ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ನೂರ ಹದಿನಾಲ್ಕು ವರ್ಷದ ಜನ್ಮದಿನವಿಂದು.
ಸ್ವಾಮೀಜಿಗಳು ಅಂದ್ರೆ ಧರ್ಮ ಪ್ರಚಾರಕರಲ್ಲ,ಕಚ್ಚೆಹರುಕರಲ್ಲ,ಲಕ್ಷಾಂತರ ಹಿಂಬಾಲಕರನ್ನು ಇಟ್ಕೊಂಡಿರೋ ವೋಟ್ ಬ್ಯಾಂಕ್ ಅಲ್ಲ ಎಂದು ಒಪ್ಪಿಕೊಳ್ಳಲು ಇರುವ ಜಗತ್ತಿನ ಒಂದೇ ಒಂದು ಕಾರಣ ಎಂದರೆ ಶಿವಕುಮಾರ ಸ್ವಾಮೀಜಿಗಳು. ಮಠ ಎಂದರೆ ರಾಜಕಾರಣಿಗಳು ಕೋಟಿ,ಕೋಟಿ ಬಚ್ಚಿಡುವ ಹಾಳು ಹಿತ್ತಲಲ್ಲ,ಜಾತಿಯ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೇಸರಿ ಗದ್ದೆಯಲ್ಲ ಎಂದು ಸಮರ್ಥಿಸಿಕೊಳ್ಳಲು ಇರುವ ಮತ್ತೊಂದೇ ಒಂದು ಕಾರಣವೆಂದರೆ ಸಿದ್ಧ ಗಂಗಾ ಮಠ.
ನಮ್ಮ ದೇಶ ಭಾರತ ಜಗತ್ತಿನ ಎಲ್ಲ ದೇಶಗಳಿಗಿಂತ ವಿಭಿನ್ನ ಅನಿಸಿಕೊಳ್ಳಲು ಕಾರಣ ಸರ್ವಧರ್ಮ ಸಹಿಷ್ಣುತೆ ಎಂದರೆ ತಪ್ಪಾಗಲಾರದು.ಇಲ್ಲಿ ಹಿಂದೂ,ಮುಸ್ಲೀಮ್,ಕ್ರಿಶ್ಚಿಯನ್ನರು, ಸಿಖ್ ಮತ್ತೊಂದು, ಇನ್ನೊಂದು ಹನ್ನೊಂದು ಧರ್ಮಗಳಿದ್ದರು ಎಲ್ಲ ಧರ್ಮದವರು ತಮ್ಮ ತಮ್ಮ ಧರ್ಮವನ್ನು ಒಪ್ಪಿಕೊಂಡು,ಪಾಲಿಸಿಕೊಂಡು ಬದುಕಲು ಸ್ವತಂತ್ರರು ಹಾಗಾಗಿ ಭಾರತ ದೇಶ ಪರದೇಶಿಗರಿಗೆ ಅಧ್ಯಯನದ ವಿಷಯದಲ್ಲಿ ಮೊದಲ ಆಯ್ಕೆಯಾಗುವುದು.ಎಲ್ಲರಿಗೂ ಅವರವರು ನಂಬಿರುವ ಧರ್ಮದ ಕುರಿತು ವಿಷೇಶ ಅಭಿಮಾನ ಪ್ರೀತಿ,ನಂಬಿಕೆ ಇಟ್ಟಿಕೊಂಡಿರುತ್ತಾರೆ.ಕೆಲವರಂತು ಯಾವ ಮಟ್ಟಿಗೆ ಧರ್ಮದ ಮೇಲೆ ಪ್ರೇಮ ಹೊಂದಿರುತ್ತಾರೆ ಎಂದರೆ ಹೆಂಡತಿ ಮಕ್ಕಳಿರಲಿ ಪಾಪ ತಮ್ಮ ಜೀವ ತ್ಯಾಗಕ್ಕೂ ಸಿದ್ದರಾಗಿ ನಿಂತುಬಿಡುತ್ತಾರೆ.ಧರ್ಮವನ್ನು ದೇವರನ್ನು ಪ್ರೀತಿಸುವುದು,ನಂಬುವುದು ತಪ್ಪಲ್ಲ ಆದರೆ ಅನ್ಯ ಧರ್ಮವನ್ನು ದ್ವೇಷಿಸುವ ಮಟ್ಟಿಗಿನ ಹುಚ್ಚು ಪ್ರೀತಿ ಇರಬಾರದು ಎಂಬುದು ನನ್ನ ವಾದ.ಕೆಲವರ ಮಟ್ಟಿಗೆ ಧರ್ಮ ಅಂದರೆ ಕೇಸರಿ,ಬುರ್ಕಾ,ಪೂಜೆ,ನಮಾಜು,ಚರ್ಚು,ಮಸೀದಿ, ದೇವಸ್ಥಾನ ಇಷ್ಟೆ. ಅಸಲಿಗೆ ಧರ್ಮವೆಂದರೆ ಹಾಕುವ ಬಟ್ಟೆಯಲ್ಲ,ಆಚರಣೆಯಲ್ಲ,ಪೂಜಿಸುವ ದೇವರಲ್ಲ. “ಧರ್ಮ ಎಂದರೆ ನೆಮ್ಮದಿಯಿಂದ ಬದುಕುವುದು,ಮತ್ತೊಬ್ಬರ ನೆಮ್ಮದಿಗೆ ಕಾರಣವಾಗುವುದು”ಎಂಬ ಸತ್ಯ ಅರಿತಾಗ ನಿಜವಾಗಿಯೂ ನಾಗರೀಕ ಸಮಾಜ ಮತ್ತು ದೇಶ ಮುಂದುವರೆಯಲು ಸಾಧ್ಯವಾಗುತ್ತದೆ.
ಧರ್ಮ ಎಂದರೆ ದಾಸೋಹ ಎಂದು ನಂಬಿರುವ ಆದರ್ಶ ಪುರುಷರು ಶಿವಕುಮಾರ ಸ್ವಾಮಿಗಳು. ಇದುವರೆಗೂ ಧರ್ಮ ಎಂದರೆ ಹಿಂದುತ್ವ,ದೇವರು,ಪೂಜೆ,ದೇವಸ್ಥಾನ ಎಂಬ ಬಗ್ಗೆ ಭಾಷಣ ಮಾಡಿದ ಉದಾಹರಣೆ ಇಲ್ಲ.
ಮಠ ಇರುವುದು ಧರ್ಮ ಪ್ರಚಾರ ಮಾಡುವುದಕ್ಕಲ್ಲ ಬಡವರ ಮಕ್ಕಳ ಭವಿಷ್ಯ ರೂಪಿಸಲು ಎಂಬ ಅರ್ಥ ಹುಟ್ಟುವಂತ ಕಾಯಕ ನಿರತಯೋಗಿ.ಇಷ್ಟೊಂದು ಮಠಗಳು ಮಠಾದೀಶರು ಇರುವಾಗ ಶಿವಕುಮಾರ ಸ್ವಾಮೀಜಿಗಳನ್ನೇ ಏಕೆ ದೇವರೆಂದರು ಗೊತ್ತಾ..? ನೂರಾ ಹನ್ನೊಂದು ವರ್ಷ ಬದುಕಿಬಿಟ್ರು ಅಂತಲ್ಲ.ಗುಡಿಯಲ್ಲಿರುವ ದೇವರ ಕುರಿತು ಪ್ರವಚನ ಹೇಳಿದ್ದಕ್ಕಿಂತ ಹೆಚ್ಚಾಗಿ ಮಾಡುವ ಕೆಲಸದ ಶ್ರದ್ಧೆಯ ಬಗ್ಗೆ,ಶ್ರಮದಿಂದ ಮಾತ್ರ ಬದುಕಿನ ಏಳ್ಗೆ ಸಾದ್ಯ ಎಂಬ ಬಗ್ಗೆ ಪಾಠ ಮಾಡ್ತಾರೆ.ಬಡವರು ಬಡತನದಿಂದ ಮುಕ್ತಿ ಪಡೆಯಲು ದೇವರ ಪೂಜೆ ಮಾಡಬೇಕಿಲ್ಲ ಮಾಡುವ ಕೆಲಸಲ್ಲಿ ಶ್ರದ್ಧೆ ಮತ್ತು ನಂಬಿಕೆ ಇಡಬೇಕು ಎನ್ನುವ ಅವರ ಮಾತುಗಳಲ್ಲಿ ಧರ್ಮವಾಗಲಿ,ದೇವರಾಗಲಿ,ಜಾತಿಯಾಗಲಿ ಸುಳಿದಾಡುವುದಿಲ್ಲ.ಹತ್ತು ಸಾವಿರ ಮಕ್ಕಳಿಗೆ ವಿದ್ಯಾದಾನ ಮಾಡ್ತಿದ್ದಾರೆ ಅಂದರೆ ಹೆಗ್ಗಳಿಕೆಗಾಗಲಿ,ಹೆಮ್ಮೆಗಾಗಲಿ ಅಲ್ಲ.ಎಲ್ಲರಿಗೂ ವಿದ್ಯೆ ಸಿಗಬೇಕು ಬಡವರು ಬಡವರಾಗಿ ಉಳಿಯದಿರಲು ಜ್ಞಾನವೊಂದೆ ದಾರಿ ದೀಪ ಎಂಬ ಸೂತ್ರ ನಂಬಿ ನಂಬಿ ಬಂದ ಬಡಮಕ್ಕಳಿಗೆ ಯಾವುದೇ ನಿರೀಕ್ಷೆಯಿಲ್ಲದೆ ಉಚಿತ ಸೇವೆ ಮಾಡ್ತಿದ್ದಾರೆ. ಇರೊ ಎರಡು ಮಕ್ಕಳನ್ನೇ ಸಂಬಾಳಿಸೋಕಾಗಲ್ಲ,ಲಕ್ಷಾಂತರ ಪೀಜ್ ಕೊಟ್ಟು ಓದ್ಸೋಕಾಗ್ತಿಲ್ಲ ಅಂತಾದ್ರಲ್ಲಿ ಹತ್ತು ಸಾವಿರ ಮಕ್ಕಳಿಗೆ ಪುಕ್ಕಟೆ ಊಟ ಕೊಟ್ಟು,ಶಿಕ್ಷಣ ಕೊಟ್ಟು ಶಿಸ್ತು ಕಲಿಸೋದು ಅಂದ್ರೆ ಸುಮ್ಮನೆ ಮಾತಾ..??
ಮಠ ಎಂದರೆ ಪೀಠ,ಪಲ್ಲಕ್ಕಿ ಉತ್ಸವ,ಸತ್ಸಂಗ,ಅಮವಾಸೆ,ಹುಣ್ಣಿನೆ ಪೂಜೆ,ಹೋಮ ಹವನ ಅಂತ ವರ್ಷಕ್ಕೆ ಇನ್ನೂರು ಹಬ್ಬಮಾಡಿ ಸಿಂಹಾಸನದಂತ ಪೀಠದಲ್ಲಿ ಮೆರೆವ ಸಾಕಷ್ಟು ಡೋಂಗಿ ಮಠಾದೀಶರ ನಡುವೆ ಸರಳವಾಗಿ ಬದುಕಿ ಸಾಕಷ್ಟು ಜನರಿಗೆ ಮಾದರಿಯಾಗಿರುವ ಶಿವಕುಮಾರ ಸ್ವಾಮಿಗಳನ್ನು ಜನ ನಡೆದಾಡುವ ದೇವರೆಂದರು ಆದರೆ ಅವರು ಸಿದ್ದಗಂಗೆಯ ಕಡೆ ತೋರಿ ದೇವರು ಮೇಲಿರುವನು ಎಂದು ಅನ್ನದಾನಕ್ಕೆ ನಿಂತರು.ಮಠವೆಂದರೆ ಜಾತಿ ಆಧಾರದ ಮೇಲೆ ಹಿಂಬಾಲಕರನ್ನು ಹೊಂದಿರುವ ವೋಟ್ ಬ್ಯಾಂಕ್ ಎಂದೇ ಬಿಂಬಿತವಾಗಿರುವ ಕಾಲವಿದು.ರಾಜಕಾರಣಿಗಳು ಆ ಮಠಕ್ಕೆ ,ಈ ಮಠಕ್ಕಿಷ್ಟು ಅಂತ ದುಡ್ಡು ಕೊಟ್ಟರೆ ಆ ಜಾತಿಯವರ ವೋಟುಗಳ ನಮಗೆ ಬೀಳ್ತವೆ ಅಂತ ಮಠಾದೀಶರ ಓಲೈಕೆಗೆ ಮಾಡುವ ಡ್ರಾಮಗಳು ನೋಡ್ತಿದ್ದೀವಿ.ಹೀಗಿರುವಾಗ ಕಳೆದ ವರ್ಷ ಸ್ವಾಮಿಗಳ ಆಶೀರ್ವಾದ ಪಡೆಯಲು ಬಂದ ಪ್ರಧಾನ ಮಂತ್ರಿಗಳಿಗೆ ದೇಶ ಕಾಯುವ ಸೈನಿಕರ ಪರಿಹಾರ ನಿಧಿಗಾಗಿ ಮಠದ ವತಿಯಿಂದ ಇಪ್ಪತೈದು ಲಕ್ಷ ದೇಣಿಗೆ ನೀಡಿ ತಮ್ಮ ಔದಾರ್ಯ ಮೆರೆದವರು ಶಿವಕುಮಾರ ಸ್ವಾಮಿಗಳು. ಅಂಗಿ ಬಿಚ್ಚಿಸಿ ಇವನಾವ ಜಾತಿ ಎಂದು ತಿಳ್ಕೊಂಡು ದೇವರ ದರ್ಶನಕ್ಕೆ ಬಿಡುವ ಹೀನ ಪದ್ದತಿ ಈ ಮಠದಲ್ಲಾಗಲಿ,ದೇವಸ್ಥಾನದಲ್ಲಾಗಲಿ ಇಲ್ಲ.ಖುದ್ದು ನಡೆದಾಡುವ ದೇವರೇ ಹತ್ತಿರ ಕರೆದು ಭಕ್ತರಿಗೆ ದರ್ಶನ ನೀಡುತ್ತಿದ್ದರು ಬಡವರಿಗೆ ಸದಾ ಸ್ವಾಗತ
ಹಸಿದವರಿಗೆ ಅನ್ನ ನೀಡುವುದೇ ಧರ್ಮ ಎಂದು ಪಾಲಿಸಿಕೊಂಡು ಬಂದಿರುವ ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿ ಯುವಜನತೆಗೆ ಆದರ್ಶವಾಗಿರುವ ಸ್ವಾಮಿಗಳ ಆಶೀರ್ವಾದ ಮುಂದಿನ ಪೀಳಿಗೆಗೂ ದೊರೆಯುಂತಾಗಲಿ ಎಂದು ನಮ್ಮೆಲ್ಲರ ಕೋರಿಕೆ – ಪ್ರಸನ್ನ ಶೆಟ್ಟಿ