್ಲಿ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ರಾಜ್ ಅವರನ್ನು ನೋಡಲೆಂದೇ ಈ ಚಿತ್ರ ನೋಡಬಹುದು. ಬಹಳವೇ ಆನಂದ ಕೊಟ್ಟ ಚಿತ್ರ ‘ಗಂಡೊಂದು ಹೆಣ್ಣಾರು’.