ಜೀವನವೆಂಬ ರಣರಂಗದಲ್ಲಿ, ಯುದ್ಧಕಾಂಡದಲ್ಲಿ ಓರ್ವ ವೀರನ ಬಿಲ್ಲಿನ ತಂತಿ ತುಂಡರಿಸಿ ಹೋದರೂ, ಅವನಲ್ಲಿ ಯುದ್ಧ ಗೆಲ್ಲಬೇಕೆಂಬ ಛಲ ಹಾಗು ಆತ್ಮಸ್ಥೈರ್ಯ ಜೀವಂತವಾಗಿರುವವರೆಗೂ ಅವನಿಗೆ ಸೋಲು ಮತ್ತು ಸಾವು ಎರಡೂ ಹತ್ತಿರ ಕೂಡ ಸುಳಿಯಲು ಸಾಧ್ಯವಿಲ್ಲ ಅನ್ನೋ ಮಹತ್ವದ ಸಾರಾಂಶವನ್ನು ಸರಳವಾಗಿ ಸುಮಧುರವಾಗಿ ಭೋದಿಸಿದ ಸ್ವರ ಚಕ್ರವರ್ತಿ ನೀವು…
“ಮೊಘಲ್ ಎ ಆಜಾಮ್” ಅನ್ನೋ ದೃಶ್ಯಕಾವ್ಯವನ್ನ, ಆರು ನಿಮಿಷದ ಹಾಡಿನಲ್ಲಿ ಅಚ್ಚುಕಟ್ಟಾಗಿ, ಕನ್ನಡದಲ್ಲಿ ಪ್ರಸ್ತುತ ಪಡಿಸಿದ ಅಕ್ಷರಬ್ರಹ್ಮ.. ರಣಧೀರ ನೀವು..
ನಾಡಗೀತೆ “ಜೈ ಭಾರತ ಜನನಿಯ ತನುಜಾತೆ” ನಂತರ ಇಡೀ ಕರ್ನಾಟಕವು ಯಾವುದಾದ್ರೂ ಹಾಡನ್ನ ಅಷ್ಟೇ ಭಕ್ತಿಯಿಂದ ಹಾಡಿದೆ ಅಂದ್ರೆ ಅದು ಈ “ಲಯ ಸಾಮ್ರಾಟ” ವಿರಚಿತ ” ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಬರೆದ ಸ್ವರ ಬ್ರಹ್ಮ ನೀವು…
ಆಗುಂಬೆಯ ತಿಳಿ ಸಂಜೆಯ ಪ್ರೇಮದ ಉವಾಚ ನಿಮ್ಮ ಪದ ಕುಂಚದಿಂದ, ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲೂ ಹೂವನ್ನ ಅರಳಿಸಿದ ಶಿಲ್ಪಿ ನೀವು…
ಹಂಪೆಯ ವಿರೂಪಾಕ್ಷನಿಗೆ- ಶಿಲಾವಿನ್ಯಾಸಕ್ಕು ತಮ್ಮ ಸಂಗೀತದಿಂದಲೇ ಸಂಕಲ್ಪವು, ಭೂಮಿನ ಬುಗುರುಯಾಗಿಸಿ ಆ ಪರಶಿವನ ಚಾಟಿಯಿಂದ ಅಪೀಟ್ ಮಾಡಿಸೋ ಛಾತಿ ನಿಮ್ಮೊಬ್ಬರಿಗೆ ಮಾತ್ರ ಸ್ವಂತ..
ಎಲ್ಲಿ ಹೋದರೆ ಅಲ್ಲಿ, ಏನು ಕಂಡರೂ ಅದರಲ್ಲಿ ಗೋಚರಿಸುವ ನಿಮ್ಮ ಹಾಡನ್ನ ಕೇಳಿ ಬೆಳೆದ ಪರಂಪರೆಯಲ್ಲಿ ನಾವು ಒಬ್ಬರು ಎಂಬ ಸತ್ಯವೇ ಆನಂದ… ಸಂಗೀತವೇ ದೇವರು ಎಂದು ನಂಬಿರುವವರ ಪಾಲಿಗೆ ನೀವೇ ಭಗವಂತ….
ಎಷ್ಟು ಹೊಗಳಿದ್ರು ಕಮ್ಮಿ ಅನ್ನೋ ಸಾಲಿಗೆ ನಿಮ್ಮ ಸಾಧನೆಯೇ ನಿದರ್ಶನ…
ಶುಕ್ರವಾರ ಮಧ್ಯಾಹ್ನ ಗುರುವಿನ ದೆಸೆ ನಮ್ಮ ಚಿತ್ರೋದ್ಯಮ.ಕಾಂ ತಂಡದ ಮೇಲಿತ್ತು. ಮಹಾಗುರುಗಳಾದ ಶ್ರೀಯುತ ಹಂಸಲೇಖರವರನ್ನ ಖುದ್ದಾಗಿ ಭೇಟಿ ಮಾಡಿ ನಮ್ಮ ತಂಡ ಹೊರತಂದಿರುವ “ಚಿತ್ರೋದ್ಯಮದ ಚಿತ್ತಾರಗಳು – 2” ಪುಸ್ತಕವನ್ನ ಗುರುಗಳ ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸುವ ಅದೃಷ್ಟ ನಮ್ಮದಾಯಿತು…
ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಮನೆಯಲ್ಲೇ ಒಂದು ಪುಸ್ತಕ ಮಾಳಿಗೆಯನ್ನ (ಶಾರದಾ ಪುಸ್ತಕಾಲಯ) ಪ್ರಾರಂಭಿಸುವ ಮೂಲಕ “ಜ್ಞಾನ ದೇವಿ ಗುಡಿಯ” ಸ್ಥಾಪಿಸಿ, ಕುಂಬಾಭಿಷೇಕವನ್ನ ಕೂಡ ನೆರವೇರಿಸಿದ್ದಾರೆ. ಅದಾದ ಮಾರನೇ ದಿವಸ ಶುಭಾಶಯಗಳನ್ನ ತಿಳಿಸಲು ನಾನು ಮತ್ತು ಸ್ನೇಹಿತರಾದ “ಫೈನಲ್ ಫ್ರೇಮ್ ಸ್ಟುಡಿಯೋ”ದ ಜೀವನ್ ಹಂಸಲೇಖ ಅವರ ಮನೆಗೆ ತೆರೆಳಿದೆವು. ಪುಸ್ತಕವನ್ನ ಹಂಸಲೇಖಾ ಅವರ ಕೈಯಲ್ಲೇ ಬಿಡುಗಡೆ ಮಾಡಿಸಬೇಕೆಂಬ ಹೆಬ್ಬಯಕೆ ನಮ್ಮದಾಗಿತ್ತು. ಹಂಸಲೇಖಾರವರು ಊಟ ಮುಗಿಸಿ ಬಂದವರೇ, ನನ್ನ ಸ್ನೇಹಿತನನ್ನ ಕಂಡು “ಜೀವನ್ ನೀನು ಏ ಒನ್” ಅಂತ ಅವರ ಶೈಲಿಯಲ್ಲೇ ನಗು ನಗುತ್ತ ಹೇಳಿದರು. ತಕ್ಷಣ ಅವರ ಕಾಲಿಗೆ ಬಿದ್ದು ಅವರ ಆಶೀರ್ವಾದವನ್ನ ಪಡೆದವು. ತುಸು ಕಾಲ ಲೋಕಾಭಿರಾಮವಾಗಿ ಚರ್ಚಿಸಿ ನಂತರ ಅವರ ಕೈಗೆ ಪುಸ್ತಕವನ್ನ ನೀಡಿದೆ. ಕೊಟ್ಟ ತಕ್ಷಣ ಪ್ರೀತಿಯಿಂದ ಕವರ್ ತೆಗೆದು, ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ನಿಮ್ಗೆ ಮತ್ತು ನಿಮ್ಮ ತಂಡಕ್ಕೆ ಒಳ್ಳೇದು ಆಗ್ಲಿ. ಚಿತ್ರೋದ್ಯಮ.ಕಾಂ ತಂಡಕ್ಕೆ ಒಳ್ಳೆ ಹೆಸರು ಬರ್ಲಿ, ಎಲ್ರು ಕೈಗೂ ಈ ಪುಸ್ತಕ ತಲುಪಲಿ ಎಂದು ಹರಸಿ ಹಾರೈಸಿದ್ರು. ರೀ ಪಕ್ಕಕ್ಕೆ ಬನ್ರಿ, ಫೋಟೋ ತೆಗಸ್ಕೊಳ್ರಿ ಅಂತ ಅವರೇ ನಮ್ಮಣ್ಣ ಪ್ರೀತಿಯಿಂದ ಕರೆದರು. ಕೈಲಿದ್ದ ನಮ್ಮ ಪುಸ್ತಕವನ್ನ ಅವರ ಮಾಳಿಗೆಯಲ್ಲಿ ಇಟ್ಟರು.. ಸರ್ ನಿಮ್ಮ ಬಗ್ಗೆ ನಾನು ಒಂದು ಲೇಖನ ಬರ್ದಿದ್ದೀನಿ ” ನೀನಾ ಭಗವಂತ” ಅಂತ ಅಂದೇ. ಅದಕ್ಕೆ ಅವರು ಮುಗುಳ್ನಗುತ್ತಾ ಹುಂ ನಾನೇ ಅಂದ್ರು!. ಮಹಾಗುರುಗಳಾದ ಹಂಸಲೇಖಾರ ಮಾಳಿಗೆಯಲ್ಲಿ “ಚಿತ್ರೋದ್ಯಮದ ಚಿತ್ತಾರಗಳು – 2 ಮತ್ತು ಇದರ ಜೊತೆಗೆ ನಮ್ಮ ಸಂಪಾದಕರು ಟಿಎನ್ನೆಸ್ ಬರೆದಿರುವ ಇನ್ನೊಂದು ಪುಸ್ತಕ – ಉಪ್ಪಿಟ್ಟಾಯಣ ಪುಸ್ತಕಗಳೆರಡೂ ನಾದಬ್ರಹ್ಮರ ಲೈಬ್ರರಿ ಸೇರಿತು ಅನ್ನೋ ವಿಷಯ ತಿಳಿದಾಕ್ಷಣ ಆದ ಸಂತಸಕ್ಕೆ ಎಲ್ಲೆಯೇ ಇಲ್ಲ… “ಧನ್ಯೋಸ್ಮಿ ಗುರುಗಳೇ”
ಮಲೇಶಿಯಾದಲ್ಲಿದ್ದುಕೊಂಡೇ ಪುಸ್ತಕ ಹೊರತರಲು ತುಂಬಾ ಶ್ರಮಪಟ್ಟ ನಮ್ಮ ಸಂಪಾದಕರಾದ ಟಿಎನ್ನೆಸ್ ಮತ್ತು ಅಕ್ಷಯ ರಾವ್, ಹಿರಿಯ ಸಾಹಿತಿ ಶ್ರೀ ಯತಿರಾಜ್ ವೀರಾಂಬುಧಿ, ಚಿತ್ರೋದ್ಯಮ ತಂಡದ ಸ್ನೇಹಿತರುಗಳಾದ ಶ್ರೀನಿವಾಸ್, ಪ್ರಶಾಂತ್ ಸಾಗರ್, ಸಂದೀಪ್ ಜೋಶಿ, ವಿದ್ಯಾಶ್ರೀ, ಸೌಮ್ಯ, ಆಶಾ ಮತ್ತು ಪ್ರಸನ್ನಶೆಟ್ಟಿ, ರಾಘವೇಂದ್ರ ಹಾಗು ಫೈನಲ್ ಫ್ರೇಮ್ ಸ್ಟುಡಿಯೋದ ಜೀವನ್ – ಎಲ್ಲರಿಗೂ ಒಂದು ಸ್ಪೆಷಲ್ ಥ್ಯಾಂಕ್ಸ್.
-ನಿಮ್ಮವ
ಘನಶ್ಯಾಮ್