ಹೆಸರು ಕೇಳಿ ಇದ್ಯಾವ ಭಾಷೆಯೋ ಎಂದುಕೊಳ್ಳದಿರಿ. ‘ಸುಲು’ ಎಂದರೆ ಸುಲೋಚನಾ. ಅವಳೇ ನಮ್ಮ ನಾಯಕಿ. ಅತ್ಯಧಿಕ ಆತ್ಮವಿಶ್ವಾಸ ಇರುವ, ಏನು ಕೂಡ ಸಾಧಿಸಬಲ್ಲೆ ಎಂಬ ಛಲ ಇರುವ, ನಿರಂತರ ಕಲಿಕೆಯ ಹಸಿವಿರುವ ಸುಲೋಚನಾ!!
ಆದರೆ ಅಕಾಡೆಮಿಕ್ ಆಗಿ ಆಕೆ ಸೋತವಳು.
ಅಂದರೆ ಅವಳು ಟೆನ್ತ್ ಫೇಲ್. ಹೈಸ್ಕೂಲ್ ಸಹ ಪಾಸ್ ಮಾಡಲಾಗದ ಸುಲೋಚನಾ ಬೇರೇನೂ ಸಾಧಿಸಲಾಗದೇ ಗೃಹಿಣಿಯಾಗಿ ಬಾಳುತ್ತಿರುತ್ತಾಳೆ. ಆದರೆ ಮಕ್ಕಳ ಸ್ಕೂಲಿನಲ್ಲಿ, ಹೌಸಿಂಗ್ ಸೊಸೈಟಿಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತರುತ್ತಾ ತನ್ನನ್ನು ತಾನು ಉತ್ಸಾಹದ ಚಿಲುಮೆಯಾಗಿಸಿಕೊಂಡಿರುತ್ತಾಳೆ.
ಆಕೆಯ ಗಂಡ ಒಂದು ಪ್ರೈವೇಟ್ ಕಂಪನಿಯಲ್ಲಿ ಮ್ಯಾನೇಜರ್. ಆಕೆಯೇ ಹೇಳುವ ಪ್ರಕಾರ ಹಸುವಿನಂತಹವನು. ಹೆಂಡತಿಯ ಯಾವ ಮಾತಿಗೂ ಇಲ್ಲ ಅಂದವನಲ್ಲ, ಆಕೆಯ ಯಾವುದೇ ಸಾಹಸ ಕಾರ್ಯಕ್ಕೂ ಬೇಡ ಅಂದವನೂ ಅಲ್ಲ. ಒಬ್ಬರೂ ಅನ್ಯೋನ್ಯವಾಗಿಯೇ ಇರುತ್ತಾರೆ.
ಇಂತಹಾ ಸುಲೋಚನಾಳಿಗೆ ಒಮ್ಮೆ ಒಂದು ರೇಡಿಯೋ ಸ್ಟೇಷನ್ನಿಂದ ಬಹುಮಾನ ಗೆದ್ದಿರುವ ಬಗ್ಗೆ ಫೋನ್ ಬರುತ್ತದೆ. ಬಹುಮಾನ ತರಲು ಹೋದವಳಿಗೆ ಅಲ್ಲೊಂದು ಪೋಸ್ಟ್ ಕಾಣಸಿಗುತ್ತದೆ. ಏನೆಂದರೆ ಯಾರು ಬೇಕಾದರೂ ರೇಡಿಯೋ ಜಾಕಿ ಆಗಬಹುದು ಅಂತಿರುತ್ತದೆ. ಈಕೆ ಸೀದಾ ರೇಡಿಯೋ ಸ್ಟೇಷನ್ ಓನರ್ ಬಳಿ ಹೋಗಿ ತನಗೊಂದು ಚಾನ್ಸ್ ಕೊಡುವಂತೆ ಕೇಳುತ್ತಾಳೆ. ಹೇಗೋ ಮಾಡಿ ಆ ಕೆಲಸ ಗಿಟ್ಟಿಸಿಕೊಂಡೂ ಬಿಡುತ್ತಾಳೆ.
ನೀವೇ ಯೋಚಿಸಿ….
ಆಕೆ ಟೆನ್ತ್ ಫೇಲ್. ವೈಟ್ ಕಾಲರ್ ಕೆಲಸ ಅಂತೂ ಸಿಗುವುದಿಲ್ಲ. ಸಿಕ್ಕರೂ ಅತ್ಯಂತ ಕೆಳಮಟ್ಟದ ತೊಳಿ-ಬಳಿ ಅಥವಾ ಕಡಿಮೆ ಸಂಬಳದ, ಹೆಚ್ಚು ಶ್ರಮ ಬೇಡುವ ಕೆಲಸ ಸಿಗುತ್ತಿತ್ತೇನೋ? ಆದರೆ ಆಕೆಯೊಳಗೊಂದು ಕಲೆ ಇರುತ್ತದೆ. ಅದು ಆಕೆಯ ಮಾದಕ ಧ್ವನಿ!! ಅದನ್ನು ರೇಡಿಯೋ ಸ್ಟೇಷನ್ ಮಾಲಕಿ ಕಂಡುಕೊಳ್ಳುತ್ತಾಳೆ. ಸುಲೋಚನಾಳ ಅಕಾಡೆಮಿಕ್ ವೈಫಲ್ಯ ಗಮನಿಸದೇ ಕೇವಲ ಆಕೆಯ ಪ್ರತಿಭೆ ಗುರುತಿಸಿ ಕೆಲಸ ನೀಡುತ್ತಾಳೆ.
ಈಗ ಸುಲೋಚನಾ ಆ ಕಾರ್ಯಕ್ರಮದ ಮೂಲಕ ‘ತುಮ್ಹಾರಿ ಸುಲು’ ಆಗುತ್ತಾಳೆ. ರೇಡಿಯೋ ಸ್ಟೇಷನ್ನಿನ ಕಾರ್ಯಕ್ರಮದ ಅನಿವಾರ್ಯ ಅಂಗವಾಗುತ್ತಾಳೆ. ಆಕೆಯ ಕಾರ್ಯಕ್ರಮ ಬಹಳ ಪ್ರಸಿದ್ಧಿಯಾಗುತ್ತದೆ. ಸಿನೆಮಾ ನಟರು ಈಕೆಯ ಕಾರ್ಯಕ್ರಮ ನೋಡಿ ಫಿದಾ ಆಗುತ್ತಾರೆ. ನಲವತ್ತು ಸಾವಿರ ಸಂಬಳ ಸಹ ಬರುತ್ತದೆ.
ಈಗ ಆಕೆಯ ಲೈಫ್ ಮತ್ತಷ್ಟು ಈಸಿ ಆಗಬೇಕಿತ್ತು. ಆದರೆ ಆಗುವುದಿಲ್ಲ……
ರೇಡಿಯೋಗಾಗಿ ತಡರಾತ್ರಿ ಕಾರ್ಯಕ್ರಮ ಕೊಟ್ಟು ಬಂದು ಬೆಳಿಗ್ಗೆ ಬೇಗ ಏಳಲಾಗದೇ, ಮಗನನ್ನು ಸ್ಕೂಲಿಗೆ ತಯಾರು ಮಾಡಲಾಗದೇ ಪಾಪಪ್ರಜ್ಞೆ ಅನುಭವಿಸುತ್ತಾಳೆ ಸುಲೋಚನಾ. ಇದು ಎಲ್ಲಾ ತಾಯಂದಿರಿಗೂ ಆಗುವಂಥದ್ದೇ. ಕೆರಿಯರ್ ಕಡೆ ಗಮನ ಕೊಟ್ಟರೆ ಮಕ್ಕಳ ಚಿಂತೆ, ಮಕ್ಕಳ ಕಡೆ ಗಮನ ಕೊಟ್ಟರೆ ಕೆರಿಯರ್ ಚಿಂತೆ. ಇದೇ ಸುಲೋಚನಾಳನ್ನೂ ಕಾಡುತ್ತದೆ.
ಕಡೆಗೆ ಹೇಗೋ ಇದನ್ನು ಸರಿತೂಗಿಸಿಕೊಳ್ಳುತ್ತಾಳೆ. ಆದರೆ ಅಸಹನೆ ಅನ್ನುವುದು ಬೇರೆ ಕಡೆಯಿಂದ ಶುರುವಾಗಿರುತ್ತದೆ. ಆಕೆಯ ಹಸುವಿನಂತಹಾ ಗಂಡ ಕಾರಣವೇ ಇಲ್ಲದೇ ಆಕೆಯನ್ನು ದ್ವೇಷಿಸಲು ಶುರು ಮಾಡುತ್ತಾನೆ. ಅಷ್ಟೇ ಅಲ್ಲ… ಮಾತುಮಾತಿಗೂ ಆಕೆಯನ್ನು ಚುಚ್ಚಿ ನೋಯಿಸಿ ವಿಕೃತ ಆನಂದ ಪಡೆಯಲು ಶುರು ಮಾಡುತ್ತಾನೆ.
ಟೆನ್ತ್ ಫೇಲ್ ಆಗಿರುವ ಒಬ್ಬ ಸಾಧಾರಣ ಗೃಹಿಣಿಯಾಗಿರುವಾಗ ಇಷ್ಟವಾಗುವ ಹೆಂಡತಿ, ತನ್ನದೇ ವ್ಯಕ್ತಿತ್ವ ಬೆಳೆಸಿಕೊಂಡು ಸ್ವಂತ ಸಂಪಾದನೆ ಮಾಡುತ್ತಿರುವಾಗ ಯಾಕೆ ಇಷ್ಟವಾಗೋಲ್ಲ? ಬಹುಶಃ ಗಂಡಸರಿಗೆ ಹೆಣ್ಣುಮಕ್ಕಳು ತಮ್ಮ ಆಸರೆಯಲ್ಲಿ ಅಸಹಾಯಕರಾಗಿ ಇದ್ದಾಗ ಮಾತ್ರ ಇಷ್ಟವಾಗುತ್ತಾರೇನೋ?
ಈ ಎಲ್ಲದರ ನಡುವೆ ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎಂಬ ಭಾವ, ಗಂಡನ ಅಸಹಕಾರ-ಅಸಹನೆ ಇವುಗಳಿಂದ ಬೇಸತ್ತು ಸುಲೋಚನಾ ತನ್ನ ರೇಡಿಯೋ ಜಾಕಿ ಕೆಲಸಕ್ಕೆ ರಾಜೀನಾಮೆ ಕೊಡಲು ಮುಂದಾಗುತ್ತಾಳೆ.
ಮುಂದೇನು???
ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಎಲ್ಲ ಮನುಷ್ಯರಲ್ಲಿಯೂ ಒಂದು ಕಲೆ ಇದ್ದೇ ಇರುತ್ತದೆ. ಅದನ್ನು ಆಚೆ ತೆಗೆಯುವ ಕೆಲಸ ಆಗಬೇಕು. ಮುಖ್ಯವಾಗಿ ಅದನ್ನು ಗುರುತಿಸಿ ಪ್ರೋತ್ಸಾಹಿಸುವವರು ಬೇಕು. ಸುಲೋಚನಾಳಿಗೆ ತನ್ನ ಬಾಸ್ ಮೇಡಂ ಸಿಕ್ಕಂತೆ ಎಲ್ಲ ಹೆಣ್ಮಕ್ಕಳಿಗೂ ಗುರು ಸಿಕ್ಕರೆ ಗುರಿ ತಲುಪಲು ಎಷ್ಟೊತ್ತು? ಅಲ್ವಾ….?
ಸಿನೆಮಾದ ಪೂರ್ತಿ ಸಂಭಾಷಣೆ-ದೃಶ್ಯಗಳು ಅದೆಷ್ಟು ನೈಜವಾಗಿದೆ ಎಂದರೆ ಯಾರೋ ಅನುಭವಿಸಿಕೊಂಡೇ ಬರೆದಂತಿದೆ. ವಿದ್ಯಾ ಬಾಲನ್ ಅಂತೂ ಸುಲು ಆಗಿ ಪರಕಾಯ ಪ್ರವೇಶ ಮಾಡಿದ್ದಾರೆ. ಆಕೆಯ ಆಂಗಿಕ ಅಭಿನಯ ಮಧ್ಯಮವರ್ಗದ ನಮ್ಮ-ನಿಮ್ಮಲ್ಲರಂತೆಯೇ ಇದೆ. ಆಕೆಯ ವರ್ತನೆ ನಮ್ಮದೇ ಎಷ್ಟೋ ಸಂದರ್ಭಗಳನ್ನು ನೆನಪಿಗೆ ತರುತ್ತದೆ. ನಿರ್ದೇಶಕರು ಒಂದು ಅದ್ಭುತ ಚಿತ್ರ ನೀಡಿದ್ದಾರೆ.