ಗರುಡ ಸದಾಶಿವರಾವ್

ರಂಗಭೂಮಿ ಕಲಾವಿದರಿಗೆ ಇಂದಿಗೂ ಆದರ್ಶವಾಗಿರುವ ರಂಗಭೂಮಿಯ ಮಹಾನ್ ರಂಗ ಕಲಾವಿದರು. ದಿ.ಗರುಡ ಸದಾಶಿವ ರಾವ್
ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾನ್ ರಂಗ ಕಲಾವಿದರಾಗಿದ್ದ ಗರುಡ ಸದಾಶಿವರಾವ್ ಪ್ರಪ್ರಥಮವಾಗಿ ರಂಗಭೂಮಿಯಲ್ಲಿ ಶಿಸ್ತನ್ನು ಮೂಡಿಸಿದ ಮೊದಲ ಶ್ರೇಷ್ಠ ವ್ಯಕ್ತಿ ಕೂಡ ಹೌದು. ಇವರು ರಂಗಭೂಮಿಯಲ್ಲಿ ಇದ್ದಷ್ಟು ವರ್ಷಗಳ ಕಾಲ ಮಾಡಿದ ಸಾಧನೆಯನ್ನು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.


     ಶ್ರೀ ಗರುಡ ಸದಾಶಿವರಾಯರು ಕ್ರಿ.ಶ. ೧೮೮೦ ರಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗುರುನಾಥ ಶಾಸ್ತ್ರಿ. ಇವರು ಜನಿಸಿದ ಸಮಯದಲ್ಲಿ ಬ್ರಿಟಿಷ್ ಆಡಳಿತ ಜಾರಿಯಲ್ಲಿತ್ತು. ಇದೇ ಆಡಳಿತದ ಅವಧಿಯಲ್ಲಿ ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ಬಂಧ ವಿಮೋಚನಾ ನಾಟಕದ ಮೂಲಕ ರಂಗ ಪ್ರವೇಶಿಸಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.

ಕೆಲವು ವರ್ಷಗಳ ನಂತರ ತಮ್ಮದೇ ಸ್ವಂತ ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿಯನ್ನು ಆರಂಭಿಸಿ ಕರ್ನಾಟಕದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದರು. ತಮ್ಮ ಮಂಡಳಿಗಾಗಿ ತಾವೇ ಸ್ವತಃ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಮತ್ತು ರಾಷ್ಟ್ರೀಯತೆಯನ್ನು ಹೊಂದಿರುವ ಸುಮಾರು ೫೦ ನಾಟಕಗಳನ್ನು ರಚಿಸಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಇವರು ರಚಿಸಿದ ನಾಟಕ ಶ್ರೀ ರಾಮ ಪಾದುಕೆ ಪಟ್ಟಾಭಿಷೇಕ ರಂಗಭೂಮಿಯ ಇತಿಹಾಸದಲ್ಲೇ ಮಹತ್ತರವಾದ ನಾಟಕವಾಗಿದೆ.

ಗರುಡರು ೫೦ ಕ್ಕೂ ಹೆಚ್ಚು ವರ್ಷಗಳ ಕಾಲ ರಂಗಭೂಮಿಯಲ್ಲಿ ತಮ್ಮ ಜೀವನವನ್ನು ಕಳೆದಿದ್ದು ವೃತ್ತಿ ರಂಗಭೂಮಿಗೆ ಶಿಸ್ತಿನ ಪರಿಪಾಠ ಹಾಕಿ ಕೊಟ್ಟ ಮೊದಲ ಶ್ರೇಷ್ಠ ವ್ಯಕ್ತಿ ಕೂಡ ಹೌದು. ಬ್ರಿಟಿಷರ ದೌರ್ಜನ್ಯದ ಸಮಯದಲ್ಲಿ ಗರುಡರು ಕಂಸ ವಧ, ಕೃಷ್ಣ ಲೀಲಾ,ಲಂಕಾದಹನ ನಾಟಕಗಳನ್ನು ಪ್ರದರ್ಶಿಸಿದ್ದರು. ವಿಶೇಷದ ಸಂಗತಿಯೇನೆಂದರೆ ಅವರ ನಾಟಕದಲ್ಲಿನ ಪಾತ್ರಗಳು ಪರೋಕ್ಷವಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಮಾತನಾಡುತ್ತಿರುವಂತೆ ಭಾಸವಾಗಿದ್ದು ಗಮನಾರ್ಹ ಅಂಶವಾಗಿದೆ. ಈ ನಾಟಕಗಳನ್ನು ವೀಕ್ಷಿಸಿ ರೋಮಾಂಚನಗೊಂಡಿದ್ದ ಪ್ರೇಕ್ಷಕರು ಭಾವಪರವಶರಾಗಿ ಜೈ ಭಾರತ ಮಾತಾ, ಬ್ರಿಟಿಷರಿಗೆ ದಿಕ್ಕಾರದ ಕೂಗು ಇಂದಿಗೂ ಇತಿ‌ಹಾಸದಲ್ಲಿ‌ ಅಚ್ಚಳಿಯದೇ ಉಳಿದಿದೆ. ರಂಗ ಭೂಮಿಯಲ್ಲಿ ಗರುಡರು ರಚಿಸಿದ ಸತ್ಯ ಸಂಕಲ್ಪ ನಾಟಕವನ್ನು ವೀಕ್ಷಿಸಿ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಮೆಚ್ಚಿಕೊಂಡ ಸಂಗತಿ ಇವರ ಅವಿಸ್ಮರಣೀಯ ನೆನಪುಗಳಲ್ಲಿ ಒಂದು. ರಂಗಭೂಮಿಯ ೧೯೦೫ ರಿಂದ ೧೯೪೦ ರ ವರೆಗಿನ ಅವಧಿಯಲ್ಲಿ ಬಂದ ವೃತ್ತಿ ರಂಗ ಕರ್ಮಿ ಮತ್ತು ನಾಟಕಕಾರರಲ್ಲಿ ಶ್ರೀ ಸದಾಶಿವ ರಾವ್ ಅವರು ಪಡೆದ ದೊಡ್ಡ ಹೆಸರನ್ನು ಮತ್ಯಾರು ಪಡೆಯಲಿಲ್ಲ. ಕರ್ನಾಟಕ ನಾಟಕಲಂಕಾರ, ಅಭಿನಯ ಕೇಸರಿ,ನಾಟ್ಯಾಚಾರ್ಯ ಹೀಗೆ ಹಲವು ಬಿರುದುಗಳನ್ನು ಪಡೆದ ಶ್ರೀ ಸದಾಶಿವ ರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು  ಗರುಡ ಸದಾಶಿವರಾಯರು ಎಂದೇ ಕರೆಯುತ್ತಿದ್ದರು. ಹೀಗೆ ಹಲವು ಬಿರುದುಗಳನ್ನು ಪಡೆದು ರಂಗಭೂಮಿಯಲ್ಲಿ ವಿಜ್ರಂಭಿಸಿದ ಸದಾಶಿವರಾಯರು ೭೪ ನೇ ವಯಸ್ಸಿನಲ್ಲಿ ೧೯೫೪ ರಲ್ಲಿ ಮರಣಹೊಂದಿದರು.


        ನಾಟಕಲಂಕಾರ ಬಿರುದು ಪಡೆದ ಶ್ರೀ ಗರುಡ ಸದಾಶಿವರಾಯರ ಕುಟುಂಬದ ಮೂರನೇ ತಲೆಮಾರಿನವರು ಗರುಡ ನಾಟ್ಯ ಸಂಘವನ್ನು ಸ್ಥಾಪಿಸಿದರು. ಮೊದಲು ಸದಾಶಿವರಾಯರು ಗದಗಿನಲ್ಲಿ ವಾಸಿಸುತ್ತಿದ್ದರಿಂದ ಈ ನಾಟಕ ಸಂಘದ ಮೊದಲ ಚಟುವಟಿಕೆ ಗದಗಿನಲ್ಲಿ ಆರಂಭವಾಯಿತು. ಗರುಡರ  ನೆನಪಿನಾರ್ಥವಾಗಿ ಆರಂಭಗೊಂಡ ಸಂಘವು ಅವರ ಮಕ್ಕಳಾದ ದತ್ತಾತ್ರೇಯ, ಶ್ರೀ ಪಾದ ರಾವ್,ಲಲ್ಲಭರಾವ್ ಮತ್ತು ನರಹರಿಯವರ ನೇತೃತ್ವದಲ್ಲಿ ಹೊಸ ಉತ್ಸಾಹದಲ್ಲಿ ಇಂದಿಗೂ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆದರೆ ಕಳೆದ ೪೦ ವರ್ಷಗಳ ಅವಧಿಯಲ್ಲಿ ನಾಟಕ ರಂಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕೀರ್ತಿ ಶ್ರೀ ಪಾದ ರಾವ್ ಗರುಡ ಅವರಿಗೆ ಮಾತ್ರ ಸಲ್ಲುತ್ತದೆ.  ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವ ರಾವ್ ಗರುಡರ ರಂಗಭೂಮಿಯ ಶಿಸ್ತನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದು ಇದು ಗರುಡರಿಗೆ ತೋರಿಸುತ್ತಿರುವ ಗೌರವವೂ ಆಗಿದೆ.

ಲೇಖಕರು : ಶ್ರೀ ಸಂದೀಪ್ ಜೋಶಿ

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply