ದೇವರು ಕೊಟ್ಟ ತಂಗಿ

1973ರ ಈ ಚಿತ್ರದಲ್ಲಿ ತಂಗಿ ಸೆಂಟಿಮೆಂಟಿಗೆ ಫುಲ್ ಒತ್ತು ಕೊಟ್ಟಿದ್ದಾರೆ ನಿರ್ದೇಶಕ ರವಿ. 

ರಘು (ರಾಜ್‍ಕುಮಾರ್) ಮತ್ತು ಸುಧಾ(ಕಲಾ) ಬಹಳ ಅಟ್ಯಾಚ್ಡ್ ಅಣ್ಣ ತಂಗಿ. ಅಪ್ಪ ಅಮ್ಮ ಇಲ್ಲದ್ದರಿಂದ ರಘು ಸುಧಾಳನ್ನು ಚಿಕ್ಕಂದಿನಿಂದ ಸಾಕಿರುತ್ತಾನೆ. ಅವನು ಅವಳಿಗೆ ಹೊಸ ಬಟ್ಟೆ ತರಲು ರಕ್ತ ಕೊಡಲು ನರ್ಸಿಂಗ್ ಹೋಂಗೆ ಹೋದಾಗ ಅಲ್ಲಿ ಡಾಕ್ಟರ್ ಶೋಭಾ(ಜಯಂತಿ) ಮತ್ತು ಶೇಷಪ್ಪ (ನರಸಿಂಹರಾಜು) ಸಿಗುತ್ತಾರೆ. ಮನೆಯ ಬಳಿ ನಾಗಪ್ಪನಿಗೆ ಸುಧಾ ಎಸ್‍ಜಾನಕಿ ಧ್ವನಿಯಲ್ಲಿ ‘ತನ್ನಿರೆ ಹಾಲ ತನಿಯೆರೆಯೋಣ’ ಎಂದು ಹಾಡುತ್ತಾಳೆ.

ಡಾಕ್ಟರ್ ಶೋಭಾಗೆ ರಘು ಬಗ್ಗೆ ಆಸಕ್ತಿ. ಆದರೆ ಶೋಭಾಳ ಮೇಲೆ ಅವಳ ಸೋದರತ್ತೆಯ(ಜಯಶ್ರೀ) ಮಗ ಹನುಮಂತುವಿಗೆ(ದ್ವಾರಕೀಶ್)ಗೆ ಆಸೆ. ಆದ್ರೆ ಶೋಭಾ ತನ್ನಪ್ಪನ ಬಳಿ(ಲೋಕನಾಥ್- ಮಾತೆತ್ತಿದರೆ ಇಟ್ಸಾಲ್‍ರೈಟ್ ಎನ್ನುವ ಪಾತ್ರ) ಬಿಲ್‍ಕುಲ್ ಬೇಡ ತನಗೆ ಹನುಮಂತು ಅಂದಿರ್ತಾಳೆ. ಹನುಮಂತು ಈಗ ಸುಧಾಳ ಮೇಲೆ ಕಣ್ಣು ಹಾಕುತ್ತಾನೆ. ಈಗ ಸುಧಾಗೂ ಹನುಮಂತುವಿಗೂ, ರಘುವಿಗೂ ಶೋಭಾಗೂ ಮದುವೆ ಆಗಬೇಕು. ನಂದಿ ಬೆಟ್ಟದ ಮೇಲೆ ನಾಲ್ವರೂ ಹೋದಾಗ ಸುಧಾಳ ಜೊತೆ ರಘು ಪಿಬಿಎಸ್ ದನಿಯಲ್ಲಿ ‘ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ ನಾ ಕಾಣುತಿರುವ ನೋಟವೆಲ್ಲಾ ಸತ್ಯ ಸುಂದರ’ ಎಂದು ಹಾಡುತ್ತಾನೆ. ಹನುಮಂತು ಮಾಡಿದ ಕೀಟಲೆಯೊಂದರಲ್ಲಿ ದುರಂತವೊಂದು ಘಟಿಸುತ್ತದೆ. ಎಕ್ಸಿಟ್ ಸುಧಾ.

ಸಾಯುವಂತಾಗಿ ಆಸ್ಪತ್ರೆ ಸೇರಿದ ರಘುವನ್ನು ಉಳಿಸಿಕೊಳ್ಳಲು ಎಂಟ್ರಿ ವಸುಧಾ (ಬಿ.ವಿ.ರಾಧಾ). ಅವಳು ರಘುವಿನ ಆಪ್ತಮಿತ್ರ ರಾಮುವಿನ (ಶ್ರೀನಾಥ್) ಹೆಂಡತಿ. ಹಿಂದೊಮ್ಮೆ ಅವಳನ್ನು ರಘು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಡೆದು, ಕಾಪಾಡಿರುತ್ತಾನೆ. ಈಗ ರಾಮುವಿನ ಆಣತಿಯ ಮೇಲೆಯೇ ರಘುವನ್ನು ಗುಣಪಡಿಸಲು ಪಣ ತೊಡುತ್ತಾಳೆ ವಸುಧಾ. ಎಸ್‍ಜಾನಕಿ ಸ್ವರದಲ್ಲಿ ಪುರಂದರ ದಾಸರ ‘ಲಾಲಿಸಿದಳು ಮಗನ ಯಶೋದೆ’ ಹಾಡುತ್ತಾಳೆ. 

