‘ಎಝಿಲ್’ ಒಬ್ಬ ಎಂಜಿನಿಯರ್ ಆಗಿದ್ದು ತನ್ನ ಸ್ವಂತ ಫ್ಲಾಟ್ ಒಂದನ್ನು ಕಟ್ಟುವ ಗುರಿಯೊಂದಿಗೆ ಬದುಕುತ್ತಿರುವ ಒಬ್ಬ ಸಜ್ಜನ ವ್ಯಕ್ತಿ.
‘ಕವಿನ್’ ಸಣ್ಣ-ಪುಟ್ಟ ಕಳ್ಳತನ, ಮೋಸ ಮಾಡಿಕೊಂಡು ಜೀವನದಲ್ಲಿ ಯಾವುದೇ ಗುರಿಯನ್ನು ಹೊಂದಿರದೇ ಬದುಕುತ್ತಿರುವ ಒಬ್ಬ ಬುದ್ಧಿವಂತ ಕಳ್ಳ.
ಇವರಿಬ್ಬರೂ ನೋಡಲು ಒಂದೇ ತರ ಕಾಣುತ್ತಿದ್ದು ಅರುಣ್ ವಿಜಯ್ (ಡ್ಯುಯಲ್ ರೋಲ್) ಈ ಎರಡೂ ಪಾತ್ರಕ್ಕೆ ನ್ಯಾಯ ಒದಗಿಸುವ ನಟನೆಯನ್ನು ನೀಡಿದ್ದಾರೆ. ಇಬ್ಬರ ಜೀವನದಲ್ಲೂ ಒಂದೊಂದು ನವಿರಾದ ಕಿರು ಪ್ರೇಮಕಥೆಯಿದ್ದು ನೋಡಲು ಮುದವಾಗಿದೆ. ಹೀಗಿರುವಾಗ ಒಂದು ರಾತ್ರಿ ಇವರಿಬ್ಬರಲ್ಲಿ ಒಬ್ಬರು, ಮನೆಯೊಂದಕ್ಕೆ ನುಗ್ಗಿ ಆಕಾಶ್ ಎಂಬ ಯುವಕನ ಕೊಲೆ ಮಾಡುತ್ತಾರೆ.
ಯಾವುದೇ ಸಾಕ್ಷಿಯಿಲ್ಲದೇ ಬುದ್ಧಿವಂತಿಕೆಯಿಂದ ಮಾಡಿರುವ ಆ ಕೊಲೆಯ ಇನ್ವೆಸ್ಟಿಗೇಷನ್ ಅನ್ನು ಲೇಡಿ ಸಬ್ ಇನ್ಸ್ಪೆಕ್ಟರ್ ಒಬ್ಬಳು ಕೈಗೊಳ್ಳುತ್ತಾಳೆ. ಕೊಲೆ ನಡೆದ ರಾತ್ರಿ ಪಕ್ಕದ ಮನೆಯ ಯುವಜೋಡಿಗಳು ತೆಗೆದುಕೊಂಡ ಸೆಲ್ಫಿಯಲ್ಲಿ ಅವರಿಗೆ ಗೊತ್ತಿಲ್ಲದೇ ಕೊಲೆಗಾರನ ಫೋಟೋ ಕೂಡ ಬಂದಿರುತ್ತದೆ. ಆ ಫೋಟೋ ನೋಡಿ ಅದರಲ್ಲಿರುವುದು ಎಝಿಲ್ ಎಂದುಕೊಂಡು ಅವನನ್ನು ಅರೆಸ್ಟ್ ಮಾಡಿ ವಿಚಾರಣೆಯನ್ನು ಕೈಗೊಳ್ಳುತ್ತಾರೆ ಪೋಲೀಸರು. ಈ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಎಝಿಲ್ ಎಷ್ಟೇ ಹೇಳಿದರೂ ಅವನ ಮಾತನ್ನೂ ಯಾರು ನಂಬದೇ ಅವನನ್ನು ಗುಟ್ಟಾಗಿ ಬಂಧಿಯಾಗಿರಿಸುತ್ತಾರೆ. ಆ ದಿನ ಕುಡಿದು ಗಾಡಿ ಚಲಾಯಿಸುತ್ತಿದ್ದ ಕವಿನ್ ಅನ್ನು ಅರೆಸ್ಟ್ ಮಾಡಿ ಫೋಲೀಸರು ಸ್ಟೇಷನ್ನಿಗೆ ತಂದಾಗ ಲೇಡಿ ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲರೂ ಎಝಿಲ್ ನಂತೆ ಕಾಣಿಸುವ ಕವಿನ್ ನನ್ನು ನೋಡಿ ದಿಗ್ಭ್ರಾಂತರಾಗುತ್ತಾರೆ. ಕವಿನ್ ನನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದರೂ ಆ ಕೊಲೆಯನ್ನು ತಾನು ಮಾಡಿಲ್ಲವೆಂದೇ ಹೇಳುತ್ತಾನೆ. ಮತ್ತು ಕಾನೂನಿನ ಬಗ್ಗೆ ಆತನಿಗಿರುವ ಜ್ಞಾನವನ್ನು ನೋಡಿ ಲೇಡಿ ಇನ್ಸ್ಪೆಕ್ಟರ್’ಗೆ ಆತನ ಬಗ್ಗೆ ಸಂದೇಹವುಂಟಾಗತೊಡಗುತ್ತದೆ.
ಪೋಲೀಸರಿಗೆ ಇವರಿಬ್ಬರಲ್ಲಿ ನಿಜವಾದ ಕೊಲೆಗಾರ ಯಾರು ಎಂಬುದನ್ನು ಕಂಡುಹಿಡಿಯಲಾಗದೇ ತಲೆಕೆಡಿಸಿಕೊಂಡಿರುವಾಗ ಆಕಸ್ಮಿಕವಾಗಿ ಪೋಲೀಸ್ ಸ್ಟೇಷನ್ನಿನಲ್ಲಿ ಎಝಿಲ್ ಮತ್ತು ಕವಿನ್ ಮುಖಾಮುಖಿಯಾಗುತ್ತಾರೆ. ಒಬ್ಬರ ಮುಖವನ್ನು ಇನ್ನೊಬ್ಬರು ಕಂಡಕೂಡಲೇ ಆಜನ್ಮ ಶತ್ರುಗಳಂತೆ ಪರಸ್ಪರರ ಪ್ರಾಣ ತೆಗೆಯುವಂತೆ ಕಾದಾಡತೊಡಗುತ್ತಾರೆ. ಅವರ ಜಗಳವನ್ನು ಬಿಡಿಸಿದ ಪೋಲೀಸರಿಗೆ ಇನ್ನೊಂದು ತಲೆನೋವು ಪ್ರಾರಂಭವಾಗುತ್ತದೆ.
ಪರಸ್ಪರ ಶತ್ರುಗಳಾದ ಅವರು ಕೊಲೆಯ ಆಪಾದನೆಯನ್ನು ಒಬ್ಬರು ಇನ್ನೊಬ್ಬರ ಮೇಲೆ ಹಾಕತೊಡಗುತ್ತಾರೆ. ಇದರಿಂದ ಕೇಸು ಇನ್ನಷ್ಟು ಜಟಿಲಗೊಳ್ಳುತ್ತದೆ. ಇಲ್ಲಿಂದ ಪ್ರಾರಂಭವಾಗುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ ನೋಡುಗರನ್ನು ಸೀಟಿನ ತುದಿಗೆ ಕಟ್ಟಿಬಿಡುತ್ತದೆ. ತನ್ನ ಹಳೆಯ ದ್ವೇಷ ಸಾಧನೆಗಾಗಿ ಎಝಿಲ್ ನನ್ನು ಈ ಕೇಸಿನಲ್ಲಿ ಆರೋಪಿಯನ್ನಾಗಿಸುವ ಆಲೋಚನೆಯಲ್ಲಿರುವ ಹಿರಿಯ ಪೋಲೀಸ್ ಇನ್ಸ್ಪೆಕ್ಟರ್ ಒಂದು ಕಡೆಯಾದರೆ ಕವಿನ್ ನ ಪೂರ್ವಾಪರ ಮತ್ತು ಅವನ ಅತೀ ಬುದ್ಧಿವಂತಿಕೆಯಿಂದ ಅವನ ಬಗ್ಗೆ ಸಂದೇಹಗೊಂಡು ಅವನನ್ನು ಆರೋಪಿಯನ್ನಾಗಿಸಲು ನೋಡುತ್ತಿರುವ ಲೇಡಿ ಇನ್ಸ್ಪೆಕ್ಟರ್ ಇನ್ನೊಂದೆಡೆ.
ಅವರಿಬ್ಬರಲ್ಲಿ ನಿಜವಾದ ಕೊಲೆಗಾರ ಯಾರು? ಕೊಲೆಗೆ ಕಾರಣವೇನು?
ಕೊಲೆಗಾರನನ್ನು ಪತ್ತೆಹಚ್ಚುವಲ್ಲಿ ಪೋಲೀಸರು ಯಶಸ್ವಿಯಾದರೇ?
ಇದೆಲ್ಲವನ್ನು ನಾನ್ ಪ್ರಿಡೆಕ್ಟೇಬಲ್ ಕ್ಲೈಮಾಕ್ಸ್ ನಲ್ಲಿ ತಿಳಿಯಬಹುದು. ಸಿನೆಮಾದ ಅಂತ್ಯ ಶಾಕ್ ನೀಡಿದರೂ ನಮ್ಮನ್ನು ಅಷ್ಟೇ ಭಾವುಕರನ್ನಾಗಿಯೂ ಮಾಡುತ್ತದೆ. ಹಿಂದಿಯಲ್ಲಿ ರಿಮೇಕ್ ಆಗುವ ಎಲ್ಲ ಸಾಧ್ಯತೆಗಳೂ ಇವೆ. ಮಸ್ಟ್ ವಾಚಬಲ್ ಮೂವಿ.
ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