ನೀವು ಗತಂ ಎನ್ನಿ ಕಥಂ ಎನ್ನಿ ಎಲ್ಲಾ ಒಂದೇ. ಗತ ಎಂದರೆ ಹಳೆಯ ನೆನಪುಗಳು ಅಂತಾಗುತ್ತದೆ. ಕತೆ ಎಂದರೆ ಕತೆಯಾಗುತ್ತದೆ. ಮೂಲ ಉದ್ದೇಶ ಒಂದೇ… ಹಳೆಯ ಕತೆ ಕೆದಕುವುದು..
“ರಿಷಿ” ಎಂಬ ಒಬ್ಬ ಹ್ಯಾಂಡ್ಸಮ್ ಹುಡುಗ ಇದ್ದಾನೆ. ಅವನಿಗೊಬ್ಬ ಗರ್ಲ್ ಫ್ರೆಂಡೂ ಇದ್ದಾಳೆ. ಆದರೆ ಅವನಿಗೆ ಅವಳ್ಯಾರೆಂದೇ ಗೊತ್ತಿಲ್ಲ. ಯಾಕೆಂದರೆ ಒಂದು ಭೀಕರ ಅಪಘಾತದ ನಂತರ ರಿಷಿ ತನ್ನೆಲ್ಲಾ ನೆನಪುಗಳನ್ನು ಕಳೆದುಕೊಂಡು ಕುಳಿತಿದ್ದಾನೆ. ಆಕೆ ಅವನ ಸ್ನೇಹಿತೆ ಅಂತ ಡಾಕ್ಟರ್ ಅವನಿಗೇ ಪರಿಚಯ ಮಾಡಿಸುತ್ತಾರೆ.
ಆಕೆ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಅವನಿಗೆ ಅವಳ ಮನೆಯ ನೆನಪೂ ಇಲ್ಲ. ‘ಇದು ನಿನ್ ಮನೆಯಾ?’ ಅಂತಾನೆ. ಪಾಪ ಆಕೆ ಬಹಳ ತಾಳ್ಮೆಯಿಂದಲೇ ‘ಹೌದು’ ಅಂತ ಉತ್ತರಿಸುತ್ತಾಳೆ. ನಾವು ಆ ಜಾಗದಲ್ಲಿ ಇದ್ದಿದ್ರೆ ರೇಗಿ ‘ಮತ್ತೇನು ನಿನ್ನ ಮನೇನಾ?’ ಅಂದುಬಿಡ್ತಿದ್ದೆವೇನೋ? ಆದರೆ ಆಕೆ ಸಂಯಮಿ. ಸಮಾಧಾನದಿಂದಲೇ ಉತ್ತರಿಸುತ್ತಾಳೆ. ನಂತರ ಅವನನ್ನು ಅವನ ತಂದೆಯ ಮನೆಗೆ ಕರೆದುಕೊಂಡು ಹೊರಡುತ್ತಾಳೆ.
ಕಾರಿನಲ್ಲಿ ಹೋಗುತ್ತಿರುವಾಗ ಮಧ್ಯದಲ್ಲಿ ಒಂದು ಕಡೆ ಕಾರ್ ನಿಂತು ಹೋಗುತ್ತದೆ. ಸರಿಪಡಿಸುವುದು ಹೇಗೆಂದು ರಿಷಿಗೆ ಗೊತ್ತಿಲ್ವಲ್ಲ. ಆತನಿಗೆ ಏನೂ ನೆನಪಿಲ್ಲ. ಹಾಗಾಗಿ ಆಕೆಯೇ ಪ್ರಯತ್ನಿಸ್ತಾ ಇರ್ತಾಳೆ. ಅಷ್ಟರಲ್ಲಿ ದಾರಿಹೋಕನೊಬ್ಬ ಅವರಿಬ್ಬರನ್ನು ಮನೆಗೆ ಆಹ್ವಾನಿಸಿ, ಕಾರ್ ರಿಪೇರಿ ಮಾಡಿಸಿಕೊಡುವ ಭರವಸೆ ಕೊಡುತ್ತಾನೆ. ಇಲ್ಲದಿದ್ದರೆ ಅಲ್ಲಿ ಕರಡಿಗಳ ಕಾಟ ಇದೆ ಅಂತಾನೆ. ಅವರು ತಾನೇ ಇನ್ನೇನು ಮಾಡಲು ಸಾಧ್ಯ? ಅಪರಿಚಿತನೊಂದಿಗೆ ಹೊರಡುತ್ತಾರೆ.
ಅಸಹಾಯಕ ಹುಡುಗಿಯ ಜೊತೆ ನೆನಪು ಕಳೆದುಕೊಂಡಿರುವ ಹುಡುಗ….
ಇಬ್ಬರಿಗೂ ಆ ಮನೆಯಲ್ಲಿ ಏನು ತೊಂದರೆಯಾಗುತ್ತದೆಯೋ ಅಂತ ನಮಗೆ ಆತಂಕವಾಗುತ್ತದೆ. ಅಷ್ಟರಲ್ಲಿ ಆ ಮನೆಯೊಳಗೆ ಏನೇನೋ ವಿಲಕ್ಷಣ ಘಟನೆಗಳು ನಡೆದುಬಿಡುತ್ತವೆ. ಇವೆಲ್ಲಾ ಯಾಕೆ ಅಂತ ರಿಷಿಗೆ ಗೊತ್ತಿಲ್ಲ. ಏಕೆಂದರೆ ಅವನಿಗೆ ಹಿಂದಿನ ಯಾವುದೂ ನೆನಪಿಲ್ಲ. ಹೋಗಲಿ ತನ್ನ ಅಪಘಾತ ಹೇಗಾಗಿತ್ತು, ತಾನು ಯಾಕೆ ನೆನಪು ಕಳೆದುಕೊಂಡೆ ಅಂತಲೂ ಗೊತ್ತಿಲ್ಲ.
ಅಷ್ಟು ಸಾಲದೇ ಇದ್ಯಾರೋ ಅಪರಿಚಿತ ತಮ್ಮಿಬ್ಬರನ್ನೂ ತಂದು ಕೂಡಿ ಹಾಕಿ ಏನು ಮಾಡಲು ಹೊರಟಿದ್ದಾನೆ ಅಂತ ಅವನೊಂದಿಗೆ ನಮಗೂ ತಲೆ ಕೆಡುತ್ತದೆ. ಆಗ ಮೆಮೋರಿ ಲಾಸ್ ಆಗಿರುವ ರಿಷಿ ತನ್ನ ಗರ್ಲ್ ಫ್ರೆಂಡ್ ಅನ್ನು ಆ ಮನೆಯಿಂದ ಹೇಗೆ ಬಚಾವು ಮಾಡುತ್ತಾನೆ ಎನ್ನುವುದೇ ಚಿತ್ರದ ಕಥೆ.
BGM ಬಹಳ ಸೊಗಸಾಗಿದೆ. ಕನ್ನಡದಲ್ಲಿ ಸಂಭಾಷಣೆಗಳೂ ಸಹ ಪರ್ಫೆಕ್ಟ್ ಆಗಿವೆ. ಸಿನೆಮಾ ಮುಗಿದ ಮೇಲೆ ಗೊತ್ತಾಗುತ್ತದೆ…. ಸಿನೆಮಾದ ಹೀರೋ ಬೇರೆ ಯಾರೂ ಅಲ್ಲ.. ಸ್ವತಃ “ಕಥೆ”ಯೇ ಅಂತ.
ಈಗೀಗ ಕಥೆಯೇ ಮುಖ್ಯವಾಗಿರುವ ಸಿನೆಮಾಗಳು ಬಹಳಷ್ಟು ಬರುತ್ತಿವೆ. ಅದನ್ನು ನಾವೂ ಸಹ ಸ್ವಾಗತಿಸಬೇಕಿದೆ.