ವಸುಧಾ ಗರ್ಭಿಣಿ ಎಂದು ತಿಳಿದಾಗ ರಘು, ರಾಮು ಇಬ್ಬರೂ ಪಿಬಿಎಸ್ ಎಸ್‍ಪಿಬಿ ವಾಯ್ಸ್‍ಗಳಲ್ಲಿ ‘ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತಿದೆ ತಿಳಿ ಮಂಕೆ’ ಎಂದು ಹಾಡುತ್ತಾರೆ. ಇದನ್ನು ಶೇಷಪ್ಪನ ಇಬ್ಬರು ಹೆಂಡತಿಯರಾದ ಎಂ.ಎನ್. ಲಕ್ಷ್ಮೀದೇವಿ, ಬಿ.ಜಯಾ ಪಕ್ಕದ ಮನೆಯಿಂದ ನೋಡಿ ಇವರ ಸಂಬಂಧಗಳಿಗೆ ಕತೆ ಕಟ್ಟುತ್ತಾರೆ.

ಈ ಪವಿತ್ರ ರಿಶ್ತಾವನ್ನು ಫುಲ್ ಟ್ವಿಸ್ಟ್ ಮಾಡಿ ಗಾಳಿಸುದ್ದಿ ಹಬ್ಬಿಸಿ, ರಾಮುವಿನ ತಲೆ ಕೆಡಿಸಿ  ಇವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಅವನು ಆಪಾದಿಸುತ್ತಾನೆ. ರಘು ಮನೆ ಬಿಟ್ಟು ಹೋಗಿ ಕಾಡಿನಲ್ಲಿ ‘ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ ನಾ ಕಾಣುತಿರುವ ನೋಟವೆಲ್ಲಾ ಘೋರ ಭೀಕರ’ ಎಂದು ಅತ್ತು ಹಾಡುತ್ತಾನೆ.

ಲಂಡನ್ನಿಗೆ ಹೋಗಿದ್ದ ಶೋಭಾ ಬಂದು ರಾಮುವಿಗೆ ಬುದ್ಧಿ ಹೇಳುತ್ತಾಳೆ. ನಂತರ ಅವನೇ ಅವರಿಬ್ಬರನ್ನೂ ಮರೆಯಲ್ಲಿ ನಿಂತು ಕಂಡು, ಕಣ್ಣೀರಾಗುತ್ತಾನೆ. ವಸುಧಾ ಮಗುವಿಗೆ ಜನ್ಮ ಕೊಡಲು ಶೋಭಾಳ ನರ್ಸಿಂಗ್ ಹೋಂಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲ್ಪಡುತ್ತಾಳೆ.


ರಾಮು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ರಘು ಅವನನ್ನು ತಡೆದು, ನಂತರ ಶುಭಂ!


ತೂಗುದೀಪ ಶ್ರೀನಿವಾಸ್ ಕೂಡ ಗಾಳಿಸುದ್ದಿಯ ಬೆಂಕಿಗೆ ತುಪ್ಪ ಸುರಿಯುವ ಪಾತ್ರ. ಹಿಂದೆ ಅಣ್ಣಾವ್ರ ಬಳಿ ಏಟು ಕೂಡ ತಿಂದ ಪಾತ್ರ. ದ್ವಾರಕೀಶ್ ಎರಡನೇ ಭಾಗದಲ್ಲಿ ದಾಡಿ ಬಿಟ್ಟು ಸೀರಿಯಸ್ ಪಾತ್ರ. ನರಸಿಂಹರಾಜು ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯಾ ನಾ ಕಂಡೇನಯ್ಯ ಎನ್ನುವಂತೆ ಒದ್ದಾಡುತ್ತಾರೆ.

ವಿಜಯಭಾಸ್ಕರ್ ಅವರ ನೇಪಥ್ಯ ವಾದ್ಯ ಸಂಗೀತ ಇಡೀ ಚಿತ್ರದಲ್ಲಿ ಹಾಸುಹೊಕ್ಕಾಗಿ ಮನಸ್ಸಿಗೆ ಮುದ ನೀಡುತ್ತದೆ.


ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ. ಆ ಮುಗ್ಧತೆ, ಕೋಪ, ವಾತ್ಸಲ್ಯ, ಸಂಕೋಚ ಎಲ್ಲವೂ ಚೆನ್ನ ಚೆನ್ನ. ಜಯಂತಿ ನಿಜಕ್ಕೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಶ್ರೀನಾಥ್ ಮೊದಲು ಪ್ರೀತಿಯ ಪತಿ, ಗೆಳೆಯ. ನಂತರ ಸಂಶಯ ಪಿಶಾಚಿ ಹಿಡಿದ ಪತಿ, ಗೆಳೆಯನನ್ನು, ಪತ್ನಿಯನ್ನು ದೂಷಿಸುವಾತ …ಚೆನ್ನಾಗಿ ನಿಭಾಯಿಸಿದ್ದಾರೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply