ಇದೊಂದು ಸಂಕೀರ್ಣ ಸಿನಿಮಾ. ಬಹಳ ಜನ ಪಾತ್ರಧಾರಿಗಳು. ಆದರೆ ನಿರ್ದೇಶಕ ರವಿ (ಕೆ.ಎಸ್.ಎಲ್. ಸ್ವಾಮಿ) ಇದು ಬಹಳ ಸುಲಭ ಎನ್ನುವಂತೆ ತೆರೆಗೆ ತಂದಿದ್ದಾರೆ.
ಗಾಂಧಿಯ ಪುತ್ಥಳಿ ಇರುವ ಒಂದು ಚಿಕ್ಕ ವಠಾರ. ಹೆಸರು ಗಾಂಧಿನಗರ. ಅಲ್ಲಿ ಸುಮಾರು ಮನೆಗಳು. ಇಂಗ್ಲೀಷ್ ಪ್ರೊಫೆಸರ್ ನರಸಿಂಹರಾಜು ಆತನ ಹೆಂಡತಿ ಜ್ಯೂ. ರೇವತಿಗೆ ಬೆಡ್‍ಕಾಫಿಯಿಂದ ಎಲ್ಲ ಸೇವೆ ಮಾಡುತ್ತಾನೆ. ಅವನ ಮನೆಗೆ ಅವರಿಗೆ ಬೇಕಾದಾಗ ನೀರು ಬಿಂದಿಗೆಯಲ್ಲಿ ತಂದಿಡುತ್ತಾನೆ ಶೇಖರ್.
ಪ್ರಭಾಕರ (ದ್ವಾರಕೀಶ್) ಹಣವಿರುವ ಉಂಡಾಡಿ. ಅವನ ಅಕ್ಕ ಪಾಪಮ್ಮ. ಭಾವ ನಾಗಪ್ಪ. ಅವರ ಮಗಳು ಬಿವಿ ರಾಧ. ಈ ಶ್ರೀಮಂತ ಹುಡುಗಿಗೆ ಬಡವ ಶೇಖರನ ಮೇಲೆ ಪ್ರೇಮ. ಅವನೂ ಇವಳೂ ಸಹಪಾಠಿಗಳು. ದ್ವಾರಕೀಶ್ ಕೂಡ ಇವರ ಸಹಪಾಠಿಯೇ.
ಶಾಂತ (ಕಲ್ಪನಾ) ಬಾಲಕೃಷ್ಣ ಮತ್ತು ಪಂಢರಿಬಾಯಿ ಮಗಳು. ಬಡಸಂಸಾರ.
ರಮಾದೇವಿಯ ಗಂಡ ಅವಳ ಬಾಯಿ ಜೋರಿಗೆ ಹೆದರಿ ಎಲ್ಲೋ ಓಡಿ ಹೋಗಿರುತ್ತಾನೆ ಅವಳ ಎಮ್ಮೆಗೆ ಸ್ನಾನ ಮಾಡಿಸುವವನು ಶೇಖರ.
ಮರೆಗುಳಿ ಜಯಶ್ರೀಗೆ ರೇಷನ್ ತಂದುಕೊಡುತ್ತಿರುತ್ತಾನೆ ಶೇಖರ. ಮತ್ತೊಂದು ಮನೆಯ ಪುಟ್ಟ ಹುಡುಗ ವೇಣು.
ಮೇಲಿನ ಮನೆಯಲ್ಲಿ ಒಬ್ಬ ತಾತ. ಅದು ಕೆ.ಎಸ್.ಅಶ್ವತ್ಥ್. ಆತನಿಗೊಬ್ಬ ಮೂಕ ಸೇವಕ.
ಇವರೆಲ್ಲರ ಮನೆಯಲ್ಲಿ ವಾರಾನ್ನ ಮಾಡುತ್ತಿರುವ ಶೇಖರ್ (ರಾಜ್‍ಕುಮಾರ್) ಎಲ್ಲರಿಗೂ ಬೇಕಾದವನು. ಅವನಿಗೆ ಶಾಂತಳ ಮೇಲೆ ಲವ್ವು. ಒಂದು ಪ್ರೇಮಪತ್ರ ಬರೆಯುತ್ತಾನೆ ಅವಳಿಗೆ. ಹೆಸರು ಹಾಕಿರುವುದಿಲ್ಲ. ಪುಸ್ತಕದಲ್ಲಿಟ್ಟಿರುತ್ತಾನೆ. ‘ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ’ ಎಂದು ಕನಸಲ್ಲಿ ಅವಳೊಂದಿಗೆ ಹಾಡುತ್ತಾನೆ. ಅವಳಿಗೂ ಇವನ ಮೇಲೆ ಲವ್ವು.
ಒಂದು ದಿನ ದ್ವಾರಕೀಶ್ ಇವನ ಪ್ರೇಮಪತ್ರವನ್ನು ಕಾಲೇಜಿನಲ್ಲಿ ಯಾರಿಗೂ ರಾಕೆಟ್ ಮಾಡಿ ಎಸೆಯುತ್ತಾನೆ. ಅದು ಮೇಷ್ಟರಿಗೆ ಸಿಕ್ಕಿ ಶೇಖರ ಒಂದು ವಾರ ಸಸ್ಪೆಂಡ್ ಆಗುತ್ತಾನೆ. ಯಾವ ಮನೆಯವರೂ ಆಗ ಅವನಿಗೆ ವಾರಾನ್ನ ಕೊಡುವುದಿಲ್ಲ. (ಈಗಿನ ಜನಕ್ಕೆ ವಾರಾನ್ನ ಎಂದರೆ ಒಂದು ಚಿಕ್ಕ ವಿವರಣೆ. ಅನಾಥ ಶೇಖರನಿಗೆ ಆ ವಠಾರದ ಪ್ರತಿ ಒಂದು ಮನೆಯವರು ವಾರದ ಒಂದು ನಿಖರವಾದ ದಿನ ಊಟ ನೀಡುತ್ತಾರೆ.)
ಕಲ್ಪನಾಳನ್ನು ಮದುವೆಯಾಗಲು ದ್ವಾರಕೀಶ್, ಶೇಖರನನ್ನು ಮದುವೆಯಾಗಲು ಬಿ.ವಿ.ರಾಧ ಮುಂದಾದಾಗ ಒಂದು ಕಳ್ಳತನ ನಡೆದು, ಅದರ ಆಪಾದನೆಯನ್ನು ಹೊತ್ತು ಶೇಖರ ಜೈಲು ಸೇರುತ್ತಾನೆ….
ಮುಂದಿನ ಕಥೆಯನ್ನು ತೆರೆಯ ಮೇಲೆ ನೋಡಿ ಆನಂದಿಸಿರಿ.
ಗಾಂಧಿಯ ಪುತ್ಥಳಿ ಮುಂದೆ ರಘುಪತಿ ರಾಘವ ರಾಜಾರಾಂ ಹಾಡು, ಬಿವಿ ರಾಧ ಎಲ್ ಆರ್ ಈಶ್ವರಿ ಸ್ವರದಲ್ಲಿ ಓ ಮೈ ಡಾರ್ಲಿಂಗ್, ದ್ವಾರಕೀಶ್ ಬಿವಿರಾಧಾ ಸುಖವಾಗಲಿ ದುಃಖವಾಗಲಿ. ಹರಿಕಥೆ ದಾಸನಾಗಿ ದಿನೇಶ್ ಹಾಡುವ ಶ್ಯಮಂತಕೋಪಾಖ್ಯಾನ ಹರಿಕತೆ ಬಹಳ ಚೆನ್ನಾದ ಹಾಡು. ಎಸ್.ಪಿ.ಬಿ. ಅವರ ಕಾಣದ ಊರಲಿ ನೀ ಕುಳಿತಿರುವೆ ಅವಿಸ್ಮರಣೀಯ ಗೀತೆ, ನೀ ಮುಡಿದಾ ಮಲ್ಲಿಗೆ – ಪಿಬಿಎಸ್, ಪಿ.ಸುಶೀಲಾ ಹಾಡಿನಂತೆಯೇ.
ಪಾತ್ರವೊಂದು ಈ ಸಿನಿಮಾದ ಪ್ರತಿ ಸನ್ನಿವೇಶಕ್ಕೂ ಯಾವುದೋ ಒಂದು ಸಿನಿಮಾದಲ್ಲಿ ಇವನು/ಇವಳು ಹೀಗೆ ಮಾಡಿದ/ಳು ಎಂದು ಹೇಳುವುದು ಮಜಾ ಕೊಡುತ್ತದೆ.
ಸಿನಿಮಾದ ಮೊದಲ ಅರ್ಧದಲ್ಲಿ ರಾಜ್ ಅವರು ಅವರದೇ ಸ್ವಂತ ಧ್ವನಿಯಲ್ಲಿ ಅನೇಕ ಸರ್ವಜ್ಞನ ಪದಗಳನ್ನೂ, ದಾಸರ ಪದಗಳ ತುಣುಕನ್ನೂ ಹಾಡಿದ್ದಾರೆ. ಅವು ಕೇಳಲು ಬಲು ಮಧುರ.
ಸಿನಿಮಾದ ಕೊನೆಯಲ್ಲಿ ಒಂದು ಅಚ್ಚರಿ ಇದೆ. ರಾಜ್ ಭಕ್ತನಾದ ನನಗಂತೂ ಇದೊಂದು ನಿಜವಾದ ಸಂತಸದ ಅಚ್ಚರಿ!