ಗಾಯನಸಾರ್ವಭೌಮ

ರಾಜ್ಕುಮಾರ್

ಡಾII ರಾಜಕುಮಾರ್ ಎಂದರೆ ನಮ್ಮಗೆ ತಕ್ಷಣ ನೆನಪಾಗುವುದು ಅವರ ಮನೋಜ್ಞ ಅಭಿನಯ, ಸಾಂಸಾರಿಕ ಚಿತ್ರಗಳು, ಪ್ರತಿ ಪಾತ್ರದಲ್ಲೂ ಲೀನವಾಗಿ ಜೀವತುಂಬುವ ಕಲೆ, ಶಿಸ್ತು, ಮಾನವೀಯ ಗುಣಗಳನ್ನು ಸಾರುವ ಕಥೆಗಳು ಹೀಗೆ ಅನೇಕರಿಗೆ ಡಾII ರಾಜಕುಮಾರ್ ವಿವಿಧ ರೀತಿಯಲ್ಲಿ ಅವರ ಸ್ಮ್ರಿತಿ ಪಲ್ಲಟದಲ್ಲಿ ಸೇರಿಹೋಗಿದ್ದರೆ. 

ಆದರೆ ನನಗೆ ಡಾII ರಾಜಕುಮಾರ್ ಎಂದೊಡನೆ ತಕ್ಷಣ ನೆನಪಾಗುವುದು ಅವರ ಹಾಡುಗಳು, ಅದರ ವೈವಿಧ್ಯತೆ ಮತ್ತು ಅವರ ಸುಮಧುರ ಕಂಠ.  ಇಲ್ಲಿ ಅವರ ಹಾಡುಗಳನ್ನು ಮತ್ತು ಅದರಲ್ಲಿ ಅವರು ಉಣಬಡಿಸಿದ  ರಸಮಯವಾದ ಸಂಗೀತದ ಮೆಲಕು ಸ್ವಲ್ಪ ಹಾಕೋಣ.

ಅಣ್ಣಾವ್ರಿಗೆ PB ಶ್ರೀನಿವಾಸ್ ರವರ ಕಂಠ ಬಹುವಾಗಿ ಒಪ್ಪುತ್ತಿತ್ತು, ಇವರನ್ನು ಶರೀರ ಮತ್ತು ಅವರನ್ನು ಶಾರೀರ ಅನ್ನುತಿದ್ದರು. PB ಶ್ರೀನಿವಾಸ್ ರವರು ಅಣ್ಣಾವ್ರಾ ಸುಮಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ.  ಆದರೆ ಯಾವಾಗ ಅಣ್ಣಾವ್ರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಯಾರೇ ಕೂಗಾಡಲಿ ಎಂದು ಧ್ವನಿ ಸೇರಿಸಿದರೋ, ಅಭಿಮಾನಿಗಳು ಅವರ ನಟನೆಯ ಜೊತೆ ಅವರ ಧ್ವನಿಗೂ ಅಭಿಮಾನಿಗಳಾಗಿಬಿಟ್ಟರು.  ಅಲ್ಲಿಂದ ಅವರೇ ತಮ್ಮ ಗೀತೆಗೆ ಧ್ವನಿ ನೀಡಲು ಶುರು ಮಾಡಿದರು, ನಾಟಕದಲ್ಲಿ ಸಾಕಷ್ಟು ಅಭಿನಯಿಸಿದ್ದರಿಂದ ಅವರಿಗೆ ಹಾಡುವುದು ಕಷ್ಟವಾಗಲಿಲ್ಲ.  ಚಿತ್ರಗಳಲ್ಲಿ ಅವರ ಅಭಿನಯದ ಜೊತೆ ಅವರ ಗಾಯನವು ಸಂಗಮವಾಗಿ ಒಟ್ಟಿಗೆ ಹರಿಯಲು ಪ್ರಾರಂಭಿಸಿತು.

ಈಗ ಅವರ ವೈವಿಧ್ಯಮಯ ಹಾಡಿನ ಬಗ್ಗೆ ಕೊಂಚ ಪಕ್ಷಿನೋಟ ಬೀರೋಣ

ಶಾಸ್ತ್ರೀಯ ರಾಗಗಳ ಹಾಡುಗಳು

ಇವರು ಕೆಲವಂದು ಅಪರೂಪದ ರಾಗಗಳ ಹಾಡುಗಳನ್ನು ಹಾಡಿದರೆ ಮತ್ತು ಆ ರಾಗದಲ್ಲಿ ನಮ್ಮ ಚಲನಚಿತ್ರ ಗೀತೆಗಳು ಬಂದಿರುವುದು ತುಂಬಾ ವಿರಳ. ಉದಾಹರಣೆಗೆ, “ಯಾವ ಕವಿಯು ಬರೆಯಲ್ಲಾರ” ಇದು ಮೂಲ ಚಂದ್ರಕೌನ್ಸ್ ಎಂಬ ರಾಗದ ಆದರದ ಮೇಲೆ ರಚಿಸಲಾಗಿದೆ.  ಇನ್ನು “ಕಣ್ಣೆರ ಧರೆ ಇದೇಕೆ” ಹಾಡು ಲಲಿತ್ ಎಂಬ ಅಪರೋಪದ ರಾಗದಲಿ ರಚನೆ. ಚಕ್ರವಾಕ ಎಂಬಾ ರಾಗದಲಿ ಇವರು ಹಾಡಿರುವ “ಬೊಂಬೆಯಾಟವಯ್ಯ”, “ಹೇಳುವುದು ಒಂದು ಮಾಡುವುದು ಇನೊಂದು” ಹಾಡುಗಳು ಇಂದಿಗೂ ನಮ್ಮನು ಕಾಡುತ್ತವೆ. 

ಇನ್ನು ಅಭೇರಿ ರಾಗದಲ್ಲಿ ಇವರು ಹಾಡಿರುವ “ಎಂಥ ಸೌಂದರ್ಯ ಕಂಡೆ”, “ರಾಗ ಜೀವನ ರಾಗ”, “ಚೆಲುವೆಯೇ ನಿನ್ನ ನೋಡಲು” ಹಿಂದೋಳ ರಾಗದಲ್ಲಿ “ಬಾನಿನ ಅಂಚಿಂದ ಬಂದೆ” ಹಾಡುಗಳು ರಸಿಕರ ಮನವನ್ನ ಸ್ಪರ್ಶಿಸಿದೆ.

ಶಿವರಂಜನಿ ರಾಗದಲಿ “ಇದು ಯಾರು ಬರೆದ ಕಥೆಯೋ”, ರೇವತಿ ರಾಗದಲಿ “ಹೃದಯ ಸಮುದ್ರ ಕಲಕಿ” ಚಿತ್ರಪ್ರೇಮಿಗಳ ಮನಸ್ಸನ್ನು ಕಲಕಿದೆ ಎಂದರೆ ಅತಿಶಯೋಕ್ತಿಯೆಲ್ಲಾ.

ಮೋಹನ ರಾಗದಲಿ ಹಾಡಿರುವ “ಜೇನಿನ ಹೊಳೆಯೋ ಹಾಲಿನ ಮಳೆಯೋ” ಕರ್ನಾಟಕದ ಸಂಸೃತಿಯನ್ನು ಬಿಂಬಿಸುವ ಗೀತೆಗಳಲ್ಲಿ ಮೇಲ್ಪಂಕ್ತಿಯಲ್ಲಿ ಸ್ಥಾನ ಪಡೆದಿದೆ.

ಇಲ್ಲಿ ಒಂದು ವಿಸ್ಮಯಕಾರವಾದ ವಿಷಯವೆಂದರೆ ಅಣ್ಣಾವ್ರಿಗೆ ಶಾಸ್ತ್ರೀಯ ಸಂಗೀತದ ತರಬೇತಿಯಾಗಿಲ್ಲಾ ಆದರೆ ಕಲಿಯಬೇಕು ಎಂಬ ಅವರ ಶ್ರದ್ಧೆ ಈ ಗೀತೆಗಳನ್ನು ಅವರಲ್ಲಿ ಹಾಡಿಸಿತು.  ಅವರ “ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಅವರು ಶಹನಾಯಿ ವಾದಕರಾಗಿ ಅಭಿನಯಿಸಿದರು, ಇದಕ್ಕಾಗಿ ಅವರು ಪಂಡಿತ್ ಭೀಸ್ಮಿಲ್ಲಾ ಖಾನರ ಬಳಿ ಶಹನಾಯಿ ಹಿಡಿದು ಕೊಳ್ಳುವುದು ಹೇಗೆ, ಯಾವರೀತಿ ಅದನ್ನು ನುಡಿಸುತ್ತಾರೆ ಎಂಬಾ ತರಬೇತಿ ಪಡೆದರಂತೆ.  ನೀವು ಚಿತ್ರ ನೋಡುವಾಗ ಗಮನಿಸಿ ನಿಮಗೆ ಡಾII ರಾಜಕುಮಾರ್ ಸಾಕ್ಷಾತ್ ಶಹನಾಯಿ ವಾದಕರೇನೋ ಎಂದು ಭಾಸವಾಗುತ್ತದೆ.   

ತಮಾಷೆಯ ಹಾಡುಗಳು

ಡಾII ರಾಜಕುಮಾರ್ ಅವರ ಅಭಿನಯದಲ್ಲಿ ತುಂಬಾ ಹಾಸ್ಯ ಸನ್ನಿವೇಶಗಳನ್ನು ಮಾಡಿದ್ದಾರೆ ಆದರೆ ಆ ಹಾಸ್ಯವನ್ನು ಅವರು ತಮ್ಮ ಗಾಯನದ್ಲಲೂ ತುಂಬಿದ್ದಾರೆ.

“ಬಿಸಿ ಬಿಸಿ ಕಜ್ಜಾಯ ಬಿಸಿ ಬಿಸಿ ಕಜ್ಜಾಯ ಮಾಡಿಕೊಡುವೆ ನಾನು”, “ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ”, “ಚಂದಿರ ತಂದ ಹುಣಿಮ್ಮೆ ರಾತ್ರಿ”, “ನಾರಿಯ ಸೀರೆ ಕದ್ದ, ರಾಧೆಯ ಮಾನವ ಗೆದ್ದ”, “ಏನು ಮಾಯವೋ ಏನು ಮಂತ್ರವೋ”, “ಇನ್ನು ಹತ್ತಿರ ಹತ್ತಿರಾ ಬರುವೆಯಾ” ಹೇಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.  ಈ ಹಾಡುಗಳಲ್ಲಿ ಅವರ ತುಂಟ ಅಭಿನಯವೂ ಸೇರಿ ನೋಡುಗರಿಗೆ ಹಾಸ್ಯದ ರಸದೌತಣವನ್ನು ನೀಡುತ್ತದೆ.

ಬಾಳಿನ ಸಾರವನ್ನು ಸಾರುವ ಹಾಡುಗಳು

ಇತೀಚೆಗೆ ಜಗತ್ತೇ ಕರೋನದಿಂದ ತತ್ತರಿಸಿರುವಾಗ ನಮ್ಮ ಸ್ನೇಹತರೊಬ್ಬರು ಡಾII ರಾಜಕುಮಾರ್ ರವರ “ಮುತ್ತಿನಂಥ ಮತ್ತೊಂದು ಗೊತ್ತೇನಮ್ಮ ನಾವು ಕಾಲಕ್ಕೆ ತಕ್ಕಂತೆ ನಡಿಯಬೇಕು ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು” ಎಂಬ ಹಾಡು ಸ್ಮರಿಸುತ್ತ ಈಗ ನಾವು ಇರುವ ಸ್ಥಿತಿಗೆ ತಕ್ಕ ಹಾಡು ಎಂದು ಹೇಳುತ್ತಿದ್ದರು. 

ಹೀಗೆ ಅವರ “ಬಾನಿಗೊಂದು ಎಲ್ಲೇ ಎಲ್ಲಿದೆ”, “ಬಾಳುವಂಥ ಹೂವೆ ಬಾಡುವಾಸೆ ಏಕೆ”, “ಮಾನವನಾಗುವೆಯ ಇಲ್ಲ ಧಾನವನಾಗುವೆಯ” “ಬದುಕೇ ಹಸಿರು ಪ್ರೀತಿ ಬೆರೆತಾಗ” ಹಾಡುಗಳು ತುಂಬಾ ಜನರಿಗೆ ಜೀವನದಲ್ಲಿ ಧೈರ್ಯ ತುಂಬಿದೆ.  

ಕರ್ನಾಟಕ ಸಂಪತ್ತು ಸಂಪ್ರದಾಯವನ್ನು ಸಾರುವ ಹಾಡುಗಳ ಸಾಲಿನಲ್ಲಿ ಮೊದಲು ನಿಲ್ಲುವುದು “ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು” , “ಜೇನಿನ ಹೊಳೆಯೋ ಹಾಲಿನ ಮಳೆಯೋ” ಹಾಗೂ “ಕನ್ನಡ ಮಾತು ಚನ್ನ”.

ಇವರು ಹಲವಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ ಉದಾಹರಣೆಗೆ “ಹಾಲಲ್ಲಾದರೂ ಹಾಕು” , “ವಾರಾಬಂತಮ್ಮಾ ಗುರುವಾರ ಬಂತಮ್ಮಾ”, “ಆಕಾಶ ಭೂಮಿಗಳ ಒಂದು ಮಾಡಿ ನಿಂತ”, “ಬಂದೆಯಾ ಗುರುರಾಯ”, “ನೀನು ನಾನು ಒಂದೇ ಏನು” ಈ ಗೀತೆಗಳು ನಮ್ಮನು ಭಕ್ತಿರಸದಲ್ಲಿ ತೇಲಿಸಿದೆ. 

ಇನ್ನು ಕೆಲವು ಸ್ವಾರಸ್ಯಕರ ಸಂಗತಿಗಳೆಂದರೆ

ಇವರ ಜೀವನ ಚೈತ್ರ ಚಿತ್ರದ “ನಾದಮಯ” ಹಾಡಿಗೆ “ರಾಷ್ಟ್ರ ಪ್ರಶಸ್ತಿಯನ್ನು” ಪಡೆದಿದ್ದಾರೆ ಇದು ಒಬ್ಬ ಮೂಲತಹ ನಟನಾದವನಿಗೆ ಒಂದು ಅದ್ಬುತ ಸಾಧನೆ.

ಅವರು ಬೇರೆ ಗಾಯಕರಿಗೆ ಹಾಡಿರುವ ಹಾಡುಗಳಲ್ಲಿ ನಮಗೆ ತಕ್ಷಣ ನೆನಪಾಗುವುದು SP ಬಾಲಸುಬ್ರಮಣ್ಯ ಅವರಿಗೆ ಹಾಡಿರುವ “ದೀಪಾವಳಿ ದೀಪಾವಳಿ” ಹಾಡು.

ಇವರು ಪೂರ್ಣ ಆಂಗ್ಲ ಭಾಷೆಯಲ್ಲಿ ಹಾಡಿರುವ ಹಾಡು “IF YOU COME TODAY” ಒಂದು ಅಪರೂಪದ ಹಾಡಾಗಿ ಉಳಿದಿದೆ.

ಇವರು ಬೇರೆ ಹೀರೋಗಳಿಗೆ ಹಾಡಿರುವ ಹಾಡುಗಳಲ್ಲಿ “ಜಾಗವೇ ಒಂದು ರಾಣಾ ರಂಗ”, “ತಂದೆ ಕೊಡಿಸೋ ಸೀರೆ”, “ಮೇಘ ಮಾಲೆ”, “ಮೇಘ ಬಂತು ಮೇಘ”, “ಹೃದಯ ಸಮುದ್ರ ಕಲಕಿ”, “ಓ ಗುಲಾಬಿ” ಸರ್ವ ಕಾಲಕ್ಕೂ ಪ್ರಸಿದ್ಧ.

ಒಂದು ಅಂಕಿ ಅಂಶಗಳ ಪ್ರಕಾರ ಇವರು ಸುಮಾರು ೩೦೦ ಚಲನಚಿತ್ರ ಗೀತೆಗಳು ಹಾಗೂ ೪೦೦ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಹಾಡಿದ್ದಾರೆ.

ಡಾII ರಾಜಕುಮಾರ್ ಹಾಗೂ ಅವರ ಪ್ರತಿಭೆ ಒಂದು ದೊಡ್ಡ ಸಮುದ್ರ, ಏಪ್ರಿಲ್ ೨೪ ಅವರ ಹುಟ್ಟು ಹಬ್ಬ ಈ ಸಮಯದಲ್ಲಿ ಆ ಪ್ರತಿಭೆ ಎಂಬ ಅಗಾಧ ಸಮುದ್ರದಲ್ಲಿ ಒಂದು ಬೊಗಸೆ ನೀರನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. 

ಅವರ ಗಾಯನವು ಕನ್ನಡಿಗರ ಮನಸಿನಲ್ಲಿ ಎಂದಿಗೂ ಅಜರಾಮರ, ಇವರನ್ನು ನಟಸಾರ್ವಭೌಮ ಅನ್ನುತ್ತಾರೆ ಹಾಗೆ ಇವರನ್ನು ಗಾಯನಸಾರ್ವಭೌಮ ಎಂದರೆ ತಪ್ಪಾಗಲಾರದು

ಲೇಖಕರು:ಪ್ರದೀಪ್ ಬೇಲೂರ್  

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply