ಗೌರಿ

“ನಾನೇ ರಾಜಕುಮಾರ”

ಈ ಸಿನಿಮಾ ಬಗೆಗೆ ಏನು ಹೇಳಲಿ? ಅದ್ಭುತವಾದ ಹಾಡುಗಳು, ಅವುಗಳಲ್ಲಿ ಜನಪ್ರಿಯ ಕವಿಗಳ ಗೀತೆಗಳೆರಡು. ಸಾಹುಕಾರ್ ಜಾನಕಿಯೇ ಗೌರಿ. ಈಕೆ ಕನ್ನಡವನ್ನು ತಾಯಿಭಾಷೆಯಂತೆ ಸ್ಪಷ್ಟವಾಗಿ ಆಡುತ್ತಾರೆ. ಇವರ ತಮಿಳು ತೆಲುಗು ಸಿನಿಮಾಗಳನ್ನೂ ನೋಡಿ, ಇವರ ಮಾತು ಆ ಭಾಷೆಗಳಲ್ಲೂ ಕೇಳಿರುವುದರಿಂದ, ಕನ್ನಡದಲ್ಲೇ ಅನೇಕ ಸಿನಿಮಾಗಳನ್ನೂ ನೋಡಿರುವುದರಿಂದ… ಈಕೆಯ ಎಮೋಟಿಂಗ್ ಒಂದು ಅದ್ಭುತ. ದುರಹಂಕಾರದ ದುಷ್ಟ ಹೆಣ್ಣಾಗಲೀ (ಸಾಕು ಮಗಳು, ಮಲ್ಲಿಮದುವೆ), ಕಣ್ಣೀರು ಸುರಿಸುವ ಹೆಣ್ಣಾಗಲೀ (ಕನ್ಯಾರತ್ನ, ಗೌರಿ), ಈಕೆ ಒಬ್ಬ ವಿಶಿಷ್ಟ ನಟಿ. ಕೃಷ್ಣಕುಮಾರಿ ಈಕೆಯ ಸ್ವಂತ ಸೋದರಿ ಎಂದು ಕೇಳಿದ್ದೇನೆ.

ರಾಜ್‍ಕುಮಾರ್ ಬಗ್ಗೆ ಹೇಳಲು ಏನಿದೆ? ಅಬ್ಬಾ! ಕೊಡುವ ಪಾತ್ರ, ಗಾತ್ರ, ಅದರ ವೇಷಭೂಷಣ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಈ ಚಿತ್ರದಲ್ಲಿ ಜಟಕಾ ಓಡಿಸುವ ರಾಮಯ್ಯ (ರಾಜ್‍ಕುಮಾರ್). ಹೆಂಡತಿ ಗೌರಿ (ಸಾಹುಕಾರ್ ಜಾನಕಿ). ಪುಟ್ಟ ಮಗ ಚಂದ್ರು. ರಾಮಯ್ಯನ ವೇಷ ಚೌಕಳಿ ಲುಂಗಿ, ಒಂದು ಅರೆ ತೋಳಿನ ನೂಲಿನ ಜುಬ್ಬಾ. ಸಿನಿಮಾ ಕೊನೆಗೆ ಬರುವ ವೇಳೆಗೆ ಗಡ್ಡ, ತಲೆಗೊಂದು ಚೌಕ ಕಟ್ಟಿ, ಕಚ್ಚೆ ಪಂಚೆ ಉಟ್ಟಿರುತ್ತಾನೆ ರಾಮಯ್ಯ. 

ವಿಧಿಯ ಆಟ ಈ ಸಿನಿಮಾ. ಕೆ.ಎಸ್.ಅಶ್ವತ್ಥ್ ಮತ್ತು ಸಂಧ್ಯಾ (ಜಯಲಲಿತಾ ತಾಯಿ) ಅಣ್ಣ ತಂಗಿಯರು. ತನ್ನ ತಂಗಿಗೆ ಮಕ್ಕಳಾಗಲಿಲ್ಲವೆಂದು ತನ್ನ ಭಾವ ಬೇರೆ ಮದುವೆ ಮಾಡಿಕೊಳ್ಳಲು ಹೊರಟಾಗ ತಂಗಿಯು ಗರ್ಭಿಣಿ ಎಂದು ಸುಳ್ಳು ಹೇಳುವ ಅಶ್ವತ್ಥ್, ಅ ಸಮಯದಲ್ಲಿ ಗರ್ಭಿಣಿ ಆಗಿರುವ ಗೌರಿಯ ಮಗುವನ್ನು ತನ್ನ ತಂಗಿಗೆ ದಾನ ಮಾಡೆಂದು ಹೇಳುತ್ತಾನೆ. ವಿಧಿ ಅವರ ಬಾಳಲ್ಲಿ ಆಟವಾಡಿ, ಸಂಶಯದ ಪಿಶಾಚಿ ತಲೆಗೆ ಹೊಕ್ಕ ರಾಮಯ್ಯ ಗೌರಿಯನ್ನು ಮನೆಯಿಂದ ದೂಡುತ್ತಾನೆ. ಪುಟ್ಟ ಮಗ ಚಂದ್ರು ಮನೆ ಬಿಟ್ಟು ಅಮ್ಮನನ್ನು ಹುಡುಕಿ ಹೊರಟುಹೋಗುತ್ತಾನೆ.

