ನಿನ್ನೆಯಷ್ಟೇ ನಟ ವಿವೇಕ್ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ಸುದ್ದಿ ಚಿತ್ರೋದ್ಯಮ.ಕಾಂ ನಲ್ಲಿ ಪ್ರಕಟವಾಗಿತ್ತು. ನಮ್ಮ ದುರಾದೃಷ್ಟವೆಂದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗಿನ ಜಾವ ವಿವೇಕ್ ಅವರು ಕೊನೆಯುಸಿರೆಳೆದಿದ್ದಾರೆ.
ವಿವೇಕ್ ತನ್ನ ನ್ಯಾಚುರಲ್ ಹಾಸ್ಯದ ಶೈಲಿಯಿಂದಲೇ ಪ್ರಸಿದ್ದರಾದವರು. ಐದು ಬಾರಿ ತಮಿಳುನಾಡು ರಾಜ್ಯ ಚಲನಚಿತ್ರ – ಉತ್ತಮ ಹಾಸ್ಯನಟ, ಮೂರು ಬಾರಿ Filmfare- ಉತ್ತಮ ಹಾಸ್ಯನಟ ಪ್ರಶಸ್ತಿ ಇವರ ಮುಡಿಗೇರಿತ್ತು. ಅಷ್ಟೇ ಅಲ್ಲದೆ ಇವರ ಪ್ರತಿಭೆಯನ್ನು ಗುರ್ತಿಸಿ ಭಾರತ ಸರ್ಕಾರವು ಇವರಿಗೆ 2009 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ದಯಪಾಲಿಸಿತ್ತು. ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ವಿಜಯ್, ಅಜಿತ್ ಸೇರಿದಂತೆ ಬಹುತೇಕ ತಮಿಳಿನ ಎಲ್ಲಾ ನಂತರ ಜೊತೆ ಸುಮಾರು ಇನ್ನೂರ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಗಡಲಿನಲ್ಲಿ ತೇಲಿಸಿದ್ದರು. ನಮಗೆ ದೊರೆತಿರುವ ಮಾಹಿತಿಯಂತೆ ಕಮಲ್ ಹಾಸನ್ ಜೊತೆಗೆ ನಟಿಸಿರುವ ಇನ್ನೂ ಬಿಡುಗಡೆಯಾಗದಿರುವ, ಶಂಕರ್ ನಿರ್ದೇಶನದ ಇಂಡಿಯನ್ – 2 ಇವರ ಕೊನೆಯ ಚಿತ್ರ.
ತನ್ನ ವಿಶಿಷ್ಟ ಡೈಲಾಗ್ ಡೆಲಿವರಿ ಸ್ಟೈಲ್ ನಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ನಟ ಇಂದು ನಮ್ಮೊಡನೆ ಇಲ್ಲದಿರುವುದು ತಮಿಳು ಸಿನಿಮಾ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ತೇಲಿಸಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದೇ ಆ ದೇವರಲ್ಲಿ ಚಿತ್ರೋದ್ಯಮ.ಕಾಂ ನ ಪ್ರಾರ್ಥನೆ.