ಗುರುವೊಬ್ಬ ಪ್ರಚಂಡ (ರಾಜ್‍ಕುಮಾರ್) ಎನ್ನುವ ಶಿಷ್ಯನಿಗೆ ಒಂದು ಗಂಡು, ಒಂದು ಹೆಣ್ಣು ಮಗುವನ್ನು ಒಪ್ಪಿಸಿ ಅವರನ್ನು ಚೆನ್ನಾಗಿ ನೋಡಿಕೋ ನಾನು ಬರುವವರೆಗೂ ಎಂದು ಹೇಳಿ ಹೊರಡುತ್ತಾನೆ. ಪ್ರಚಂಡನ ಜೊತೆಯ ಶಿಷ್ಯ ಹೇಳುತ್ತಾನೆ.
‘ಬ್ರಹ್ಮಲಿಖಿತದಂತೆ ಗಂಡು ಹುಡುಗ ವಿದ್ಯಾಧರ ಬೇಟೆಗಾರನಾಗುತ್ತಾನೆ, ಹೆಣ್ಣು ಹುಡುಗಿ ಚಂದ್ರಿಕ ನರ್ತಕಿಯಾಗುತ್ತಾಳೆ’
ಇದನ್ನು ಸುಳ್ಳು ಮಾಡಲು ಕಾಡಿನ ನಡುವೆ ಹೋಗುತ್ತಾನೆ ಪ್ರಚಂಡ. ಆದರೆ ಹುಡುಗ ಎದ್ದು ಮೆಲ್ಲನೆ ಹೋಗಿ ಚಿರತೆ, ಕರಡಿಗಳ ಹೋರಾಟ ನೋಡುತ್ತಾನೆ. ಆಗ ಅಲ್ಲಿಗೆ ಬಂದ ಬೇಟೆಗಾರರು ವಿದ್ಯಾಧರನನ್ನು ಕರೆದುಕೊಂಡು ಹೋಗಿ, ವೀರನಾಯಕ ಎಂದು ಹೆಸರಿಟ್ಟು ಸಾಕಿ, ಬೆಳೆಸುತ್ತಾರೆ. (ರಾಜಾಶಂಕರ್). ಇವನಿಗೆ ಡಿಂಬ (ಬಾಲಕೃಷ್ಣ) ಗೆಳೆಯ.
ಇತ್ತ ಪ್ರಚಂಡ ಚಂದ್ರಿಕಳನ್ನು ಬೆಳೆಸುತ್ತಾನೆ (ಕೃಷ್ಣಕುಮಾರಿ). ಅವಳನ್ನು ಕಟ್ಟುನಿಟ್ಟಾಗಿ ಬೆಳೆಸಿದಾಗ ಅಲ್ಲಿಗೆ ರಾಜಕುಮಾರ ಚಂದ್ರಕುಮಾರ (ಉದಯಕುಮಾರ್) ಮತ್ತು ಅವನ ಗೆಳೆಯ ವಿನೋದ (ನರಸಿಂಹರಾಜು) ಬರುತ್ತಾರೆ.
ಪ್ರೇಮವು ಚಂದ್ರಕುಮಾರ ಮತ್ತು ಚಂದ್ರಿಕ ನಡುವೆ ಅಂಕುರವಾಗುತ್ತದೆ. (ಸುಂದರವಾದ ಪಿಬಿಎಸ್ ಎಸ್‍ಜಾನಕಿ ಹಾಡಿದೆ. ನೀನೇ ನೀರೇ ಮಂದಾರ ಮಂದಿರದಿಂದ ಬಾರೇ….) ಆದರೆ ಬ್ರಹ್ಮಚಾರಿ ಎಂದು ಸಂಬೋಧಿಸಲ್ಪಡುವ ಪ್ರಚಂಡನಿಗೆ ಅದು ಸಹ್ಯವಾಗುವುದಿಲ್ಲ. ಆದರೆ ಪರಿಸ್ಥಿತಿ ಹೇಗಾಗುವುದೆಂದರೆ ಬ್ರಹ್ಮಚಾರಿ ಮತ್ತು ಚಂದ್ರಿಕ ಬೇರೆ ಆಗುತ್ತಾರೆ. ಚಂದ್ರಕುಮಾರ ವಿರಹದಲ್ಲಿ ಚಂದ್ರಿಕಳ ಚಿತ್ರ ಬರೆಯುತ್ತಾನೆ. ಅದು ಜೀವ ತಳೆದು ಓ ನಲ್ಲನೇ ನೀನೇ ತಾನೇ ಆಸರೆ… ಎಂಬ ಖವ್ವಾಲಿ ಶೈಲಿಯ ಹಾಡು ಹಾಡುತ್ತದೆ ಪಿ ಸುಶೀಲಾ ಧ್ವನಿಯಲ್ಲಿ. ನಂತರ ಚಂದ್ರಕುಮಾರ ಮುತ್ತಿನ ರಾಣಿ (ರಾಜಶ್ರೀ) ಬಳಿ ಬಂಧನಕ್ಕೊಳಗಾಗುತ್ತಾನೆ. ಅವಳು ‘ಗೆಜ್ಜೆ ಝಣ್ ಝಣ್ ನುಡಿದಾವೆ’ ಎಂದು ಎಸ್‍ಜಾನಕಿ ಸ್ವರದಲ್ಲಿ ಹಾಡುತ್ತಾಳೆ. ಪಿ. ನಾಗೇಶ್ವರರಾವ್ ದನಿಯಲ್ಲಿ ನರಸಿಂಹರಾಜು ‘ಬ್ರಹ್ಮದೇವಾ ಬ್ರಹ್ಮದೇವಾ’ ಎಂದು ಸಮುದ್ರ ತಟದಲ್ಲಿ ಗೆಳೆಯನಿಗಾಗಿ ಹಲುಬುವ ಹಾಡಿದೆ.
ಕೊನೆಗೆ ಎಲ್ಲವೂ ಶುಭಂ.
ರಾಜ್‍ಗೆ ಹಾಡುಗಳಿಲ್ಲ. ತನ್ನ ಸಾಕುಹುಡುಗಿ ಪ್ರೇಮಿಸಿದಳೆಂಬ ಕೋಪ, ಅವಳ ಪ್ರೇಮ ಅರ್ಥ ಮಾಡಿಕೊಂಡಾಗ ಅವಳನ್ನು ಚಂದ್ರಕುಮಾರನ ಬಳಿಗೆ ಕರೆದೊಯ್ಯುವಿಕೆ, ತನ್ನ ಪ್ರಯತ್ನ ವಿಫಲವಾಯಿತೆಂಬ ದುಃಖ, ನಂತರ ಸಂತೋಷ ಎಲ್ಲವನ್ನೂ ಅದ್ಭುತವಾಗಿ ನಿಭಾಯಿಸಿದ್ದಾರೆ. ಶೀರ್ಷಿಕೆಯ ಪಾತ್ರ ಧರಿಸಿದ ಉದಯಕುಮಾರ್ ಗತ್ತು ಚೆನ್ನ. ರಾಜಾಶಂಕರ್ ತುಂಟತನದಿಂದ ನಟಿಸಿದ್ದಾರೆ.
ಎಸ್ ಕೆ ಕರೀಂಖಾನ್ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.