ಸಂಶಯ, ಸುಳ್ಳು ಎರಡೂ ಸಂಸಾರದ ಹಾಲ್ಗಡಲಲ್ಲಿ ಹುಳಿಯಾಗಿ ಸಂಸಾರವನ್ನು ನಾಶ ಮಾಡಬಲ್ಲವು ಎನ್ನುವ ಥೀಂ ಉಳ್ಳ 1962ರ ಚಿತ್ರ ನಂದಾದೀಪ.
ವಾದಿರಾಜ್ ಕಥೆಗೆ ಎಂ.ಆರ್. ವಿಠಲ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಂಕರ್ (ರಾಜ್‍ಕುಮಾರ್) ಒಬ್ಬ ಲೇಖಕ. ಅವನ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಗೌರಿ(ಹರಿಣಿ)ಯನ್ನು ಮದುವೆಯಾಗಲು ಶಂಕರನಿಗೆ ಅವನ ತಾಯಿಯ ಒಪ್ಪಿಗೆ (ಜಯಶ್ರೀ) ಇರುತ್ತದೆ. ಆದರೆ ತಂದೆ(ರಾಮಚಂದ್ರಶಾಸ್ತ್ರಿ) ಬೇರೆ ಹೆಣ್ಣು ನೋಡುತ್ತಿರುತ್ತಾನೆ.
ರವಿ (ಉದಯಕುಮಾರ್) ಗೌರಿಯ ಅಣ್ಣ ಮತ್ತು ಶಂಕರನ ಸ್ನೇಹಿತ. ರವಿ ಹಣದಾಸೆಗೆ ತಾನು ಅನಾಥ ಎಂದು ಶ್ರೀಕಾಂತ್‍ಗೆ(ಕೆ.ಎಸ್.ಅಶ್ವತ್ಥ್) ಸುಳ್ಳು ಹೇಳಿ ಆತನಲ್ಲಿ ಕೆಲಸ ಗಿಟ್ಟಿಸಿ ನಂತರ ಆತನ ಮಗಳು ರಾಧಳನ್ನು (ಲೀಲಾವತಿ) ಮದುವೆಯಾಗಿ ಅವಳನ್ನೂ ಕರೆದುಕೊಂಡು ಲಂಡನ್‍ಗೆ ಹೋಗಿಬಿಡುತ್ತಾನೆ. ಒಬ್ಬಂಟಿಗ ಶ್ರೀಕಾಂತ್‍ಗೆ ಗೌರಿಯನ್ನು ಎರಡನೇ ಮದುವೆ ಮಾಡಿಬಿಡುತ್ತಾನೆ ದಳ್ಳಾಳಿ(ಬಾಲಕೃಷ್ಣ).
ಅಣ್ಣ ರವಿಯ ಓದಿಗೆ ಮಾಡಿದ ಸಾಲದ ಶೂಲದಿಂದ ಇರಿಯಲ್ಪಟ್ಟ ತಂದೆಯನ್ನು ಸಾಲಮುಕ್ತನನ್ನಾಗಿ ಮಾಡಲು ಶ್ರೀಕಾಂತ್‍ಗೆ ಹೆಂಡತಿಯಾಗಿಬಿಡುತ್ತಾಳೆ ಗೌರಿ. ಈ ನಡುವೆ ಶಂಕರ ಗೌರಿಯ ತಂದೆಯ ಸಾಲವನ್ನು ತೀರಿಸಲು ಯಾರಿಗೂ ತಿಳಿಯದೇ ಬೇರೆ ಊರಿಗೆ ಹೋಗಿ ಅವನ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಟ್ಟ ಪುಸ್ತಕಗಳನ್ನು ಬರೆದು ಹಣ ಸಂಪಾದಿಸಿ ಬರುವ ವೇಳೆಗೆ ಗೌರಿಯ ಮದುವೆಯಾಗಿ, ಗೌರಿಯ ತಂದೆ ಎಲ್ಲಿಗೋ ಹೊರಟುಹೋಗಿರುತ್ತಾನೆ. ವಿರಾಮ.
ಚೆನ್ನಾಗಿರುತ್ತಾಳೆ ಗೌರಿ. ಎಲ್ಲಿಯವರೆಗೆ? ರಾಧಾ ಮತ್ತು ರವಿ ಮರಳಿ ಬರುವವರೆಗೆ. ರವಿ ತಾನೇ ಅವಳಣ್ಣ ಎಂದು ಹೇಳಕೂಡದೆಂದು ಆಣೆ ಮಾಡಿಸಿಕೊಂಡಿದ್ದರಿಂದ ಅವರಿಬ್ಬರ ಸಲಿಗೆ, ಓಡಾಟ, ರಹಸ್ಯದ ಮಾತುಗಳು ಕೆಲಸದವರಿಗೆ (ರತ್ನಾಕರ, ನರಸಿಂಹರಾಜು ಮತ್ತು ಎಂ.ಎನ್ ಲಕ್ಷ್ಮೀದೇವಿ), ರಾಧಳಿಗೆ ಮತ್ತು ಶ್ರೀಕಾಂತನಿಗೆ ಸಂಶಯ ಹುಟ್ಟಿಸುತ್ತವೆ. ಶಂಕರನಿಗೆ ಒಮ್ಮೆ ಬುದ್ಧಿ ಹೇಳುತ್ತಾಳೆ ಮದುವೆಯಾದ ಗೌರಿ. ಆ ನಂತರ ಅವನು ಸರಿಹೋಗುತ್ತಾನೆ. ಆಶ್ರಮ ಕಟ್ಟುತ್ತಾನೆ. ಅಲ್ಲಿ ಅವನಿಗೆ ಶ್ರೀಕಾಂತನ ಪರಿಚಯವಾಗುತ್ತದೆ. ಅತ್ಯಂತ ನಾಟಕೀಯ ಸನ್ನಿವೇಶಗಳಿರುವ ಈ ಚಿತ್ರದಲ್ಲಿ ರಮಾದೇವಿ ಮತ್ತು ವಾದಿರಾಜ್ ಕೂಡ ಇದ್ದಾರೆ.
ಹಾಡುಗಳೆಲ್ಲವೂ ಅಮೋಘ. ಗಾಳಿ ಗೋಪುರ ನಿನ್ನಾಶಾ ತೀರ (ಎಸ್‍ಜಾನಕಿ), ಯಾರಿಗೆ ಯಾರೋ ನಿನಗಿನ್ಯಾರೋ (ಪಿಬಿಎಸ್), ಕನಸೊಂದ ಕಂಡೆ ಕನ್ನಡಮಾತೆ (ಎಸ್ ಜಾನಕಿ), ನಾಡಿನಂದಾ ಈ ದೀಪಾವಳಿ ಬಂತೂ(ಎಸ್‍ಜಾನಕಿ, ಪಿ.ಲೀಲ), ಒಂದುಗೂಡಿದೆ(ಜಿಕ್ಕಿ, ನಾಗೇಂದ್ರ), ನ್ಯಾಯಕ್ಕೆ ಕಣ್ಣಿಲ್ಲ (ಪಿ.ಲೀಲ) ಮತ್ತು ಅತ್ಯಂತ ಜನಪ್ರಿಯ ಪಿಬಿಎಸ್ ಎಸ್‍ಜಾನಕಿ ಯುಗಳ ಗೀತೆ (ನಲಿವ ಮನ ಹೊಂದೀದಿನ)
ರಾಜ್ ಅವರ ವಿಭಿನ್ನ ರೀತಿಯ ನಟನೆಗೆ ವೇದಿಕೆಯಾಗಿದೆ ಈ ಚಿತ್ರ, ಆದರ್ಶ ಲೇಖಕ, ಪ್ರೇಮಿ, ವಿರಹಿ, ಸಿದ್ಧಾಂತಗಳನ್ನು ಸಾಕಾರಗೊಳಿಸಿಕೊಳ್ಳುವ ಅಭಿಲಾಷೆಯುಳ್ಳವ, ತನ್ನ ಶಾಲೆಯ ಪೋಷಕನ ಹೆಂಡತಿ ತನ್ನ ಮಾಜೀ ಪ್ರೇಮಿ ಎಂದು ತಿಳಿದಾಗ ನಡೆದುಕೊಳ್ಳುವ ರೀತಿ ಎಲ್ಲವೂ ಚೆನ್ನ. ಉದಯಕುಮಾರ್, ಅಶ್ವತ್ಥ್, ಜಯಂತಿ ಮತ್ತು ಎಲ್ಲರಿಗಿಂತ ಉದ್ದನೆಯ ಪಾತ್ರವಿರುವ ಹರಿಣಿ ಬಹಳ ಚೆನ್ನಾಗಿ ನಟಿಸಿದ್ದಾರೆ. ಕೊನೆ ಏನಾಗಬಹುದು ಎನ್ನಿಸುವ ಸನ್ನಿವೇಶ ಎದುರಾಗುತ್ತದೆ.
ಸುಖಾಂತ, ದುಃಖಾಂತ ಎರಡೂ ಆಗಬಹುದಾದ ರೀತಿಯ ಕ್ಲೈಮ್ಯಾಕ್ಸ್.