ಗಣಿ ನಾಡಿನ ಪ್ರಸಿದ್ಧ ರಂಗ ಭೂಮಿ ಕಲಾವಿದ ಬಳ್ಳಾರಿ ರಾಘವ

ಸುಪ್ರಸಿದ್ಧ ರಂಗ ಭೂಮಿ ಕಲಾವಿದ, ನಾಟಕಕಾರ ರಾಘವ ತಮ್ಮ ವೃತ್ತಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದು ರಂಗ ಭೂಮಿಗೆ ನೀಡಿದ ಕೊಡುಗೆ ಅಪಾರ.

     ಅಗಸ್ಟ್ ೨,೧೮೮೦ ರಂದು ನರಸಿಂಹಾಚಾರ್ಯರು ಮತ್ತು ಶಿಂಷಾ ಶೇಷಮ್ಮ ದಂಪತಿಗಳ ಮಗನಾಗಿ  ಬಳ್ಳಾರಿಯಲ್ಲಿ ಜನಿಸಿದ ಇವರು ಅಲ್ಲಿಯೇ ಎಫ್.ಎ.ವಿದ್ಯಾಭ್ಯಾಸವನ್ನು ಪೂರೈಸಿ  ಮದ್ರಾಸಿನಲ್ಲಿ ಬಿ.ಎ.ಬಿ.ಎಲ್.ಪದವಿಯನ್ನು ಪಡೆದರು. ನಂತರ ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲ ವೃತ್ತಿಯಲ್ಲಿ ತರಬೇತಿಯನ್ನು ಪಡೆದು ೧೯೦೬ ರಲ್ಲಿ ಸ್ವತಂತ್ರ ವಕೀಲರಾಗಿ ಪ್ರಸಿದ್ಧಿಯನ್ನು ಪಡೆದಿದ್ದರು.

ಮದ್ರಾಸಿನಲ್ಲಿ ಇದ್ದಾಗ ತಮ್ಮ ಬಿಡುವಿನ ಸಮಯದಲ್ಲಿ  ಪಾರಸಿ ಥಿಯೇಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುತ್ತಿದ್ದರು. ಇವರಿಗೆ ಅಂದಿನ ಪ್ರಸಿದ್ಧ ಕಲಾವಿದ ನಟ ದಾದಾ ಭಾಯಿ ಮಿಸ್ತ್ರಿ ಯವರ ಅಭಿನಯ ಇವರ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ಇದರಿಂದ ಪ್ರೇರೇಪಿತರಾಗಿ ಸ್ವಯಂ ಆಗಿ ಮೊದಲ ಬಾರಿಗೆ ನಟಿಸಿದ ನಾಟಕ ಡಾಕ್ಟರ್ ಎಂಡ್ ಅಪಾಥಿಕರಿ.

   ನಂತರ ರಂಗ ಭೂಮಿಯಲ್ಲಿ  ರಾಘವ ಬಳ್ಳಾರಿಯಲ್ಲಿ ಶಾಮರಾವ್ ಪಟ್ಟಂ ಸಹೋದರರ ಸಹಕಾರದಿಂದ ಶೇಕ್ಸ್ ಪಿಯರ್ ಎಂಬ ಕ್ಲಬ್ ನ್ನು ಆರಂಭಿಸಿ ಹಲವಾರು ಇಂಗ್ಲೀಷ್ ಭಾಷೆಯ ನಾಟಕಗಳಲ್ಲಿ ನಟಿಸಿದ್ದರು. ೧೯೨೮ ರಲ್ಲಿ ರಂಗ ಭೂಮಿಯ ಚಟುವಟಿಕೆಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಲು ಇಂಗ್ಲೇಂಡ್ ಗೆ ತೆರಳಿದ್ದರು.

ಅಲ್ಲಿಯ ಪ್ರಸಿದ್ಧ ರಂಗ ಭೂಮಿ ಕಲಾವಿದರಾದ ಲಾರೆನ್ಸ್ ಆಲಿವಿಯರ್ ಮತ್ತು ಚಾರ್ಲ್ಸ್ ಲಾಟನ್ ಸೇರಿ ಅನೇಕ ಶ್ರೇಷ್ಠ ಕಲಾವಿದರೊಂದಿಗೆ ಕೆಲಸ ಮಾಡಿ ರಂಗ ಭೂಮಿಯ ಚಟುವಟಿಕೆಗಳ ಕುರಿತು ಅಧ್ಯಯನ ಮಾಡಿದ್ದರು. ಇವರು ಬರ್ನಾರ್ಡ್ ಷಾ ಅವರ ಸಮ್ಮುಖದಲ್ಲಿಯೇ ಶೇಕ್ಸ್ ಪಿಯರ್ ನಾಟಕಗಳಲ್ಲಿ ನಟಿಸಿ ಪ್ರಶಂಸೆಯನ್ನು ಪಡೆದಿದ್ದರು. ಸರಸ ವಿನೋದಿನಿ ಮತ್ತು ಸುಮನೋರಮ ಸಭಾ ಸಂಸ್ಥೆಯಲ್ಲಿ ಧರ್ಮಾವರಂ ರಾಮಕೃಷ್ಣಾಚಾರ್ಯ ಮತ್ತು ಕೋಲಾಚಲಂ ಶ್ರೀನಿವಾಸ ಬರೆದು ನಿರ್ದೇಶಿಸುತ್ತಿದ್ದ ನಾಟಕಗಳಿಗೆ ಪಾತ್ರಧಾರಿಯಾಗಿದ್ದರು. ದಶರಥ, ಹರಿಶ್ಚಂದ್ರ ಮತ್ತು ರಾವಣ ಮುಂತಾದ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ ಅಭಿನಯವನ್ನು ನೀಡಿದ್ದರು.

ವಿಜಯ ನಗರದ ಪತನ ನಾಟಕದಲ್ಲಿ ನಿರ್ವಹಿಸಿದ್ದ ಪಠಾಣ್ ರುಸ್ತುಂ ಪಾತ್ರವು ಇವರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಪುರುಷರು ಸ್ತ್ರೀಯರ ಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸುವಂತೆ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಕನ್ನಡದ ಕೈಲಾಸಂ, ಮಾಸ್ತಿ,ಅನಕೃ ಮೊದಲಾದವರ ನಾಟಕಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದಲ್ಲದೆ ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ನಾಟಕಗಳಲ್ಲಿ ನಟಿಸಿ ಪ್ರಸಿದ್ಧಿಯನ್ನು ಪಡೆದಿದ್ದರು.

ಈ ರೀತಿಯಾಗಿ ರಂಗ ಭೂಮಿಯಲ್ಲಿ ಅಪಾರ ಸಾಧನೆಯನ್ನು ಮಾಡಿದ ಮಹಾನ್ ಕಲಾ ತಪಸ್ವಿ ಬಳ್ಳಾರಿಯ ರಾಘವ ಎಪ್ರಿಲ್ ೧೬, ೧೯೪೬ ರಂದು ತಮ್ಮ ೬೬ ನೇ ವಯಸ್ಸಿನಲ್ಲಿ ನಿಧನರಾದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply