ಕನ್ನಡದ ವೀರಯೋಧ ಜಯರಾಮ್. ಮೂಲತಃ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಕುರುಬರಹಳ್ಳಿಯ ಈ ಸೈನಿಕನಿಗೆ ಚಿಕ್ಕ ವಯಸ್ಸಿನಿಂದಲೂ ಸೇನೆ ಸೇರುವ ಒಲವು. ಚಿಕ್ಕ ವಯಸ್ಸಿನಿಂದ ದೇಶಪ್ರೇಮವೆಂಬ ಬೀಜದ ಮೊಳಕೆಯನ್ನು ಹುಟ್ಟಿಹಾಕಿದ್ದು ಇವರ ತಂದೆ. ಬೇರೆಲ್ಲ ತಂದೆಯರೂ ತಮ್ಮ ಮಕ್ಕಳಿಗೆ ಪಂಚತಂತ್ರ, ರಾಮಾಯಣದಂತಹ ಕತೆಗಳನ್ನು ಹೇಳುತ್ತಿದ್ದರೆ, ಇವರ ತಂದೆಯ ಸ್ಟೈಲೇ ಬೇರೆಯಾಗಿತ್ತು. ಭಾರತೀಯ ಸೈನ್ಯದ, ಸೈನಿಕರ ಕತೆಗಳನ್ನು ಬಣ್ಣಬಣ್ಣವಾಗಿ ಕತೆಗಳ ರೂಪದಲ್ಲಿ ಹೇಳುತ್ತಿದ್ದರು. ಆ ಕತೆಗಳನ್ನು ಕೇಳುತ್ತಾ, ನಾನೊಬ್ಬ ಸೈನಿಕನಾಗಬೇಕೆಂಬ ಬಯಕೆ ತಲೆಯಲ್ಲಿ ಮನೆಮಾಡಿತ್ತು. ಮೂರನೇ ತರಗತಿಯಲ್ಲಿದ್ದಾಗ, ನೀನೇನಾಗಬೇಕು ಅಂತ ಶಾಲೆಯಲ್ಲಿ ಶಾಲಾ ಇನ್ಸ್ಪೆಕ್ಟರ್ ಕೇಳಿದ್ದ ಪ್ರಶ್ನೆಗೆ ಡಾಕ್ಟರ್, ಇಂಜಿನಿಯರ್, ಎಂದು ಬೇರೆ ಎಲ್ಲ ಹುಡುಗರೂ ಉತ್ತರ ಕೊಡುತ್ತಿದ್ದರೆ, ನಾನು ಸೈನಿಕನಾಗಬೇಕು ಎಂದು ದಿಟ್ಟತನದಿಂದ ಉತ್ತರ ನೀಡಿದ್ದ ವಿಶ್ವಾಸ ತುಂಬಿದ ಈ ಬಾಲಕನ ಕಂಗಳನ್ನು ನೋಡಿ ಇಡೀ ಶಾಲೆಯೇ ದಂಗಾಗಿತ್ತು.
ಇವರಿಗೆ ಸೇನೆ ಸೇರುವ ಹೆಬ್ಬಯಕೆ ಇನ್ನೂ ದೊಡ್ಡದಾಗಿ ಬೆಳೆದಿದ್ದು ಇವರು ಸೂಲಿಬೆಲೆಯ ಶ್ರೀ ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ. ಖ್ಯಾತ ವಾಗ್ಮಿ ಸೂಲಿಬೆಲೆ ಚಕ್ರವರ್ತಿಯವರ ತಂದೆ ಇವರ ಕನ್ನಡ ಮತ್ತು ಹಿಂದಿ ಮೇಷ್ಟು. ಪಾಠದ ಜೊತೆಜೊತೆ ಭಾರತ ದೇಶದ ಹಿರಿಮೆ, ದೇಶಪ್ರೇಮದ ಕತೆಗಳನ್ನು ಹೇಳುತ್ತಿದ್ದರಂತೆ. ಆ ದೇಶಭಕ್ತಿಯ ಕತೆಗಳನ್ನು ಕೇಳುತ್ತಿದ್ದ ಇವರಿಗೂ, ಸೇನೆ ಸೇರಬೇಕೆಂಬ, ದೇಶಕ್ಕಾಗಿ ಹೋರಾಡಬೇಕೆಂಬ ಆಸೆ ಉಲ್ಬಣಿಸಿತು.
೧೯೯೨ ರಲ್ಲಿ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ಪಿಯು ಮುಗಿಯುತ್ತಿದ್ದಂತೆ, ಅದರ ಮುಂದಿನ ವರ್ಷ ೧೯೯೩ ಕ್ಕೆ ಗಡಿ ಭದ್ರತಾ ಪಡೆಗೆ ಯೋಧನಾಗಿ ಆಯ್ಕೆಯಾಗುವ ಪತ್ರ ಕೈಗೆ ಬಂದಾಗ ಆಕಾಶಕ್ಕೆ ಜಿಗಿಯುವ ಸಂತಸ. ಛಲ ಬಿಡದ ತ್ರಿವಿಕ್ರಮನಂತೆ ಸೇನೆ ಸೇರಲೇಬೇಕೆಂಬ ಹೆಬ್ಬಯಕೆಯಿಂದ ಕಡೆಗೂ ೧೯೯೩ ರಲ್ಲಿ ಸೇನೆಗೆ ಆಯ್ಕೆಯಾಗಿದ್ದೂ ಆಯಿತು. ಕೊಡಗಿನ ಪ್ರಾಂತ್ಯದವರು ಮಾತ್ರ ಹೆಚ್ಚಾಗಿ ಸೇನೆ ಸೇರುತ್ತಿದೆ ಕಾಲವದು. ಆ ಕಾಲದಲ್ಲಿ ದೇವನಹಳ್ಳಿಯ ಸುತ್ತಮುತ್ತ ಪ್ರಾಂತ್ಯದಿಂದ ಸೈನ್ಯ ಸೇರಿದ್ದ ಮೊದಲ ಸೈನಿಕ ಜಯರಾಮ್. ಆಗ ತಾನೇ ಪಿಯು ಮುಗಿಸಿ ಹೊರಬಂದಿದ್ದ ಹರೆಯದ ಹುಡುಗ ಟ್ರೈನಿಂಗಿಗಾಗಿ ಸೀದಾ ಹೋದದ್ದು ಮಧ್ಯಪ್ರದೇಶದ ಇಂಧೋರ್ ಗೆ. ಇಂಧೋರ್ ನಲ್ಲಿ ಟ್ರೈನಿಂಗ್ ಮುಗಿಸಿದ ತಕ್ಷಣ ಮೊಟ್ಟಮೊದಲ ಪೋಸ್ಟಿಂಗ್ ಜಮ್ಮು ಮತ್ತು ಕಾಶ್ಮೀರಕ್ಕೆ. ಅಲ್ಲಿಂದ ಬಾಂಗ್ಲಾದೇಶದ ಗಡಿಗೆ.
೨೦೦೮ರಲ್ಲಿ ತ್ರಿಪುರದಲ್ಲಿ ಬಾಂಗ್ಲಾದೇಶದ ಗಡಿಯನ್ನು ಕಾಯುತ್ತಿರಬೇಕಾದಾಗ ನಡೆದ ಒಂದು ಘಟನೆಯನ್ನು ಅವರು ಇಂದಿಗೂ ಮರೆತಿಲ್ಲ. ರಾತ್ರಿ ಹನ್ನೆರಡರಿಂದ ಬೆಳಿಗ್ಗೆ ಆರರವರೆಗೆ ಶಿಫ್ಟ್. ಗಡಿ ಕಾಯುವ ಕೆಲಸವೆಂದರೆ ಗೊತ್ತಲ್ಲ? ಮೈಯೆಲ್ಲಾ ಕಣ್ಣಾಗಿರಬೇಕು. ಒಬ್ಬೊಬ್ಬ ಸೈನಿಕನಿಗೂ ಇಂತಿಷ್ಟು ಪ್ರದೇಶವನ್ನು ಹದ್ದಿನ ಕಣ್ಣುಗಳಿಂದ ಕಾಯುವ ಕೆಲಸ. ಒಂದೇ ಒಂದು ನಿಮಿಷ ನಿದ್ದೆ ಬಂದು ಕಣ್ಣು ಮುಚ್ಚಿದರೂ ಅದರ ಪರಿಣಾಮವನ್ನು ಊಹಿಸಲೂ ಆಗದು. ರಾತ್ರಿ ಹನ್ನೆರಡರಿಂದ ಬೆಳಿಗ್ಗೆ ಆರರವರೆಗೆ ಶಿಫ್ಟ್ ಮುಗಿದ ಬಳಿಕ, ಹೊಸ ಶಿಫ್ಟಿನ ಸೈನಿಕನಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ, ಆಮೇಲೆ ಕ್ಯಾಂಪಿಗೆ ವಾಪಸ್ ಬಂದು, ಕಾಫಿ, ಟೀ, ತಿಂಡಿ, ನಿದ್ದೆ ಇತ್ಯಾದಿ. ಹೀಗೆಯೇ ಹನ್ನೆರಡರಿಂದ ಆರರ ಶಿಫ್ಟಿನಲ್ಲಿ ಒಮ್ಮೆ ಕೆಲಸಮಾಡುತ್ತಿದ್ದಾಗ ನಸುಕಿನ ಮೂರುಗಂಟೆ ಸಮಯ. ಇವರ ಅಧಿಕಾರಿಯೊಬ್ಬರು ಸೀದಾ ಇವರ ಬಳಿಯೇ ಬರುತ್ತಿದ್ದುದ್ದು ಕಾಣಿಸಿತು. ಏನೋ ಚೆಕಿಂಗ್ ಬಂದಿರಬಹುದು ಎಂದು ಸೆಲ್ಯೂಟ್ ಹೊಡೆದು ನಿಂತರು. ಬಂದಿದ್ದ ಅಧಿಕಾರಿ ಏನೂ ಮಾತನಾಡದೆ ನಿಂತರು. ಆಮೇಲೆ ಸ್ವಲ್ಪ ಕಾಲ ತಡೆದು ಜಯರಾಮ್ ಬಳಿ ಹೇಳಿದರಂತೆ – “ಈಗ ತಾನೇ ನಿಮ್ಮ ಹಳ್ಳಿಯಿಂದ ನಮ್ಮ ಸೇನಾ ಕ್ಯಾಂಪಿಗೆ ಸುದ್ದಿ ಬಂತು. ನಿಮ್ಮ ತಂದೆಯವರು ಮರಣಿಸಿದರಂತೆ. ಇಗೋ ನೋಡಿ. ನನ್ನೊಡನೆ ಇನ್ನೊಬ್ಬ ಸೈನಿಕ ಇದ್ದಾನೆ. ಇವನಿಗೆ ನಿಮ್ಮ ಡ್ಯೂಟಿ ಯನ್ನು ಒಪ್ಪಿಸಿ, ನನ್ನ ಜೊತೆ ಬನ್ನಿ. ಕ್ಯಾಂಪ್ ಗೆ ಹೋಗಿ ಸ್ವಲ್ಪ ರೆಸ್ಟ್ ತಗೊಂಡು, ನಾಳೆ ವಿಮಾನದಲ್ಲಿ ಬೆಂಗಳೂರಿಗೆ ಕಳಿಸಿಕೊಡುತ್ತೇವೆ.”
ಅಧಿಕಾರಿಯ ಮಾತು ಕೇಳಿದೊಡನೆ ಈ ಸೈನಿಕನಿಗೆ ಒಮ್ಮೆಲೇ ಸಿಡಿಲು ಬಡಿದ ಅನುಭವ. ಏನು ಹೇಳಲೂ ಮಾತೇ ಹೊರಡುತ್ತಿಲ್ಲ. ಬಾಯಿ ತೊದಲುತ್ತಿದೆ. ತಲೆ ಸಿಡಿದು ಹೋಳಾಗುವಂತಹ ಅನುಭವ. ಭಾರತೀಯ ಸೈನ್ಯದ ಟ್ರೈನಿಂಗ್ ಎಂದರೆ ಕೇಳಬೇಕೆ? ಎಷ್ಟೇ ಆಗಲಿ ಸೈನಿಕನಲ್ಲವೇ? ಎರಡೇ ನಿಮಿಷದಲ್ಲಿ ಸಾವರಿಸಿಕೊಂಡು ಎದ್ದು ಕಣ್ಣೊರೆಸಿಕೊಂಡು ತನ್ನ ಅಧಿಕಾರಿಗೆ ಹೇಳಿದರಂತೆ – “ನೀವು ಹೊರಡಿ ಸಾರ್. ಬೆಳಿಗ್ಗೆ ಆರರವರೆಗೆ ನನ್ನ ಡ್ಯೂಟಿ ಇದೆ. ಅದು ಮುಗಿಸಿಕೊಂಡು ಬರುತ್ತೇನೆ.
ಬೇಡ ಜಯರಾಮ್. ನನ್ನ ಮಾತು ಕೇಳಿ. ಸ್ವಲ್ಪ ರೆಸ್ಟ್ ತಗೋಳಿ. ಬೆಳಿಗ್ಗೆ ರೈಲಿಗೆ ಹೊರಡಲು ತಯಾರು ಮಾಡಿಕೊಳ್ಳಿ.” – ಉಹೂ. ಅಧಿಕಾರಿಯ ಯಾವ ಮಾತೂ ಇವರ ಕಿವಿಗೆ ಹೋಗಲಿಲ್ಲ. “ಈ ದೇಶದ ಮಣ್ಣನ್ನು ಕಾಯುವುದು ನನ್ನ ಕರ್ತವ್ಯ ಸಾರ್. ನಾನು ಉದ್ವೇಗದಿಂದ ಹೇಳುತ್ತಿಲ್ಲ. ಎಷ್ಟೇ ಉದ್ವೇಗವನ್ನೂ ತಡೆದುಕೊಂಡು ಮನಸ್ಸನ್ನು ಸಮಚಿತ್ತದಲ್ಲಿ ಇರಿಸಿಕೊಳ್ಳುವುದನ್ನು ಈ ದೇಶದ ಸಂಸ್ಕೃತಿ, ಸೇನೆಯ ಟ್ರೈನಿಂಗ್ ನನಗೆ ಕಲಿಸಿಕೊಟ್ಟಿದೆ. ನನ್ನ ಮಾತು ನಂಬಿ” ಎಂದು ತಾನೇ ಆ ಅಧಿಕಾರಿಗೆ ಧೈರ್ಯ ಹೇಳಿ ಬೆಳಿಗ್ಗೆ ಆರರವರೆಗೆ ಡ್ಯೂಟಿ ಮುಗಿಸಿ, ಆಮೇಲೆ ಕ್ಯಾಂಪ್ ಗೆ ಬಂದು, ಮುಂದಿನ ಕೆಲವು ದಿನಗಳ ವರೆಗೆ ರಜೆ ಹಾಕಿ ಆಮೇಲೆಯೇ ಟ್ರೈನ್ ಹತ್ತಿದ್ದು. ಮೂರ್ನಾಲ್ಕು ದಿನದ ಟ್ರೈನ್ ಪ್ರಯಾಣ ಮಾಡಿ ಮನೆಗೆ ಬಂದರೂ ಕಡೆಗೂ ಅಪ್ಪನ ಮುಖದ ದರ್ಶನ ಸಿಗಲಿಲ್ಲ. ಅದಾಗಲೇ ಅಪ್ಪನ ದೇಹ ಪಂಚಭೂತಗಳಲ್ಲಿ ಲೀನವಾಗಿತ್ತು. ತನ್ನ ತಂದೆಯ ಕಡೆಯ ದರ್ಶನ ಸಿಗಲಿಲ್ಲವಾದರೂ, ನಾನು ಯಾವುದೊ ಬಾರ್ ನಲ್ಲೋ, ಪಬ್ ನಲ್ಲೋ, ಇಸ್ಪೀಟ್ ಕ್ಲಬ್ಬಿನಲ್ಲೋ ಕುಳಿತು ತಂದೆಯ ಕಡೆಯ ಮುಖದರ್ಶನ ಮಿಸ್ ಮಾಡಿಕೊಳ್ಳಲಿಲ್ಲ. ಕೋಟ್ಯಂತರ ಜೀವಗಳನ್ನು ಕಾಪಾಡುವ ಡ್ಯೂಟಿ ಯಲ್ಲಿದ್ದೆ ಎಂದು ಇಂದಿಗೂ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ನಮ್ಮ ಇಂದಿನ ಯುವಜನತೆಗೆ ಆದರ್ಶವಾಗಬೇಕಾದ್ದು ಇಂತಹ ರಿಯಲ್ ಸೆಲೆಬ್ರಿಟಿಗಳೇ ಹೊರತು, ಮೋಜು ಮಾಡುವ ರೀಲ್ ಸೆಲೆಬ್ರಿಟಿಗಳಲ್ಲ.
ಇಂತಹ ವೀರಯೋಧ ಜಯರಾಮ್ ಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್. ನಿವೃತ್ತಿಯಾಗಿದ್ದರೂ ಕೂಡ ಇಂದಿಗೂ, ಟೀಮ್ ಯೋಧ ನಮನ ಎಂಬ ಸಮಾನ ಮನಸ್ಕ ಯುವಕರ ತಂಡವೊಂದನ್ನು ಕಟ್ಟಿ, ಸೈನಿಕರನ್ನು ಸನ್ಮಾನಿಸುವ, ಸೈನಿಕರ ಕಷ್ಟಕ್ಕೆ ನೆರವಾಗುವ, ಶಾಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬಿತ್ತುವ ಸಮಾಜ ಮುಖಿ ಕಾರ್ಯಗಳನ್ನು ಇಂದಿಗೂ ಮಾಡುತ್ತಲೇ ಇದ್ದಾರೆ. ಇಂತಹವರ ಸಂತತಿ ಸಾವಿರವಾಗಲಿ. ಭಾರತಾಂಬೆಯ ಮಡಿಲಲ್ಲಿ ಇಂತಹ ಕೋಟಿ ಕೋಟಿ ಯೋಧರು ಹುಟ್ಟಲಿ, ನೂರು ವರ್ಷ ಬಾಳಲಿ.
ಜಯರಾಮ್ ರವರ ಬಯಕೆಗಳೆಲ್ಲ ಈಡೇರಲಿ. ಇವರ ತುಟಿಯ ಮೇಲಿನ ಆ ಕಿರುನಗೆ ಎಂದಿಗೂ ಮಾಸದಿರಲಿ ಎಂಬುದೇ ನಮ್ಮ ಚಿತ್ರೋದ್ಯಮದ ಹಾರೈಕೆ, ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.