ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ಚಿತ್ರ ನಟಿ ಭವಾನಿ

ಭವಾನಿ ಈ ಹೆಸರು ಕೇಳಿದೊಡನೆ ಚಿತ್ರಪ್ರೇಮಿಗಳಿಗೆ ಮೊದಲು ನೆನಪಾಗುವುದೇ, 1974 ರಲ್ಲಿ ತೆರೆ ಕಂಡ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದ ಚಿತ್ರ ಭೂತಯ್ಯನ ಮಗ ಅಯ್ಯು, ನಟಿಸಿದ ಮೊದಲ ಚಿತ್ರದಲ್ಲಿ ತಮ್ಮ ಗಮನಾರ್ಹ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಮನಸ್ಸನ್ನು ಗೆದ್ದ ಇವರು ಪರಭಾಷೆಯ ಚಿತ್ರಗಳಲ್ಲಿಯೂ ನಟಿಸಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.
      ಚೆನೈನಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರು. ಅಲ್ಲದೇ ತಮಿಳು ಮತ್ತು ತೆಲುಗು ಚಿತ್ರರಂಗದ ದಿಗ್ಗಜರಾದ ಎಂ.ಜಿ.ಆರ್ ಮತ್ತು ಎಂ.ಟಿ.ಆರ್ ರವರು ಇವರ ಚೊಚ್ಚಲ ನೃತ್ಯ ಪ್ರದರ್ಶನಕ್ಕೆ ಆಗಮಿಸಿ ಶುಭವನ್ನು ಹಾರೈಸಿದ್ದು ಜೀವನದಲ್ಲಿ ಮರೆಯಲಾಗದ ಸವಿ ನೆನಪಾಗಿಯೇ ಉಳಿದಿದೆ. ನಂತರ ಕೂಡ ಅನೇಕ ನೃತ್ಯ ಪ್ರದರ್ಶನಗಳನ್ನು ಕೊಟ್ಟಿದ್ದರಲ್ಲದೆ ಸತತವಾಗಿ ಕಾಣುತ್ತಿದ್ದ ನೃತ್ಯ ಪ್ರದರ್ಶನಗಳೇ ಇವರ ಚಿತ್ರರಂಗ ಪ್ರವೇಶಕ್ಕೆ ಕಾರಣವಾಗಿವೆ. ಆದರೆ ಹೇಗೆ ಎಂದು ತಿಳಿಯುವ ಕುತೂಹಲ ಇದೆಯೇ?, ಹೀಗೆಯೇ ಒಂದು ಕಾರ್ಯಕ್ರಮದಲ್ಲಿ ಇವರ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಮ್ಮ ಕನ್ನಡ ಚಿತ್ರರಂಗದ ಮೇರು ಕ್ರಿಯೇಟಿವ್ ನಿರ್ದೇಶಕ ಸಿದ್ದಲಿಂಗಯ್ಯನವರು ಈ ನೃತ್ಯ ಪ್ರದರ್ಶನವನ್ನು ವೀಕ್ಷಿಸಿ ನೃತ್ಯದ ಹಾವ ಭಾವವನ್ನು ಮೆಚ್ಚಿ ತಾವು ನಿರ್ದೇಶಿಸಲಿದ್ದ ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಇವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಸಿದ್ಧಲಿಂಗಯ್ಯ ನಿರ್ದೇಶನದ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದರು. ತಮ್ಮ ಮೊದಲ ಚಿತ್ರದಲ್ಲಿ ನಮ್ಮ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಮನಮುಟ್ಟುವ ಅಭಿನಯವನ್ನು ಮಾಡಿದ್ದಲ್ಲದೆ ತಮ್ಮ ಅಜ್ಜಿ ಜನಪ್ರಿಯ ಗಾಯಕಿ ಋಷ್ಯೇಂದ್ರ ಮಣಿ ಜೊತೆ ಬೆಳ್ಳಿತೆರೆಯನ್ನು ಹಂಚಿಕೊಂಡಿದ್ದರು. ಗಂಭೀರ ಕಥಾ ವಸ್ತುವನ್ನು ಹೊಂದಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನು ಪಡೆದ ಈ ಚಿತ್ರವನ್ನು ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ರಿಮೇಕ್ ಮಾಡಲಾಗಿತ್ತು. ಅಲ್ಲದೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮತ್ತು ಭವಾನಿ ಜೋಡಿ ಕನ್ನಡ ಚಿತ್ರರಸಿಕರಿಗೆ ಮರೆಯಲಾಗದ ಮೋಡಿಯನ್ನು ಮಾಡಿತ್ತು.


     ನಂತರ ಇವರು ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆ 1975 ರಲ್ಲಿ ತೆರೆ ಕಂಡ ಕಳ್ಳ ಕುಳ್ಳ, ಒಂದೇ ರೂಪ ಎರಡು ಗುಣ, ನಾಗಕನ್ಯೆ ಮತ್ತು 1977 ರಲ್ಲಿ ತೆರೆ ಕಂಡ ಶನಿ ಪ್ರಭಾವ ಸೇರಿ ಅನೇಕ ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಮಾಂಗಲ್ಯ ಬಂಧನ ಚಿತ್ರದಲ್ಲಿ ಸ್ಮರಣೀಯ ನಟನೆಯನ್ನು ಮಾಡಿದ್ದ ಇವರು 1977 ರಲ್ಲಿ ತೆರೆ ಕಂಡ ಸಹೋದರರ ಸವಾಲ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ನಾಯಕಿಯಾಗಿ ನಟಿಸಿದ್ದರು. ಅಷ್ಟರಲ್ಲಿ ಇವರ ಜನಪ್ರಿಯತೆ ಪರಿಭಾಷೆಯನ್ನು  ತಲುಪಿದ್ದರ ಫಲ 1977 ರಲ್ಲಿ ತೆರೆ ಕಂಡ ಸಿ.ವಿ.ಶ್ರೀಧರ್ ನಿರ್ದೇಶನದ   ಸೀತಾ ಗೀತ ದಾಟಿತೇ ಎಂಬ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದರು. ಆದರೆ ಇವರ ಅದೃಷ್ಟದಾಟ ಇಲ್ಲಿಗೆ ನಿಲ್ಲಲಿಲ್ಲ. 1978 ರಲ್ಲಿ ತೆರೆ ಕಂಡ ಶಶಿಕುಮಾರ್ ನಿರ್ದೇಶನದ ನಿನಕ್ಕು ಇನುಮ್ ಎನಿಕ್ಕು ನೀಯುಮ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಮಲೆಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಅದರಲ್ಲೂ 1979 ರಲ್ಲಿ ತೆರೆ ಕಂಡ ತೆಲುಗು ಚಿತ್ರರಂಗದ ಲೆಜೆಂಡ್ ಹಿರಿಯ ನಟ, ನಿರ್ಮಾಪಕ, ನಿರ್ದಶಕ ಎನ್.ಟಿ.ಆರ್. ನಿರ್ದೇಶನದ  ಶ್ರೀ ಮದ್ ವಿರಾಟ್ ಪರ್ವಂ ಎಂಬ ತೆಲುಗು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1970 ರ ದಶಕದ ಕೊನೆಯಲ್ಲಿ ತೆರೆ ಕಂಡ ಮಲೆಯಾಳಂ ಮೇರು ನಟ ಪ್ರೇಮ್ ನಜೀರ್ ಜೊತೆ ನಾಯಕಿಯಾಗಿ ನಟಿಸಿದ ಲೀಸಾ ಚಿತ್ರದಲ್ಲಿ ಭೂತದ ಪಾತ್ರದಲ್ಲಿ ಉತ್ತಮ ನಟನೆಯನ್ನು ಮಾಡಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ. 1978 ರಲ್ಲಿ ತೆರೆ ಕಂಡ ಪ್ರೇಂ ನಜೀರ್ ಮತ್ತು ಎಂ.ಜಿ.ಸೋಮನ್ ರವರ ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದ್ದ ಕಲ್ಪ ವೃಕ್ಷ, 1979 ರಲ್ಲಿ ತೆರೆ ಕಂಡ ರವಿಕುಮಾರ್ ಜೊತೆ ನೀಲ ತಾಮರಂ, ಮತ್ತು 1980 ರಲ್ಲಿ ತೆರೆ ಕಂಡ ಎಂ.ಜಿ ಸೋಮನ್ ಜೊತೆ ಸರಸ್ವತೀ ಯಾಮಂ ಚಿತ್ರಗಳಲ್ಲಿ ಪ್ರೌಢ ಅಭಿನಯವನ್ನು ಮಾಡಿದ್ದಾರೆ. ಸ್ತ್ರೀ ಒರು ದುಖಂ, ಅನುಪಲ್ಲವಿ ಮತ್ತು ಸರ್ಪಂಗಳಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಇವರು ಬೇಬಿ ನಿರ್ದೇಶನದಲ್ಲಿ ಮೂಡಿ ಬಂದ ಪಂಬರಂ ಚಿತ್ರದಲ್ಲಿ  ಕೊನೆಯ ಬಾರಿಗೆ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. 

1979 ರಲ್ಲಿ ಮಲೆಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕ ರಘು ಕುಮಾರ್ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಆದರೆ  ಸುಮಾರು 22  ವರ್ಷಗಳ ನಂತರ 2001 ರಲ್ಲಿ ತೆರೆ ಕಂಡ  ನರೇಂದ್ರನ್ ಮಗನ್ ಜಯಕಾಂತನ್ ವಕ ಎಂಬ ಚಿತ್ರದಲ್ಲಿ ನಟಿಸುವ ಮೂಲಕ  ಚಿತ್ರರಂಗಕ್ಕೆ ಹಿಂತಿರುಗಿದ ಇವರು 2002 ರಲ್ಲಿ ತೆರೆ ಕಂಡ ತಾಂಡವಂ, ಮತ್ತು 2003 ರಲ್ಲಿ ತೆರೆ ಕಂಡ ಬಾಲೇಟ್ಟನ್ ಸೇರಿ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕಿರುತೆರೆಯನ್ನು ಪ್ರವೇಶಿಸಿರುವ ಇವರು ಮನೋರಮಾ ವಾಹಿನಿಯ ಭಾಗ್ಯದೇವತಾ ಎಂಬ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟರಾದ ಎಂ.ಜಿ.ಆರ್, ಜೈಶಂಕರ್,ಮುತ್ತುರಾಮನ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಶ್ರೀನಾಥ್, ರಜನೀಕಾಂತ್, ಚಂದ್ರಮೋಹನ್, ಜಯನ್, ಸುಕುಮಾರನ್ ಮತ್ತು ರವಿಕುಮಾರ್ ಸೇರಿ ಅನೇಕ ಕಲಾವಿದರೊಂದಿಗೆ ನಟಿಸಿರುವ ಇವರು ಸಿದ್ಧಲಿಂಗಯ್ಯ, ಶಶಿಕುಮಾರ್ ರಂತಹ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸವನ್ನು ಮಾಡಿದ್ದಾರೆ. ಆದರೆ ಪತಿ ರಘು ಕುಮಾರ್ ಫೆಬ್ರುವರಿ 20, 2014 ರಂದು ನಿಧನರಾಗಿದ್ದು ಪ್ರಸ್ತುತ  ಇವರಿಗೆ ಭಾವನಾ ಮತ್ತು ಭವಿತಾ ಎಂಬ ತಮ್ಮ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply