ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ನಟಿ ಮೈನಾವತಿ

1950 ಮತ್ತು 1960 ರ ದಶಕದಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಸಕ್ರೀಯರಾಗಿದ್ದ ನಟಿ ಮೈನಾವತಿ ತಮ್ಮ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳ ಮೂಲಕ ಚಿತ್ರ ಪ್ರೇಮಿಗಳ ನೆಚ್ಚಿನ ನಟಿಯಾಗಿದ್ದರು. ಅದರಲ್ಲೂ ಶ್ರೀ ಕೃಷ್ಣ ದೇವರಾಯ, ಗೆಲುವಿನ ಸರದಾರ, ರಾಯರ ಸೊಸೆ ಮತ್ತು ಅಳಿಯ ಗೆಳೆಯ ಚಿತ್ರದಲ್ಲಿ ಇವರ ನಟನೆಯನ್ನು ಯಾರಾದರೂ ಮರೆಯಲು ಸಾಧ್ಯವೇ? ಇವರು ನಟಿ ಮಾತ್ರವಲ್ಲದೇ ನಿರ್ಮಾಪಕಿ ಕೂಡ ಆಗಿದ್ದರಲ್ಲದೇ ತಮಿಳಿನ ಮಾಲಾಯಿಟ್ಟ ಮಂಗೈ ಮತ್ತು ಕುರವಂಜಿ ಚಿತ್ರದಲ್ಲಿ ಗಮನ ಸೆಳೆಯುವ ನಟನೆಯನ್ನು ಮಾಡಿದ್ದರು.
    ಮೈನಾವತಿಯವರು 1935, ಜುಲೈ 26 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಂಗರಾವ್ ಮತ್ತು ಕಾವೇರಿ ಬಾಯಿ ದಂಪತಿಯ ಮಗಳಾಗಿ ಜನಿಸಿದರು. ಇವರ ತಂದೆ ರಂಗರಾವ್ ಅವರು ಪ್ರಸಿದ್ಧ ಹರಿಕಥೆ ವಿದ್ವಾಂಸರಲ್ಲದೇ ಸಂಗೀತ, ಸಾಹಿತ್ಯ, ನಟನೆ ಮತ್ತು ಚಿತ್ರಕಲೆಯಲ್ಲಿಯು ಪರಿಣಿತರಾಗಿದ್ದರು. ತಾಯಿ ಕಾವೇರಿ ಬಾಯಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರೆ ಇವರ ಸಹೋದರ ಎಂ.ಪ್ರಭಾಕರ್ ರವರು ಪ್ರಸಿದ್ಧ ಸಂಗೀತಗಾರರಾಗಿದ್ದರು. ಹಾಗೂ ಭಾರತೀಯ ಚಿತ್ರರಂಗದ ಅಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದ ನಟಿ ಪಂಡರಿಬಾಯಿ ಇವರ ಸಹೋದರಿ ಕೂಡ. ವಾಣಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಉತ್ತಮ ಹೆಸರನ್ನು ಗಳಿಸಿದ್ದ ನಟಿ ಪಂಡರಿಬಾಯಿಯ ಮಾರ್ಗವನ್ನು ಅನುಸರಿಸಿದ ಇವರು ನಟಿ ಪಂಡರಿಬಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸತಿ ಸಕ್ಕು ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.
     ತಮ್ಮ ಪ್ರಥಮ ಚಿತ್ರವಾದ ಸತಿ ಸಕ್ಕು ಚಿತ್ರದಲ್ಲಿ ಚಿಕ್ಕ ಪಾತ್ರವಾದರೂ ಉತ್ತಮ ನಟನೆಯನ್ನು ಮಾಡಿದ ಪರಿಣಾಮ ಇವರಿಗೆ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಲಭ್ಯವಾಯಿತು. 1954 ರಲ್ಲಿ ತೆರೆ ಕಂಡ ಪೊಣ್ ವಾಯಲ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು ತಮ್ಮ ಮೊದಲ ಚಿತ್ರದಲ್ಲಿ ಗಮನಾರ್ಹ ನಟನೆಯನ್ನು ಮಾಡಿ ಚಿತ್ರ ರಸಿಕರ ಮನಸ್ಸನ್ನು ಗೆದ್ದಿದ್ದರು. ಆದರೆ ದುರದೃಷ್ಟವಶಾತ್ ಚಿತ್ರವು ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಕಾಣಲಿಲ್ಲ. ನಂತರ 1955 ರಲ್ಲಿ ತೆರೆ ಕಂಡ ಇವರು ನಟಿಸಿದ ಎರಡನೇ ಚಿತ್ರ ಎನ್.ಮಗಳನ್. ಈ ಚಿತ್ರದಲ್ಲಿ ಶಕ್ತ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಇಲ್ಲಿಯು ಪುನರಾವರ್ತನೆಗೊಂಡ ದುರಾದೃಷ್ಟದ ಪರಿಣಾಮ ಈ ಚಿತ್ರವು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲನ್ನು ಕಂಡಿತ್ತು.  


    ಆದರೆ ಆರಂಭದ ಎರಡು ಚಿತ್ರಗಳು ಸೋತರೂ ಕುಗ್ಗದೇ ತಮ್ಮ ಪ್ರಯತ್ನವನ್ನು ನಿಲ್ಲಿಸದೇ ಮುಂದುವರೆಸಿದ ಇವರು 1956 ರಲ್ಲಿ ತೆರೆ ಕಂಡ ನಟಿ ಪಂಡರಿಬಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕುಲದೈವಂ ಚಿತ್ರದಲ್ಲಿ ಬಾಲ್ಯದಲ್ಲಿ ಗಂಡನನ್ನು ಕಳೆದುಕೊಂಡ ಹುಡುಗಿಯಾಗಿ ಮನ ಮುಟ್ಟುವಂತಹ ನಟನೆಯನ್ನು ಮಾಡಿದ್ದರು. ಆದರೆ ಕಾಲ ಒಂದೇ ರೀತಿಯಿರುವುದಿಲ್ಲ, ಬದಲಾಗುತ್ತಲೇ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಕಳೆದ ಎರಡು ಚಿತ್ರಗಳಲ್ಲಿ ಕೈ ಕೊಟ್ಟಿದ್ದ ಅದೃಷ್ಟ ಈ ಬಾರಿ ಕೈ ಹಿಡಿಯಿತು. ಈ ಚಿತ್ರವು ಯಶಸ್ವಿ ಪ್ರದರ್ಶನಗೊಂಡು ಉತ್ತಮ ಗಳಿಕೆಯನ್ನು ಕಂಡು ರಾಷ್ಟ್ರ ಮಟ್ಟದ ಪುರಸ್ಕಾರವನ್ನು ಪಡೆಯಿತು. 1956 ರಲ್ಲಿ ತೆರೆ ಕಂಡ ಡಾ.ರಾಜಕುಮಾರ್ ಮತ್ತು ಪಂಡರಿಬಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಭಕ್ತ ವಿಜಯ ಮತ್ತು ಹರಿಭಕ್ತ ಚಿತ್ರಗಳಲ್ಲಿ ಚಿತ್ರ ಪ್ರೇಮಿಗಳು ಮರೆಯಲಾಗದ ನಟನೆಯನ್ನು ಮಾಡಿದ್ದರು. ಅದರಲ್ಲೂ ಹರಿಭಕ್ತ ಚಿತ್ರದಲ್ಲಿ ಋಣಾತ್ಮಕ ಶೇಡ್ ಹೊಂದಿದ್ದ ವೇಶ್ಯೆಯ ಪಾತ್ರದಲ್ಲಿ ನೀಡಿದ ಪ್ರಶಂಸನೀಯ ಭಾವಾಭಿನಯ ಮತ್ತು ನೃತ್ಯಾಭಿನಯಕ್ಕೆ ತಲೆದೂಗದವರಿಲ್ಲ.
   1956 ರಲ್ಲಿ ತೆರೆ ಕಂಡ ನಟ ಶೇಖರ ಕಲ್ಯಾಣ ಕುಮಾರ್ ನಾಯಕ ನಟರಾಗಿ ನಟಿಸಿದ್ದ ಮುತ್ತೈದೆ ಭಾಗ್ಯ ಚಿತ್ರದಲ್ಲಿ ನಾಯಕಿಯಾಗಿ ಲವಲವಿಕೆಯಿಂದ ಮಾಡಿದ ನಟನೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
1962 ರಲ್ಲಿ ತೆರೆ ಕಂಡ ಇವರದೇ ನಟನೆಯಲ್ಲಿ ಮೂಡಿ ಬಂದ ರಾಯರ ಸೊಸೆ ಚಿತ್ರದ ಕುರಿತು ಕೂಡ ಹಲವು ವಿಶೇಷ ಸಂಗತಿಗಳಿವೆ.
1) ಈ ಚಿತ್ರವು ವರದಕ್ಷಿಣೆ ಹಿನ್ನಲೆಯ ಕಥೆಯನ್ನು ಹೊಂದಿತ್ತಲ್ಲದೆ ವರದಕ್ಷಿಣೆ ಕಿರುಕುಳದಿಂದ ಉಂಟಾಗುತ್ತಿರುವ ಸಮಸ್ಯೆ, ತೊಂದರೆಗಳನ್ನು ನೈಜವಾಗಿ ತೋರಿಸಲಾಗಿತ್ತು.
2) ಮುಖ್ಯವಾಗಿ ನಟ ಸಾರ್ವಭೌಮ ಡಾ.ರಾಜಕುಮಾರ್,ನಟಶೇಖರ ಕಲ್ಯಾಣ ಕುಮಾರ್, ಹಾಸ್ಯ ಚಕ್ರವರ್ತಿ ನರಸಿಂಹರಾಜು ಮತ್ತು ಚಿತ್ರ ರಂಗದ ಅಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದ ನಟಿ ಪಂಡರಿಬಾಯಿ ಸೇರಿ ಅನೇಕ ಪ್ರಮುಖ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು.
3) ಇವರ ಸಹೋದರಿ ನಟಿ ಪಂಡರಿಬಾಯಿ ನಿರ್ಮಾಣದ ಮೊದಲ ಚಿತ್ರವಾದರೆ ಗಾಯಕಿ ಎಸ್.ಜಾನಕಿ ಹಾಡಿದ ಹಾಡುಗಳನ್ನೊಳಗೊಂಡು ತೆರೆ ಕಂಡ ಮೊದಲ ಕನ್ನಡ ಚಿತ್ರ ಕೂಡ ಆಗಿದೆ.

  ಅಲ್ಲದೇ ಈ ಚಿತ್ರದಲ್ಲಿ ವರದಕ್ಷಿಣೆ ಕಿರುಕಳ ಕೊಡುವ ಮಾವನನ್ನು ತನ್ನ ಸದ್ಗುಣದಿಂದ  ಗೆಲ್ಲುವ ಸೊಸೆಯ ಪಾತ್ರದಲ್ಲಿ ಇವರ ಅಪೂರ್ವ ನಟನೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಈ ಪಾತ್ರವು ಸವಾಲಿನಿಂದ ಕೂಡಿತ್ತು.
       1959 ರಲ್ಲಿ ತೆರೆ ಕಂಡ ಅಬ್ಬಾ ಆ ಹುಡುಗಿ ಚಿತ್ರವು ಇವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಕೂಡ ಆಗಿತ್ತು. ಕಾರಣ ವಿಲಿಯಮ್ ಶೇಕ್ಸ್ಪಿಯರ್ ಅವರ ದಿ.ಟೇಮಿಂಗ್ ಆಫ್ ಶ್ರೂ ನಾಟಕವನ್ನು ಆಧರಿಸಿದ್ದ ಈ ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಉತ್ತಮ ನಟನೆಯನ್ನು ಮಾಡಿದ್ದರಲ್ಲದೇ ಆಗಿನ ಕಾಲದಲ್ಲಿ ಇವರು ಈ ಚಿತ್ರದಲ್ಲಿ ಪ್ಯಾಂಟು ಶರ್ಟು ಧರಿಸಿ ಎಲ್ಲರ ಗಮನ ಸೆಳೆದಿದ್ದರು.  
    ಪ್ರಖ್ಯಾತ ಮಲೆಯಾಳಂ ನಟ ಪ್ರೇಂ ನಜೀರ್ ರವರಿಗೆ ನಾಯಕಿಯಾಗಿ ಪುದವಾಯಲ್,ವಣ್ಣಕ್ಕಿಳಿ ಮತ್ತು ಅನ್ಬುಕ್ಕೋರ್ ಅಣ್ಣಿ ಸೇರಿ ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದ ಇವರು ನಟ ಶಿವಾಜಿ ಗಣೇಶನ್ ಅವರೊಂದಿಗೆ ಬೊಮ್ನೈ ಕಲ್ಯಾಣಂ ಮತ್ತು ಕುರವಂಜಿ ಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. 1958 ರಲ್ಲಿ ತೆರೆ ಕಂಡ ಮಾಲಯಿಟ್ಟ ಮಂಗೈ ಚಿತ್ರದಲ್ಲಿ ಬರುವ ಸೆಂದಮೀಳ್ ತೇನ್ ಮೊಳಿಯಾಲ್ ಗೀತೆಯು ಇಂದಿಗೂ ಕೂಡ ತಮಿಳಿನ ಅಮರ ಮಧುರ ಗೀತೆಗಳಲ್ಲಿ ಒಂದಾಗಿದೆ.

ಮುಂದುವರಿಯುವುದು…..

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply