ಚಿತ್ರರಂಗದ ವಿಶಿಷ್ಟ ಧ್ವನಿಯ ಹಿನ್ನಲೆ ಗಾಯಕ ಘಂಟಸಾಲ

ಯಾವುದೇ ಗಣಪತಿಯ ಹಬ್ಬ ಬಂದರೆ ಮೊದಲು ಕೇಳಿಸುವುದೇ ಘಂಟಸಾಲ ಹಾಡಿರುವ ಹಂಸ ಧ್ವನಿ ರಾಗದ ವಾತಾಪಿ ಗಣಪತಿ ಭಜೇಹಂ, ತಿರುಪತಿಗೆ ಹೋದರೆ ಏಳು ಬೆಟ್ಟಗಳಲ್ಲಿ ಹೋದ ಕಡೆಯಲ್ಲ ಘಂಟಸಾಲ ಧ್ವನಿಯೇ ಕೇಳಿಸುತ್ತದೆ. ಅಂದಿನ ವರ್ಷಗಳಲ್ಲಿ ಘಂಟಸಾಲ ಹಾಡಿದ್ದ ನಮೋ ವೆಂಕಟೇಶ, ನಮೋ ತಿರುಮಲೇಶ ಭಕ್ತಿ ಗೀತೆಯ ನಂತರವೇ ಚಿತ್ರ ಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಮುಖ್ಯವಾಗಿ ಎಲ್ಲ ಭಾಷೆಗಳಲ್ಲಿ ಅದರಲ್ಲೂ ಕನ್ನಡ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಇವರು ಇಂದಿಗೂ ಕೂಡ ಹಿನ್ನಲೆ ಗಾಯಕರಾಗಿ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
      ಇವರು 1922, ಡಿಸೆಂಬರ್ 4 ರಂದು ಆಂದ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಚೌಟಿಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸೂರ್ಯನಾರಾಯಣ ರಾವ್ ಕೂಡ ಪ್ರಸಿದ್ಧ ಗಾಯಕರಾಗಿದ್ದರು. ಆದರೆ ದುರದೃಷ್ಟವಶಾತ್ 12 ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ತಮ್ಮ ಚಿಕ್ಕಪ್ಪ ರಾಮಯ್ಯನ ಆಶ್ರಯದಲ್ಲಿ ಬೆಳೆಯತೊಡಗಿದರು‌. ತಮಗಿದ್ದ ಸಂಗೀತದಲ್ಲಿನ ಆಸಕ್ತಿ, ಕಲಿಯುವ ಇಚ್ಛೆ ಇದ್ದರೂ ತಮ್ಮ ಚಿಕ್ಕಪ್ಪನ ಮನೆಯಲ್ಲಿ ಯಾರೂ ಪ್ರೋತ್ಸಾಹ ನೀಡದ ಕಾರಣ ಮನೆಯಿಂದ ಹೊರಟು ವಿಜಯನಗರದ ಕಡೆಗೆ ಪ್ರಯಾಣವನ್ನು ಬೆಳೆಸಿದರು. ಅಲ್ಲಿ  ಸಂಗೀತ ಶಾಲೆಯಲ್ಲಿ  ಪ್ರವೇಶವನ್ನು ಪಡೆದು ಕಠಿಣ ಪರಿಶ್ರಮದ ಮೂಲಕ ಸಂಗೀತ ವಿದ್ವಾನ್ ಎಂದು ಪದವಿಯನ್ನು ಪಡೆದಿದ್ದರು‌. ಆಗ ಆ ಸಮಯದಲ್ಲಿ ದೇಶಾದ್ಯಂತ ಕ್ವಿಟ್ ಇಂಡಿಯಾ ಚಳುವಳಿಯು ಆರಂಭಗೊಂಡಿತ್ತು. ಇವರು ಕೂಡ ಈ ಚಳುವಳಿಯಲ್ಲಿ ಭಾಗವಹಿಸಿದ ಪರಿಣಾಮ 18 ತಿಂಗಳ ಸೆರೆಮನೆ ವಾಸವನ್ನು ಅನುಭವಿಸಿದರು‌. ಅಲ್ಲದೇ ಅಲ್ಲಿಯೇ ಪರಿಚಯವಾದ ಸಮುದ್ರಾಲಾ ಎಂಬುವರಿಂದ ಇವರ ಮನಸ್ಸು ಚಿತ್ರ ರಂಗದ ಕಡೆಗೆ ಹೊರಳಿತು.
             ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿದರೂ ಎಚ್.ಎಮ್.ವಿ.ಸಂಸ್ಥೆ ಇವರ ಧ್ವನಿಯ ಕುರಿತು ನಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಬಂದ ಅವಕಾಶದಿಂದ ಕೂಡ ವಂಚಿತರಾದರು. ನಂತರ ಪ್ರಭಾತ್ ಫಿಲಂಸ್ ನವರು ನಿರ್ಮಿಸಿದ ಸೀತಾರಾಮ ಜನನಂ ಎಂಬ ಚಿತ್ರಕ್ಕೆ ಹಿನ್ನಲೆ ಗಾಯಕರಾಗಿ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು ಭಾಗ್ಯ ಚಕ್ರ ಎಂಬ ಕನ್ನಡ ಚಿತ್ರದ ದೇವ ನಿನ್ನ ರಾಜ್ಯದ ನ್ಯಾಯ ವಿದೇನಾ ಎಂಬ ಗೀತೆಯನ್ನು ಮೊದಲ ಬಾರಿಗೆ ಹಾಡಿದರು.

ಮುಂದುವರಿಯುವುದು…

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply