ರಾಜ್ ಭಾರತಿ ಜೋಡಿಯ ಅನೇಕ ಚಿತ್ರಗಳನ್ನು ನೋಡಿದ ಮೇಲೆ ನೋಡಿದ ಚಿತ್ರ ರಾಜ್ ಜಯಂತಿ ಜೋಡಿಯ ಈ ಚಿತ್ರ.
ಅಶ್ವತ್ಥ್ ಆದವಾನಿ ಲಕ್ಷ್ಮಿದೇವಿ ಅವರ ಮಕ್ಕಳು ಶ್ರೀಧರ್ (ದಿ. ರಮೇಶ್), ಆನಂದ್ (ಅಣ್ಣಾವ್ರು), ಕಲಾ. ಅಶ್ವತ್ಥ್ ಸಂಪತ್ ಅವರ ಕಾರ್ಖಾನೆಯಲ್ಲಿ ಗುಮಾಸ್ತ. ಶ್ರೀಧರ್ ಡಾಕ್ಟರ್ ಆಗಲು ಓದುತ್ತಿರುತ್ತಾನೆ. ಅಶ್ವತ್ಥ್ ಕಾಲು ಕತ್ತರಿಸುತ್ತಾರೆ ಆತನಿಗೆ ಅಪಘಾತವನ್ನು ಶಕ್ತಿಪ್ರಸಾದ್ ಮತ್ತು ದಿನೇಶ್ ಮಾಡಿಸಿದಾಗ. ಆತನಿಗೆ ಸಂಪತ್ ಕೊಟ್ಟ ಇಪ್ಪತ್ತು ಸಾವಿರವನ್ನೂ ನುಂಗಿಬಿಡುತ್ತಾರೆ ಈ ದುಷ್ಟದ್ವಯರು.ಅಣ್ಣನನ್ನು ಓದಿಸಲು ಆನಂದ್ ಕಾಲೇಜು ಬಿಟ್ಟು ಕೆಲಸಕ್ಕೆ ಸೇರುತ್ತಾನೆ. ಎಲ್ಲಿ? ಅಪ್ಪ ಇದ್ದ ಸಂಪತ್ ಅವರ ಫ್ಯಾಕ್ಟರಿಯಲ್ಲೇ. ಸಂಪತ್ ಮಗಳು ಜಯಂತಿ (ಜಗಳಗಂಟಿ ಜಯಾ) ಮತ್ತು ಮಗ ದ್ವಾರಕೀಶ್.
ಜಯಂತಿ ಆನಂದನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಅವರಿಬ್ಬರ ಸಂಭಾಷಣೆ ಇಡೀ ಸಿನಿಮಾದಲ್ಲಿ ಕಚಗುಳಿ ಇಡುತ್ತದೆ. ಮಾತಿಗೆ ಮಾತು ಇಬ್ಬರೂ.ರಮೇಶ್ ತನ್ನ ಸೋದರಮಾವನ (ಬಾಲಕೃಷ್ಣ)ಮಗಳು ಮೋಹಿನಿಯನ್ನು (ಬಿ.ವಿ.ರಾಧ)ಪ್ರೀತಿಸುತ್ತಾನೆ. ಅವಳೂ, ಅವಳ ತಾಯಿ ಎಂ.ಎನ್.ಲಕ್ಷ್ಮೀದೇವಿಯೂ (ನಾಗರಹಾವು ಚಿತ್ರದ ಮಾರ್ಗರೆಟ್ಟಳ ತಾಯಿ, ಇದರಲ್ಲಿ ಕೂಡ ಅತ್ಯಂತ ಸ್ಪಿರಿಟೆಡ್ ನಟನೆ. ಮನೆ ಮುರಿಯುವ ನಿಪುಣಳ ಪಾತ್ರ) ಸೇರಿ ರಮೇಶ್ನನ್ನು ಅವನ ಮನೆಯಿಂದ ದೂರವಿಡುತ್ತಾರೆ. ಕೊನೆಗೆ ಎಲ್ಲವೂ ಸುಖಾಂತ.ಬಾಲಕೃಷ್ಣ ಅವರನ್ನು ದುಷ್ಟಬುದ್ಧಿ ಮಾಡದೇ ಇರುವ ಪಾತ್ರದಲ್ಲಿ ನೋಡಿ ಖುಷಿ ಆಯಿತು (ಬಂಗಾರದ ಮನುಷ್ಯದ ರಾಚೂಟಪ್ಪ ನನ್ನ ಇಷ್ಟದ ಪಾತ್ರ). ದಿನೇಶ್, ಶಕ್ತಿಪ್ರಸಾದ್ ದುಷ್ಟದ್ವಯರ ಪಾತ್ರದಲ್ಲಿದ್ದಾರೆ.ನಂಜನಗೂಡಿಂದ ನಂಜುಂಡ ಬರುತಾನೆ, ನೀ ಜನಿಸಿದ ದಿನವೂ ಅಳುವೇ, ಈ ದಿನ ಜನುಮದಿನ ಶುಭಾಶಯ ಮತ್ತು ಮನದ ಮಾತಿಗೆ ಮೌನಬೇಲಿ – ಈ ನಾಲ್ಕು ಹಾಡುಗಳೂ 46 ವರ್ಷಗಳ ನಂತರವೂ ಗುನುಗುಂಥವೇ.ಚಿ.ಉದಯಶಂಕರ್ ಬರೆದ, ವೈ ಆರ್ ಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ನಾನು ಗಮನಿಸಿದ್ದು ರಾಜ್ಕುಮಾರ್ ನಟಿಸಿರುವ – ನಂದಗೋಕುಲ.
ಒಟ್ಟಿನಲ್ಲಿ ಗೋಳನ್ನು ಎಲ್ಲಿಯೂ ಅತಿರೇಕಕ್ಕೆ ಒಯ್ಯದೇ, ಎಷ್ಟು ಬೇಕೋ ಅಷ್ಟು ಮಸಾಲೆ ತುಂಬಿರುವ ಚಂದದ ಚಿತ್ರ ‘ನಂದಗೋಕುಲ’.