ವಿಧಿ ಗೌರಿ ಮತ್ತು ಚಂದ್ರುವನ್ನು ಒಂದು ಮಾಡುತ್ತದೆ. ಗೌರಿ ಗಾಡಿಯಲ್ಲಿ ಮಿಠಾಯಿ ಮಾರಿ, ಚಂದ್ರು ಪೇಪರ್ ಹಾಕುತ್ತಾ ಜೀವನ ಮಾಡಿ, ಈಗ ಲಾಯರ್ ಆಗುತ್ತಾನೆ ಚಂದ್ರು. ರಾಮಯ್ಯನನ್ನು ಅವನ ಮಗಳ ಬಾಡಿಗಾರ್ಡ್ ಮಾಡುತ್ತದೆ ವಿಧಿ. ದುರಹಂಕಾರದ ಸುಧಾ ತನ್ನ ಹೆತ್ತ ತಂದೆಯನ್ನೇ ಆಳಿನಂತೆ ನಡೆಸಿಕೊಳ್ಳುತ್ತಾಳೆ.

ಕೋರ್ಟ್ ಕೇಸ್ ಒಂದು ಬಂದಾಗ ನಿಜಾಂಶ ತಿಳಿದು ಶುಭಂ.

ಎಂ.ಎನ್. ಲಕ್ಷ್ಮೀದೇವಿ, ಆರ್‍ಟಿ ರಮಾ ಮತ್ತು ರಾಮಚಂದ್ರಶಾಸ್ತ್ರಿ ಮನೆಮುರುಕರ ಪಾತ್ರಗಳನ್ನು ಸಖತ್ತಾಗಿ ವಹಿಸಿದ್ದಾರೆ.

ಕೆ.ಎಸ್.ನ ಅವರ ‘ಇವಳು ಯಾರು ಬಲ್ಲೆಯೇನು’ (ಪಿಬಿಎಸ್ ಮತ್ತು ಎಸ್‍ಜಾನಕಿ-ಓನ್ಲಿ ಹಮ್ಮಿಂಗ್), ಕುವೆಂಪು ಅವರ ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು'(ಎಸ್.ಜಾನಕಿ) ಈ ಚಿತ್ರದ್ದೇ. 

‘ನಾ ಬೇಡವೆಂದೇ ನೀನೋಡಿ ಬಂದೆ’ ಎಂಬ ಪ್ಯಾಥೋಸ್ ಹಾಡು ಎಸ್‍ಜಾನಕಿ ಅವರಿಂದ. ಪಿಬಿಎಸ್ ಮತ್ತು ಎಸ್‍ಜಾನಕಿ ಅವರ ‘ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಣ್ಣದ ಅಂಗಿ ತೊಟ್ಟ ತಂಗಿ…’ ಇದರದ್ದೇ.

ಪಿಕ್ಚರ್‍ನಲ್ಲಿ ಯಾವ ಎಮೋಷನ್ ಕೂಡ ಅತಿರೇಕದ್ದಲ್ಲ. 1963ರ ಸಿನಿಮಾ ಇಂದಿಗೂ ಬಹಳ ಚೆನ್ನು ಎನಿಸುತ್ತದೆ. ಕಷ್ಟಗಳ ಸರಮಾಲೆಯ ನಂತರ ಇದ್ದಕ್ಕಿದ್ದಂತೆ ಅವರುಗಳು ಸೆಟ್ಲ್ ಆಗಿರುವಂತಹ ದೃಶ್ಯಗಳನ್ನು ಕಂಡಾಗ ಗಾಢ ಸಿನಿಮಾ ಪ್ರೇಮಿಗೆ ಒಂದು ರೀತಿ ನಿರಾಳ ಎನಿಸಬಹುದು!

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply